Thursday, December 29, 2011

ಪ್ರತಿಮಾಗೆ ಐದನೇ ರಾಂಕ್


ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಪ್ರತಿಮಾ ಮಂಗಳೂರು ವಿವಿ ನಡೆಸಿದ ಬಿಎ ಪರೀಕ್ಷೆಯಲ್ಲಿ ಐದನೇ ರ‍್ಯಾಂಕ್ ಗಳಿಸಿದ್ದಾರೆ.

Tuesday, December 27, 2011

ಜ್ಯೋತಿಪ್ರಕಾಶ ಮಿರ್ಜಿ ಕಟೀಲು ದೇಗುಲಕ್ಕೆ ಭೇಟಿ


ಬೆಂಗಳೂರು ನಗರ ಆಯುಕ್ತ ಜ್ಯೋತಿಪ್ರಕಾಶ ಮಿರ್ಜಿ ಕಟೀಲು ದೇಗುಲಕ್ಕೆ ಮಂಗಳವಾರ ಭೇಟಿ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭ ಅರ್ಚಕ ಕಮಲಾದೇವಿ ಆಸ್ರಣ್ಣ, ಹರಿ ಆಸ್ರಣ್ಣ, ಬಜಪೆ ಇನ್ಸ್‌ಪೆಕ್ಟರ್ ದಿನಕರ್ ಶೆಟ್ಟಿ ಇದ್ದರು.

ಕಟೀಲು ಶಾಲೆಗಳಿಗೆ ಕಂಪ್ಯೂಟರ್ ಕೊಡುಗೆ


ಬಿಎಎಸ್‌ಎಫ್ ಇಂಡಿಯಾ ಲಿಮಿಟೆಡ್ ವತಿಯಂದ ಕಟೀಲು ದೇಗುಲ ಪ್ರೌಢಶಾಲೆ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಿಗೆ ಕಂಪ್ಯೂಟರ್ ಹಾಗೂ ಪ್ರಿಂಟರ್‌ಗಳನ್ನು ಕೊಡುಗೆಯಾಗಿ ಹಸ್ತಾಂತರಿಸಲಾಯಿತು. ಬಿಎಎಸ್‌ಎಫ್‌ನ ಪಿ.ಎಂ. ನಟರಾಜ್, ಸಂತೋಷ್, ಉಪಪ್ರಾಚಾರ‍್ಯ ಸುರೇಶ್ ಭಟ್, ಮುಖ್ಯ ಶಿಕ್ಷಕಿ ವೈ. ಮಾಲತಿ, ಶಿಕ್ಷಕ ರಕ್ಷಕ ಸಂಘದ ಹರಿನಾರಾಯಣದಾಸ ಆಸ್ರಣ್ಣ ಮತ್ತಿತರರಿದ್ದರು.

Sunday, December 25, 2011

ಕಟೀಲಿಗೆ ಸದಾನಂದ ಗೌಡ ಭೇಟಿ






ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲಕ್ಕೆ ಸೋಮವಾರ ಬೆಳಿಗ್ಗೆ ಭೇಟಿ ನೀಡಿದ ಮುಖ್ಯಮಂತ್ರಿ ಸದಾನಂದ ಗೌಡ, ಪೂಜೆ ವೀಕ್ಷಿಸಿ, ಪ್ರಸಾದ ಸ್ವೀಕರಿಸಿದರು.
ಅರ್ಚಕ ಅನಂತ ಆಸ್ರಣ್ಣ, ಹರಿನಾರಾಯಣ ಆಸ್ರಣ್ಣ ಪ್ರಸಾದ ನೀಡಿದರು.
ಸಾಂಸದ ನಳಿನ್ ಕುಮಾರ್, ನಾಗರಾಜ ಶೆಟ್ಟಿ, ಗಣೇಶ್ ಕಾರ್ಣಿಕ್, ಜಿ.ಪಂ.ಸದಸ್ಯ ಈಶ್ವರ್, ತಾ.ಪಂ.ಸದಸ್ಯೆ ಬೇಬಿ ಕೋಟ್ಯಾನ್, ಮೆನ್ನಬೆಟ್ಟು ಗ್ರಾ.ಪಂ.ನ ಶೈಲಾ ಶೆಟ್ಟಿ, ಜನಾರ್ದನ ಕಿಲೆಂಜೂರು, ಕಿನ್ನಿಗೋಳಿ ದೇವಪ್ರಸಾದ್, ಬಿಜೆಪಿ ಮುಖಂಡರು ಈ ಸಂದರ್ಭ ಇದ್ದರು.

Friday, December 23, 2011

ಹಳ್ಳಿಯೆಡೆಗೆ ಬನ್ನಿ -ಅಭಯಚಂದ್ರ


ಮೂಲ್ಕಿ : ನಾನಾ ಕಾರಣಗಳಿಂದಾಗಿ ಯುವಕರು ಪೇಟೆಯೆಡೆಗೆ ಸಾಗುತ್ತಿದ್ದಾರೆ. ಬದಲಾಗಿ ಹಳ್ಳಿಯಲ್ಲಿದ್ದುಕೊಂಡೇ ಕೃಷಿ ಮುಂತಾದ ಕೆಲಸಗಳಿಂದ ಮಹತ್ತರವಾದುದನ್ನು ಸಾಧಿಸಿ ತೋರಿಸಬೇಕಾಗಿದೆ ಎಂದು ಶಾಸಕ ಅಭಯಚಂದ್ರ ಹೇಳಿದರು.
ಅವರು ಶುಕ್ರವಾರ ಪಡುಪಣಂಬೂರು ಮಾದರಿ ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಟೀಲು ದೇಗುಲ ಪದವೀ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಪಡುಪಣಂಬೂರು ಗ್ರಾ.ಪಂ.ಅಧ್ಯಕ್ಷ ವಿನೋದ್ ಎಸ್.ಸಾಲ್ಯಾನ್, ಮೂಲ್ಕಿ ಅರಸು ಕಂಬಳ ಸಮಿತಿಯ ರಾಮಚಂದ್ರ ನಾಯ್ಕ್, ಕಾಲೇಜಿನ ಪ್ರಾಚಾರ‍್ಯ ಎಂ.ಬಾಲಕೃಷ್ಣ ಶೆಟ್ಟಿ, ಕಲ್ಲಾಪು ದೇಗುಲದ ಕಾಂತಪ್ಪ ಗುರಿಕಾರ, ತಾ.ಪಂ.ಸದಸ್ಯ ರಾಜು ಕುಂದರ್, ಮುಖ್ಯ ಶಿಕ್ಷಕಿ ಭುವನೇಶ್ವರೀ, ಶಿಬಿರಾಧಿಕಾರಿಗಳಾದ ಕೇಶಚ ಎಚ್, ಡಾ.ಕೃಷ್ಣ ಕೆ, ವಿದ್ಯಾರ್ಥಿ ಪ್ರತಿನಿಧಿಗಳಾದ ಚಂದ್ರಕಲಾ, ಸುಪ್ರೀತ್, ಪ್ರಮೀಳಾ, ಪ್ರಜ್ವಲ್ ಮತ್ತಿತರರಿದ್ದರು. ಶಿಬಿರ ತಾ.೨೯ರಂದು ಸಮಾಪನಗೊಳ್ಳಲಿದ್ದು, ನದಿಗೆ ತಡೆಗೋಡೆ ರಚನೆ, ಸಮುದ್ರದ ಬದಿ ಕಾಂಡ್ಲಾ ಗಿಡ ನೆಡುವುದು, ರಸ್ತೆ ನಿರ್ಮಾಣ, ಹೂತೋಟ ರಚನೆ, ಬಸದಿ ಪರಿಸರ ಸ್ವಚ್ಛತೆ ಮುಂತಾದ ಕಾರ‍್ಯಗಳನ್ನು ಹಮ್ಮಿಕೊಳ್ಳಲಾಗಿದೆ.

