Tuesday, September 27, 2011

ಕೊರ್ಗಿ ಉಪಾಧ್ಯಾಯರ ಹೆಸರಲ್ಲಿ ಟ್ರಸ್ಟ್

ಕಟೀಲು : ಯಕ್ಷಗಾನ ತಾಳಮದ್ದಲೆ, ವೈದಿಕ, ಸಾಹಿತ್ಯ, ಶಿಕ್ಷಣ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ಕೊಟ್ಟ, ಕೊರ್ಗಿ ಉಪಾಧ್ಯಾಯರು ಸದಾ ಸ್ಮರಣೀಯರು ಎಂದು ಧಾರ್ಮಿಕ ಪರಿಷತ್ ಸದಸ್ಯ ಪಂಜ ಭಾಸ್ಕರ ಭಟ್ ಸೋಮವಾರ ಕಟೀಲು ಸರಸ್ವತೀ ಸದನದಲ್ಲಿ ನಡೆದ ಕೊರ್ಗಿ ವೇಂಕಟೇಶ್ವರ ಉಪಾಧ್ಯಾಯರ ಶ್ರದ್ಧಾಂಜಲಿ ಸಭೆಯಲ್ಲಿ ಹೇಳಿದರು.
ಯಕ್ಷಗಾನ ಕಲಾವಿದ ಸಿದ್ಧಕಟ್ಟೆ ಚೆನ್ನಪ್ಪ ಶೆಟ್ಟಿ, ಐದನೆಯ ತರಗತಿವರೆಗೆ ಕಲಿತ ನನ್ನಂತಹವನಲ್ಲಿ ಸಂಸ್ಕೃತ ಶ್ಲೋಕಗಳನ್ನು ರಂಗಸ್ಥಳ, ತಾಳಮದ್ದಲೆಗಳಲ್ಲಿ ಧೈರ‍್ಯವಾಗಿ ಹೇಳುವುದಕ್ಕೆ ಕಲಿಸಿ, ಪ್ರೇರಣೆ ಕೊಟ್ಟವರು ಕೊರ್ಗಿ ಉಪಾಧ್ಯಾಯರು ಎಂದರು.
ಕೊರ್ಗಿ ಉಪಾಧ್ಯಾಯರ ಹೆಸರಲ್ಲಿ ಟ್ರಸ್ಟ್ ಒಂದನ್ನು ಸ್ಥಾಪಿಸಿ, ಅವರ ಕುರಿತಾದ ಗ್ರಂಥವನ್ನು ಪ್ರಕಟಿಸುವ ಯೋಚನೆಯಿದೆ ಎಂದು ವಾಸುದೇವ ರಂಗ ಭಟ್ ಹೇಳಿದರು.
ಪ್ರಭಾಕರ ಜೋಷಿ, ಕೆ.ಗೋವಿಂದ ಭಟ್, ಕಟೀಲಿನ ಅರ್ಚಕರಾದ ವಾಸುದೇವ ಆಸ್ರಣ್ಣ, ಲಕ್ಷ್ಮೀನಾರಾಯಣ ಆಸ್ರಣ್ಣ, ಶ್ರೀಹರಿ ಆಸ್ರಣ್ಣ, ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ, ಬಾಲಕೃಷ್ಣ ಶೆಟ್ಟಿ ಮತ್ತಿತರರು ಉಪಾಧ್ಯಾಯರ ಕುರಿತು ಮಾತನಾಡಿದರು.

