Thursday, December 30, 2010

ಎನ್‌ಎಸ್‌ಎಸ್ ಸೇವೆಗೆ ಪ್ರೇರಣೆ-ಅನಂತ ಆಸ್ರಣ್ಣ




ರಾಷ್ಟ್ರೀಯ ಸೇವಾ ಯೋಜನೆ ಸಮಾಜ ಸೇವೆಯಲ್ಲಿ ತೊಡಗಲು ವಿದ್ಯಾರ್ಥಿ ದೆಸೆಯಲ್ಲಿಯೇ ಯುವಕರನ್ನು ಪ್ರೇರೇಪಿಸುತ್ತಿದೆ ಎಂದು ಕಟೀಲು ದೇಗುಲದ ಅರ್ಚಕ ಅನಂತಪದ್ಮನಾಭ ಆಸ್ರಣ್ಣ ಹೇಳಿದರು.ಅವರು ಗುರುವಾರ ಉಲ್ಲಂಜೆ ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮದರ್ಜೆ ಕಾಲೇಜಿನ ಎನ್‌ಎಸ್‌ಎಸ್ ಘಟಕಗಳ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.ಬಲ್ಮಠ ಕಾಲೇಜಿನ ಎನ್‌ಎಸ್‌ಎಸ್ ಅಧಿಕಾರಿ ಹರಿಪ್ರಸಾದ ಶೆಟ್ಟಿ, ರಥಬೀದಿ ಸರಕಾರಿ ಕಾಲೇಜಿನ ಎನ್‌ಎಸ್‌ಎಸ್ ಅಧಿಕಾರಿ ಶೇಷಪ್ಪ, ಕಟೀಲು ಕಾಲೇಜಿನ ಸುರೇಶ್ ಶೆಟ್ಟಿ, ಮೆನ್ನಬೆಟ್ಟು ಗ್ರಾ.ಪಂ. ಅಧ್ಯಕ್ಷೆ ಶೈಲಾ ಶೆಟ್ಟಿ, ಸಾಮಾಜಿಕ ಮುಖಂಡ ಭುವನಾಭಿರಾಮ ಉಡುಪ, ಶಿಕ್ಷಕಿ ಜೆಸಿಂತಾ ಡಿಸೋಜ,, ಶಾಲಾಭಿವೃದ್ಧಿ ಸಮಿತಿಯ ದಯಾನಂದ ಶೆಟ್ಟಿ, ಶರ್ಮಿಳಾ, ಎನ್‌ಎಸ್‌ಎಸ್ ಘಟಕದ ಕೀರ್ತನ್, ಯಶ್ವಿತಾ, ಹರಿಪ್ರಸಾದ, ದೇವಿಕಾ ಮತ್ತಿತರರಿದ್ದರು. ಕಿನ್ನಿಗೋಳಿ ರೋಟರ‍್ಯಾಕ್ಟ್ ವತಿಯಿಂದ ೮೦ಎನ್‌ಎಸ್‌ಎಸ್ ವಿದ್ಯಾರ್ಥಿಗಳಿಗೆ ಹಣ್ಣಿನ ಗಿಡಗಳನ್ನು ಕ್ಲಬ್‌ನ ಪ್ರಕಾಶ್ ಆಚಾರ್ ವಿತರಿಸಿದರು. ಯೋಜನಾಧಿಕಾರಿ ಕೇಶವ ಎಚ್. ಸ್ವಾಗತಿಸಿದರು. ಕೃಷ್ಣ ಕೆ.ಕೆ.ವಂದಿಸಿದರು. ಘಟಕದ ವತಿಯಿಂದ ಶಾಲೆಗೆ ಗೋಡೆಗಡಿಯಾರ ನೀಡಲಾಯಿತು.

Friday, December 24, 2010

ಉಲ್ಲಂಜೆಯಲ್ಲಿ ಎನ್‌ಎಸ್‌ಎಸ್ ಶಿಬಿರ ಆರಂಭ


ವಿದ್ಯಾರ್ಥಿ ಜೀವನದಲ್ಲಿ ಪಾಠ ಪ್ರವಚನಗಳ ಜೊತೆಗೆ ಬದುಕಿನ ಪಾಠವನ್ನು ಕಲಿಸಲು ಎನ್‌ಎಸ್‌ಎಸ್ ಚಟುವಟಿಕೆ ಪೂರಕ ಎಂದು ಕಟೀಲು ದೇಗುಲದ ಅರ್ಚಕ ಹರಿನಾರಾಯಣದಾಸ ಆಸ್ರಣ್ಣ ಹೇಳಿದರು.
ಅವರು ಶುಕ್ರವಾರ(ಡಿ೨೪) ಉಲ್ಲಂಜೆ ಜಿ.ಪಂ.ಹಿ.ಪ್ರಾ.ಶಾಲೆಯಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪದವಿ ಕಾಲೇಜಿನ ಎನ್‌ಎಸ್‌ಎಸ್ ಘಟಕಗಳ ವಾರ್ಷಿಕ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.ಮೆನ್ನಬೆಟ್ಟು ಗ್ರಾ.ಪಂ.ಉಪಾಧ್ಯಕ್ಷ ಜನಾರ್ದನ ಕಿಲೆಂಜೂರು, ಪತ್ರಕರ್ತ ರಘುನಾಥ ಕಾಮತ್ ಕೆಂಚನಕೆರೆ, ಉಪನ್ಯಾಸಕ ಸುರೇಶ್, ಶಿಕ್ಷಕ ಕೆ.ವಿ.ಶೆಟ್ಟಿ, ಉಲ್ಲಂಜೆ ಶಾಲೆಯ ಮುಖ್ಯ ಶಿಕ್ಷಕಿ ಮಂಗಳಾ ಎಸ್.ಭಟ್, ಶಾಲಾಭಿವೃದ್ಧಿ ಸಮಿತಿಯ ದಯಾನಂದ ಶೆಟ್ಟಿ ಮತ್ತಿತರರಿದ್ದರು. ಯೋಜನಾಧಿಕಾರಿ ಕೇಶವ ಎಚ್.ಸ್ವಾಗತಿಸಿದರು. ಡಾ.ಕೃಷ್ಣ ವಂದಿಸಿದರು. ಯಶ್ವಿತಾ ನಿರೂಪಿಸಿದರು. ಶಿಬಿರ ತಾ.೩೦ರವರೆಗೆ ನಡೆಯಲಿದೆ.

