Monday, August 27, 2012

ಕಟೀಲು:ತುಳು ತಾಳಮದ್ದಲೆ ಸ್ಪರ್ಧೆ ಉದ್ಘಾಟನೆ


ಕಟೀಲು : ಮಾತೃಭಾಷೆಯಿಂದ ಮಕ್ಕಳಿಗೆ ಸಂಸ್ಕೃತಿಯನ್ನು ಹೆಚ್ಚು ಅರ್ಥ ಪೂರ್ಣವಾಗಿ ತಿಳಿಸಲು ಸಾಧ್ಯವೆಂದು ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕರಾದ ಎಂ.ಆರ್.ವಾಸುದೇವ ಹೇಳಿದರು.
ಅವರು ಕಟೀಲು ಶ್ರೀದುರ್ಗಾಪರಮಶ್ವರೀ ದೇವಳದ ಆಶ್ರಯದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಮತ್ತು ವಿಜಯ ಯುವ ಸಂಗಮ ಎಕ್ಕಾರು ಇವರ ಸಂಯೋಜನೆಯಲ್ಲಿ ಕುರಲ್ ಇಷ್ಟೆರ್ ಕುಡ್ಲ ಇವರ ೨೦ನೇ ವರ್ಷಾಚರಣೆಯ ಪ್ರಯುಕ್ತ ಏಳು ದಿನಗಳ ತುಳು ತಾಳಮದ್ದಲೆ ಸ್ಪರ್ದೆ ಉದ್ಘಾಟಿಸಿ ಮಾತನಾಡಿದರು.
ದೇವಳದ ಆಡಳಿತಾಧಿಕಾರಿ ಡಾ.ಹರೀಶ್ ಕುಮಾರ್ ಚೆಂಡೆ ಬಾರಿಸಿ ಸ್ಪರ್ದೆಗೆ ಚಾಲನೆ ನೀಡಿದರು. ಅನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ,  ತುಳು ಸಾಹಿತ್ಯ ಅಕಾಡಮಿ ಅಧ್ಯಕ್ಷರಾದ ಉಮಾನಾಥ ಕೋಟ್ಯಾನ್, ಬಜ್ಪೆ ವ್ಯವಸಾಯ ಸಹಕಾರಿ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ರತ್ನಾಕರ ಶೆಟ್ಟಿ, ವಿಜಯ ಯುವ ಸಂಗಮದ ಬಾಲಕೃಷ್ಣ ಶೆಟ್ಟಿ, ಬಾಲಕೃಷ್ಣ ಆಚಾರ್ಯ ವೇದಿಕೆಯಲ್ಲಿದ್ದರು.
ಕಟೀಲು ಮಕ್ಕಳ ಮೇಳದ ಬಾಲಕಲಾವಿದರು ತುಳು ಯಕ್ಷಗಾನ ಪದ್ಯದ ಮೂಲಕ ಪ್ರಾರ್ಥನೆ ಹಾಡಿದರು. ಕುರಲ್ ಇಷ್ಟೆರ್ ಕುಡ್ಲ ಅಧ್ಯಕ್ಷ ವಾಮನ ಕರ್ಕೇರ ಕೊಲ್ಲೂರು ಸ್ವಾಗತಿಸಿದರು. ವಿ.ಕೆ.ಯಾದವ್ ಪ್ರಸ್ತಾವಿಸಿದರು. ರಾಮದಾಸ್ ಪಾವಂಜೆ ನಿರೂಪಿಸಿದರು. ನಿತೇಶ್ ವಂದಿಸಿದರು.