Thursday, December 22, 2011

ಸಕಾರಾತ್ಮಕ ನಿಲುವಿರಲಿ-ವಿಜಯಲಕ್ಷ್ಮೀ ಶಿಬರೂರು


ಕಟೀಲು : ಸಕಾರಾತ್ಮಕ ನಿಲುವಿನೊಂದಿಗೆ ಪಾಠಗಳಷ್ಟೇ ಪಾಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡು ಅವಕಾಶಗಳನ್ನು ಬಳಸಿಕೊಂಡು ಪ್ರತಿಭೆ, ಪ್ರಯತ್ನದೊಂದಿಗೆ ಬೆಳೆದಾಗ ಯಶಸ್ಸು ಲಭ್ಯವಾಗುತ್ತದೆ ಎಂದು ಪತ್ರಕರ್ತೆ ವಿಜಯಲಕ್ಷ್ಮೀ ಶಿಬರೂರು ಹೇಳಿದರು.
ಅವರು ಗುರುವಾರ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದ ಪ್ರೌಢಶಾಲಾ ವಿಭಾಗದ ವಾರ್ಷಿಕೋತ್ಸವದಲ್ಲಿ ಮಾತನಾಡಿದರು.
ಈ ಸಂದರ್ಭ ಶಾಲೆಯ ಹಳೆವಿದ್ಯಾರ್ಥಿನಿಯೂ ಆಗಿರುವ ಮಾಧ್ಯಮ ಅಕಾಡಮಿ ಪುರಸ್ಕೃತ ವಿಜಯಲಕ್ಷ್ಮೀಯವರನ್ನು ಸಂಮಾನಿಸಲಾಯಿತು.
ದೇಗುಲದ ಮೊಕ್ತೇಸರ ವಾಸುದೇವ ಆಸ್ರಣ್ಣ, ಜಿ.ಪಂ.ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷ ಈಶ್ವರ್, ಜಿ.ಪಂ. ಸಾಮಾಜಿಕ ನ್ಯಾಯ ಸಮಿತಿಯ ಜನಾರ್ದನ ಗೌಡ, ಶಿಕ್ಷಕ ರಕ್ಷಕ ಸಂಘದ ಹರಿನಾರಾಯಣ ಆಸ್ರಣ್ಣ, ಬಾಬು ಶೆಟ್ಟಿ, ಪದವಿ ಕಾಲೇಜಿನ ಬಾಲಕೃಷ್ಣ ಶೆಟ್ಟಿ, ಪ್ರಾಥಮಿಕ ಶಾಲೆಯ ಮಾಲತಿ, ಕಟೀಲು ಚರ್ಚ್‌ನ ರಾಬರ್ಟ್ ಕ್ರಾಸ್ತಾ, ವಿದ್ಯಾರ್ಥಿ ನಾಯಕ ರೋಶನ್, ಶಿಕ್ಷಣ ಇಲಖೆಯ ದಿನೇಶ್ ಮತ್ತಿತರರಿದ್ದರು. ಉಪಪ್ರಾಚಾರ‍್ಯ ಸುರೇಶ್ ಭಟ್ ಸ್ವಾಗತಿಸಿದರು. ಸಾಯಿನಾಥ ಶೆಟ್ಟಿ ಕಾರ‍್ಯಕ್ರಮ ನಿರೂಪಿಸಿದರು. ಕೆ.ವಿ.ಶೆಟ್ಟಿ ವಂದಿಸಿದರು.