Thursday, December 23, 2010

ಉಲ್ಲಂಜೆಯಲ್ಲಿ ಕಟೀಲು ಕಾಲೇಜು ಎನ್‌ಎಸ್‌ಎಸ್ ಶಿಬಿರ

ಉಲ್ಲಂಜೆ ಜಿ.ಪಂ.ಹಿ.ಪ್ರಾ.ಶಾಲೆಯಲ್ಲಿ ತಾ.೨೪ರಿಂದ ತಾ.೩೦ರವರೆಗೆ ಕಟೀಲು ಶ್ರೀ ದು.ಪ.ದೇ.ಪದವಿ ಕಾಲೇಜಿನ ಎನ್‌ಎಸ್‌ಎಸ್ ಘಟಕಗಳ ವಾರ್ಷಿಕ ಶಿಬಿರ ನಡೆಯಲಿದೆ.ಸ್ಥಳೀಯ ರಸ್ತೆಗಳ ರಿಪೇರಿ, ಶೌಚಾಲಯಗಳ ನಿರ್ಮಾಣ ಮುಂತಾದ ಕಾರ್‍ಯಕ್ರಮಗಳನ್ನು ಶಿಬಿರದಲ್ಲಿ ಆಯೋಜಿಸಲಾಗಿದೆ ಎಂದು ಯೋಜನಾಧಿಕಾರಿ ಕೇಶವ ಎಚ್. ತಿಳಿಸಿದ್ದಾರೆ.

Tuesday, December 21, 2010

ಶಿಬರೂರು ಕೋಲ










ಶಿಬರೂರು ಕೊಡಮಣಿತ್ತಾಯ ದೈವಸ್ಥಾನದಲ್ಲಿ ನೇಮ ನಡೆಯಿತು



Saturday, December 18, 2010

ನಿಡ್ಡೋಡಿ ಐಟಿಐನಲ್ಲಿ ಗ್ರಾಮೋತ್ಸವ

ಅತ್ಯಂತ ಜ್ಞಾನಿಗಳೂ, ಬರೆಯಲೂ ಓದಲೂ ಬಾರದ ಅನಕ್ಷಸ್ಥರು, ಅತ್ಯಂತ ಶ್ರೀಮಂತರೂ, ಕಡು ಬಡವರೂ, ಆರೋಗ್ಯವಂತರೂ, ಕಾಯಿಲೆಗಳಿಂದ ನರಳುವವರೂ ಹೀಗೆ ಜನರ ಮಧ್ಯೆ ದೊಡ್ಡದಾದ ಅಂತರವನ್ನು ನಮ್ಮ ದೇಶದಲ್ಲಿ ಕಾಣಬಹುದು. ಸ್ವಾತಂತ್ರ್ಯಾನಂತರ ಸಮಾನತೆಯ ಸಮಾಜದ ಸ್ಥಾಪನೆಗಾಗಿ ಕೇಂದ್ರ ರಾಜ್ಯ ಸರಕಾರಗಳು ಅದೆಷ್ಟು ಪ್ರಯತ್ನ ಪಟ್ಟರೂ ಯಶಸ್ಸು ಸಾಧ್ಯವಾಗುತ್ತಿಲ್ಲ. ಪ್ರತಿ ಗ್ರಾಮವನ್ನು ಆದರ್ಶವಾಗಿಸುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಸಾಗಿದಾಗ ದೇಶ ಬಲಿಷ್ಟವಾಗಬಲ್ಲದು ಎಂದು ಮೂಡುಬಿದ್ರೆಯ ಡಾ.ಮೋಹನ ಆಳ್ವ ಹೇಳಿದರು.ಅವರು ಶನಿವಾರ ರಾತ್ರಿ ನಿಡ್ಡೋಡಿಯಲ್ಲಿ ಜ್ಞಾನರತ್ನ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್‌ನ ಶ್ರೀ ದುರ್ಗಾದೇವಿ ಕೈಗಾರಿಕಾ ತರಬೇತಿ ಸಂಸ್ಥೆಯ ವಾರ್ಷಿಕೋತ್ಸವ ಹಾಗೂ ನಿಡ್ಡೋಡಿ ಗ್ರಾಮೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.ಗ್ರಾಮೋತ್ಸವದ ಬಗ್ಗೆ ಉಪನ್ಯಾಸಗೈದ ಗಣೇಶ್ ಅಮೀನ್ ಸಂಕಮಾರ್, ನಮ್ಮ ಮಣ್ಣಿನ ಪ್ರೀತಿ, ಅಭಿಮಾನಗಳನ್ನು ಜಾನಪದ ಸಂಸ್ಕೃತಿ ನಮಗೆ ಕಲಿಸಿಕೊಡುತ್ತದೆ ಎಂದರು.ಸಾಂಸದ ನಳಿನ್ ಕುಮಾರ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಶಿಕ್ಷಣದೊಂದಿಗೆ ರಾಷ್ಟ್ರಪ್ರೇಮವನ್ನು ಹೆಚ್ಚಿಸುವ ಬಗ್ಗೆ ಶಿಕ್ಷಕರು ಹೆಚ್ಚು ಆಸಕ್ತಿ ವಹಿಸಬೇಕೆಂದರು.ವಿಧಾನ ಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್, ಎಂ.ಆರ್.ಜೈನ್, ತೋಕೂರು ಐಟಿಐನ ವೈ.ಎನ್.ಸಾಲ್ಯಾನ್, ವೇಣೂರು ಐಟಿಐನ ಸದಾನಂದ ಪೂಜಾರಿ ಮತ್ತಿತರರಿದ್ದರು.ಸಂಸ್ಥೆಯ ಅಧ್ಯಕ್ಷ ಭಾಸ್ಕರ ದೇವಸ್ಯ ಸ್ವಾಗತಿಸಿದರು. ಐಟಿಐನ ಪ್ರಾಚಾರ‍್ಯೆ ಅನುರಾಧಾ ಎಸ್.ಸಾಲ್ಯಾನ್ ವರದಿ ವಾಚಿಸಿದರು. ಸಂಸ್ಥೆಯ ವಿದ್ಯಾರ್ಥಿಗಳಿಂದ, ನಿಡ್ಡೋಡಿ ಗ್ರಾಮದ ಪ್ರತಿಭಾವಂತರಿಂದ ಸಾಂಸ್ಕೃತಿಕ, ಜಾನಪದ ಕಾರ‍್ಯಕ್ರಮಗಳು ನಡೆದವು.

Saturday, December 11, 2010

ಭಜನಾ ಮಂಗಲೋತ್ಸವ

ಕಟೀಲು ದೇಗುಲದಲ್ಲಿ ದಶಕಗಳಿಂದ ನಡೆಯುತ್ತ ಬಂದಿರುವ ಭಜನಾ ಮಂಗಲೋತ್ಸವ ನಡೆಯಿತು.

