Wednesday, October 20, 2010

ಕಟೀಲು ದೇಗುಲಕ್ಕೆ ಚಿನ್ನದ ಅಲಂಕಾರ ಮಂಟಪ, ಖಡ್ಗ



ಶ್ರೀದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ೭೩ಗ್ರಾಂ ಚಿನ್ನದಿಂದ ಮಾಡಿದ ಜಯಪ್ರದ ಖಡ್ಗವನ್ನು ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಕಾಣಿಕೆಯಾಗಿ ನೀಡಿದ್ದಾರೆ.

ದೇಗುಲದ ಚಿನ್ನದ ರಥಕ್ಕೆ ಈಗಾಗಲೇ ಮೊಯ್ಲಿಯವರು ೪೦೦ಗ್ರಾಂ ಚಿನ್ನ ನೀಡಿದ್ದಾರೆ.
ಬೆಂಗಳೂರಿನ ಶಮಿಕಾ ಎಂಬವರು ಕಟೀಲು ದೇಗುಲದ ಶ್ರೀ ದುರ್ಗಾಪರಮೇಶ್ವರೀ ದೇವರ ಅಲಂಕಾರ ಮಂಟಪವನ್ನು ೩೫೦ಗ್ರಾಂ ಚಿನ್ನ ಹಾಗೂ ೪.೫ಕೆಜಿ ಬೆಳ್ಳಿಯಿಂದ ನಿರ್ಮಿಸಿ ಸಮರ್ಪಿಸಿದ್ದಾರೆ.

Sunday, October 17, 2010

ನೆಲ್ಲಿತೀರ್ಥ ಗುಹಾ ಪ್ರವೇಶ ಆರಂಭ


ನದಿ ನಂದಿನಿಯ ಹುಟ್ಟಿಗೆ ಕಾರಣವಾದ ಜಾಬಾಲಿ ಮುನಿ ತಪಸ್ಸನ್ನಾಚರಿಸಿದ ನೆಲ್ಲಿತೀರ್ಥ ಕ್ಷೇತ್ರದ ಗುಹಾಪ್ರವೇಶ ಸ.೧೭ರಂದು ಆರಂಭಗೊಂಡಿದೆ. ಲೋಕಸಭಾ ಸದಸ್ಯ ನಳಿನ್ ಕುಮಾರ್ ಗುಹಾಪ್ರವೇಶಕ್ಕೆ ಚಾಲನೆ ನೀಡಿದರು. ಮುಂದಿನ ಎಪ್ರಿಲ್‌ವರೆಗೆ ಗುಹಾ ಪ್ರವೇಶಕ್ಕೆ ಅವಕಾಶವಿದೆ. ದಿನಂಪ್ರತಿ ಬೆಳಿಗ್ಗೆ ಗಂಟೆ ೭ರಿಂದ ಮಧ್ಯಾಹ್ನ ೧೨ರವರೆಗೆ ಮಾತ್ರ ಅವಕಾಶ.
ನಂದಿನಿಗೆ ಶ್ರೀ ದೇವೀ ಪ್ರತ್ಯಕ್ಷವಾಗಿ ನಿನ್ನ ಕಟಿ ಪ್ರದೇಶದಲ್ಲಿ ಆವಿರ್ಭವಿಸುತ್ತೇನೆ ಅಂದಳಂತೆ. ಪರಿಣಾಮ ಶ್ರೀ ಕ್ಷೇತ್ರ ಕಟೀಲು.

ಕಟೀಲು ಅಭಿವೃದ್ಧಿಗೆ ಅಧಿಕಾರಿಗಳ ಸಭೆ-ಸಚಿವ ಪಾಲೇಮಾರ್


ಪುರಾಣ ಪ್ರಸಿದ್ಧ ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ಯಾತ್ರಿ ನಿವಾಸ ನಿರ್ಮಾಣ, ಭೋಜನಾಲಯ ಹಾಗೂ ಒಳಚರಂಡಿ ನಿರ್ಮಾಣಕ್ಕೆ ಶೀಘ್ರ ಚಾಲನೆ ನೀಡುವ ಪ್ರಯತ್ನ ಮಾಡುವುದಾಗಿ ಮುಜರಾಯಿ ಸಚಿವ ಕೃಷ್ಣ ಪಾಲೇಮಾರ್ ಹೇಳಿದರು.
ಅವರು ಭಾನುವಾರ(ಅ೧೭) ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲಕ್ಕೆ ಭೇಟಿ ನೀಡಿದ ಸಂದರ್ಭ ಸಾಂಸದ ನಳಿನ್ ಕುಮಾರ್, ಶಾಸಕ ಅಭಯಚಂದ್ರ ಜೊತೆಗೆ ಕಟೀಲು ಅಭಿವೃದ್ಧಿ ಕುರಿತು ಮಾಹಿತಿ ಪಡೆದರು.ದೇಗುಲ ಮತ್ತು ಪರಿಸರದ ಅಭಿವೃದ್ಧಿಯ ಕುರಿತು ವಿವಿಧ ಇಲಾಖೆಗಳ ಉನ್ನತಾಧಿಕಾರಿಗಳ ಸಭೆ ಕರೆಯುವುದಾಗಿ ತಿಳಿಸಿದ ಪಾಲೇಮಾರ್, ಎ ದರ್ಜೆಯ ದೇಗುಲಗಳಲ್ಲಿ ಡ್ರೈನೇಜ್ ಆಗಲೇಬೇಕು. ಪರಿಸರ ಸಚಿವನಾಗಿಯೂ ಈ ಜವಾಬ್ದಾರಿ ತನಗಿದೆ ಎಂದ ಸಚಿವರು ಕಟೀಲಿನಲ್ಲಿ ನಿರ್ಮಾಣವಾಗುತ್ತಿರುವ ಚಿನ್ನದ ರಥದ ಕಾರ‍್ಯಕ್ಕೆ ವೇಗ ಕೊಡಲಾಗುವುದು ಎಂದರು.ಕಟೀಲಿನಲ್ಲಿ ರಥಬೀದಿ ಅಗಲಗೊಳಿಸುವುದು ಮತ್ತು ಶೀಘ್ರ ಬೈಪಾಸ್ ನಿರ್ಮಾಣ ಮಾಡಬೇಕೆಂದು ಸಾಂಸದ ನಳಿನ್ ಕುಮಾರ್ ಸಚಿವರನ್ನು ಒತ್ತಾಯಿಸಿದರು. ಕುಕ್ಕೆ ಸುಬ್ರಹ್ಮಣ್ಯದಂತೆ ಕಟೀಲಿನಲ್ಲೂ ಅಂಗಡಿಗಳ ಏಲಂ ಮೂಲಕ ದೇಗುಲದ ಆದಾಯವನ್ನು ಹೆಚ್ಚಿಸಬೇಕು. ಕಿನ್ನಿಗೋಳಿ ಮೂರುಕಾವೇರಿಯಿಂದ ಕಟೀಲುವರೆಗಿನ ರಸ್ತೆ ಅಗಲಗೊಳಿಸಬೇಕೆಂದು ಹರಿಕೃಷ್ಣ ಪುನರೂರು ಸಚಿವರ ಗಮನ ಸೆಳೆದರು.ವಿದ್ಯುತ್ ಅಸಾಧ್ಯದೇಗುಲದ ಸುತ್ತಲೂ ಹರಿಯುತ್ತಿರುವ ನಂದಿನಿ ನದಿಯಿಂದ ದೇಗುಲದ ಉಪಯೋಗಕ್ಕೆ ೫ಲಕ್ಷ ರೂ.ನಿಂದ ೨೫ಕಿ.ವ್ಯಾ. ವಿದ್ಯುತ್ ಉತ್ಪಾದಿಸುವ ಕುರಿತು ಸಲ್ಲಿಕೆಯಾಗಿರುವ ಪ್ರಸ್ತಾವವನ್ನು ಸಚಿವರ ಗಮನಕ್ಕೆ ತಂದಾಗ ’ಅದು ಅಸಾಧ್ಯ. ವಿದ್ಯುತ್ ಉತ್ಪಾದನೆಯಾದರೆ ಅದು ಕೇಂದ್ರಕ್ಕೆ ಕಳುಹಿಸಿ ಅಲ್ಲಿಂದಲೇ ತರಬೇಕು. ಕಾನೂನು ತೊಡಕುಗಳೂ ಇವೆ. ವಿದ್ಯುತ್ ಯೋಜನೆ ಆಗುವ ಹೋಗುವ ಮಾತಲ್ಲ’ ಎಂದರು.ಟೆಂಡರು ಕರೆಯದೆ ದಿನಸಿ ಸಾಮಾನುಗಳನ್ನು ಖರೀದಿಸುತ್ತಿರುವುದರಿಂದ ದೇಗುಲಕ್ಕೆ ನಷ್ಟವಾಗುತ್ತಿದೆ ಎಂದಾಗ, ಆ ಕುರಿತು ಪರಿಶೀಲಿಸುವುದಾಗಿ ಸಚಿವ ಪಾಲೇಮಾರ್ ಹೇಳಿದರು.ದೇಗುಲದ ಪ್ರಬಂಧಕ ವಿಶ್ವೇಶ ರಾವ್, ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ ಉಪಸ್ಥಿತರಿದ್ದರು.