Wednesday, December 21, 2011

ಕಟೀಲು, ಕೊಲ್ಲೂರು ದೇಗುಲ ಅಭಿವೃದ್ದಿ ಬಗ್ಗೆ ಸಭೆ



ಕಟೀಲು : ಧಾರ್ಮಿಕ ದತ್ತಿ ಇಲಾಖಾ ಆಯುಕ್ತ ನಂದಕುಮಾರ್ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ಕಟೀಲು ಮತ್ತು ಕೊಲ್ಲೂರು ದೇಗುಲಗಳ ಅಭಿವೃದ್ಧಿ ಬಗ್ಗೆ ಬುಧವಾರ ಸಂಜೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ಕಟೀಲಿನಲ್ಲಿ ಡ್ರೈನೇಜು ಕಾಮಗಾರಿಯನ್ನು ದೇಗುಲದ ಸುಮಾರು ರೂ. ೪ಕೋಟಿ ಮೊತ್ತದಲ್ಲಿ ಕೂಡಲೇ ಆರಂಭಿಸುವಂತೆ ಕ್ರಮಕೈಗೊಳ್ಳಬೇಕು. ಸ್ನಾನಘಟ್ಟವನ್ನು ಸರಿಪಡಿಸುವುದು. ಮೂಲಸ್ಥಾನ ಕುದ್ರುವಿನ ಅಭಿವೃದ್ಧಿಗೆ ವೇಗ ಕೊಡುವುದು, ಯಾತ್ರಿ ನಿವಾಸದ ಕಾಮಗಾರಿ ಮಾಸ್ಟರ್ ಪ್ಲಾನ್ ರಚನೆಯ ಕಾರಣಕ್ಕಾಗಿ ವಿಳಂಬವಾಗಿದೆ. ನಲವತ್ತಕ್ಕೂ ಹೆಚ್ಚು ವಿಚಾರಗಳು ಚರ್ಚೆಗೊಳಗಾಗಿದ್ದು, ಜನವರಿ ಕೊನೆಯಲ್ಲಿ ಬೆಂಗಳೂರಿನಲ್ಲಿ ಮತ್ತೊಮ್ಮೆ ಸಭೆ ನಡೆಸಲಾಗುವುದು ಎಂದು ತಿಳಿಸಿದ ಆಯುಕ್ತರು, ಕಟೀಲು ದೇಗುಲದ ಚಿನ್ನದ ರಥ ನಿರ್ಮಾಣಕ್ಕೆ ಟೆಂಡರು ಪ್ರಕ್ರಿಯೆ ಮುಗಿದಿದೆ. ಇನ್ನು ಒಂದೆರಡು ತಿಂಗಳಲ್ಲಿ ಪೂರ್ಣವಾಗುವುದು ಎಂದು ತಿಳಿಸಿದರು.
ಧಾರ್ಮಿಕ ದತ್ತಿ ಇಲಾಖೆಯ ಆಗಮ ಶಾಸ್ತ್ರ ವಿಭಾಗದ ಗಣಪತಿ ಶಾಸ್ತ್ರಿ, ಜಿಲ್ಲೆಯ ಅಧಿಕಾರಿ ಲಕ್ಷ್ಮೀ, ಪ್ರಭಾಕರ್, ಸಹಾಯಕ ಆಯುಕ್ತ ವೆಂಕಟೇಶ್, ಪ್ರಬಂಧಕ ವಿಶ್ವೇಶ ರಾವ್, ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕ ಹರಿನಾರಾಯಣದಾಸ ಆಸ್ರಣ್ಣ, ನಿರ್ಮಿತಿ ಕೇಂದ್ರದ ರಾಜೇಂದ್ರ ಕಲ್ಬಾವಿ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
ಕೊಲ್ಲೂರು ಮೂಕಾಂಬಿಕಾ ದೇಗುಲದ ಶಿಲಾಮಯ ಗರ್ಭಗೃಹ ಸೋರುವ ಕಾರಣಕ್ಕೆ ತಾಮ್ರ ಮುಚ್ಚಿಸುವುದು, ಸೌಪರ್ಣಿಕಾ ಸ್ನಾನಘಟ್ಟವನ್ನು ಉತ್ತಮವಾಗಿಸುವುದು, ನದಿಯ ಸ್ವಚ್ಛತೆ, ಆನೆಬಾಗಿಲು ಹೊಸತಾಗಿಸುವುದು, ಹೊಸ ದಾಸೋಹಗೃಹ ರಚನೆ ಮುಂತಾದ ಅಭಿವೃದ್ಧಿ ಕಾರ‍್ಯಗಳ ಬಗ್ಗೆ ಚರ್ಚೆ ನಡೆಯಿತು.
ಕುಂದಾಪುರ ಉಪವಿಭಾಗಾಧಿಕಾರಿ, ಆಡಳಿತಾಧಿಕಾರಿ ಸದಾಶಿವ ಪ್ರಭು, ಕಾರ‍್ಯನಿರ್ವಹಣಾಧಿಕಾರಿ ಸಂಜೀವ ಮಡಿವಾಳ, ಇಂಜಿನಿಯರುಗಳಾದ ಮುರಳಿ, ಪ್ರದೀಪ, ಅರ್ಚಕರಾದ ವಿಶ್ವನಾಥ ಅಡಿಗ, ಮಂಜುನಾಥ ಅಡಿಗ, ಶ್ರೀಕಾಂತ ಅಡಿಗ, ಶ್ರೀಧರ ಅಡಿಗ ಮತ್ತಿತರರಿದ್ದರು.

Tuesday, December 20, 2011

ಕಟೀಲಿನಲ್ಲಿ ರಾಜ್ಯಮಟ್ಟದ ಕರಾಟೆ ಸ್ಪರ್ಧೆ




ಕಟೀಲು : ದ.ಕ.ಜಿ.ಪಂ. ಸಾರ್ವಜನಿಕ ಶಿಕ್ಷಣ ಇಲಾಖೆ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಸಂಯುಕ್ತ ಪದವೀ ಪೂರ್ವ ಕಾಲೇಜು ಪ್ರೌಢಶಾಲೆ ವಿಭಾಗದ ಸಹಯೋಗದಲ್ಲಿ ೧೪-೧೭ರ ವಯೋಮಿತಿಯ ಬಾಲಕ ಬಾಲಿಕೆಯರ ರಾಜ್ಯಮಟ್ಟದ ಕರಾಟೆ ಸ್ಪರ್ಧೆ ಮಂಗಳವಾರ ಕಟೀಲಿನಲ್ಲಿ ಆರಂಭವಾಯಿತು.
ಶಾಸಕ ಗಣೇಶ್ ಕಾರ್ಣಿಕ್ ಉದ್ಘಾಟಿಸಿದರು. ಶಾಸಕ ಅಭಯಚಂದ್ರ ಕ್ರೀಡಾಳುಗಳಿಂದ ವಂದನೆ ಸ್ವೀಕರಿಸಿದರು. ಮಂಗಳೂರು ತಾ.ಪಂ.ಅಧ್ಯಕ್ಷೆ ಭವ್ಯಾ ಗಂಗಾಧರ್ ಧ್ವಜಾರೋಹಣಗೈದರು. ಕಟೀಲು ದೇಗುಲದ ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ, ಜಿ.ಪಂ.ಶಿಕ್ಷಣ ಸಮಿತಿ ಅಧ್ಯಕ್ಷ ಹಾಗೂ ಕರಾಟೆ ಸಮಿತಿಯ ಈಶ್ವರ್, ಉಪಪ್ರಾಚಾರ‍್ಯ ಸುರೇಶ್ ಭಟ್, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಎನ್.ಎಸ್.ಅಂಗಡಿ, ಗ್ರಾಂಡ್ ಮಾಸ್ಟರ್ ಗೋಶಿಯನ್ ರ‍್ಯು ಸ್ಟೈಲ್ ಇಂಡಿಯನ್ ಕರಾಟೆಯ ಚೆನೈನ ಬಿ.ಎಂ.ನರಸಿಂಹನ್, ನವೀನ್ ಪುತ್ರನ್ ಮತ್ತಿತರರಿದ್ದರು. ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎಂ.ಎನ್.ನಾಯಕ್ ಪ್ರಸ್ತಾವನೆಗೈದರು. ಕ್ಷೇತ್ರ ಶಿಕ್ಷಣಾಧಿಕಾರಿ ರಾಜಲಕ್ಷ್ಮೀ ಸ್ವಾಗತಿಸಿದರು. ಸಾಯಿನಾಥ ಶೆಟ್ಟಿ ಕಾರ‍್ಯಕ್ರಮ ನಿರೂಪಿಸಿದರು.