Friday, December 10, 2010

ಗಿಡಿಗೆರೆ ದೈವಸ್ಥಾನಕ್ಕೆ ಶಿಲಾನ್ಯಾಸ

ಕಟೀಲು ಗಿಡಿಗೆರೆ ಶ್ರೀ ಬ್ರಹ್ಮಮುಗೇರ ಮಹಾಕಾಳಿ ದೈವಸ್ಥಾನಕ್ಕೆ ಶುಕ್ರವಾರ ಶಿಲಾನ್ಯಾಸ ಮಾಡಲಾಯಿತು. ಶಿಬರೂರು ಹಯಗ್ರೀವ ತಂತ್ರಿ, ಕಟೀಲು ಹರಿನಾರಾಯಣದಾಸ ಆಸ್ರಣ್ಣ, ಪಂಜ ವಾಸುದೇವ ಭಟ್ ಧಾರ್ಮಿಕ ವಿಧಿಗಳ ಮೂಲಕ ಶಿಲಾನ್ಯಾಸಗೈದರು.ಸಚಿವ ವಿ.ಎಸ್.ಆಚಾರ್‍ಯ, ಸಾಂಸದ ನಳಿನ್ ಕುಮಾರ್, ಶಾಸಕ ಅಭಯಚಂದ್ರ, ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ, ಕಟೀಲು ಚರ್ಚ್‌ನ ಫಾ.ರಾಬರ್ಟ್ ಕ್ರಾಸ್ತಾ, ಮಾಜಿ ಶಾಸಕ ಸೋಮಪ್ಪ ಸುವರ್ಣ, ಜಿ.ಪಂ.ಸದಸ್ಯರಾದ ಶೈಲಾ ಸಿಕ್ವೇರ, ಪ್ರಮೋದ್ ಕುಮಾರ್, ಹರಿಕೃಷ್ಣ ಪುನರೂರು, ಭುವನಾಭಿರಾಮ ಉಡುಪ, ರವಿಶಂಕರ ಶೆಟ್ಟಿ, ಎಂಆರ್‌ಪಿಎಲ್‌ನ ಲಕ್ಷ್ಮೀ ಕುಮಾರನ್, ಎಕ್ಕಾರು ಮೋನಪ್ಪ ಶೆಟ್ಟಿ, ಸುಭಾಶ್ಚಂದ್ರ ಪಡಿವಾಳ್, ಗಿರೀಶ್ ಶೆಟ್ಟಿ, ಸೀತಾರಾಮ ಕೊಂಚಾಡಿ, ಲೀಲಾಧರ ಶೆಟ್ಟಿ, ತಿಮ್ಮಪ್ಪ ಮೇಸ್ತ್ರಿ ಮತ್ತಿತರರಿದ್ದರು. ಅರುಣಾ ಕುಮಾರಿ ಪ್ರಾರ್ಥಿಸಿದರು. ಪುರುಷೋತ್ತಮ ಶೆಟ್ಟಿ ಸ್ವಾಗತಿಸಿದರು. ರುಕ್ಮಯ, ಕಿರಣ್ ಪಕ್ಕಳ ಕಾರ್‍ಯಕ್ರಮ ನಿರೂಪಿಸಿದರು.

ಕಟೀಲಿನಲ್ಲಿ ಶ್ರೀ ಹನುಮದ್ ಶಕ್ತಿಜಾಗರಣ ಯಜ್ಞ

ಮುಲ್ಕಿ ತಾಲೂಕು ಶ್ರೀ ಹನುಮದ್ ಶಕ್ತಿ ಜಾಗರಣ ಸಮಿತಿ ಆಶ್ರಯದಲ್ಲಿ ಶ್ರೀ ಹನುಮದ್ ಶಕ್ತಿಜಾಗರಣ ಯಜ್ಞ ಹಾಗೂ ಹಿಂದೂ ಸಾಮಾವೇಶ ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಸ್ಮಾರಕ ಸಭಾಭವನದಲ್ಲಿ ಭಾನುವಾರ(ತಾ.೧೨) ನಡೆಯಲಿದೆ.ಬೆಳಿಗ್ಗೆ ೯ಕ್ಕೆ ಯಜ್ಞ ೧೧.೩೦ ಗಂಟೆಗೆ ನಡೆಯುವ ಸಭಾಕಾರ್‍ಯಕ್ರಮದಲ್ಲಿ ಗುರುಪುರ ವಜ್ರದೇಹಿ ರಾಜಶೇಖರಾನಂದ ಸ್ವಾಮೀಜಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ನಾ.ಸೀತಾರಾಮ್ ಭಾಗವಹಿಸಲಿದ್ದಾರೆ ಎಂದು ಸಮಿತಿಯ ಅಧ್ಯಕ್ಷ ದೊಡ್ಡಯ್ಯ ಮೂಲ್ಯ ತಿಳಿಸಿದ್ದಾರೆ.

Thursday, December 9, 2010

ಕಟೀಲಿನಲ್ಲಿ ಭಾರತೀ ವಿಷ್ಣುವರ್ಧನ್

ಕಟೀಲು ದೇಗುಲಕ್ಕೆ ಡಿಸೆಂಬರ್ 9ರಂದು ಚಿತ್ರ ನಟಿ ಭಾರತೀ ವಿಷ್ಣುವರ್ಧನ್ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