Saturday, October 16, 2010

ಕೊಡೆತ್ತೂರು, ಎಕ್ಕಾರು ನವರಾತ್ರ ಮೆರವಣಿಗೆ



ಕಟೀಲಿಗೆ ಕೊಡೆತ್ತೂರು, ಎಕ್ಕಾರು ನವರಾತ್ರ ಮೆರವಣಿಗೆ ಬರುವುದು ಸಂಪ್ರದಾಯ

Friday, October 15, 2010

ಉಲಿಪೆ

ಜಾತ್ರೆ ಮತ್ತು ನವರಾತ್ರ ಸಂದರ್ಭ ಕಟೀಲು ದೇಗುಲದ ಪರಿಸರದ ವಿಶ್ವಕರ್ಮ ಸಮುದಾಯದ ಮನೆಗಳಿಗೆ ಊಟದ ವಸ್ತುಗಳನ್ನು ನೀಡುವ ಸಂಪ್ರದಾಯವಿದೆ. ಉಲಿಪೆ ಅಂತ ಇದಕ್ಕೆ ಹೆಸರು.

ಕಟೀಲು ನವರಾತ್ರಿ ಕೆಲ ಚಿತ್ರ ಮಾಹಿತಿಗಳು

ನವರಾತ್ರಿಯ ದಿನಗಳಲ್ಲಿ ಹತ್ತಾರು ವಾದ್ಯಗಳ ನಿನಾದ ಕಟೀಲು ದೇಗುಲದ ಒಳಗೆ ಕೇಳಬಹುದು, ನೋಡಬಹುದು. ಹಿಂದೆ ವಾದ್ಯಗಾರರ ಸಂಖ್ಯೆ ಮೂವತ್ತು ನಲವತ್ತು ಇರುತ್ತಿತ್ತಂತೆ. ದೇಗುಲದ ಆದಾಯ ಹೆಚ್ಚಿದೆ. ಆದರೆ ವೈಭವದ ವೆಚ್ಚಕ್ಕೆ ಕಡಿವಾಣ ಹಾಕಿ ಹಬ್ಬದ ವೈಭವವನ್ನು ಕಡಿಮೆ ಮಾಡುವ ಕಾರ್ಯವನ್ನು ಆಡಳಿತಾಧಿಕಾರಿಗಳು ಮಾಡಿದ್ದಾರೆ! ಪರಿಣಾಮ ವಾದ್ಯಗಳ ಸಂಖ್ಯೆ ಹತ್ತಕ್ಕೆ ಇಳಿದಿದೆ!
ಕಟೀಲಿನಲ್ಲಿ ಅ.15ರಂದು ಬೆಂಗಳೂರಿನ ಅನಿರುದ್ಧ ಬಳಗದಿಂದ ಲಯಸುನಾದ ಕಾರ್ಯಕ್ರಮ ಜರಗಿತು.
ಆದರೆ ಯಾಕೋ ಸಭಾಂಗಣ ಖಾಲಿ.
ಕಟೀಲು ದೇಗುಲದ ಗರ್ಭ ಗುಡಿಯ ಸುತ್ತ ದೀಪಾಲಂಕಾರ.

Wednesday, October 13, 2010

ಕಟೀಲು ದೇಗುಲದಿಂದ ಐದನೇ ಯಕ್ಷಗಾನ ಮೇಳಕ್ಕೆ ಸಾಮೂಹಿಕ ಪ್ರಾರ್ಥನೆ





ಕಟೀಲು ದೇಗುಲದಿಂದ ಐದನೇ ಯಕ್ಷಗಾನ ಮೇಳಕ್ಕೆ ಸಾಮೂಹಿಕ ಪ್ರಾರ್ಥನೆ ಅ.13ರಂದು ನಡೆಯಿತು.
ಅರ್ಚಕರಾದ ಆಸ್ರಣ್ಣ ಬಂಧುಗಳು, ಸಾಂಸದ ನಳಿನ್ ಕುಮಾರ್, ಜಿ.ಪಂ.ಅಧ್ಯಕ್ಷ ಸಂತೋಷ್ ಭಂಡಾರಿ, ಮೇಳಗಳ ಸಂಚಾಲಕ ಕಲ್ಲಾಡಿ ದೇವೀಪ್ರಸಾದ ಶೆಟ್ಟಿ, ಶಿಬರೂರು ವೇದವ್ಯಾಸ ತಂತ್ರಿ, ಬಜಪೆ ರಾಘವೇಂದ್ರ ಆಚಾರ್ಯ, ಐಕಳ ಹರೀಶ್ ಶೆಟ್ಟಿ, ಐದನೇ ಮೇಳಕ್ಕೆ ಕೊಡುಗೆ ಕೊಡುವ ದಾನಿಗಳು ಮುಂತಾದವರಿದ್ದರು.


ಯಕ್ಷಗಾನ ಮೇಳಗಳಿಗೂ ಬಂತು ಚಿನ್ನದ ಕಿರೀಟ!


