Wednesday, December 14, 2011

ಕಟೀಲಿನಲ್ಲಿ ಹಾವು ಮತ್ತು ನಾವು





ಹಾವುಗಳಿಂದ ಪ್ರಕೃತಿಯ ಸಮತೋಲನ-ಗುರುರಾಜ ಸನಿಲ್
ಹಾವಿನ ದ್ವೇಷ ಹನ್ನೆರಡು ವರುಷ ನಿಜವಾ?, ಕೇರೆ ಹಾವಿನ ಬಾಲವನ್ನು ಹೆಂಗಸರ
ತಲೆಗೆ ತಾಗಿಸಿದರೆ ಅದು ಉದ್ದವಾಗಿ ಬೆಳೆಯುತ್ತದೆಯಂತೆ ಸತ್ಯವಾ? ಏಳು ಹೆಡೆಯ ನಾಗರ
ಉಂಟಾ?ಹಾವು ಹಾಲು ಕುಡಿಯುವುದಿಲ್ಲವಾ? ಹೀಗೆ ಹತ್ತಾರು ಪ್ರಶ್ನೆಗಳನ್ನು ಕೇಳಿದ
ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು ಕೇರೆ, ನೀರೊಳ್ಳೆ, ಇರ್ತಲೆ ಹಾವು,
ಹೆಬ್ಬಾವುಗಳನ್ನು ಕೈಯಲ್ಲೇ ಹಿಡಿದು ಓಓ, ಯಬ್ಬಾ, ಐಸಾ ಅಂತೆಲ್ಲ ಅಚ್ಚರಿ, ಕುತೂಹಲ,
ಭಯ ಮಿಶ್ರಿತ ಖುಷಿಯಿಂದ ಸಂಭ್ರಮಿಸಿದರು.
ಇದು ನಡೆದದ್ದು ಕಟೀಲಿನ ಪದವೀಪೂರ್ವ ಕಾಲೇಜು ಹಾಗೂ ಪ್ರಥಮ ದರ್ಜೆ ಕಾಲೇಜಿನಲ್ಲಿ.
ಬುಧವಾರ ಇಲ್ಲಿನ ವಿದ್ಯಾರ್ಥಿಗಳು ಹಾವುಗಳೊಂದಿಗೆ ಕಳೆದರು!
ನೀರೊಳ್ಳೆ ಹಾವು, ಕೇರೆ ಹಾವು, ಕಡಂಬಲ, ನಾಗರ, ಹೆಬ್ಬಾವು, ಇರ್ತಲೆ ಹಾವು ಹೀಗೆ
ಹತ್ತಕ್ಕೂ ಹೆಚ್ಚು ಜಾತಿಯ ಉರಗಗಳನ್ನು ಪ್ರದರ್ಶಿಸಿ, ಅವುಗಳ ಬಗ್ಗೆ ಮಾಹಿತಿ ನೀಡಿ,
ವಿದ್ಯಾರ್ಥಿಗಳ ಕುತೂಹಲ ಭರಿತ ಪ್ರಶ್ನೆಗಳಿಗೆ ಉತ್ತರಿಸಿದವರು ಉಡುಪಿಯ ಗುರುರಾಜ
ಸನಿಲ್. ಕಿನ್ನಿಗೋಳಿಯ ರೋಟರ‍್ಯಾಕ್ಟ್, ಕಟೀಲಿನ ಎನ್‌ಎಸ್‌ಎಸ್ ಹಾಗೂ ಕಟೀಲಿನ
ನಾಗರಿಕರು ಆಯೋಜಿಸಿದ ಹಾವು ನಾವು ಕಾರ‍್ಯಕ್ರಮದಲ್ಲಿ ಗುರುರಾಜ ಸನಿಲ್ ಮಾಹಿತಿ
ನೀಡಿದರು.
ಕಳೆದೆರಡು ದಶಕಗಳಲ್ಲಿ ಹದಿನೈದು ಸಾವಿರಕ್ಕೂ ಹೆಚ್ಚು ಹಾವುಗಳನ್ನು ಹಿಡಿದು ಕಾಡಿಗೆ
ಬಿಟ್ಟಿದ್ದೇನೆ. ಹನ್ನೆರಡು ಬಾರಿ ವಿಷಪೂರಿತ ಹಾವುಗಳಿಂದ ಕಡಿಸಿಕೊಂಡರೂ
ಬದುಕಿದ್ದೇನೆ. ಪ್ರಥಮ ಚಿಕಿತ್ಸೆಯ ಮೂಲಕ ಹಾವು ಕಚ್ಚಿದರೂ ಬದುಕಬಹುದು. ಇವತ್ತು
ಆಸ್ಪತ್ರೆಗಳಲ್ಲಿ ಔಷಧಿ ಇದೆ. ಹಾವುಗಳಿಂದ ಪ್ರಕೃತಿಯ ಸಮತೋಲನ ಸಾಧ್ಯ. ಹಾಗಾಗಿ
ಹಾವುಗಳನ್ನು ಕೊಲ್ಲಬೇಡಿ. ದಕ್ಷಿಣ ಕನ್ನಡ, ಉಡುಪಿಗಳಲ್ಲಿ ೪೫ಜಾತಿಯ ಹಾವುಗಳಿದ್ದು,
ಅವುಗಳಲ್ಲಿ ಆರು ಜಾತಿಯವುಗಳು ಮಾತ್ರ ವಿಷಯುಕ್ತವಾದುವುಗಳು. ಹಾಗೆಂದು ಹಾವುಗಳು ನಾವು
ತೊಂದರೆ ಮಾಡದಿದ್ದರೆ ಏನೂ ಮಾಡುವುದಿಲ್ಲ ಎಂದು ಹಾವುಗಳ ಕುರಿತು ಗುರುರಾಜ ಸನಿಲ್
ಮಾಹಿತಿ ನೀಡಿದರು.
ಪದವೀಪೂರ್ವ ಕಾಲೇಜಿನ ಪ್ರಾಚಾರ‍್ಯ ಜಯರಾಮ ಪೂಂಜ, ಪದವಿ ಕಾಲೇಜಿನ ಪ್ರಾಚಾರ‍್ಯ
ಬಾಲಕೃಷ್ಣ ಶೆಟ್ಟಿ, ಎನ್‌ಎಸ್‌ಎಸ್‌ನ ಕೇಶವ ಎಚ್, ಕೃಷ್ಣ ಕಾಂಚನ್, ನವೀನ್ ಕುಮಾರ್,
ರೋಟರ‍್ಯಾಕ್ಟ್‌ನ ಗಣೇಶ ಕಾಮತ್, ದಿನೇಶ್ ಕೊಡಿಯಾಲ್‌ಬೈಲ್, ಕೆ.ಬಿ.ಸುರೇಶ್
ಮತ್ತಿತರರಿದ್ದರು.

No comments:

Post a Comment