Wednesday, December 8, 2010

ಕಟೀಲಿನಲ್ಲಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್

ಭಾರತೀಯರಲ್ಲಿ ಗಳಿಸಿದ್ದರಲ್ಲಿ ಉಳಿಸುವ ಗುಣ ಸಹಜವಾಗಿ ರೂಢಿಯಾಗಿದೆ ಎಂದು ಉನ್ನತ ಶಿಕ್ಷಣ ಹಾಗೂ ಮುಜರಾಯಿ ಸಚಿವ ಡಾ.ವಿ.ಎಸ್.ಆಚಾರ್‍ಯ ಹೇಳಿದರು.ಅವರು ಶುಕ್ರವಾರ ಕಟೀಲಿನ ಸೌಂದರ್‍ಯ ಪ್ಯಾಲೇಸ್ ವಾಣಿಜ್ಯ ಸಂಕೀರ್ಣದಲ್ಲಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ೪೩೨ನೇ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು.
ಕರಾವಳಿ ಜಿಲ್ಲೆ ಬ್ಯಾಂಕಿಂಗ್ ಕ್ಷೇತ್ರದ ತೊಟ್ಟಿಲು ಆಗಿದೆ. ೧೯೬೯ರಲ್ಲಿ ಬ್ಯಾಂಕುಗಳ ರಾಷ್ಟ್ರೀಕರಣವಾದ ಬಳಿಕ ಬ್ಯಾಂಕುಗಳ, ಶಾಖೆಗಳ ಸಂಖ್ಯೆ ದೊಡ್ಡ ಮಟ್ಟದಲ್ಲಿ ಬೆಳೆದಿದೆ. ಆದರೆ ದೇಶದಲ್ಲಿ ಇವತ್ತಿಗೂ ೨೦ರಿಂದ ೩೦ಶೇಕಡಾ ಮಂದಿ ಬ್ಯಾಂಕಿಂಗ್ ಕ್ಷೇತ್ರದಿಂದ ಹೊರಗಿದ್ದಾರೆ ಎಂದು ಡಾ. ಆಚಾರ್‍ಯ ಹೇಳಿದರು.
ಸಾಂಸದ ನಳಿನ್ ಕುಮಾರ್, ಶಾಸಕ ಅಭಯಚಂದ್ರ, ಕಟೀಲು ದೇಗುಲದ ಅರ್ಚಕರಾದ ವಾಸುದೇವ ಆಸ್ರಣ್ಣ, ಲಕ್ಷ್ಮೀನಾರಾಯಣ ಆಸ್ರಣ್ಣ, ಹರಿನಾರಾಯಣದಾಸ ಆಸ್ರಣ್ಣ, ಸೌಂದರ್‍ಯ ಪ್ಯಾಲೇಸ್‌ನ ರಮೇಶ್, ಮೆನ್ನಬೆಟ್ಟು ಗ್ರಾ.ಪಂ.ಅಧ್ಯಕ್ಷೆ ಶೈಲಾ ಶೆಟ್ಟಿ, ಬ್ಯಾಂಕಿನ ಪ್ರಾದೇಶಿಕ ಪ್ರಬಂಧಕರಾದ ಎಸ್.ಸಿ.ಬಿರಾದಾರ ಮತ್ತಿತರರಿದ್ದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಬ್ಯಾಂಕಿನ ಮಹಾಪ್ರಬಂಧಕ ವಾಸುದೇವ ಕೆ.ಕಾಲಕುಂದ್ರಿ, ಈ ಹಿಂದೆ ನೇತ್ರಾವತಿ, ಮಲಪ್ರಭಾ, ವರದಾ, ಬಿಜಾಪುರ ಹೀಗೆ ೯ಜಿಲ್ಲೆಗಳಲ್ಲಿದ್ದ ಸಣ್ಣ ಬ್ಯಾಂಕ್‌ಗಳನ್ನು ಒಂದಾಗಿಸಿ ಮಾಡಲಾದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಇವತ್ತು ೮ಸಾವಿರ ಕೋಟಿ ರೂ.ವ್ಯವಹಾರಗಳ ಸಾಧನೆ ಮಾಡಿದೆ. ೪೫ಲಕ್ಷ ಗ್ರಾಹಕರಿದ್ದಾರೆ ಎಂದು ಮಾಹಿತಿ ನೀಡಿದರು.ನಾರಾಯಣ ಯಾಜಿ ಕಾರ್‍ಯಕ್ರಮ ನಿರೂಪಿಸಿದರು. ಶೇಖರ ಶೆಟ್ಟಿ ಸ್ವಾಗತಿಸಿದರು. ಗ್ರಾಹಕರ ಪರವಾಗಿ ಪಿ.ಸತೀಶ್ ರಾವ್ ಮಾತನಾಡಿದರು. ಶಾಖಾಧಿಕಾರಿ ಶ್ರೀಪಾದ ರಾವ್ ಎಂ.ವಂದಿಸಿದರು.

Friday, December 3, 2010

ಕಟೀಲು ಹಿ.ಪ್ರಾ.ಶಾಲೆಯಲ್ಲಿ ವಿಶ್ವ ಅಂಗವಿಕಲರ ದಿನಾಚರಣೆ






ಕಟೀಲು ಹಿ.ಪ್ರಾ.ಶಾಲೆಯಲ್ಲಿ ವಿಶ್ವ ಅಂಗವಿಕಲರ ದಿನಾಚರಣೆ ಪ್ರಯುಕ್ತ ಪದ್ಮನೂರು, ಉಲ್ಲಂಜೆ ಕ್ಲಸ್ಟರ್ ವತಿಯಿಂದ ಅಂಗವಿಕಲರಿಗಾಗಿ ನಡೆದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನವನ್ನು ದೇಗುಲದ ಅರ್ಚಕ ಅನಂತಪದ್ಮನಾಭ ಆಸ್ರಣ್ಣ ವಿತರಿಸಿದರು. ಮುಖ್ಯೋಪಾಧ್ಯಾಯಿನಿ ಮಾಲತಿ, ಇಲಾಖೆಯ ಅನಂತರಾಮ ರಾವ್, ವಾಸುದೇವ ಶೆಣೈ ಮತ್ತಿತರರಿದ್ದರು.
ಅಂಗವಿಕಲರಿಗೆ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಿದ ಸ್ಪರ್ಧಿ

Saturday, November 27, 2010

ಕಟೀಲು ದೀಪೋತ್ಸವ(ದಿಂಡು)




ಕಟೀಲು ದೇಗುಲದಲ್ಲಿ ನವೆಂಬರ್ 26ರಂದು ವೈಭವದ ಲಕ್ಷ ದೀಪೋತ್ಸವ ನಡೆಯಿತು.
ಹಣ್ಣುತರಕಾರಿಗಳ ಕಟ್ಟೆ(ಗುರ್ಜಿ) ಯಲ್ಲಿಟ್ಟು ದೇವರನ್ನು ಪೂಜಿಸಲಾಯಿತು. ಚಂದ್ರಮಂಡಲ ರಥೋತ್ಸವ ನಡೆಯಿತು.

Friday, November 26, 2010

ಕಟೀಲು ಯಕ್ಷಗಾನ ಮೇಳಗಳ ಚಿನ್ನಬೆಳ್ಳಿ ಆಭರಣಗಳ ವೈಭವದ ಮೆರವಣಿಗೆ


ಕಟೀಲಿನ ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಐದು ಮಂಡಳಿಗಳಿಗೆ ಭಕ್ತರು ಕೊಡಮಾಡಿದ ಚಿನ್ನದ ಕಿರೀಟಗಳು, ಸುದರ್ಶನ, ಬೆಳ್ಳಿಯ ದೇವರ ಪೆಟ್ಟಿಗೆ, ಸಿಂಹ, ತೊಟ್ಟಿಲು ಮುಂತಾದ ಆಭರಣಗಳನ್ನು ಬಜಪೆಯಿಂದ ವೈಭವದ ಮೆರವಣಿಗೆಯಲ್ಲಿ ಕಟೀಲು ದೇಗುಲಕ್ಕೆ ಶುಕ್ರವಾರ ತರಲಾಯಿತು. ಸಾವಿರಾರು ಮಂದಿ ಮೆರವಣಿಗೆಯನ್ನು ಭಾಗವಹಿಸಿ ವೀಕ್ಷಿಸಿದರು.

Wednesday, November 24, 2010

ಕಾವ್ಯಗೆ ಎಂಎ ಪ್ರಥಮ ರಾಂಕ್


ಕಟೀಲು ಶ್ರೀ ದುರ್ಗಾ ಸಂಸ್ಕ್ರತ ಸ್ನಾತಕೋತ್ತರ ಅಧ್ಯಯನ ಕೇಂದ್ರದ ವಿದ್ಯಾರ್ಥಿನಿ ಕಾವ್ಯ ಮಂಗಳೂರು ವಿವಿ ಪರೀಕ್ಷೆಯಲ್ಲಿ ಸಂಸ್ಕ್ರತ ಎಂ ಎಯಲ್ಲಿ ಪ್ರಥಮ ರಾಂಕ್ ಪಡೆದಿದ್ದಾರೆ.
ಇವರು ಸಾಹಿತಿ, ನಿವ್ರತ್ತ ಶಿಕ್ಷಕ ಪು.ಶ್ರೀನಿವಾಸ ಭಟ್ಟರ ಪುತ್ರಿ.