ಕರಾಟೆ ಹುಟ್ಟಿದ್ದು ಜಪಾನ್‌ನಲ್ಲಾ? ಭಾರತದಲ್ಲಾ?
ರಾಜ್ಯದ ೩೪ರಲ್ಲಿ ೧೮ಜಿಲ್ಲೆಗಳಿಂದ ಮಾತ್ರ ತಂಡಗಳು ಭಾಗವಹಿಸಿದ್ದು, ಕರಾಟೆ ಸರಕಾರಿ ಶಾಲೆಗಳಲ್ಲಿ ಇಲ್ಲ. ಕೇವಲ ಖಾಸಗಿ ಶಾಲೆಗಳಲ್ಲಿ ಮಾತ್ರ ಇದೆ. ಶಿಕ್ಷಣದ ಕ್ರೀಡಾ ವಿಭಾಗದಲ್ಲಿ ೨೧ ಆಟಗಳಿದ್ದು, ಕರಾಟೆ ಸೇರ್ಪಡೆಗೆ ವಿವಿಧ ರೀತಿಯ ಕರಾಟೆ ಕ್ರಮಗಳಿರುವುದು ತೊಡಕಾಗಿದೆ. ರಾಜ್ಯದಲ್ಲಿ ಸರಿಯಾದ ಕರಾಟೆ ಶಿಕ್ಷಕರಿಲ್ಲದ ಕಾರಣ, ತೀರ್ಪುಗಾಗಿ ದೂರದ ಚೆನ್ನೈನಿಂದ ಕರಾಟೆ ಶಿಕ್ಷಕರನ್ನು ಕರೆಯಿಸಲಾಗಿದೆ. ಇಲಾಖೆ ೨೦೦೫ರಿಂದ ಕರಾಟೆಯನ್ನು ವಿಶೇಷ ಆಟವೆಂದು ಮಾನ್ಯತೆ ಮಾಡಿದ್ದು, ಕರಾಟೆ ಜಪಾನ್‌ನಲ್ಲಿ ಹುಟ್ಟಿದ ಕ್ರೀಡೆಯಾಗಿದ್ದು ಇತ್ತೀಚಿಗೆಯಷ್ಟೇ ಹೆಚ್ಚು ಜನಪ್ರಿಯತೆ ಕಾಣುತ್ತಿದೆ ಎಂದು ಪ್ರಸ್ತಾವನೆಗೈದ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎಂ.ಎನ್.ನಾಯಕ್ ಹೇಳಿದರು.
ಬಳಿಕ ಮಾತನಾಡಿದ ಶಾಸಕ ಗಣೇಶ ಕಾರ್ಣಿಕ್ ಹೇಳಿದ್ದು, ಕರಾಟೆ ಜಪಾನ್‌ನಲ್ಲಿ ಹುಟ್ಟಿದ್ದಲ್ಲ. ಅದರ ಮೂಲ ಭಾರತವೇ. ಭಾರತದಲ್ಲಿ ಹುಟ್ಟಿದ ಬೌದ್ಧ ಧರ್ಮದೊಂದಿಗೆ ಕರಾಟೆ ಚೀನಾ, ಜಪಾನ್ ಮತ್ತಿತರ ದೇಶಗಳಿಗೆ ಪ್ರಚಾರ ಆಯಿತು ಎಂದು ಹೇಳಿದರು.

ಕಟೀಲಿನಲ್ಲಿ ರಾಜ್ಯಮಟ್ಟದ ಕರಾಟೆ
ಆತಿಥೇಯ ದಕ್ಷಿಣ ಕನ್ನಡಕ್ಕೆ ಸಮಗ್ರ ಪ್ರಶಸ್ತಿ
ಕಟೀಲು : ಇಲ್ಲಿನ ಶ್ರೀ ದುರ್ಗಾಪರಮೇಶ್ವರೀ ದೇಗುಲ ಪ್ರೌಢಶಾಲೆ ಹಾಗೂ ದ.ಕ.ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ನಡೆದ ೧೪ರಿದ ೧೭ರ ವಯೋಮಿತಿಯವರ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಆತಿಥೇಯ ದಕ್ಷಿಣ ಕನ್ನಡ ಜಿಲ್ಲೆ ಬಾಲಕರ ಮತ್ತು ಬಾಲಿಕೆಯರ ಎರಡೂ ವಿಭಾಗಗಳಲ್ಲಿ ಸಮಗ್ರ ಪ್ರಶಸ್ತಿ ಪಡೆಯಿತು.
೧೪ರ ವಯೋಮಿತಿಯಲ್ಲಿ ಬಾಲಕರ ಬಾಲಿಕೆಯರ ವಿಭಾಗಗಳಲ್ಲಿ ದಕ್ಷಿಣ ಕನ್ನಡಕ್ಕೆ ತಂಡ ಪ್ರಶಸ್ತಿ ದೊರೆತರೆ, ೧೭ರ ವಯೋಮಿತಿಯಲ್ಲಿ ದ.ಕ.ದೊಂದಿಗೆ ಮೈಸೂರು ಜಿಲ್ಲೆ ತಂಡ ಪ್ರಶಸ್ತಿ ಹಂಚಿಕೊಂಡಿತು.
ಜಿ.ಪಂ.ಶಿಕ್ಷಣ ಸ್ಥಾಯಿ ಸಮಿತಿಯ ಈಶ್ವರ್, ಇಲಾಖೆಯ ಎನ್.ಎಸ್.ಅಂಗಡಿ, ಚೆನ್ನೈನ ನರಸಿಂಹನ್, ತಾ.ಪಂ.ಸದಸ್ಯೆ ಬೇಬಿ ಕೋಟ್ಯಾಣ್, ಗ್ರಾ.ಪಂ.ಅಧ್ಯಕ್ಷೆ ಶೈಲಾ, ಉಪಪ್ರಾಚಾರ‍್ಯ ಸುರೇಶ್ ಭಟ್, ಪುರುಷೋತ್ತಮ ಶೆಟ್ಟಿ, ಸಾಯಿನಾಥ ಶೆಟ್ಟಿ, ವೈ.ಮಾಲತಿ, ಕೆ.ವಿ.ಶೆಟ್ಟಿ ಮತ್ತಿತರರಿದ್ದರು.