ದೇಗುಲಗಳಿಗೆ, ದೇವರಿಗೆ ಬೆಳ್ಳಿಯ, ಚಿನ್ನದ ಕಿರೀಟ ಕೊಡುವುದು ಗೊತ್ತುಂಟು, ಯಕ್ಷಗಾನ ಮೇಳಗಳೂ ಚಿನ್ನದ ಕಿರೀಟಗಳು ಸಮರ್ಪಿತವಾಗುವ ದಿನಗಳು ಬಂದಿವೆ. ಕಟೀಲಿನ ಹಿಂದಿನ ನಾಲ್ಕು ಹಾಗೂ ಈ ಬಾರಿಯ ಹೊಸದಾದ ಐದನೇ ಯಕ್ಷಗಾನ ಮೇಳಕ್ಕೂ ಚಿನ್ನದ ಕಿರೀಟಗಳು ಸಮರ್ಪಣೆಯಾಗಲಿವೆ!
ಕಟೀಲಿನ ಯಕ್ಷಗಾನ ಮೇಳವನ್ನು ಕೇವಲ ಕಲೆಯಾಗಿ ನೋಡದೆ, ಖುದ್ದು ಕಟೀಲು ದೇವರೇ ನಮ್ಮ ಮನೆಗೆ ಬಂದಂತೆ ಎಂಬ ನಂಬಿಕೆ ಭಕ್ತರದ್ದು. ಹಾಗಾಗಿಯೇ ಎಂಟೂವರೆ ಸಾವಿರ ಸಂಖ್ಯೆಗಳಷ್ಟು ಹರಕೆಯಾಟಗಳು ಮುಂಗಡ ಬುಕ್ಕಿಂಗ್ ಆಗಿವೆ.
ಈಗಾಗಲೇ ಕಟೀಲಿನ ಯಕ್ಷಗಾನ ಮೇಳಗಳು ಬೆಳ್ಳಿಯ ಕಿರೀಟ, ತೊಟ್ಟಿಲು, ದೇವರ ಪ್ರಭಾವಳಿ, ಬಿಲ್ಲುಬಾಣ, ಶಂಖ, ಚಕ್ರ, ಗದಾ, ಪದ್ಮಾ, ತ್ರಿಶೂಲ, ತುರಾಯಿ, ರಾಜಕಿರೀಟ, ಮುಂತಾದ ಆಭರಣ, ಆಯುಧಗಳನ್ನು ಹೊಂದಿವೆ.
ಈ ಬಾರಿ ಭಕ್ತರು ಮೇಳಗಳಲ್ಲಿ ಪೂಜಿಸಲ್ಪಡುವ ರಾಮಲಕ್ಷ್ಮಣರ ಕಿರೀಟಗಳಿಗೆ ಚಿನ್ನದ ರಂಗು ತುಂಬಿಸಲಿದ್ದಾರೆ.
ನಾಲ್ಕು ಮೇಳಗಳಲ್ಲಿರುವ ಎಂಟು ಕಿರೀಟಗಳು ಸೇರಿದಂತೆ ಐದು ಮೇಳಗಳ ಹತ್ತು ಕಿರೀಟಗಳಿಗೆ ಚಿನ್ನದ ಲ್ಯಾಮಿನೇಟ್ ತಗಡನ್ನು ಹಾಕುವ ಮೂಲಕ ಮೇಳದ ದೇವರನ್ನು ಶ್ರೀಮಂತಗೊಳಿಸಲಿದ್ದಾರೆ. ಪ್ರತಿ ಕಿರೀಟಕ್ಕೆ ೬೦ಗ್ರಾಮ್ ಚಿನ್ನದಂತೆ ಒಟ್ಟು ೧೦ಕಿರೀಟಗಳಿಗೆ ಆರುನೂರು ಗ್ರಾಮ್ ಚಿನ್ನ ಬಳಸಲಾಗುತ್ತದೆ. ಇದಕ್ಕಾಗಿ ಸುಮಾರು ೧೪ಲಕ್ಷ ರೂ. ಖರ್ಚಾಗಲಿದ್ದು, ಈಗಾಗಲೇ ಎಂಟು ಲಕ್ಷ ರೂಗಳು ಭಕ್ತರು ನೀಡಿದ್ದಾರೆ.
ಕಟೀಲಿನ ಹೊಸ ಮೇಳಕ್ಕೆ ಈಗಾಗಲೇ ಹತ್ತಕ್ಕೂ ಹೆಚ್ಚು ಭಕ್ತರು ವೇಷಭೂಷಣ, ಬಸ್, ರಂಗಸ್ಥಳ, ಬೆಳ್ಳಿ ಕಿರೀಟ, ಪ್ರಭಾವಳಿ, ತೊಟ್ಟಿಲು ಮುಂತಾದ ಎಲ್ಲ ವಸ್ತುಗಳನ್ನೂ ನೀಡಲು ಮುಂದೆ ಬಂದಿರುವುದರಿಂದ ಹೊಸ ಮೇಳದ ರಚನೆಗೆ ದೇಗುಲಕ್ಕೆ ಯಾವುದೇ ಖರ್ಚಿಲ್ಲ. ದೇವರ ಜಂಗಮ ಸ್ವರೂಪದಂತಿರುವ ಕಟೀಲಿನ ಯಕ್ಷಗಾನ ಮೇಳಗಳಿಗೆ ಇನ್ನಷ್ಟು ಕೊಡುಗೆಗಳನ್ನು ನೀಡಲು ಭಕ್ತರನೇಕರು ಮುಂದೆ ಬರುತ್ತಿರುವುದು ಯಕ್ಷಗಾನಕ್ಕೆ ಚೈತನ್ಯದಾಯಕವಾಗಿದೆ.

Tuesday, October 12, 2010

ಕಟೀಲಿನಲ್ಲಿ 20ಸಾವಿರ ಮಂದಿಗೆ ಸೀರೆ ವಿತರಣೆ







ಕಟೀಲು ದೇಗುಲದಲ್ಲಿ ನವರಾತ್ರಿಯ ಲಲಿತಾ ಪಂಚಮಿ(ಅ.12) ದಿನ 20ಸಾವಿರ ಮಹಿಳಾ ಭಕ್ತರಿಗೆ 10ಸಾವಿರ ಶೇಷ ವಸ್ತ್ರ( ಸೀರೆ)ಗಳನ್ನು ವಿತರಿಸಲಾಯಿತು.
ಚಿತ್ರ : ನವೀನ್ ಕುಮಾರ್, ಕಟೀಲ್ ಸ್ಟುಡಿಯೋ