Sunday, November 21, 2010

ಸುಂದರ ಪೂಜಾರಿಗೆ ಅದ್ದೂರಿ ಸಂಮಾನ

ಕಟೀಲು ಪದವೀಪೂರ್ವ ಕಾಲೇಜಿನಲ್ಲಿ 42ವರುಷಗಳ ಕಾಲ ದೈಹಿಕ ಶಿಕ್ಷಕರಾಗಿ ಸೇವೆಸಲ್ಲಿಸಿ, ನಿವ್ರತ್ತರಾದ, ಸಂಸ್ಥೆಗೆ ನೂರಾರು ರಾಜ್ಯ, ರಾಷ್ಟ್ರ ಮಟ್ಟದ ಕ್ರೀಡಾಪ್ರಶಸ್ತಿಗಳನ್ನು ತಂದುಕೊಟ್ಟ ಸುಂದರ ಪೂಜಾರಿಯವರನ್ನು ಅವರ ಅಭಿಮಾನಿ ಹಾಗೂ ಶಿಷ್ಯರ ಬಳಗ ಕಟೀಲಿನ ರಥಬೀದಿಯಲ್ಲಿ ನ.21ರಂದು ಅದ್ದೂರಿಯಾಗಿ ಸಂಮಾನಿಸಿತು.
ಸುಂದರ ಪೂಜಾರಿ ವಿಮಲಾ ಪೂಜಾರಿ ದಂಪತಿಗಳನ್ನು ಸಂಮಾನ ಪತ್ರ, ಬಂಗಾರದ ಸರ ನೀಡಿ ಅಭಿನಂದಿಸಲಾಯಿತು.
ಸಾಂಸದ ನಳಿನ್ ಕುಮಾರ್, ಶಾಸಕ ಅಭಯಚಂದ್ರ, ಡಾ.ಮೋಹನ ಆಳ್ವ, ಅರ್ಚಕರಾದ ವಾಸುದೇವ, ಲಕ್ಷ್ಮೀನಾರಾಯಣ, ಅನಂತಪದ್ಮನಾಭ ಆಸ್ರಣ್ಣರು, ಸುಂದರ ಶೆಟ್ಟಿ, ವಿಜಯಲಕ್ಷ್ಮೀ ಶಿಬರೂರು, ಡಾ.ಸುರೇಶ್ ರಾವ್ ಸೇರಿದಂತೆ ಶಿಷ್ಯರು ಉಪಸ್ಥಿತರಿದ್ದರು.