Wednesday, December 14, 2011

ಕಟೀಲಿನಲ್ಲಿ ಹಾವು ಮತ್ತು ನಾವು





ಹಾವುಗಳಿಂದ ಪ್ರಕೃತಿಯ ಸಮತೋಲನ-ಗುರುರಾಜ ಸನಿಲ್
ಹಾವಿನ ದ್ವೇಷ ಹನ್ನೆರಡು ವರುಷ ನಿಜವಾ?, ಕೇರೆ ಹಾವಿನ ಬಾಲವನ್ನು ಹೆಂಗಸರ
ತಲೆಗೆ ತಾಗಿಸಿದರೆ ಅದು ಉದ್ದವಾಗಿ ಬೆಳೆಯುತ್ತದೆಯಂತೆ ಸತ್ಯವಾ? ಏಳು ಹೆಡೆಯ ನಾಗರ
ಉಂಟಾ?ಹಾವು ಹಾಲು ಕುಡಿಯುವುದಿಲ್ಲವಾ? ಹೀಗೆ ಹತ್ತಾರು ಪ್ರಶ್ನೆಗಳನ್ನು ಕೇಳಿದ
ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು ಕೇರೆ, ನೀರೊಳ್ಳೆ, ಇರ್ತಲೆ ಹಾವು,
ಹೆಬ್ಬಾವುಗಳನ್ನು ಕೈಯಲ್ಲೇ ಹಿಡಿದು ಓಓ, ಯಬ್ಬಾ, ಐಸಾ ಅಂತೆಲ್ಲ ಅಚ್ಚರಿ, ಕುತೂಹಲ,
ಭಯ ಮಿಶ್ರಿತ ಖುಷಿಯಿಂದ ಸಂಭ್ರಮಿಸಿದರು.
ಇದು ನಡೆದದ್ದು ಕಟೀಲಿನ ಪದವೀಪೂರ್ವ ಕಾಲೇಜು ಹಾಗೂ ಪ್ರಥಮ ದರ್ಜೆ ಕಾಲೇಜಿನಲ್ಲಿ.
ಬುಧವಾರ ಇಲ್ಲಿನ ವಿದ್ಯಾರ್ಥಿಗಳು ಹಾವುಗಳೊಂದಿಗೆ ಕಳೆದರು!
ನೀರೊಳ್ಳೆ ಹಾವು, ಕೇರೆ ಹಾವು, ಕಡಂಬಲ, ನಾಗರ, ಹೆಬ್ಬಾವು, ಇರ್ತಲೆ ಹಾವು ಹೀಗೆ
ಹತ್ತಕ್ಕೂ ಹೆಚ್ಚು ಜಾತಿಯ ಉರಗಗಳನ್ನು ಪ್ರದರ್ಶಿಸಿ, ಅವುಗಳ ಬಗ್ಗೆ ಮಾಹಿತಿ ನೀಡಿ,
ವಿದ್ಯಾರ್ಥಿಗಳ ಕುತೂಹಲ ಭರಿತ ಪ್ರಶ್ನೆಗಳಿಗೆ ಉತ್ತರಿಸಿದವರು ಉಡುಪಿಯ ಗುರುರಾಜ
ಸನಿಲ್. ಕಿನ್ನಿಗೋಳಿಯ ರೋಟರ‍್ಯಾಕ್ಟ್, ಕಟೀಲಿನ ಎನ್‌ಎಸ್‌ಎಸ್ ಹಾಗೂ ಕಟೀಲಿನ
ನಾಗರಿಕರು ಆಯೋಜಿಸಿದ ಹಾವು ನಾವು ಕಾರ‍್ಯಕ್ರಮದಲ್ಲಿ ಗುರುರಾಜ ಸನಿಲ್ ಮಾಹಿತಿ
ನೀಡಿದರು.
ಕಳೆದೆರಡು ದಶಕಗಳಲ್ಲಿ ಹದಿನೈದು ಸಾವಿರಕ್ಕೂ ಹೆಚ್ಚು ಹಾವುಗಳನ್ನು ಹಿಡಿದು ಕಾಡಿಗೆ
ಬಿಟ್ಟಿದ್ದೇನೆ. ಹನ್ನೆರಡು ಬಾರಿ ವಿಷಪೂರಿತ ಹಾವುಗಳಿಂದ ಕಡಿಸಿಕೊಂಡರೂ
ಬದುಕಿದ್ದೇನೆ. ಪ್ರಥಮ ಚಿಕಿತ್ಸೆಯ ಮೂಲಕ ಹಾವು ಕಚ್ಚಿದರೂ ಬದುಕಬಹುದು. ಇವತ್ತು
ಆಸ್ಪತ್ರೆಗಳಲ್ಲಿ ಔಷಧಿ ಇದೆ. ಹಾವುಗಳಿಂದ ಪ್ರಕೃತಿಯ ಸಮತೋಲನ ಸಾಧ್ಯ. ಹಾಗಾಗಿ
ಹಾವುಗಳನ್ನು ಕೊಲ್ಲಬೇಡಿ. ದಕ್ಷಿಣ ಕನ್ನಡ, ಉಡುಪಿಗಳಲ್ಲಿ ೪೫ಜಾತಿಯ ಹಾವುಗಳಿದ್ದು,
ಅವುಗಳಲ್ಲಿ ಆರು ಜಾತಿಯವುಗಳು ಮಾತ್ರ ವಿಷಯುಕ್ತವಾದುವುಗಳು. ಹಾಗೆಂದು ಹಾವುಗಳು ನಾವು
ತೊಂದರೆ ಮಾಡದಿದ್ದರೆ ಏನೂ ಮಾಡುವುದಿಲ್ಲ ಎಂದು ಹಾವುಗಳ ಕುರಿತು ಗುರುರಾಜ ಸನಿಲ್
ಮಾಹಿತಿ ನೀಡಿದರು.
ಪದವೀಪೂರ್ವ ಕಾಲೇಜಿನ ಪ್ರಾಚಾರ‍್ಯ ಜಯರಾಮ ಪೂಂಜ, ಪದವಿ ಕಾಲೇಜಿನ ಪ್ರಾಚಾರ‍್ಯ
ಬಾಲಕೃಷ್ಣ ಶೆಟ್ಟಿ, ಎನ್‌ಎಸ್‌ಎಸ್‌ನ ಕೇಶವ ಎಚ್, ಕೃಷ್ಣ ಕಾಂಚನ್, ನವೀನ್ ಕುಮಾರ್,
ರೋಟರ‍್ಯಾಕ್ಟ್‌ನ ಗಣೇಶ ಕಾಮತ್, ದಿನೇಶ್ ಕೊಡಿಯಾಲ್‌ಬೈಲ್, ಕೆ.ಬಿ.ಸುರೇಶ್
ಮತ್ತಿತರರಿದ್ದರು.

