Wednesday, January 18, 2012

ಕಟೀಲು : ಯಾತ್ರಿ ನಿವಾಸದ ಅನುದಾನ ವಾಪಾಸ್?

ಕಟೀಲು : ಪುರಾಣ ಪ್ರಸಿದ್ಧ ಭ್ರಾಮರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ನಿರ್ಮಿಸಲಾಗುವ ಯಾತ್ರಿ ನಿವಾಸದ ಯೋಜನೆಯ ಅನುದಾನ ಕಾರ‍್ಯಗತವಾಗದ ಕಾರಣಕ್ಕಾಗಿ ವಾಪಾಸಾಗುವ ಸೂಚನೆ ಇಲಾಖೆಯಿಂದ ದೇಗುಲಕ್ಕೆ ಬಂದಿದೆ.
ಸಚಿವ ಜನಾರ್ದನ ರೆಡ್ಡಿಯವರ ಮುತುವರ್ಜಿಯಿಂದ ಪ್ರವಾಸೋದ್ಯಮ ಇಲಾಖೆಯಿಂದ ಒಂದು ಕೋಟಿ ರೂ.ನಲ್ಲಿ ಯಾತ್ರಿ ನಿವಾಸ ನಿರ್ಮಿಸಲು ಅನುದಾನ ಮಂಜೂರಾಗಿತ್ತು. ಮೂರು ವರುಷಗಳ ಹಿಂದೆ ಇಪ್ಪತ್ತು ಆ ಬಳಿಕ ಮತ್ತೆ ಇಪ್ಪತ್ತು ಹೀಗೆ ಒಟ್ಟು ೪೦ಲಕ್ಷ ರೂ. ಜಿಲ್ಲಾಧಿಕಾರಿಗೆ ಬಿಡುಗಡೆಯಾಗಿತ್ತು. ಯೋಜನೆಗೆ ಇನ್ನೂ ಅಂದಾಜುಪಟ್ಟಿ ಆಗದೇ ಇರುವುದರಿಂದ ಕಾಮಗಾರಿ ಅವಧಿ ಒಳಗೆ ಆಗದೇ ಇರುವುದರಿಂದ ಅನುದಾನ ವಾಪಾಸು ಹೋಗುವ ಕುರಿತಾಗಿ ದೇಗುಲಕ್ಕೆ ಇಲಾಖೆಯಿಂದ ಪತ್ರ ಬಂದಿದೆ.
ಕಟೀಲಿನಲ್ಲಿ ನೂರು ಕೊಠಡಿಗಳ ಯಾತ್ರಿ ನಿವಾಸವೊಂದರ ಪ್ರಸ್ತಾವನೆ ಆಗಿ, ನಾಲ್ಕೈದು ವರ್ಷಗಳ ಬಳಿಕ ಒಂದು ಕೋಟಿಯ ಯೋಜನೆ ನಾಲ್ಕು ಕೋಟಿ ರೂ.ಗಳಿಗೆ ಏರಿ ಟೆಂಡರು ಕರೆದೂ ಆಗಿತ್ತು. ಅಷ್ಟಾಗುವಾಗ ಹಿಂದಿನ ಜಿಲ್ಲಾಧಿಕಾರಿ, ಯೋಜನೆಯ ವಿನ್ಯಾಸ ಸರಿಯಿಲ್ಲ, ಬದಲಾಯಿಸಿ ಎಂದು ಆದೇಶ ಕೊಟ್ಟ ಕಾರಣಕ್ಕೆ ಹೊಸ ಪ್ರಸ್ತಾವನೆ ಸಲ್ಲಿಸುವಂತಾಯಿತು. ಆದರೆ ಯೋಜನೆಯ ಮೊತ್ತ ನಾಲ್ಕರಿಂದ ಹನ್ನೊಂದು ಕೋಟಿಗೆ ಏರಿದ್ದು, ದೇಗುಲದಿಂದಲೇ ಇದಕ್ಕೆ ಹಣ ತೆಗೆಯುವುದು ಅಂತ ಚರ್ಚೆ ನಡೆಯುತ್ತಿದೆ.
ಪರಿಸ್ಥಿತಿ ಹೀಗಿರುವಾಗ ಪ್ರವಾಸೋದ್ಯಮ ಇಲಾಖೆಯಿಂದಲೇ ಪ್ರತ್ಯೇಕವಾಗಿ ಯಾತ್ರಿ ನಿವಾಸಕ್ಕೆ ಒಂದು ಕೋಟಿಯ ಯೋಜನೆ ಬಂದರೂ ಜಿಲ್ಲಾಧಿಕಾರಿ ಹಾಗೂ ಇತರ ಇಲಾಖೆಗಳ ನಿಧಾನಗತಿಯಿಂದಾಗಿ ಯೋಜನೆಯ ಮೊತ್ತ ಹಿಂದಕ್ಕೆ ಹೋಗುವ ಹಂತಕ್ಕೆ ಬಂದಿದೆ ಎನ್ನಲಾಗಿದೆ. ಇನ್ನಾದರೂ ಯೋಜನೆಗೆ ಚಾಲನೆ ಕೊಟ್ಟು ಅನುದಾನದ ಸದುಪಯೋಗ ಆದರೆ ಕಟೀಲು ದೇಗುಲದಲ್ಲಿರುವ ವಸತಿ ಸಮಸ್ಯೆಗೆ ಒಂದಿಷ್ಟಾದರೂ ಪರಿಹಾರ ಸಿಕ್ಕೀತು.

No comments:

Post a Comment