Saturday, November 20, 2010

ಕಟೀಲಿನಲ್ಲಿ ಬಯಲು ರಂಗಮಂಟಪಕ್ಕೆ ಶಿಲಾನ್ಯಾಸ


ಸರಕಾರ ಎಲ್ಲ ಸವಲತ್ತುಗಳನ್ನು ಕೊಟ್ಟರೂ ಇಂಗ್ಲಿಷ್ ವ್ಯಾಮೋಹಕ್ಕೆ ಕನ್ನಡ ಶಾಲೆಗಳು ಮುಚ್ಚುತ್ತಿದ್ದು, ಕರಾವಳಿ ಜಿಲ್ಲೆಯಲ್ಲಿ ಮುಂದಿನ ಮೂರು ವರುಷಗಳಲ್ಲಿ ಶೇಕಡಾ ಇಪ್ಪತ್ತೈದರಷ್ಟು ಶಾಲೆಗಳು ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚುವ ಹಂತದಲ್ಲಿವೆ. ಶಿಕ್ಷಣದ ವ್ಯವಸ್ಥೆಯಲ್ಲಿ ಬದಲಾವಣೆ ಅಗತ್ಯವೇ ಎಂಬ ಚಿಂತನೆ ಆಗಬೇಕಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.ಅವರು ಶನಿವಾರ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪದವೀ ಪೂರ್ವ ಕಾಲೇಜಿನಲ್ಲಿ ರಜತ ಮಹೋತ್ಸವ ನೆನಪಿಗಾಗಿ ಸುಮಾರು ರೂ.೫೦ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಬಯಲು ರಂಗಮಂಟಪದ ಶಿಲಾನ್ಯಾಸ ಸಮಾರಂಭದಲ್ಲಿ ಮಾತನಾಡಿದರು.ಅವರು ಕಳ್ಳರು ಇವರು ಖದೀಮರು ಎಂಬುದಕ್ಕಿಂತ ನಾವೆಷ್ಟು ಪ್ರಾಮಾಣಿಕರಾಗಿದ್ದೇವೆ ಎಂಬುದು ಮುಖ್ಯ. ನಾವೆಲ್ಲರೂ ದಕ್ಷರಾಗಿದ್ದರೆ ವ್ಯವಸ್ಥೆಯೂ ಸರಿಯಾಗಿರುತ್ತದೆ. ಲೋಕಾಯುಕ್ತದ ಅಗತ್ಯವೂ ಇರುವುದಿಲ್ಲ ಎಂದು ಹೇಳಿದ ಶ್ರೀನಿವಾಸ ಪೂಜಾರಿ ಶಿಕ್ಷಕರು ಪುಸ್ತಕದ ಪಾಠವನ್ನಷ್ಟೇ ಹೇಳದೆ ಪರಿಸರದ ಬಗ್ಗೆಯೂ ಹೇಳಿಕೊಡಬೇಕು ಎಂದು ಹೇಳಿದರು.ಶಿಲಾನ್ಯಾಸಗೈದ ಸಚಿವ ಕೃಷ್ಣ ಪಾಲೇಮಾರ್, ರಂಗಮಂದಿರಕ್ಕೆ ಹತ್ತು ಲಕ್ಷ ರೂ.ಗಳ ಅನುದಾನದ ಭರವಸೆ ನೀಡಿದರು. ಇನ್ನು ಮಕ್ಕಳು ತಾರಾಲಯ ನೋಡಲು ಬೆಂಗಳೂರಿಗೇ ಹೋಗಬೇಕಿಲ್ಲ. ಪಿಲಿಕುಳದಲ್ಲಿ ೧೫.೩೦ ಕೋಟಿ ರೂ.ವೆಚ್ಚದಲ್ಲಿ ತಾರಾಲಯವನ್ನು ಸ್ಥಾಪಿಸಲಾಗುವುದು. ಹೋಬಳಿ ಮಟ್ಟದಲ್ಲಿ ಪಡೆಯಲಾಗುತ್ತಿದ್ದ ಹವಾಮಾನದ ಮಾಹಿತಿಯನ್ನು ಗ್ರಾಮಮಟ್ಟದಿಂದಲೂ ಪಡೆಯುವ ಪ್ರಯತ್ನ ನಡೆದಿದೆ ಎಂದರು.ರಂಗಮಂದಿರಕ್ಕೆ ಐದು ಲಕ್ಷ ರೂ.ಗಳ ಅನುದಾನ ನೀಡುವುದಾಗಿ ಹೇಳಿದ ಸಾಂಸದ ನಳಿನ್ ಕುಮಾರ್, ಕಟೀಲಿನಂತಹ ಗ್ರಾಮೀಣ ಪ್ರದೇಶದಲ್ಲಿ ಅತ್ಯುತ್ತಮ ಮಟ್ಟದಲ್ಲಿ ಶಿಕ್ಷಣ ನೀಡುತ್ತಿರುವ ಇಲ್ಲಿ ಡೊನೇಶನ್ ರಹಿತ ಶಿಕ್ಷಣ ನೀಡುತ್ತಿರುವುದು ಮಹತ್ವದ ಸಂಗತಿಯೆಂದರು. ಶಾಸಕ ಅಭಯಚಂದ್ರ ಕೂಡ ರೂ.೫ಲಕ್ಷ ರೂ.ಗಳ ಅನುದಾನದ ಆಶ್ವಾಸನೆ ನೀಡಿ, ರಂಗಮಂದಿರ ಶಿಕ್ಷಣ ಸಂಸ್ಥೆ ಹಾಗೂ ದೇಗುಲದ ಸಾಂಸ್ಕೃತಿಕ ಚಟುವಟಿಕೆಗಳಿಗೆ ಪೂರಕವಾಗಲಿ. ಒಳಾಂಗಣ ಕ್ರೀಡಾಂಗಣವೂ ಈ ರಂಗಮಂದಿರಲ್ಲಿದ್ದರೆ ಕ್ರೀಡಾಪಟುಗಳ ಬೆಳವಣಿಗೆಗೆ ಪೂರಕವಾಗಲಿದೆ ಎಂದರು.ಕಟೀಲು ದೇಗುಲದ ಅರ್ಚಕರಾದ ವಾಸುದೇವ ಆಸ್ರಣ್ಣ, ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ಮುಂಬೈ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ತುಕಾರಾಮ ಶೆಟ್ಟಿ, ಭಾಸ್ಕರ ದೇವಸ್ಯ, ಸಂತೋಷ್ ಶೆಟ್ಟಿ, ರಜತ ಮಹೋತ್ಸವ ಸಮಿತಿಯ ಚಿತ್ತರಂಜನ ರೈ, ಶಿಕ್ಷಕ ರಕ್ಷಕ ಸಂಘದ ವೈ.ಮೋನಪ್ಪ ಶೆಟ್ಟಿ, ಜಿ.ಪಂ.ಸದಸ್ಯ ಶೈಲಾ ಸಿಕ್ವೇರ, ಮೆನ್ನಬೆಟ್ಟು ಗ್ರಾ.ಪಂ.ಅಧ್ಯಕ್ಷೆ ಶೈಲಾ ಶೆಟ್ಟಿ ಮತ್ತಿತರರಿದ್ದರು.ಪ್ರಾಚಾರ್‍ಯ ಜಯರಾಮ ಪೂಂಜ ಸ್ವಾಗತಿಸಿದರು. ಉಪಪ್ರಾಚಾರ್‍ಯ ಸುರೇಶ್ ಭಟ್ ವಂದಿಸಿದರು. ಸಾಯಿನಾಥ ಶೆಟ್ಟಿ ಕಾರ್‍ಯಕ್ರಮ ನಿರೂಪಿಸಿದರು.ಕಟೀಲು ಪ.ಪೂ.ಕಾಲೇಜಿನ ರೂ.೫೦ಲಕ್ಷ ರೂ. ರಂಗಮಂದಿರಕ್ಕೆ ಕೃಷ್ಣ ಪಾಲೇಮಾರ್, ನಳಿನ್ ಕುಮಾರ್, ಅಭಯಚಂದ್ರ, ಕಟೀಲಿನ ಅರ್ಚಕರು ಶಿಲಾನ್ಯಾಸಗೈದರು.

Thursday, November 18, 2010

ಕಟೀಲಿನಲ್ಲಿ ಕ್ರೀಡಾಕೂಟ, ಕ್ರೀಡಾಶಿಕ್ಷಕ ಸುಂದರ ಪೂಜಾರಿಗೆ ಅಭಿನಂದನೆ




ಕಟೀಲು : ಇಲ್ಲಿನ ಪ್ರೌಢ ಹಾಗೂ ಪದವೀಪೂರ್ವ ಶಿಕ್ಷಣ ಸಂಸ್ಥೆಗಳಲ್ಲಿ ನಾಲ್ಕು ದಶಕಗಳ ಕಾಲ ದೈಹಿಕ ಕ್ರೀಡಾ ಶಿಕ್ಷಕರಾಗಿ ನೂರಾರು ರಾಜ್ಯ, ರಾಷ್ಟ್ರಮಟ್ಟದ ಕ್ರೀಡಾಪಟುಗಳನ್ನು ರೂಪಿಸಿದ ಸುಂದರ ಪೂಜಾರಿಯವರಿಗೆ ಕಟೀಲಿನ ರಥಬೀದಿಯಲ್ಲಿ ತಾ.೨೧ರ ಸಂಜೆ ೫ಗಂಟೆಗೆ ಗುರುವಂದನೆ ಕಾರ್‍ಯಕ್ರಮ ಜರಗಲಿದೆ.ಅಂದು ನಡೆಯುವ ಸಮಾರಂಭದಲ್ಲಿ ಸಚಿವ ಕೃಷ್ಣ ಪಾಲೇಮಾರ್, ಸಾಂಸದ ನಳಿನ್ ಕುಮಾರ್, ಶಾಸಕ ಅಭಯಚಂದ್ರ, ಅರ್ಚಕರಾದ ವಾಸುದೇವ ಆಸ್ರಣ್ಣ, ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತ ಆಸ್ರಣ್ಣ, ಸದಾನಂದ ಶೆಟ್ಟಿ, ಡಾ.ಮೋಹನ ಆಳ್ವ, ಜಿಲ್ಲಾ ಶಾರೀರಿಕ ಶಕ್ಷಕರ ಸಂಘದ ದಿವಾಕರ ಹೆಗ್ಡೆ, ಶಾರೀರಿಕ ಶಿಕ್ಷಣ ಇಲಾಖೆಯ ಎಂ.ಎನ್.ನಾಯಕ್, ಸುಂದರ ಶೆಟ್ಟಿ, ಶೈಲಾ ಶೆಟ್ಟಿ, ಸುವರ್ಣ ಟಿವಿಯ ವಿಜಯಲಕ್ಷ್ಮೀ ಶಿಬರೂರು ಭಾಗವಹಿಸಲಿದ್ದು, ಗಣನಾಥ ಎಕ್ಕಾರು ಅಭಿನಂದನೆ ಮಾತುಗಳನ್ನಾಡಲಿದ್ದಾರೆ. ಇದೇ ಸಂದರ್ಭ ರಾಷ್ಟ್ರ ಮಟ್ಟದಲ್ಲಿ ಸಾಧನೆಗೈದ ಸುಂದರ ಪೂಜಾರಿಯವರ ಕ್ರೀಡಾ ಶಿಷ್ಯರಿಗೆ ಗೌರವಾರ್ಪಣೆ, ರಾಷ್ಟ್ರಮಟ್ಟದ ಕ್ರೀಡಾಪಟು ಅರುಣಾ ರಾವ್‌ರಿಂದ ಸುಗಮ ಸಂಗೀತ, ಚಕ್ರವರ್ತಿ ಸೂಲಿಬೆಲೆ ತಂಡದಿಂದ ರಾಷ್ಟ್ರದೇವೋಭವ ಕಾರ್‍ಯಕ್ರಮ ಜರಗಲಿದೆ.ಕಟೀಲಿನಲ್ಲಿ ತಾಲೂಕು ಕ್ರೀಡಾಕೂಟಅಭಿನಂದನೆ ಸಮಿತಿಯಿಂದ ಬುಧವಾರ ಕಟೀಲಿನಲ್ಲಿ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು. ಕಟೀಲಿನ ಅರ್ಚಕ ಹರಿನಾರಾಯಣದಾಸ ಆಸ್ರಣ್ಣ ಕ್ರೀಡಾಕೂಟ ಉದ್ಘಾಟಿಸಿದರು. ಸುಂದರ ಪೂಜಾರಿ, ಈಶ್ವರ ಕಟೀಲ್, ತಿಮ್ಮಪ್ಪ ಕೋಟ್ಯಾನ್, ಅರುಣಾ ರಾವ್, ದಯಾನಂದ ಮಾಡ, ವಿಜಯಕುಮಾರ್ ಶೆಟ್ಟಿ, ಉದಯಕುಮಾರ್, ಸುದೀಪ್ ಅಮೀನ್, ಎನ್.ಎಸ್.ಅಂಗಡಿ, ಕೆ.ವಿ.ಶೆಟ್ಟಿ ಮತ್ತಿತರರಿದ್ದರು.
ಚಿತ್ರ : ಸುಂದರಪೂಜಾರಿ ಅಭಿನಂದನ ಸಮಿತಿಯಿಂದ ತಾಲೂಕು ಮಟ್ಟದ ಕ್ರೀಡಾಕೂಟ ನಡೆಯಿತು.