ವಿದ್ಯಾರ್ಥಿ ನಿಧನ


ಕಟೀಲು : ಇಲ್ಲಿನ ಪ್ರೌಢಶಾಲೆಯ ೮ನೇ ತರಗತಿ ವಿದ್ಯಾರ್ಥಿ, ತೋಕೂರು ಚಂದ್ರಶೇಖರ್
ಎಂಬವರ ಪುತ್ರ ಸುಶಾಂತ್, ಮಲೇರಿಯಾ ಜ್ವರದಿಂದ ಆಸ್ಪತ್ರೆಯಲ್ಲಿ ಬುಧವಾರ
ಮೃತಪಟ್ಟಿದ್ದಾನೆ.
ಶೋಕಾಚರಣೆ ಪ್ರಯುಕ್ತ ಶಾಲೆಗೆ ರಜೆ ಸಾರಲಾಗಿತ್ತು.

Monday, December 12, 2011

ಕಟೀಲು ಪ.ಪೂ.ಕಾಲೇಜು ವಾರ್ಷಿಕೋತ್ಸವ


ಕಟೀಲು : ಇಲ್ಲಿನ ಶ್ರೀ ದುರ್ಗಾಪರಮೇಶ್ವರೀ ದೇವಳ ಪದವೀಪೂರ್ವ ಕಾಲೇಜಿನ ವಾರ್ಷಿಕೋತ್ಸವ ಭಾನುವಾರ ನಡೆಯಿತು.
ದೇಗುಲದ ಮೊಕ್ತೇಸರ ವಾಸುದೇವ ಆಸ್ರಣ್ಣ, ಬದ್ರಿಯಾ ಕಾಲೇಜಿನ ಇಸ್ಮಾಯಿಲ್, ರೆ.ಫಾ.ರಾಬರ್ಟ್ ಕ್ರಾಸ್ತಾ, ನ್ಯಾಯವಾದಿ ದಿನೇಶ್ ಉಳೆಪಾಡಿ, ಪದವೀ ಕಾಲೇಜಿನ ಪ್ರಾಚಾರ‍್ಯ ಬಾಲಕೃಷ್ಣ ಶೆಟ್ಟಿ ಪ್ರೌಢಶಾಲೆಯ ಉಪಪ್ರಾಚಾರ‍್ಯ ಸುರೇಶ್ ಭಟ್, ಶಿಕ್ಷಕ ರಕ್ಷಕ ಸಂಘದ ಎಕ್ಕಾರು ಮೋನಪ್ಪ ಶೆಟ್ಟಿ, ವಿದ್ಯಾರ್ಥಿ ನಾಯಕ ಆದಿತ್ಯ ಮತ್ತಿತರರಿದ್ದರು. ಪ್ರಾಚಾರ‍್ಯ ಜಯರಾಮ ಪೂಂಜ ಸ್ವಾಗತಿಸಿದರು. ಭಾರತೀ ಶೆಟ್ಟಿ ಕಾರ‍್ಯಕ್ರಮ ನಿರೂಪಿಸಿದರು.

Friday, December 9, 2011

ಚೇತನಾಶಕ್ತಿಯ ಜಾಗೃತಿಯಿಂದ ಕಾಯಿಲೆ ದೂರ-ಕಿರಣ್ ಕುಮಾರ್


ಕಟೀಲು : ನಮ್ಮ ದೇಹದ ಚೇತನಾಶಕ್ತಿಯನ್ನು ಅರಿತು ಅದನ್ನು ಜಾಗೃತಗೊಳಿಸುವುದರಿಂದ ಕಾಯಿಲೆಗಳು ದೂರವಾಗುತ್ತವೆ. ನಮ್ಮ ದೇಹವನ್ನು ವ್ಯಾಯಾಮ, ಯೋಗಗಳಿಂದ ಆರೋಗ್ಯವಂತವನ್ನಾಗಿಸಿಡಬಹುದು ಎಂದು ಕೆರೆಕಾಡು ಆರೋಗ್ಯ ಸೇವಾ ಪ್ರತಿಷ್ಟಾನದ ಕಿರಣ್ ಕುಮಾರ್ ಹೇಳಿದರು.
ಅವರು ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಥಮ ದರ್ಜೆ ಕಾಲೇಜಿನಲ್ಲಿ ಎನ್‌ಎಸ್‌ಎಸ್ ಘಟಕಗಳು ಹಾಗೂ ಕಿನ್ನಿಗೋಳಿ ರೋಟರ‍್ಯಾಕ್ಟ್ ಆಯೋಜಿಸಿದ ನ್ಯೂರೋಥೆರಪಿ ಚಿಕಿತ್ಸಾ ವಿಧಾನದ ಮಾಹಿತಿ ಹಾಗೂ ಚಿಕಿತ್ಸೆ ಕಾರ‍್ಯಕ್ರಮದಲ್ಲಿ ಮಾತನಾಡಿದರು.
ನಮ್ಮ ಇಂದಿನ ಅನಿಯಮಿತ ಜೀವನ ಶೈಲಿಯು ಶಾರೀರಿಕ ಶಕ್ತಿಯನ್ನು ಕಡಿಮೆ ಮಾಡಿದೆ. ಮಾನವ ಶರೀರವು ಸ್ವತಃ ಪುನರ್‌ನಿರ್ಮಾಣ ಮಾಡುವ ಮತ್ತು ನಿರೋಗಿಯಾಗಿರುವ ಸಾಮರ್ಥ್ಯ ಹೊಂದಿದೆ. ನ್ಯೂರೋಥೆರಪಿ ಚಿಕಿತ್ಸೆಯಲ್ಲಿ ಶರೀರದ ವಿಭಿನ್ನ ಅಂಗಗಳ ಮೇಲೆ ಒತ್ತಡವನ್ನು ಹಾಕುವುದರ ಮೂಲಕ ರೋಗಿಗೆ ಹೆಚ್ಚು ಲಾಭ ಸಿಗುವಂತಾಗುತ್ತದೆ. ನ್ಯೂರೋಥೆರಪಿಯು ಔಷಧಿ ರಹಿತವಾಗಿ ಚಿಕಿತ್ಸೆ ಮಾಡುತ್ತದೆ. ಶರೀರದ ಆಂತರಿಕ ಪ್ರತಿರೋಧ ಶಕ್ತಿಯನ್ನು ಹೆಚ್ಚಿಸಿ ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಈ ಮೂಲಕ ಶರೀರದ ವಿಭಿನ್ನ ಅಂಗಗಳು ರೋಗದ ಬಗ್ಗೆ ಹೋರಾಡಲು ಸ್ವತಃ ಪ್ರತಿರೋಧ ಶಕ್ತಿಯನ್ನು ತಯಾರು ಮಾಡುತ್ತದೆ. ನ್ಯೂರೋಥೆರಪಿಯು ಕೇವಲ ರೋಗಲಕ್ಷಣಗಳ ಕಡೆಗೆ ಮಾತ್ರ ಗಮನ ಹರಿಸದೆ, ರೋಗದ ಮೂಲ ಕಾರಣವನ್ನೇ ದೂರ ಮಾಡುತ್ತದೆ ಎಂದು ಅವರು ಮಾಹಿತಿ ನೀಡಿದರು.
ಉಪಪ್ರಾಚಾರ್ಯ ಸುರೇಶ್, ಎನ್‌ಎಸ್‌ಎಸ್ ಯೋಜನಾಧಿಕಾರಿ ಕೇಶವ ಎಚ್, ರೋಟರ‍್ಯಾಕ್ಟ್‌ನ ಗಣೇಶ ಕಾಮತ್, ಎನ್‌ಎಸ್‌ಎಸ್‌ನ ಚಂದ್ರಕಲಾ, ಉಷಾ ಮತ್ತಿತರರಿದ್ದರು.