Monday, August 20, 2012

ಬಿಸಿರೋಡು ಮೂಲ್ಕಿ ಹೆದ್ದಾರಿಗೆ ರೂ.೨೦೦ಕೋಟಿ


ಕಟೀಲು : ರಾಷ್ಟ್ರೀಯ ಹೆದ್ದಾರಿಗೆ ಬೈಪಾಸ್ ಆಗಿ ಮೂಲ್ಕಿ ಕಿನ್ನಿಗೋಳಿ ಕಟೀಲು ಪೊಳಲಿ ಬಿಸಿರೋಡು ಹೆದ್ದಾರಿಯನ್ನು ೨೦೦ ಕೋಟಿ ರೂ.ನಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಕೇಂದ್ರ ಸಚಿವ ವೀರಪ್ಪ ಮೊಯಿಲಿ ಹೇಳಿದ್ದಾರೆ.
ಅವರು ಸೋಮವಾರ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲಕ್ಕೆ ಭೇಟಿ ನೀಡಿದ ಬಳಿಕ ಈ ವಿವರ ನೀಡಿದರು.
ಪ್ರತಿ ಮನೆಗೆ ವಿದ್ಯುತ್ ನೀಡುವ ಗ್ರಾಮೀಣ ವಿದ್ಯುದ್ದೀಕರಣ ಯೋಜನೆಯಡಿ ದಕ್ಷಿಣ ಕನ್ನಡಕ್ಕೆ ೬೦ಕೋಟಿ ರೂ. ಉಡುಪಿಗೆ ೨೦ಕೋಟಿ ರೂ. ನೀಡಲಾಗಿದೆ ಎಂದು ತಿಳಿಸಿದ ಮೊಯಿಲಿ ಒಂದು ಮೆಗಾವ್ಯಾಟ್ ಅಥವಾ ಅದಕ್ಕಿಂತ ಹೆಚ್ಚು ವಿದ್ಯುತ್ ಉತ್ಪಾದಿಸುವ ಜಲ, ಸೌರ ಇತ್ಯಾದಿ ಮೂಲಗಳ ಯೋಜನೆಗಳಿಗೆ ಕೇಂದ್ರ ಸರಕಾರ ಖಾಸಗಿಯರಿಗೆ ಪ್ರೋತ್ಸಾಹ ನೀಡುತ್ತದೆ ಎಂದು ಮಾಹಿತಿ ನೀಡಿದರು. ಶಾಸಕ ಅಭಯಚಂದ್ರ, ಅರ್ಚಕ ವೆಂಕಟರಮಣ ಆಸ್ರಣ್ಣ, ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತ ಆಸ್ರಣ್ಣ ಮತ್ತಿತರರಿದ್ದರು.
ಸಭಾಭವನ ಉದ್ಘಾಟನೆ
ಶ್ರೀ ಗೋಪಾಲಕೃಷ್ಣ ಆಸ್ರಣ್ಣ ಸ್ಮರಣಾರ್ಥ ನೂತನ ಸಭಾಭವನವನ್ನು ವೀರಪ್ಪ ಮೊಯಿಲಿ ಉದ್ಘಾಟಿಸಿದರು. ಶಾಸಕ ಅಭಯಚಂದ್ರ, ಮಾಜಿ ಸಚಿವ ಅಮರನಾಥ ಶೆಟ್ಟಿ, ಮಾಲತಿ ಮೊಯಿಲಿ, ಪ್ರದೀಪಕುಮಾರ ಕಲ್ಕೂರ, ವೆಂಕಟೇಶ ರಾವ್, ಹರಿಕೃಷ್ಣ ಪುನರೂರು, ಎಂ. ಬಾಲಕೃಷ್ಣ ಶೆಟ್ಟಿ, ಪಿ.ಸತೀಶ್ ರಾವ್, ಭುವನಾಭಿರಾಮ ಉಡುಪ, ಸಭಾಭವನದ ಮಾಲಕ ಲಕ್ಷ್ಮೀನಾರಾಯಣ ಆಸ್ರಣ್ಣ ಮತ್ತಿತರರಿದ್ದರು.