ಕಟೀಲಿನ ಯಕ್ಷಗಾನ ಮೇಳಕ್ಕೆ ಚಿನ್ನದ ಕಿರೀಟಗಳು!


ಕಟೀಲು ಯಕ್ಷಗಾನದ ಐದು ಮೇಳಗಳಿಗೆ ಚಿನ್ನದ ಹತ್ತು ರಾಮ ಲಕ್ಷ್ಮಣ ಕಿರೀಟಗಳನ್ನು, ಐದು ಸುದರ್ಶನ ಚಕ್ರಗಳನ್ನು ಭಕ್ತರು ರೂ. ಹದಿನಾಲ್ಕು ಲಕ್ಷ ವೆಚ್ಚದಲ್ಲಿ ಮಾಡಿಕೊಟ್ಟಿದ್ದಾರೆ. ಈ ಹಿಂದೆ ಮರ ಹಾಗೂ ಬೆಳ್ಳಿಯ ಕಿರೀಟಗಳಿದ್ದು, ಇವುಗಳಿಗೆ ತಿರುಗಾಟದ ಸಂದರ್ಭ ತ್ರಿಕಾಲ ಪೂಜೆ ನಡೆಯುತ್ತದೆ. ತಾ.೨೬ರ ಸಂಜೆ ಬಜಪೆಯಿಂದ ಇವುಗಳನ್ನು ವೈಭವದ ಮೆರವಣಿಗೆಯಲ್ಲಿ ತಂದು ಸಮರ್ಪಿಸಲಾಗುತ್ತದೆ.
ಚಿತ್ರ : ಕಟೀಲ್ ಸ್ಟುಡಿಯೋ

Wednesday, October 20, 2010

ಕಟೀಲು ದೇಗುಲಕ್ಕೆ ಚಿನ್ನದ ಅಲಂಕಾರ ಮಂಟಪ, ಖಡ್ಗ



ಶ್ರೀದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ೭೩ಗ್ರಾಂ ಚಿನ್ನದಿಂದ ಮಾಡಿದ ಜಯಪ್ರದ ಖಡ್ಗವನ್ನು ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಕಾಣಿಕೆಯಾಗಿ ನೀಡಿದ್ದಾರೆ.

ದೇಗುಲದ ಚಿನ್ನದ ರಥಕ್ಕೆ ಈಗಾಗಲೇ ಮೊಯ್ಲಿಯವರು ೪೦೦ಗ್ರಾಂ ಚಿನ್ನ ನೀಡಿದ್ದಾರೆ.
ಬೆಂಗಳೂರಿನ ಶಮಿಕಾ ಎಂಬವರು ಕಟೀಲು ದೇಗುಲದ ಶ್ರೀ ದುರ್ಗಾಪರಮೇಶ್ವರೀ ದೇವರ ಅಲಂಕಾರ ಮಂಟಪವನ್ನು ೩೫೦ಗ್ರಾಂ ಚಿನ್ನ ಹಾಗೂ ೪.೫ಕೆಜಿ ಬೆಳ್ಳಿಯಿಂದ ನಿರ್ಮಿಸಿ ಸಮರ್ಪಿಸಿದ್ದಾರೆ.

Sunday, October 17, 2010

ನೆಲ್ಲಿತೀರ್ಥ ಗುಹಾ ಪ್ರವೇಶ ಆರಂಭ


ನದಿ ನಂದಿನಿಯ ಹುಟ್ಟಿಗೆ ಕಾರಣವಾದ ಜಾಬಾಲಿ ಮುನಿ ತಪಸ್ಸನ್ನಾಚರಿಸಿದ ನೆಲ್ಲಿತೀರ್ಥ ಕ್ಷೇತ್ರದ ಗುಹಾಪ್ರವೇಶ ಸ.೧೭ರಂದು ಆರಂಭಗೊಂಡಿದೆ. ಲೋಕಸಭಾ ಸದಸ್ಯ ನಳಿನ್ ಕುಮಾರ್ ಗುಹಾಪ್ರವೇಶಕ್ಕೆ ಚಾಲನೆ ನೀಡಿದರು. ಮುಂದಿನ ಎಪ್ರಿಲ್‌ವರೆಗೆ ಗುಹಾ ಪ್ರವೇಶಕ್ಕೆ ಅವಕಾಶವಿದೆ. ದಿನಂಪ್ರತಿ ಬೆಳಿಗ್ಗೆ ಗಂಟೆ ೭ರಿಂದ ಮಧ್ಯಾಹ್ನ ೧೨ರವರೆಗೆ ಮಾತ್ರ ಅವಕಾಶ.
ನಂದಿನಿಗೆ ಶ್ರೀ ದೇವೀ ಪ್ರತ್ಯಕ್ಷವಾಗಿ ನಿನ್ನ ಕಟಿ ಪ್ರದೇಶದಲ್ಲಿ ಆವಿರ್ಭವಿಸುತ್ತೇನೆ ಅಂದಳಂತೆ. ಪರಿಣಾಮ ಶ್ರೀ ಕ್ಷೇತ್ರ ಕಟೀಲು.