Saturday, October 9, 2010

ಕಟೀಲಿನ ರಥಬೀದಿಯಲ್ಲಿ ಹುಲಿವೇಷಗಳ ಸ್ಪರ್ಧೆ



ಬ್ಲೆಂಡೆಟೆ ಪ್ಲೆಟೆಟೆ ಬ್ಲೆಂಡೆಟೆ ಪ್ಲೆಟೆಟೆ...
ಭಾನುವಾರ ಕಟೀಲಿನ ರಥಬೀದಿಯಲ್ಲಿ ಉತ್ಸವದ ವಾತಾವರಣ. ದಿನವಿಡೀ ತಾಸೆ, ಡೋಲುಗಳದೇ ಅಬ್ಬರ. ನೂರಾರು ಸಂಖ್ಯೆಯಲ್ಲಿ ಹುಲಿವೇಷಗಳು ಕುಣಿದು ಸೇರಿದ್ದ ಸಾವಿರಾರು ಮಂದಿಯನ್ನು ರಂಜಿಸಿದವು. ಸ್ಥಳೀಯ ನವರಾತ್ರಿ ತೃತೀಯ ದಿನದ ಮೆರವಣಿಗೆ ಸಮಿತಿ ರಜತ ಮಹೋತ್ಸವದ ಸಲುವಾಗಿ ಆಯೋಜಿಸಿದ ಹುಲಿ ವೇಷ ಸ್ಪರ್ಧೆಯಲ್ಲಿ ಭಾಗವಹಿಸಿದ ತಂಡಗಳ ಕಲಾವಿದರು ಸಾಂಪ್ರದಾಯಿಕ ಕುಣಿತದೊಂದಿಗೆ ಮೈನವಿರೇಳಿಸುವ ಕಸರತ್ತುಗಳೊಂದಿಗೆ ರಂಜಿಸಿದರು. ಹುಲಿ ಕುಣಿತದ ವಿವಿಧ ಆಯಾಮಗಳನ್ನು ಬಿಡಿಸಿಟ್ಟ ಕಲಾವಿದರು ಹಲ್ಲಿನಿಂದ ಅಕ್ಕಿಮುಡಿ ಕಚ್ಚಿ ಹಿಂದೆಕ್ಕೆಸೆದು, ಕೈಗೆ ಕಾಲುಗಳಿಗೆ ಕೋಲು ಕಟ್ಟಿಕೊಂಡು, ತೆಂಗಿನ ಕಾಯಿಯನ್ನು ಒಡೆದು, ವಿಧವಿಧವಾಗಿ ಪಲ್ಟಿ ಹೊಡೆದು, ಮಾನವ ಗೋಪುರ ನಿರ್ಮಿಸಿ ಗಮನ ಸೆಳೆದರು. ಬಳಿಕ ಮಂಗಳೂರಿನ ಮಂಜುಶ್ರೀ ಮಹಿಳಾ ತಂಡದವರಿಂದ ಹುಲಿವೇಷ ಕುಣಿತವೂ ಗಮನ ಸೆಳೆಯಿತು. ಶಿವಮೊಗ್ಗದ ಮಹಿಳಾ ತಂಡದವರ ಡೊಳ್ಳುಕುಣಿತ ಪ್ರೇಕ್ಷಕರ ಅಪೇಕ್ಷೆ ಮೇರೆಗೆ ಮೂರು ಬಾರಿ ಪ್ರದರ್ಶನಗೊಂಡಿತು. ನಿಟ್ಟೂರಿನ ಡಿಡಿ ಮಹಿಳಾ ತಂಡದಿಂದ ಪ್ರದರ್ಶಿಸಲ್ಪಟ್ಟ ಡ್ರಾಗನ್ ಕುಣಿತವೂ ಹೊಸ ಆಕರ್ಷಣೆಯಾಗಿತ್ತು.ಹುಲಿವೇಷ ಸ್ಪರ್ಧೆಯನ್ನು ಅರ್ಚಕ ಕಮಲಾದೇವಿ ಪ್ರಸಾದ ಆಸ್ರಣ್ಣ ಉದ್ಘಾಟಿಸಿದರು. ಹರಿನಾರಾಯಣದಾಸ ಆಸ್ರಣ್ಣ, ರಮೇಶ ಐ.ಕೆ ಕುವೈಟ್, ಚಂದ್ರಶೇಖರ ವಿ, ಮುಂಬೈನಿತಿನ್ ಶೆಟ್ಟಿ, ದೊಡ್ಡಯ್ಯ ಮೂಲ್ಯ, ರಾಮಗೋಪಾಲ್, ಕೇಶವ್ ಕಟೀಲ್, ಕಿರಣ್ ಶೆಟ್ಟಿ ಮತ್ತಿತರರಿದ್ದರು.ಇದೇ ಸಂದರ್ಭ ಕಿನ್ನಿಗೋಳಿಯಿಂದ ಕಟೀಲುವರೆಗೆ ಆಯೋಜಿಸಲಾದ ಹುಲಿವೇಷ ಟ್ಯಾಬ್ಲೋ ಹಾಗೂ ಸ್ತಬ್ಧಚಿತ್ರ ಸ್ಪರ್ಧೆಯ ಮೆರವಣಿಗೆಯಲ್ಲಿ ಉಭಯ ಜಿಲ್ಲೆಗಳ ವಿವಿಧ ತಂಡಗಳು ಭಾಗವಹಿಸಿದ್ದವು. ಸತ್ಯನಾರಾಯಣ ಪೂಜೆ, ಗೀತೋಪದೇಶ, ಸತ್ಯಹರಿಶ್ಚಂದ್ರ, ಭಕ್ತ ಕನಕದಾಸ, ದೇವರ ಬಲಿ ಉತ್ಸವ, ಡ್ರಾಗನ್, ಆಪ್ತಮಿತ್ರ ಸಿನಿಮಾದ ದೃಶ್ಯಗಳು ಗಮನ ಸೆಳೆದವು.ಟ್ಯಾಬ್ಲೋ ಸ್ಪರ್ಧೆ ಉದ್ಘಾಟನೆಯಲ್ಲಿ ವೆಂಕಟರಮಣ ಆಸ್ರಣ್ಣ, ನಾಮದೇವ ಕಾಮತ್, ಪಿ.ಸತೀಶ್ ರಾವ್, ಪುರುಷೋತ್ತಮ ಶೆಟ್ಟಿ, ಭುವನಾಭಿರಾಮ ಉಡುಪ, ಧನಂಜಯ ಶೆಟ್ಟಿಗಾರ್ ಮತ್ತಿತರರಿದ್ದರು.ರಾತ್ರಿ ಕಟೀಲಿನ ನವರಾತ್ರಿ ಸಮಿತಿಯ ಮೆರವಣಿಗೆ ಇಪ್ಪತ್ತೈದು ಟ್ಯಾಬ್ಲೋಗಳೊಂದಿಗೆ ಕಟೀಲನ್ನು ತಲುಪಿದ ಬಳಿಕ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.










































































ಕಟೀಲಿನ ರಥಬೀದಿಯಲ್ಲಿ ಹುಲಿವೇಷಗಳ ಸ್ಪರ್ಧೆ ಫೋಟೋಗಳು








ಭಕ್ತಿಯ ಪ್ರದರ್ಶನವಾಗಬಾರದು. ಸಂಘಟನೆಯೊಂದಿಗೆ ಧರ್ಮಜಾಗೃತಿಯಾಗಬೇಕು. ನಮ್ಮ ಸಂಸ್ಕೃತಿಯ ವೈಭವವನ್ನು ಹಬ್ಬಗಳ, ಧಾರ್ಮಿಕ ಆಚರಣೆಯೊಂದಿಗೆ ಇನ್ನಷ್ಟು ಹೆಚ್ಚಿಸಬೇಕು ಎಂದು ಸುಬ್ರಹ್ಮಣ್ಯ ಮಠಾಧೀಶ ಶ್ರೀ ವಿದ್ಯಾಪ್ರಸನ್ನ ಸ್ವಾಮೀಜಿ ಹೇಳಿದರು.


ಅವರು ಭಾನುವಾರ ಕಟೀಲಿನಲ್ಲಿ ನವರಾತ್ರಿ ತೃತೀಯ ದಿನದ ಮೆರವಣಿಗೆ ಸಮಿತಿಯ ರಜತ ಮಹೋತ್ಸವ ಕಾರ್‍ಯಕ್ರಮದಲ್ಲಿ ಮಾತನಾಡಿದರು.ಇದೇ ಸಂದರ್ಭ ಆಯೋಜಿಸಲಾದ ಹುಲಿವೇಷ, ಟ್ಯಾಬ್ಲೋ ಸ್ಪರ್ಧೆಗಳ ನಗದು ಬಹುಮಾನ ಹಾಗೂ ಪ್ರಶಸ್ತಿಗಳನ್ನು ವಿತರಿಸಲಾಯಿತು.ಮಾಣಿಲ ಮೋಹನದಾಸ ಸ್ವಾಮೀಜಿ, ಕಟೀಲಿನ ಅರ್ಚಕರಾದ ವಾಸುದೇವ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ಎಂಆರ್‌ಪಿಎಲ್‌ನ ಅಧಿಕಾರಿ ಲಕ್ಷ್ಮೀ ಕುಮಾರನ್, ಪುಚ್ಚಕೆರೆ ಕೃಷ್ಣ ಭಟ್, ಬಜಪೆ ರಾಘವೇಂದ್ರ ಆಚಾರ್, ಮೆನ್ನಬೆಟ್ಟು ಗ್ರಾ.ಪಂ.ಅಧ್ಯಕ್ಷೆ ಶೈಲಾ ಶೆಟ್ಟಿ, ಬಜಪೆ ವ್ಯವಸಾಯ ಬ್ಯಾಂಕಿನ ಎಕ್ಕಾರು ಮೋನಪ್ಪ ಶೆಟ್ಟಿ, ಸೌಂದರ್‍ಯ ಪ್ಯಾಲೇಸ್‌ನ ಎಂ.ಎಸ್. ರಮೇಶ್, ಸಮಿತಿಯ ದೊಡ್ಡಯ್ಯ ಮೂಲ್ಯ, ರಾಮ್‌ಗೋಪಾಲ್, ಚಂದ್ರಶೇಖರ ಬಿ., ರಮೇಶ್ ಐ.ಕೆ.ಕುವೈಟ್, ಕೇಶವ ಕಟೀಲು, ರಾಜು ಶೆಟ್ಟಿ, ಕಿಶೋರ್ ಶೆಟ್ಟಿ ಮತ್ತಿತರರಿದ್ದರು. ರಾಜೇಂದ್ರ ಕುಮಾರ್, ದಾಮೋದರ ಆಚಾರ್‍ಯ ಕಾರ್‍ಯಕ್ರಮ ನಿರೂಪಿಸಿದರು. ಸಂಜೀವ ಮಡಿವಾಳ ವಂದಿಸಿದರು.