Saturday, August 18, 2012

ಕಟೀಲು ಅಪಘಾತ :ವಾಸುದೇವ ಉಡುಪ ಸಾವು



ಕಟೀಲು : ಇಲ್ಲಿನ ಅಜಾರಿನಲ್ಲಿರುವ ಪ್ರಥಮ ದರ್ಜೆ ಕಾಲೇಜಿನ ಬಳಿ ಬಸ್ಸಿಗೆ ಡಿಕ್ಕಿ ಹೊಡೆದು ಸ್ಕೂಟರ್ ಸವಾರ ವಾಸುದೇವ ಉಡುಪ(೫೩ವ.) ಸ್ಥಳದಲ್ಲೇ ಮೃತಪಟ್ಟ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.
ಕಟೀಲು ದುರ್ಗಾಪರಮೇಶ್ವರೀ ದೇಗುಲದಲ್ಲಿ ಶಾಂತಿವಿಲೇದಾರ ಕೆಲಸ ಮಾಡುತ್ತಿರುವ ವಾಸುದೇವ ಉಡುಪ ಕಳೆದ ಹತ್ತು ವರುಷಗಳಿಂದ ದೇಗುಲದಲ್ಲಿ ಉತ್ಸವ ಅಲ್ಲದೆ ಇತರ ಸಂದರ್ಭದಲ್ಲಿ ದೇವರು ಹೊರುವ ಸೇವೆ ಸಲ್ಲಿಸುತ್ತಿದ್ದರು. ಶನಿವಾರ ದೇಗುಲದಲ್ಲಿ ಶಾಂತಿ ಕೆಲಸ ಮುಗಿಸಿ, ಗಿಡಿಗೆರೆ ಬಳಿಯ ಮನೆಗೆ ಹೋಗುತ್ತಿದ್ದಾಗ ಬಸ್ಸು ಡಿಕ್ಕಿ ಹೊಡೆದು ಮೃತಪಟ್ಟರು. ದೇಗುಲದ ಅರ್ಚಕರು, ಸಿಬಂದಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

Wednesday, August 15, 2012

ವಾಲಿಬಾಲ್ ಕಟೀಲು ಕಾಲೇಜು ತಂಡಕ್ಕೆ ಪ್ರಶಸ್ತಿ


ಕಟೀಲು : ಇಲ್ಲಿನ ಸ್ಪೋರ್ಟ್ಸ್ ಮತ್ತು ಗೇಮ್ಸ್ ಕ್ಲಬ್ ಆಯೋಜಿಸಿದ ಸ್ವಾತಂತ್ರ್ಯೋತ್ಸವ ಕಪ್ ವಾಲಿಬಾಲ್ ಪಂದ್ಯಾಟದಲ್ಲಿ ಕಟೀಲು ಪದವಿ ಕಾಲೇಜು ತಂಡ ಪ್ರಥಮ ಹಾಗೂ ಸೋಟ್ಸ್ ಮತ್ತು ಗೇಮ್ಸ್ ಕ್ಲಬ್ ತಂಡ ದ್ವಿತೀಯ ಪ್ರಶಸ್ತಿ ಪಡೆದವು. ಬಹುಮಾನ ವಿತರಣೆಯನ್ನು ಜಿ.ಪಂ.ಸದಸ್ಯ ಈಶ್ವರ್, ಕೇಶವ್, ವೆಂಕಟರಮಣ ಮಯ್ಯ, ಸುಂದರಪೂಜಾರಿ, ಜಯರಾಮ ರೈ, ವಿಜಯಕುಮಾರ್, ಕೃಷ್ಣ ಮುಂತಾದವರ ಉಪಸ್ಥಿತಿಯಲ್ಲಿ ವಿತರಿಸಲಾಯಿತು.