ಕಟೀಲು ಅಭಿವೃದ್ಧಿಗೆ ಅಧಿಕಾರಿಗಳ ಸಭೆ-ಸಚಿವ ಪಾಲೇಮಾರ್


ಪುರಾಣ ಪ್ರಸಿದ್ಧ ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ಯಾತ್ರಿ ನಿವಾಸ ನಿರ್ಮಾಣ, ಭೋಜನಾಲಯ ಹಾಗೂ ಒಳಚರಂಡಿ ನಿರ್ಮಾಣಕ್ಕೆ ಶೀಘ್ರ ಚಾಲನೆ ನೀಡುವ ಪ್ರಯತ್ನ ಮಾಡುವುದಾಗಿ ಮುಜರಾಯಿ ಸಚಿವ ಕೃಷ್ಣ ಪಾಲೇಮಾರ್ ಹೇಳಿದರು.
ಅವರು ಭಾನುವಾರ(ಅ೧೭) ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲಕ್ಕೆ ಭೇಟಿ ನೀಡಿದ ಸಂದರ್ಭ ಸಾಂಸದ ನಳಿನ್ ಕುಮಾರ್, ಶಾಸಕ ಅಭಯಚಂದ್ರ ಜೊತೆಗೆ ಕಟೀಲು ಅಭಿವೃದ್ಧಿ ಕುರಿತು ಮಾಹಿತಿ ಪಡೆದರು.ದೇಗುಲ ಮತ್ತು ಪರಿಸರದ ಅಭಿವೃದ್ಧಿಯ ಕುರಿತು ವಿವಿಧ ಇಲಾಖೆಗಳ ಉನ್ನತಾಧಿಕಾರಿಗಳ ಸಭೆ ಕರೆಯುವುದಾಗಿ ತಿಳಿಸಿದ ಪಾಲೇಮಾರ್, ಎ ದರ್ಜೆಯ ದೇಗುಲಗಳಲ್ಲಿ ಡ್ರೈನೇಜ್ ಆಗಲೇಬೇಕು. ಪರಿಸರ ಸಚಿವನಾಗಿಯೂ ಈ ಜವಾಬ್ದಾರಿ ತನಗಿದೆ ಎಂದ ಸಚಿವರು ಕಟೀಲಿನಲ್ಲಿ ನಿರ್ಮಾಣವಾಗುತ್ತಿರುವ ಚಿನ್ನದ ರಥದ ಕಾರ‍್ಯಕ್ಕೆ ವೇಗ ಕೊಡಲಾಗುವುದು ಎಂದರು.ಕಟೀಲಿನಲ್ಲಿ ರಥಬೀದಿ ಅಗಲಗೊಳಿಸುವುದು ಮತ್ತು ಶೀಘ್ರ ಬೈಪಾಸ್ ನಿರ್ಮಾಣ ಮಾಡಬೇಕೆಂದು ಸಾಂಸದ ನಳಿನ್ ಕುಮಾರ್ ಸಚಿವರನ್ನು ಒತ್ತಾಯಿಸಿದರು. ಕುಕ್ಕೆ ಸುಬ್ರಹ್ಮಣ್ಯದಂತೆ ಕಟೀಲಿನಲ್ಲೂ ಅಂಗಡಿಗಳ ಏಲಂ ಮೂಲಕ ದೇಗುಲದ ಆದಾಯವನ್ನು ಹೆಚ್ಚಿಸಬೇಕು. ಕಿನ್ನಿಗೋಳಿ ಮೂರುಕಾವೇರಿಯಿಂದ ಕಟೀಲುವರೆಗಿನ ರಸ್ತೆ ಅಗಲಗೊಳಿಸಬೇಕೆಂದು ಹರಿಕೃಷ್ಣ ಪುನರೂರು ಸಚಿವರ ಗಮನ ಸೆಳೆದರು.ವಿದ್ಯುತ್ ಅಸಾಧ್ಯದೇಗುಲದ ಸುತ್ತಲೂ ಹರಿಯುತ್ತಿರುವ ನಂದಿನಿ ನದಿಯಿಂದ ದೇಗುಲದ ಉಪಯೋಗಕ್ಕೆ ೫ಲಕ್ಷ ರೂ.ನಿಂದ ೨೫ಕಿ.ವ್ಯಾ. ವಿದ್ಯುತ್ ಉತ್ಪಾದಿಸುವ ಕುರಿತು ಸಲ್ಲಿಕೆಯಾಗಿರುವ ಪ್ರಸ್ತಾವವನ್ನು ಸಚಿವರ ಗಮನಕ್ಕೆ ತಂದಾಗ ’ಅದು ಅಸಾಧ್ಯ. ವಿದ್ಯುತ್ ಉತ್ಪಾದನೆಯಾದರೆ ಅದು ಕೇಂದ್ರಕ್ಕೆ ಕಳುಹಿಸಿ ಅಲ್ಲಿಂದಲೇ ತರಬೇಕು. ಕಾನೂನು ತೊಡಕುಗಳೂ ಇವೆ. ವಿದ್ಯುತ್ ಯೋಜನೆ ಆಗುವ ಹೋಗುವ ಮಾತಲ್ಲ’ ಎಂದರು.ಟೆಂಡರು ಕರೆಯದೆ ದಿನಸಿ ಸಾಮಾನುಗಳನ್ನು ಖರೀದಿಸುತ್ತಿರುವುದರಿಂದ ದೇಗುಲಕ್ಕೆ ನಷ್ಟವಾಗುತ್ತಿದೆ ಎಂದಾಗ, ಆ ಕುರಿತು ಪರಿಶೀಲಿಸುವುದಾಗಿ ಸಚಿವ ಪಾಲೇಮಾರ್ ಹೇಳಿದರು.ದೇಗುಲದ ಪ್ರಬಂಧಕ ವಿಶ್ವೇಶ ರಾವ್, ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ ಉಪಸ್ಥಿತರಿದ್ದರು.

Saturday, October 16, 2010

ಕೊಡೆತ್ತೂರು, ಎಕ್ಕಾರು ನವರಾತ್ರ ಮೆರವಣಿಗೆ



ಕಟೀಲಿಗೆ ಕೊಡೆತ್ತೂರು, ಎಕ್ಕಾರು ನವರಾತ್ರ ಮೆರವಣಿಗೆ ಬರುವುದು ಸಂಪ್ರದಾಯ