ಕಿನ್ನಿಗೋಳಿಯಿಂದ ಕಟೀಲುವರೆಗೆ ಹುಲಿವೇಷ, ಟ್ಯಾಬ್ಲೋಗಳ ಮೆರವಣಿಗೆ, ಮಹಿಳಾ ಹುಲಿ, ಡೊಳ್ಳುಕುಣಿತ, ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ನಡೆಯಿತು.


ಹುಲಿವೇಷಗಳ ಸ್ಪರ್ಧೆ: ಅಶೋಕ್ ರಾಜ್ ತಂಡ ಕಾಡಬೆಟ್ಟು(ಪ್ರಥಮ), ಬಲ್ಲಾಣ ಫ್ರೆಂಡ್ಸ್(ದ್ವಿತೀಯ)ಹುಲಿ ವೇಷ ಟ್ಯಾಬ್ಲೋ ಸ್ಪರ್ಧೆ: ಸುರೇಂದ್ರ ಕಾಡಬೆಟ್ಟು ತಂಡ ಉಡುಪಿ(ಪ್ರಥಮ), ಓಂಕಾರೇಶ್ವರೀ ಮಂದಿರ ತೋಕೂರು(ದ್ವಿ)


ಹುಲಿವೇಷ ವಿಭಾಗ ಪ್ರಶಸ್ತಿ: ಸುರೇಂದ್ರ ಕಾಡಬೆಟ್ಟು ತಂಡ(ಕಸರತ್ತು), ವಿಜಿಪಿ ತೊಕ್ಕೊಟ್ಟು(ಕುಣಿತ), ವಸಂತರಾಜ್ ಬಳಗ ದೇವರಗುಡ್ಡೆ(ಬಣ್ಣ), ಅಯ್ಯಪ್ಪ ಸಮಿತಿ, ಲಿಂಗಪ್ಪಯ್ಯಕಾಡು(ಶಿಸ್ತು), ತುಕಾರಾಮ್ ಬಳಗ ಕೂಳೂರು(ಹಿಮ್ಮೇಳ)


ಸ್ತಬ್ದ ಚಿತ್ರ : ಕನಕನ ಕಿಂಡಿ-ಕಿನ್ನಿಗೋಳಿ ಫ್ರೆಂಡ್ಸ್(ಪ್ರಥಮ), ನಾಗವಲ್ಲಿ-ಮಾರುತಿ ಗ್ರೂಪ್ಸ್ ಮೂಡುಬಿದ್ರೆ

ಕಟೀಲಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು

ನವರಾತ್ರಿ ಉತ್ಸವಾಂಗ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ತಾ.೧೦ರಂದು ಕಿನ್ನಿಗೋಳಿ ವಾಗ್ದೇವಿ ತಂಡದಿಂದ ಭಕ್ತಿಗೀತೆ, ತಾ.೧೧ರಂದು ಬೆಳಿಗ್ಗೆ ಸ್ವರಾರ್ಣವರಿಂದ ಭಕ್ತಿ ಗಾಯನ, ಸಂಜೆ ಸಂಯಮಂ ಮಾಣೂರು ತಂಡದಿಂದ ತಾಳಮದ್ದಲೆ, ತಾ.೧೨ರ ಲಲಿತಾ ಪಂಚಮಿಯಂದು ಶ್ರೀದೇವಿ ತಂಡದಿಂದ ಭಕ್ತಿಗೀತೆ, ಸಂತೂರಿನ ಸರಸ ಕಾಲೇಜು ಆಫ್ ಆರ್ಟ್ಸ್‌ವನರಿಂದ ಭರತನಾಟ್ಯ, ದುರ್ಗಾ ಮಕ್ಕಳಮೇಳದಿಂದ ಯಕ್ಷಗಾನ, ತಾ.೧೩ರಂದು ಬಿಜೈ ಶ್ರೀದೇವಿ ತಂಡದಿಂದ ಭಕ್ತಿಗೀತೆ, ಬೆಂಗಳೂರು ಪೂಜಾ ಉಡುಪರಿಂದ ಭರತನಾಟ್ಯ, ಯಕ್ಷಗಾನ, ತಾ.೧೪ರಂದು ಬಿಜೈ ಶಾಂತಿ ಕಲಾ ತಂಡದಿಂದ ಭಕ್ತಿ ಸಂಗೀತ ಧನ್ಯತಾ ಪುತ್ತೂರುರಿಂದ ಶಾಸ್ತ್ರೀಯ ಸಂಗೀತ, ತಾ.೧೫ರಂದು ಬಪ್ಪನಾಡು ಕಾರ್ತಿಕ್ ಬಳಗದಿಂದ ಭಕ್ತಿಗಾಯನ, ಅನಿರುದ್ಧ್ ಬಳಗ ಬೆಂಗಳೂರುರಿಂದ ಲಯಸುನಾದ, ತಾ.೧೬ಕ್ಕೆ ಭ್ರಾಮರಿ ತಂಡದಿಂದ ಭಕ್ತಿಗೀತೆ, ಶೈಲೇಶ್ ಕುಮಾರದಾಸ್ ಹಾಸನರಿಂದ ಹರಿಕಥೆ, ತಾ.೧೭ರಂದು ಬಾಲಗೋಕುಲ ತಂಡದಿಂದ ಭಕ್ತಿಗೀತೆ ನಡೆಯಲಿದೆ.