Monday, December 5, 2011

ಬ್ರಹ್ಮರ ಗುಡಿಗೆ ಶಿಲಾನ್ಯಾಸ

ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇಗುಲದ ಬ್ರಹ್ಮರ ನೂತನ ಗುಡಿಗೆ ಭಾನುವಾರ ಶಿಲಾನ್ಯಾಸ ನೆರವೇರಿತು. ಶಿಬರೂರು ಹಯಗ್ರೀವ ತಂತ್ರಿ, ವೇದವ್ಯಾಸ ತಂತ್ರಿ, ಮೊಕ್ತೇಸರ ವಾಸುದೇವ ಆಸ್ರಣ್ಣ, ಅನಂತ ಆಸ್ರಣ್ಣ, ಹರಿ ಆಸ್ರಣ್ಣ, ಪ್ರಸಾದ ಆಸ್ರಣ್ಣ, ಬೇಬಿ ಕೋಟ್ಯಾನ್, ದಾನಿಗಳಾದ ಬಂಗೇರ ಸಹೋದರರು, ಬಜ್ಪೆ ರವಿರಾಜ ಆಚಾರ‍್ಯ, ವೇದವ್ಯಾಸ ಉಡುಪ ಮತ್ತಿತರರಿದ್ದರು.

ಕಟೀಲಿನಲ್ಲಿ ನ್ಯೂರೋಥೆರಪಿ ಚಿಕಿತ್ಸೆ


ಕಟೀಲು : ಇಲ್ಲಿನ ಶ್ರೀ ದುರ್ಗಾಪರಮೇಶ್ವರೀ ದೇಗುಲದ ಸರಸ್ವತೀ ಸದನದಲ್ಲಿ ಕಟೀಲ್ ಸ್ಪೋರ್ಟ್ಸ್ ಕ್ಲಬ್, ರೋಟರ‍್ಯಾಕ್ಟ್ ಕ್ಲಬ್, ಕೆರೆಕಾಡು ಆರೋಗ್ಯ ಸೇವಾ ಪ್ರತಿಷ್ಟಾನಗಳ ಸಹಯೋಗದಲ್ಲಿ ಭಾನುವಾರ ಉಚಿತ ನ್ಯೂರೋಥೆರಪಿ ಚಿಕಿತ್ಸಾ ಶಿಬಿರ ನಡೆಯಿತು.
ಅರ್ಚಕ ಹರಿನಾರಾಯಣದಾಸ ಆಸ್ರಣ್ಣ, ಕಿರಣ್ ಕೆರೆಕಾಡು, ಗಣೇಶ್ ಕಾಮತ್, ಕೇಶವ ಕಟೀಲ್, ನವೀನ್ ಕುಮಾರ್ ಮತ್ತಿತರರಿದ್ದರು.