Tuesday, August 7, 2012

ಕಟೀಲು ಕಾಲೇಜು ವಿದ್ಯಾರ್ಥಿ ಸಂಘ, ವಾರ್ಷಿಕಾಂಕ ಉದ್ಘಾಟನೆ


ಕಟೀಲು : ಮನೆಯಲ್ಲಿ ಅಮ್ಮ ಎಲ್ಲ ಕೋಣೆಗಳನ್ನು ಗುಡಿಸಲು ಬಳಸಿ ಬಳಸಿ ಕಸಬರಿಕೆ ಸಣ್ಣದಾಗುತ್ತಿದ್ದಂತೆ ಅದನ್ನು ಬಚ್ಚಲು ಮನೆ ಗುಡಿಸಲು ಉಪಯೋಗಿಸುತ್ತಾಳೆ. ಅದು ಮತ್ತೂ ಸಣ್ಣದಾಗುತ್ತಿದ್ದಂತೆ ಮನೆ ಅಂಗಳ ಗುಡಿಸಲು ಬಳಕೆಯಾಗುತ್ತದೆ. ಅಂದರೆ ನಮ್ಮಲ್ಲಿ ಒಂದು ವಸ್ತು ಎಷ್ಟು ಸಾಧ್ಯವೋ ಅಷ್ಟು ಸದ್ಬಳಕೆಯಾಗುತ್ತದೆ. ಆದರೆ ವಿದೇಶೀ ಕಂಪನಿಗಳು ಬಳಸಿ ಎಸೆಯುವ ಕೊಳ್ಳಬಾಕ ಸಂಸ್ಕೃತಿಯನ್ನು ನಮ್ಮ ಮೇಲೆ ಯಾವ ಪರಿ ಹೇರುತ್ತಿದೆಯೆಂದರೆ ಹೊಸ ಮಾಡೆಲ್ ಮೊಬೈಲ್ ಬಂದ್ರೆ ಹಳೆಯದನ್ನು ಎಸೆಯುತ್ತೇವೆ. ಟಿವಿ, ಕಾರು ಹೀಗೆ ಎಲ್ಲವನ್ನೂ ಹೊಸ ಮಾಡೆಲ್ ಬಂದಾಕ್ಷಣ ಎಸೆಯುತ್ತೇವೆ. ಇದು ಯಾವ ಮಟ್ಟಕ್ಕೆ ಬೆಳೆದಿದೆ ಎಂದರೆ ಹೊಸ ಹುಡುಗಿ ಬಂದ ಕೂಡಲೇ ಹಳೆಯ ಹೆಂಡತಿಯನ್ನು ಮರೆತು ಬಿಡುವತನಕ ಮುಂದುವರಿದಿದೆ. ಬೆಂಗಳೂರಿನಲ್ಲಿ ತಿಂಗಳಿಗೆ ಸಾವಿರ ಸಂಖ್ಯೆಯಲ್ಲಿ ಡೈವೋರ್ಸ್ ನಡೆಯುತ್ತಿದೆ ಎಂದು ಹೇಳಿದ್ದು ಕಲ್ಲಡ್ಕ ಶ್ರೀ ರಾಮ ವಿದ್ಯಾ ಕೇಂದ್ರದ ಸಂಚಾಲಕರಾದ ಪ್ರಭಾಕರ ಭಟ್.
ಅವರು ಮಂಗಳವಾರ ಕಟೀಲು ದೇವಳ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಮಾತನಾಡಿದರು.
ಕಡಿಮೆ ಬಟ್ಟೆ ತೊಟ್ಟವಳು ವಿಶ್ವಸುಂದರಿಯಾಗಿ ಆಯ್ಕೆಯಾಗುವುದು ಸರಿಯಲ್ಲ. ಮಹಿಳೆಗೆ ದೇವರ ಸ್ಥಾನ ಕೊಟ್ಟ ಪುಣ್ಯ ಭೂಮಿ ನಮ್ಮದು. ಸ್ವಾತಂತ್ರ್ಯವೆಂದರೆ ಸ್ವೇಚ್ಛೆಯಲ್ಲ. ಮಂಗಳೂರಿನ ಹೋಂಸ್ಟೇಯಲ್ಲಿನ ಹಲ್ಲೆಯನ್ನು ಸಮರ್ಥಿಸಲಾಗದು. ಆದರೆ ಹುಡುಗಿಯರ ಉಡುಗೆಗಳಲ್ಲಿನ ಜಿಪುಣತನ, ಸ್ವೇಚ್ಛಾಚಾರ ಇಂತಹ ದಾಳಿಗಳಿಗೆ ಕಾರಣವಾಗುತ್ತದೆ ಎಂದು ಪ್ರಭಾಕರ ಭಟ್ ಹೇಳಿದರು.
ಕಾಲೇಜಿನ ವಾರ್ಷಿಂಕಾಕ ಇಂಚರವನ್ನು ದೇಗುಲದ ಆಡಳಿತಾಧಿಕಾರಿ ಹರೀಶ್ ಕುಮಾರ್ ಬಿಡುಗಡೆಗೊಳಿಸಿದರು.
ಮೊಕ್ತೇಸರ ವಾಸುದೇವ ಆಸ್ರಣ್ಣ, ಪ್ರಾಚಾರ‍್ಯ ಬಾಲಕೃಷ್ಣ ಶೆಟ್ಟಿ, ಉಪನ್ಯಾಸಕ ವಿಜಯ್ ವಿ, ವಿದ್ಯಾರ್ಥಿ ಸಂಘದ ಶಮಿತ್, ರವೀಂದ್ರ ಶೆಟ್ಟಿ, ಶುಶೀಲ್ ಕುಮಾರ್, ಪ್ರಿಯಾಂಕ ಮತ್ತಿತರರಿದ್ದರು.