ನವರಾತ್ರಿ ತ್ರತೀಯ ದಿನದ ಮೆರವಣಿಗೆ ಸಮಿತಿಗೆ ರಜತ ಸಂಭ್ರಮ

ಪ್ರಸಿದ್ಧ ಕಟೀಲಿನ ಶ್ರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ನವರಾತ್ರಿಯ ಪರ್ವಕಾಲದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಭ್ರಮವನ್ನು ಹೆಚ್ಚಿಸುತ್ತವೆ. ಇವುಗಳ ಜೊತೆಗೆ ಕಟೀಲಿನ ನವರಾತ್ರಿಯ ವೈಭವವನ್ನು ಕೊಡೆತ್ತೂರು, ಎಕ್ಕಾರು ಹಾಗೂ ಕಟೀಲು ಗ್ರಾಮಸ್ಥರ ಮೆರವಣಿಗೆಗಳೂ ಹೆಚ್ಚಿಸುತ್ತವೆ. ಇಲ್ಲಿನ ಊರುಗಳ ಗ್ರಾಮಸ್ಥರು ಹುಲಿವೇಷ ಸೇರಿದಂತೆ ನಾನಾ ವೇಷಗಳೊಂದಿಗೆ ಕಟೀಲಿಗೆ ಮೆರವಣಿಗೆಯಲ್ಲಿ ಬರುವುದು ಸಂಪ್ರದಾಯ. ಇಷ್ಟಾರ್ಥ ಸಿದ್ದಿಗೆ, ಕಷ್ಟಗಳ ನಿವಾರಣೆಗೆ ವೇಷ ಹಾಕುವ ಹರಕೆ ಹೊತ್ತವರು ಜಾತಿ ಬೇಧಗಳಿಲ್ಲದೆ ನವರಾತ್ರಿ ಮೆರವಣಿಗೆಯಲ್ಲಿ ಬಂದು ದೇವರ ಎದುರು ಕುಣಿದು ಹರಕೆ ತೀರಿಸುತ್ತಾರೆ. ನೇಕರು ವರ್ಷಂಪ್ರತಿಯೂ ವೇಷ ಹಾಕಿ ಕುಣಿಯುವ ಮೂಲಕ ದೇವರ ಸೇವೆ ಸಲ್ಲಿಸಿದ ಕೃತಾರ್ಥಭಾವ ಹೊಂದುತ್ತಾರೆ. ಅನೇಕ ಉದ್ಯಮಿಗಳೂ ಈ ಮೆರವಣಿಗೆಯಲ್ಲಿ ಭಕ್ತಿಯಿಂದ ಭಾಗವಹಿಸುವುದನ್ನು ಕಟೀಲಿನಲ್ಲಿ ಕಾಣಬಹುದು. ವೇಷಧಾರಿಗಳು ಮೆರವಣಿಗೆಯ ದಿನ ನಿಷ್ಟೆ, ಭಕ್ತಿಯಿಂದ ಬಣ್ಣಹಚ್ಚಿಕೊಳ್ಳುತ್ತಾರೆ. ನವರಾತ್ರಿಯ ದಿನಗಳಲ್ಲಿ ಒಂದು ಸಾವಿರಕ್ಕೂ ಹೆಚ್ಚು ಹುಲಿವೇಷಧಾರಿಗಳು ಬಂದು ಹರಕೆ ತೀರಿಸುವುದು ಕಟೀಲಿನ ವಿಶೇಷ.ವೈಯಕ್ತಿಕವಾಗಿ ವೇಷ ಹಾಕಿ ಹರಕೆ ತೀರಿಸುತ್ತಿದ್ದ ದಿನಗಳು ಕಳೆದು ಊರಿನ ಅನೇಕ ಮಂದಿ ಸಾಮೂಹಿಕವಾಗಿ ವೇಷ ಧರಿಸಿ, ಮೆರವಣಿಗೆಯಲ್ಲಿ ಬರುವ ಸಂಪ್ರದಾಯ ಆರಂಭವಾದ ಮೇಲೆ ನವರಾತ್ರಿ ಮೆರವಣಿಗೆ ಸಮಿತಿಗಳು ಹುಟ್ಟಿಕೊಂಡವು.ಎಕ್ಕಾರಿನಿಂದ ಕಟೀಲಿಗೆ ದಸರಾ ಮೆರವಣಿಗೆ ಮೂಲಾನಕ್ಷತ್ರದಂದು ಬರುವ ಸಂಪ್ರದಾಯ. ಇಲ್ಲಿನ ಸಮಿತಿ ಈ ವರ್ಷ ೫೧ವರ್ಷಗಳ ಸೇವೆಯ ಸಾರ್ಥಕ್ಯದಲ್ಲಿದ್ದರೆ, ಕೊಡೆತ್ತೂರು ಹುಲಿವೇಷ ಮೆರವಣಿಗೆ ಸಮಿತಿ ೪೫ವರ್ಷಗಳಿಂದ ಲಲಿತಾ ಪಂಚಮಿಯ ದಿನದಂದು ಮೆರವಣಿಗೆ ಬಂದು ಕಟೀಲಮ್ಮನ ಸೇವೆ ಮಾಡುತ್ತಿದೆ. ಕಟೀಲು ಮೆರವಣಿಗೆ ಸಮಿತಿಯವರು ಕಳೆದ ಇಪ್ಪತ್ತೈದು ವರ್ಷಗಳಿಂದ ನವರಾತ್ರಿಯ ತೃತೀಯ ದಿನ ಮೆರವಣಿಗೆ ಬರುವ ಮೂಲಕ ಉತ್ಸವಕ್ಕೆ ಕಳೆಗಟ್ಟುತ್ತಿದ್ದಾರೆ. ಹುಲಿ, ಕರಡಿ, ಸಿಂಹ, ಬೆಂರ್‍ಕ, ಕಾಡು ಜನರ ವೇಷ ಇತ್ಯಾದಿ ಬಣ್ಣದ ವೇಷಗಳಲ್ಲದೆ, ತಾಲೀಮು, ಚೆಂಡೆ, ಡೋಲು ಮುಂತಾದ ವಾದ್ಯಪರಿಕರಗಳೊಂದಿಗೆ ಮೆರವಣಿಗೆಯ ಸೊಬಗನ್ನು ಹೆಚ್ಚಿಸುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಸ್ತಬ್ಧ ಚಿತ್ರಗಳು ಮೆರವಣಿಗೆಯ ಸೌಂದರ್‍ಯವನ್ನು ಇನ್ನಷ್ಟು ಜಾಸ್ತಿ ಮಾಡುತ್ತಿವೆ. ಸುಡುಮದ್ದುಗಳ ಗದ್ದಲವೂ ಜೊತೆಗಿರುತ್ತದೆ. ಕಟೀಲಿನಲ್ಲಿ ನವರಾತ್ರಿಯ ದಿನಗಳಲ್ಲಿ ಉತ್ಸವದ ವಾತಾವರಣ ಇರಬೇಕೆಂದು ದೇಗುಲದ ಅರ್ಚಕರಾದ ದಿ.ಗೋಪಾಲಕೃಷ್ಣ ಆಸ್ರಣ್ಣರು ಪರಿಸರದ ಮಕ್ಕಳು ಯುವಕರಿಂದ ವೇಷ ಹಾಕಿಸಿ ಕುಣಿಸುತ್ತಿದ್ದರು. ಮುಂದೆ ಇದೇ ಬೆಳೆದು ಸಮಿತಿಯ ರೂಪ ತಾಳಿತು. ಕಳೆದ ಇಪ್ಪತ್ತೈದು ವರುಷಗಳಿಂದ ನವರಾತ್ರಿ ಮೆರವಣಿಗೆ ನಡೆಸಿಕೊಂಡು ಬರುತ್ತಿರುವ ಕಟೀಲಿನ ಮೆರವಣಿಗೆ ಸಮಿತಿಯವರು ಈ ವರ್ಷ ರಜತ ಸಂಭ್ರಮಕ್ಕಾಗಿ ಭಾನುವಾರ(ತಾ.೧೦) ದಿನವಿಡೀ ಅಂದರೆ ಸತತ ೨೪ ಗಂಟೆಗಳ ಕಾರ್‍ಯಕ್ರಮಗಳನ್ನು ಆಯೋಜಿಸಿದೆ.ರಜತ ವರ್ಷಕ್ಕಾಗಿ ದೊಡ್ಡಯ್ಯ ಮೂಲ್ಯ(ಗೌರವಾಧ್ಯಕ್ಷ), ರಾಮಗೋಪಾಲ್(ಅಧ್ಯಕ್ಷ), ಕೇಶವ ಕಟೀಲ್(ಕಾರ್‍ಯದರ್ಶಿ), ಚಂದ್ರಹಾಸ(ಕೋಶಾಧಿಕಾರಿ) ಮುಂತಾದವರನ್ನೊಳಗೊಂಡ ಸಮಿತಿ ರಚಿಸಲಾಗಿದೆ.

ತಾ.10ರ ಬೆಳಿಗ್ಗೆ ೮.೩೦ರಿಂದ ಸಂಜೆ ೫ರತನಕ ಕಟೀಲಿನ ರಥಬೀದಿಯಲ್ಲಿ ಹುಲಿವೇಷಗಳ ಸ್ಪರ್ಧೆ ನಡೆಯಲಿದೆ. ವಿಜೇತರಿಗೆ ೨೦ಸಾವಿರ ರೂ, ೧೨ಸಾವಿರ ರೂ. ನಗದು ಬಹುಮಾನವಿದೆ. ಸಂಜೆ ೫ಗಂಟೆಗೆ ಕಿನ್ನಿಗೋಳಿಯ ವಸಂತ ಮಂಟಪದಿಂದ ಟ್ಯಾಬ್ಲೋ ಸ್ಪರ್ಧೆ ಆರಂಭವಾಗಲಿದ್ದು, ನಾಲ್ಕು ಕಿಮೀ ದೂರದ ಕಟೀಲುವರೆಗೆ ಸ್ತಬ್ಧಚಿತ್ರ ಮೆರವಣಿಗೆ ಬರಲಿದೆ. ಈ ಸ್ಪರ್ಧೆಯಲ್ಲಿ ೧೫ಟ್ಯಾಬ್ಲೋಗಳಿದ್ದು ವಿಜೇತರಿಗೆ ೨೫ಸಾವಿರ, ೧೫ಸಾವಿರ ರೂ. ನಗದು ಬಹುಮಾನವಿದೆ. ಇದಲ್ಲದೆ ಒಂಭತ್ತು ಹುಲಿವೇಷಗಳ ಟ್ಯಾಬ್ಲೋಗಳಿಗೂ ಪ್ರತ್ಯೇಕ ಸ್ಪರ್ಧೆಯಿದ್ದು, ವಿಜೇತರಿಗೆ ೧೦ಸಾವಿರ, ೫ಸಾವಿರ ರೂ. ನಗದು ಬಹುಮಾನವಿದೆ. ಹೀಗೆ ೨೫ಟ್ಯಾಬ್ಲೋಗಳು ಮೆರವಣಿಗೆಯಲ್ಲಿ ಬರಲಿವೆ.