Thursday, December 1, 2011

ಕಟೀಲು ದೇಗುಲದಿಂದ ೪೦೦ ವಿಶೇಷ ಮಕ್ಕಳಿಗೆ ಊಟ ಪೂರೈಕೆ

ಪುರಾಣ ಪ್ರಸಿದ್ಧ ಕಟೀಲು ಶ್ರೀ ಭ್ರಾಮರೀ ದುರ್ಗಾಪರಮೇಶ್ವರೀ ದೇಗುಲ ಕಾರ್ಣಿಕ, ಶಾಲೆಗಳು, ಯಕ್ಷಗಾನದಷ್ಟೇ ಪ್ರಸಿದ್ಧಿ ಹೊಂದಿರುವುದು ಅನ್ನದಾನಕ್ಕೆ. ದೇಗುಲದಲ್ಲಿ ದಿನಂಪ್ರತಿ ಐದರಿಂದ ಹತ್ತು ಸಾವಿರದಷ್ಟು ಮಂದಿ ಅನ್ನಪ್ರಸಾದ ಸ್ವೀಕರಿಸುತ್ತಾರೆ. ಇಲ್ಲಿನ ವಿದ್ಯಾ ಸಂಸ್ಥೆಗಳಲ್ಲಿ ಕಲಿಯುತ್ತಿರುವ ಎರಡೂವರೆ ಸಾವಿರ ವಿದ್ಯಾರ್ಥಿಗಳಿಗೆ ಊಟದ ವ್ಯವಸ್ಥೆ ದೇವಸ್ಥಾನದಿಂದಲೇ ನಡೆಯುತ್ತಿದೆ. ವಾರ್ಷಿಕ ಎರಡು ಕೋಟಿ ರುಪಾಯಿಗಳನ್ನು ಅನ್ನಪ್ರಾಸಾದಕ್ಕಾಗಿಯೇ ದೇಗುಲ ವೆಚ್ಚ ಮಾಡುತ್ತಿದೆ. ಹಾಗಾಗಿ ಇಲ್ಲಿನ ಅನ್ನದಾನ ಸೇವೆಗೆ ಹೆಚ್ಚು ಮಹತ್ವವಿದೆ. ದೇಗುಲದ ಅನ್ನದಾನ ಸೇವೆಗೆ ಕಾಣಿಕೆ ನೀಡುವವರು ಸಾವಿರಾರು ವಿದ್ಯಾರ್ಥಿಗಳಿಗೆ ಊಟ ನೀಡುತ್ತಿರುವ ಕಾರಣಕ್ಕಾಗಿ ತಾವು ನೀಡಿದ ಕಾಣಿಕೆಯಿಂದಾಗಿ ಆತ್ಮ ಸಂತೃಪ್ತಿಯನ್ನು ಪಡೆಯುತ್ತಿದ್ದರು.
ಇದೀಗ ಅನ್ನದಾನ ಸೇವೆಗೆ ಕಾಣಿಕೆ ನೀಡುವವರು ಇನ್ನಷ್ಟು ಖುಷಿ ಹಾಗೂ ಕೃತಾರ್ಥ ಭಾವವನ್ನು ಹೊಂದಬಹುದು. ಕಾರಣ ಕಟೀಲು ದೇಗುಲ ದಕ್ಷಿಣ ಕನ್ನಡ ಜಿಲ್ಲೆಯ ಏಳು ವಿಶೇಷ ಶಾಲೆಗಳ ನಾಲ್ಕು ನೂರು ವಿದ್ಯಾರ್ಥಿಗಳಿಗೆ ಊಟ ನೀಡುತ್ತಿದೆ. ಪ್ರತಿ ತಿಂಗಳು ಇದ್ದಕ್ಕಾಗಿ ಸುಮಾರು ಒಂದೂ ಕಾಲು ಲಕ್ಷ ರೂಪಾಯಿಗಳನ್ನು ವೆಚ್ಚ ಮಾಡುತ್ತಿದೆ.
ಕ್ರೈಸ್ತ ಸಂಸ್ಥೆಗಳು ನಡೆಸುವ ವಿಶೇಷ ಶಾಲೆಗಳ ಮಕ್ಕಳಿಗೂ ಊಟದ ಖರ್ಚು ಸಂದಾಯವಾಗುತ್ತಿರುವುದು ಕಟೀಲು ದೇಗುಲದಿಂದ ಎಂಬುದು ಮಹತ್ವದ, ಸಾಮರಸ್ಯದ ಸಂಗತಿಯಾಗಿದೆ.
ಮಂಗಳೂರಿನ ಸೈಂಟ್ ಆಗ್ನೇಸ್ ವಿಶೇಷ ಶಾಲೆ, ಚೇತನಾ ವಿಶೇಷ ಶಾಲೆ, ಸಾನಿಧ್ಯ ವಸತಿಯುತ ವಿಶೇಷ ಶಾಲೆ, ಸುರತ್ಕಲ್‌ನ ಲಯನ್ಸ್ ವಿಶೇಷ ಶಾಲೆ, ಕಿನ್ನಿಗೋಳಿ ಚರ್ಚ್ ನಡೆಸುವ ಸೈಂಟ್ ಮೇರೀಸ್ ವಿಶೇಷ ಶಾಲೆ, ಬೆಳ್ತಂಗಡಿ ವೇಣೂರಿನ ಕ್ರಿಸ್ತರಾಜ್ ನವಚೇತನ ಶಾಲೆ, ಸುಳ್ಯದ ಸಾಂದೀಪ ವಿಶೇಷ ಶಾಲೆಗಳ ಸುಮಾರು ೪೦೦ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳ ಊಟಕ್ಕೆ ತಲಾ ರೂ.೧೦ರಂತೆ ಕಟೀಲು ದೇಗುಲ ವ್ಯಯಿಸುತ್ತಿದೆ. ಕಳೆದ ಮೂರೂವರೆ ವರ್ಷಗಳಿಂದ ಕಟೀಲು ದೇಗುಲ ಜಿಲ್ಲೆಯ ವಿಶೇಷ ಶಾಲೆಗಳ ಮಕ್ಕಳ ಮಧ್ಯಾಹ್ನದ ಭೋಜನದ ಖರ್ಚು ವಹಿಸುತ್ತಿದೆ.

ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಕಟೀಲಿನ ಕ್ರೀಡಾಪಟುವಿಗೆ ಸಂಮಾನ



ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಕಟೀಲಿನ ಕ್ರೀಡಾಪಟುವಿಗೆ ಸಂಮಾನ
ಕಟೀಲು : ೪೦೦ ಮೀಟರ್ ಓಟ ಹಾಗೂ ೪೦೦ಮೀ ರಿಲೇಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಹಿರಿಯ ಪ್ರಾಥಮಿಕ ಶಾಲೆಯ ೭ನೇ ತರಗತಿ ವಿದ್ಯಾರ್ಥಿನಿ ಜಯಲಕ್ಷ್ಮೀ ಹಾಗೂ ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿನಿಯರಾದ ಗೀತಾ ಮತ್ತು ಸುಪ್ರೀತಾರನ್ನು ಕಿನ್ನಿಗೋಳಿ ರೋಟರ‍್ಯಾಕ್ಟ್ ಕ್ಲಬ್ ವತಿಯಿಂದ ಕಟೀಲು ದೇಗುಲದ ಅರ್ಚಕ ಕಮಲಾದೇವಿ ಪ್ರಸಾದ ಆಸ್ರಣ್ಣ ಸಂಮಾನಿಸಿದರು. ರೋಟರ‍್ಯಾಕ್ಟ್‌ನ ಗಣೇಶ್, ಕಟೀಲ್ ಸ್ಪೋರ್ಟ್ಸ್ ಕ್ಲಬ್‌ನ ವೆಂಕಟರಮಣ ಮಯ್ಯ, ಮುಖ್ಯ ಶಿಕ್ಷಕಿ ಮಾಲತಿ, ಶಿಕ್ಷಕ ವಾಸುದೇವ ಶೆಣೈ, ಕ್ರೀಡಾ ಶಿಕ್ಷಕ ಕೃಷ್ಣ ಮತ್ತಿತರರಿದ್ದರು.