ಅಂಬಿಕಾ ಭೇಟಿ

ಖ್ಯಾತ ಚಿತ್ರ ನಟಿ ಅಂಬಿಕಾ ಕಟೀಲು ದೇಗುಲಕ್ಕೆ ಮಂಗಳವಾರ ಭೇಟಿ ನೀಡಿದ ಸಂದರ್ಭ ಅರ್ಚಕ ಅನಂತ ಆಸ್ರಣ್ಣ ಪ್ರಸಾದ ನೀಡಿದರು. ತುಳು ಸಾಹಿತ್ಯ ಅಕಾಡಮಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ ಉಪಸ್ಥಿತರಿದ್ದರು. 

ಸಂಗೀತ ಸೇವೆ


ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ಅಮೇರಿಕಾದಲ್ಲಿ ನೆಲೆಸಿರುವ ಗಾಯಕಿ ಲಲಿತಾ ಬದ್ರಿನಾಥ್ ಮತ್ತು ಬಳಗದವರಿಂದ ಸಂಗೀತ ಸೇವೆ ನಡೆಯಿತು.


Friday, August 3, 2012

ಕಟೀಲು ಪ್ರೌಢಶಾಲೆಯಲ್ಲಿ ೧೯೦ಸೈಕಲ್ ವಿತರಣೆ



ಕಟೀಲು : ಇಲ್ಲಿನ ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರೌಢಶಾಲೆಯ ಎಂಟನೇ ತರಗತಿಯ ಎಲ್ಲ ೧೯೦ವಿದ್ಯಾರ್ಥಿಗಳಿಗೆ ಸರಕಾರದ ವತಿಯಿಂದ ನೀಡಲಾಗುವ ಸೈಕಲ್‌ಗಳನ್ನು ಶಾಸಕ ಅಭಯಚಂದ್ರ ವಿತರಿಸಿದರು. ಜಿ.ಪಂ.ಸದಸ್ಯ ಈಶ್ವರ್, ತಾ.ಪಂ.ಸದಸ್ಯೆ ಬೇಬಿ, ಗ್ರಾ.ಪಂ.ಅಧ್ಯಕ್ಷೆ ಶೈಲಾ, ಉಪಪ್ರಾಚಾರ‍್ಯ ಸುರೇಶ್ ಭಟ್,ಅರ್ಚಕ ಹರಿ ಆಸ್ರಣ್ಣ ಮತ್ತಿತರರಿದ್ದರು.