ಈ ಮಧ್ಯೆ ಕಟೀಲಿನಲ್ಲಿ ಹಾಕಲಾಗಿರುವ ವೇದಿಕೆಯಲ್ಲಿ ಸಂಜೆ ೫ರಿಂದ ಮಂಜುಶ್ರೀ ಒಕ್ಕೂಟದ ಮಹಿಳಾ ತಂಡದವರಿಂದ ಹುಲಿವೇಷ ಕುಣಿತ, ಶಿವಮೊಗ್ಗದ ಮಹಿಳಾ ತಂಡದಿಂದ ಡೊಳ್ಳುಕುಣಿತ, ನಿಟ್ಟೂರಿನ ಡಿಡಿ ಮಹಿಳಾ ತಂಡದಿಂದ ಡ್ರಾಗನ್ ನೃತ್ಯ ರಂಜಿಸಲಿವೆ.
ಕಟೀಲಿನ ಮೆರವಣಿಗೆ ಸಮಿತಿಯ ವೇಷಗಳೊಂದಿಗೆ ಟ್ಯಾಬ್ಲೋಗಳು ಮೆರವಣಿಗೆಯಲ್ಲಿ ಕಟೀಲನ್ನು ರಾತ್ರಿ ೯ಗಂಟೆಗೆ ತಲುಪಲಿದ್ದು, ಬಳಿಕ ಸಭಾ ಕಾರ್‍ಯಕ್ರಮವಿದೆ. ಸುಬ್ರಹ್ಮಣ್ಯ ಸ್ವಾಮೀಜಿ, ಮಾಣಿಲ ಸ್ವಾಮೀಜಿ, ಕಟೀಲು ದೇಗುಲದ ಅರ್ಚಕರಾದ ಆಸ್ರಣ್ಣ ಬಂಧುಗಳು, ಪಿ.ಕೃಷ್ಣ ಭಟ್, ಸಾಂಸದ ನಳಿನ್ ಕುಮಾರ್, ಶಾಸಕ ಅಭಯಚಂದ್ರ ಮುಂತಾದವರು ಭಾಗವಹಿಸಲಿದ್ದಾರೆ. ಕೊರ್ಗಿ ವೇಂಕಟೇಶ್ವರ ಉಪಾಧ್ಯಾಯರಿಂದ ಧಾರ್ಮಿಕ ಉಪನ್ಯಾಸವಿದೆ.ಬಳಿಕ ಬೆಳಿಗ್ಗಿನವರೆಗೆ ತೆಂಕು ಬಡಗು ತಿಟ್ಟುಗಳ ಪ್ರಸಿದ್ಧ ಕಲಾವಿದರಿಂದ ಕೂಡಾಟ ಪ್ರತಿಜ್ಞಾಫಲ ಪ್ರದರ್ಶನಗೊಳ್ಳಲಿದೆ. ಉಭಯತಿಟ್ಟುಗಳ ವೇಷಧಾರಿಗಳು ಏಕಕಾಲದಲ್ಲಿ ರಂಗಸ್ಥಳದಲ್ಲಿ ಕಾಣಿಸಿಕೊಳ್ಳುವುದು ವಿಶಿಷ್ಟವೆನಿಸಲಿದೆ.

ಭಾಗವಹಿಸುವ ಸ್ಪರ್ಧಾ ಹುಲಿವೇಷ

ಸ್ಪರ್ಧೆಯಲ್ಲಿ ದೇವರಗುಡ್ಡೆ ಫ್ರೆಂಡ್ಸ್, ಸುರೇಂದ್ರ ಕಾಡಬೆಟ್ಟು, ತುಕಾರಾಂ ಕೂಳೂರು, ಬಲ್ಲಣ ಫ್ರೆಂಡ್ಸ್ ಮಂಗಳೂರು, ಓಂಕಾರೇಶ್ವರೀ ಮಂದಿರ ೧೦ನೇ ತೋಕೂರು, ಅಶೋಕ್‌ರಾಜ್ ಕಾಡಬೆಟ್ಟು, ವಿಟಿ ಟೈಗರ್ ಬಾಯ್ಸ್, ಲಿಂಗಪ್ಪಯ್ಯಕಾಡು ಅಯ್ಯಪ್ಪ ಭಕ್ತವೃಂದ ತಂಡಗಳು ಭಾಗವಹಿಸಲಿವೆ.

ಟ್ಯಾಬ್ಲೋ ಸ್ಪರ್ಧೆಯಲ್ಲಿ ಮಾರುತಿ ಮೂಡುಬಿದ್ರೆ, ಕಿನ್ನಿಗೋಳಿ ಫ್ರೆಂಡ್ಸ್, ನ್ಯೂರವಿ ಇಂಡಸ್ಟ್ರೀಸ್, ಜಿಕೆ ಗ್ರೂಪ್ಸ್ ಮೂಡುಬಿದ್ರೆ, ಮಹಮ್ಮಾಯೀ ಫ್ರೆಂಡ್ಸ್, ಪುತ್ತಿಗೆ ಫ್ರೆಂಡ್ಸ್, ತುಳುನಾಡು ಫ್ರೆಂಡ್ಸ್, ಮಾಸ್ಟರ್ ಲಕ್ಷ್ಮೀ ಅರ್ಪಣ್ ಬಳಗ ಪುತ್ತೂರು, ಆನಂದ ಬಂಗೇರ ಮೂಡುಪೆರಾರ, ದುರ್ಗಾಂಬಾ ಗಿಡಿಗೆರೆ, ಅಶೋಕ್ ಕಾಡಬೆಟ್ಟು, ಕೃಷ್ಣ ಪೂಜಾ ಅರೆಂಜರ್‍ಸ್ ಹಳೆಯಂಗಡಿ ತಂಡಗಳು ಭಾಗವಹಿಸಲಿವೆ.









Thursday, October 7, 2010

ಕಟೀಲು ಪಿಯು ಕಾಲೇಜು ರಜತ ಮಹೋತ್ಸವ

ಕಟೀಲು ದುರ್ಗಾಪರಮೇಶ್ವರೀ ದೇವಳ ಪದವೀಪೂರ್ವ ಕಾಲೇಜಿನಲ್ಲಿ ರಜತಮಹೋತ್ಸವ ಪ್ರಯುಕ್ತ ಪೂರ್ವಭಾವಿ ಸಭೆ ನಡೆಯಿತು.ಸಮಿತಿಯ ಗೌರವಾಧ್ಯಕ್ಷ, ಸಾಂಸದ ನಳಿನ್ ಕುಮಾರ್, ಅಧ್ಯಕ್ಷರಾದ ಶಾಸಕ ಅಭಯಚಂದ್ರ, ಕಾರ್ಯಾಧ್ಯಕ್ಷ ಚಿತ್ತರಂಜನ ರೈ, ಮಾಜಿ ಸಚಿವ ಅಮರನಾಥ ಶೆಟ್ಟಿ, ಮೋನಪ್ಪ ಶೆಟ್ಟಿ ಎಕ್ಕಾರು, ಲಕ್ಷ್ಮೀನಾರಾಯಣ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ಸಂತೋಷ್ ಶೆಟ್ಟಿ, ಪ್ರಾಚಾರ್ಯ ಜಯರಾಮ ಪೂಂಜ, ಸುರೇಶ್ ಭಟ್ ಮತ್ತಿತರರಿದ್ದರು.ರಜತ ಮಹೋತ್ಸವ ನೆನಪಿಗಾಗಿ ಸುಮಾರು ರೂ.45 ಲಕ್ಷ ರೂ.ವೆಚ್ಚದಲ್ಲಿ ಬಯಲು ರಂಗಮಂಟಪವನ್ನು ರಚಿಸುವ ಬಗ್ಗೆ ಚರ್ಚಿಸಲಾಯಿತು.

Tuesday, October 5, 2010

ಕಟೀಲಿನಲ್ಲಿ ಅ.10ರಂದು ಹುಲಿವೇಷ, ಸ್ತಬ್ದಚಿತ್ರ ಸ್ಪರ್ಧೆ

ರಥಬೀದಿಯಲ್ಲಿ ಅಕ್ಟೋಬರ್ ೧೦ರಂದು ದಿನವಿಡೀ ನೂರಾರು ಹುಲಿಗಳು ದಿನವಿಡೀ ಕುಣಿಯಲಿವೆ. ನವರಾತ್ರಿಯ ದಿನಗಳಲ್ಲಿ ಸಾವಿರಕ್ಕೂ ಹುಲಿವೇಷಗಳು ಕಟೀಲಿಗೆ ಬಂದು ಕುಣಿದು ಹರಕೆ ತೀರಿಸಿಹೋಗುವುದು ಸಂಪ್ರದಾಯ. ಹಾಗೆಯೇ ಕೊಡೆತ್ತೂರು, ಎಕ್ಕಾರು, ಕಟೀಲು ಗ್ರಾಮಗಳಿಂದ ಹುಲಿ ಸೇರಿದಂತೆ ಅನೇಕ ವೇಷಧಾರಿಗಳು ಮೆರವಣಿಗೆಯಲ್ಲಿ ಬಂದು ಕಟೀಲಿನ ರಥಬೀದಿಯಲ್ಲಿ ನರ್ತಿಸಿ, ಶ್ರೀ ದೇವಿಯ ಸೇವೆ ಸಲ್ಲಿಸಿ ಹೋಗುತ್ತಾರೆ. ಕಟೀಲು ಊರಿನ ಸಮಿತಿಯವರು ನವರಾತ್ರಿಯ ಮೂರನೇ ದಿನ ಮೆರವಣಿಗೆಯನ್ನು ನಡೆಸುತ್ತಾರೆ. ಕಟೀಲಿನ ತೃತೀಯ ದಿನದ ಮೆರವಣಿಗೆಗೆ ಈ ಬಾರಿ ಇಪ್ಪತ್ತೈದನೇ ವರ್ಷ. ಈ ಸಂಭ್ರಮಕ್ಕಾಗಿ ತಾ.೧೦ರಂದು ಹುಲಿವೇಷ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಕರಾವಳಿಯ ಹತ್ತು ತಂಡಗಳು ಸ್ಪರ್ಧೆಯಲ್ಲಿವೆ. ಅಂದು ಬೆಳಿಗ್ಗೆ ೮.೩೦ಕ್ಕೆ ಅರ್ಚಕ ಕಮಲಾದೇವಿ ಪ್ರಸಾದ ಆಸ್ರಣ್ಣ ಸ್ಪರ್ಧೆ ಉದ್ಘಾಟಿಸಲಿದ್ದಾರೆ. ಸಂಜೆ ೫.೩೦ಕ್ಕೆ ಕಿನ್ನಿಗೋಳಿಯಿಂದ ಕಟೀಲುವರೆಗೆ ಸ್ತಬ್ದಚಿತ್ರ ಸ್ಪರ್ಧೆ ನಡೆಯಲಿದ್ದು ೧೫ಟ್ಯಾಬ್ಲೋಗಳು ಸ್ಪರ್ಧೆಯಲ್ಲಿವೆ. ವೆಂಕಟರಮಣ ಆಸ್ರಣ್ಣ ಸ್ಪರ್ಧೆ ಉದ್ಘಾಟಿಸಲಿದ್ದಾರೆ. ವೈಭವದ ಮೆರವಣಿಗೆಯ ಬಳಿಕ ರಾತ್ರಿ ನಡೆಯಲಿರುವ ಸಭಾಕಾರ್‍ಯಕ್ರಮದಲ್ಲಿ ಪಿ.ಕೃಷ್ಣ ಭಟ್, ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಮಾಣಿಲದ ಮೋಹನದಾಸ ಸ್ವಾಮೀಜಿ, ಕಟೀಲಿನ ವಾಸುದೇವ ಆಸ್ರಣ್ಣ, ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತ ಆಸ್ರಣ್ಣ, ಕೊರ್ಗಿ ವೇಂಕಟೇಶ್ವರ ಉಪಾಧ್ಯಾಯ, ಸಾಂಸದ ನಳಿನ್ ಕುಮಾರ್, ಶಾಸಕ ಅಭಯಚಂದ್ರ ಮುಂತಾದ ಗಣ್ಯರ ಭಾಗವಹಿಸಲಿದ್ದಾರೆ. ಬಳಿಕ ತೆಂಕು ಬಡಗು ತಿಟ್ಟಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ಬಯಲಾಟವಿದೆ ಎಂದು ಪ್ರಕಟನೆ ಸಮಿತಿ ಅಧ್ಯಕ್ಷ ರಾಮಗೋಪಾಲ್ ತಿಳಿಸಿದ್ದಾರೆ.

Sunday, October 3, 2010

ಕಟೀಲು ದೇಗುಲದಲ್ಲಿ ನವರಾತ್ರಿ

ಶ್ರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ತಾ.೮ರಿಂದ ೧೬ರವರೆಗೆ ನವರಾತ್ರಿ ಪೂಜಾ ಮಹೋತ್ಸವ ನಡೆಯಲಿದೆ.ತಾ.೧೨ರಂದು ಲಲಿತಾ ಪಂಚಮೀ, ತಾ.೧೩ಕ್ಕೆ ಮೂಲಾ ನಕ್ಷತ್ರ, ತಾ.೧೬ಕ್ಕೆ ಮಹಾನವಮೀ, ತಾ.೧೭ರಂದು ವಿಜಯದಶಮೀ, ಮಧ್ವಜಯಂತಿ ನಡೆಯಲಿದೆ. ದಿನಂಪ್ರತಿ ಬೆಳಿಗ್ಗ ವಿವಿಧ ತಂಡಗಳಿಂದ ಭಜನೆ ಸಂಜೆ ೫.೩೦ರಿಂದ ಸಾಂಸ್ಕೃತಿಕ ಕಾರ್‍ಯಕ್ರಮ, ರಾತ್ರಿ ಯಕ್ಷಗಾನ ಬಯಲಾಟವಿದೆ ಎಂದು ಪ್ರಕಟನೆ ತಿಳಿಸಿದೆ.

Saturday, October 2, 2010

ಕಟೀಲಿನಲ್ಲಿ ತಾಳಮದ್ದಲೆ

ಸದಾನಂದ ಆಸ್ರಣ್ಣ ಸ್ಮರಣಾರ್ಥ 4-10-10ರ ಸೋಮವಾರ ಮಧ್ಯಾಹ್ನ ೨ಗಂಟೆಯಿಂದ ಕಟೀಲು
ದೇಗುಲದಲ್ಲಿ ತಾಳಮದ್ದಲೆ ನಡೆಯಲಿದೆ.
ಪ್ರಸಂಗ : ಭೀಷ್ಮ ವಿಜಯ
ಕಲಾವಿದರು:
ಪುತ್ತಿಗೆ, ಕುಬಣೂರು, ಪದ್ಯಾಣ, ಪದ್ಮನಾಭ, ದೇವಾನಂದ ಭಟ್
ಜೋಷಿ, ಮೂಡಂಬೈಲು, ವಾ.ಸಾಮಗ, ಕೊರ್ಗಿ ಉಪಾಧ್ಯಾಯ, ಸುಣ್ಣಂಬಳ, ರಾಮಜೋಯಿಸ, ವಾ.ರಂಗಭಟ್, ಪ.ಶಾಸ್ತ್ರಿ, ಕಲ್ಲೂರಾಯ