ಕಟೀಲಿಂದ ಧರ್ಮಸ್ಥಳ, ಬೆಂಗಳೂರಿಗೆ ಕೆಎಸ್‌ಆರ್‌ಟಿಸಿ ಬಸ್


ಕಟೀಲು : ಅತಿ ಶೀಘ್ರದಲ್ಲಿ ಕಟೀಲು ಕ್ಷೇತ್ರದಿಂದ ಧರ್ಮಸ್ಥಳಕ್ಕೆ ವೈಭವ ಬಸ್ಸು ಹಾಗೂ ಮೂಲ್ಕಿಯಿಂದ ಹೊರಟು ಕಟೀಲಿಗಾಗಿ ಮೂಡುಬಿದ್ರೆ ಬಿಸಿರೋಡು ಮಾರ್ಗವಾಗಿ ಬೆಂಗಳೂರಿಗೆ ರಾಜಹಂಸ ಮತ್ತು ವೋಲ್ವೋ ಬಸ್ಸುಗಳು ಹೊರಡಲಿವೆ ಎಂದು ಕೆಎಸ್‌ಆರ್‌ಟಿಸಿ ಆಡಳಿತ ನಿರ್ದೇಶಕ ಮಂಜುನಾಥ ಪ್ರಸಾದ ತಿಳಿಸಿದ್ದಾರೆ.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲಕ್ಕೆ ಶುಕ್ರವಾರ ಭೇಟಿ ನೀಡಿದ ಸಂದರ್ಭ ಈ ಮಾಹಿತಿ ನೀಡಿದರು. ಅರ್ಚಕ ಹರಿ ಆಸ್ರಣ್ಣ, ಪ್ರಸಾದ ಆಸ್ರಣ್ಣ ಪ್ರಸಾದ ನೀಡಿದರು. ಕೆಎಸ್‌ಆರ್‌ಟಿಸಿ ಅಧಿಕಾರಿಗಳಾದ ಡಿಟಿಒ ಶ್ರೀರಾಂ, ನಾಗರಾಜ ಶಿರಾಲಿ, ಮಹೇಶ್ ಜೊತೆಗಿದ್ದರು.

Thursday, August 2, 2012

ಸ್ಯಾಕ್ಸೋಫೋನ್ ವಾದನ

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ಪದ್ಮಶ್ರೀ ಕದ್ರಿ ಗೋಪಾಲನಾಥ್‌ರಿಂದ ಗುರುವಾರ ಸ್ಯಾಕ್ಸೋಫೋನ್ ವಾದನ ಸೇವೆ ನಡೆಯಿತು. 

ಪರ್ಜನ್ಯ ಜಪ, ಪ್ರಾರ್ಥನೆ, ಹೋಮ


ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ಮಳೆಗಾಗಿ ಪ್ರಾರ್ಥಿಸಿ ಗುರುವಾರ ಪರ್ಜನ್ಯ ಜಪ, ಪ್ರಾರ್ಥನೆ, ಹೋಮ ನಡೆಯಿತು. ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕರಾದ ಅನಂತ ಆಸ್ರಣ್ಣ, ಹರಿ ಆಸ್ರಣ್ಣ, ದೇಗುಲದ ಆಡಳಿತಾಧಿಕಾರಿ ಹರೀಶ್ ಕುಮಾರ್, ಪ್ರಬಂಧಕ ವಿಶ್ವೇಶ ರಾವ್, ಜಿ.ಪಂ.ಸದಸ್ಯ ಈಶ್ವರ್, ತಾ.ಪಂ.ಸದಸ್ಯೆ ಬೇಬಿ, ಗ್ರಾ.ಪಂ.ಅಧ್ಯಕ್ಷೆ ಶೈಲಾ, ಉಪಾಧ್ಯಕ್ಷ ಜನಾರ್ದನ ಮತ್ತಿತರರಿದ್ದರು.