Saturday, September 24, 2011

kateel navaratra, ಕಟೀಲಿನಲ್ಲಿ ಸಾಂಸ್ಕೃತಿಕ ವೈಭವ

ಕಟೀಲು ದುರ್ಗಾಪರಮೇಶ್ವರೀ ದೇಗುಲದಲ್ಲಿ ನವರಾತ್ರೋತ್ಸವಾಂಗ ದಿನಂಪ್ರತಿ ಸಾಂಸ್ಕೃತಿಕ ಕಾರ‍್ಯಕ್ರಮಗಳು ನಡೆಯಲಿವೆ. ದಿನಂಪ್ರತಿ ಬೆಳಿಗ್ಗೆ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ‍್ಯಕ್ರಮ, ರಾತ್ರಿ ಯಕ್ಷಗಾನವಿದೆ.
ತಾ.೨೮ಕ್ಕೆ ಬುಜೈ ಶ್ರೀ ದೇವಿ ಭಜನಾ ಮಂಡಳಿ, ಉಜಿರೆಯವರಿಂದ ಭಜನೆ, ಸಂಜೆ ಯಕ್ಷಗಾನ, ತಾ೨೯ಕ್ಕೆ ಬಿಜೈ ತಿರುಮಲ ಮಹಿಳಾ ಮಂಡಳಿಯಿಂದ ಭಜನೆ, ಬಾನಂಗಡಿ ಚಂದ್ರಕಾಂತ ಭಟ್ಟರಿಂದ ಹರಿಕಥೆ, ಯಕ್ಷಗಾನ, ತಾ.೩೦ರಂದು ಕಟೀಲು ಭ್ರಾಮರೀ ಮಂಡಳಿಯಿಂದ ಭಜನೆ, ಅಂಕುಶ್ ನಾಯಕ್‌ರಿಂದ ಸೀತಾರ್ ವಾದನ, ರಾತ್ರಿ ಯಕ್ಷಗಾನ, ಕಟೀಲು ಗ್ರಾಮಸ್ಥರಿಂದ ಹುಲಿವೇಷ ಮೆರವಣಿಗೆ ತಾ.೧ಕ್ಕೆ ಲಲಿತಾ ಪಂಚಮಿಯಂದು ಕಟೀಲು ದೇವೀ ಮಂಡಳಿಯಿಂದ ಭಜನೆ, ಚೆನ್ನೈನ ರಾಜು ಭಾಗವತರ್ ಸಂಗೀತ ನೃತ್ಯ ವೈಭವ, ಯಕ್ಷಗಾನ, ತಾ.೨ಕ್ಕೆ ಮೂಲಾ ನಕ್ಷತ್ರದಂದು ಪಡುಬಿದ್ರೆ ನವಶಕ್ತಿ ಮಂಡಳಿಯಿಂದ ಭಜನೆ, ಲಕ್ಷ್ಮೀ ಪರಶುರಾಮ್‌ರಿಂದ ಭಕ್ತಿಗಾನ, ಕು.ಮಾಲತಿಯವರಿಂದ ಕರ್ನಾಟಕ ಸಂಗೀತ, ರಾತ್ರಿ ಯಕ್ಷಗಾನ, ತಾ.೩ಕ್ಕೆ ಬಜಪೆ ಶಾಂತಿ ಕಲಾ ಕೇಂದ್ರದವರಿಂದ ಭಕ್ತಗಾನ, ಪಂ.ನಾಗನಾಥ ಒಡೆಯರ್‌ರಿಂದ ಹಿಂದೂಸ್ಥಾನಿ ಸಂಗೀತ, ತಾ.೪ರ ದುರ್ಗಾಷ್ಟಮಿಯಂದು ಕಿನ್ನಿಗೋಳಿ ಸ್ವರರ್ಣಾವ ಸಂಗೀತ ಶಾಲೆಯವರಿಂದ ಸಂಗೀತ, ಸಂಯಮ ತಂಡದಿಂದ ತಾಳಮದ್ದಲೆ, ತಾ.೫ರ ಮಹಾನವಮಿಯಂದು ಕಿನ್ನಿಗೋಳಿ ವಾಗ್ದೇವಿ ತಂಡದಿಂದ ಭಜನೆ, ಧನಶ್ರೀ ಶಬರಾಯರಿಂದ ವಾಯಲಿನ್ ವಾದನ, ತಾ. ೬ರ ವಿಜಯದಶಮಿಯಂದು ಸೂರಜ್ ಸನಿಲ್ ತಂಡದಿಂದ ಭಕ್ತಿಸಂಗೀತ, ಮೈಸೂರು ವಿಜಯಾಮೂರ್ತಿಯವರಿಂದ ಭರತನಾಟ್ಯ, ಯಕ್ಷಗಾನ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Thursday, September 22, 2011

ಕಟೀಲಿನಲ್ಲಿ ವಿವಿ ಮಟ್ಟದ ರಂಗಕಲಾ ಸ್ಪರ್ಧೆ

ಕಟೀಲು : ಕಲೆಯಲ್ಲಿ ಶಿವ, ಸರಸ್ವತೀ, ಗಣಪ ಹೀಗೆ ದೇವರನ್ನು ಕಾಣುವ, ಕಲೆಯನ್ನು ಆರಾಧಿಸುವ ಸಂಸ್ಕೃತಿ ನಮ್ಮದು. ಪಾಶ್ಚಾತ್ಯ ಸಂಗೀತ ಕೆರಳಿಸುವಂತಹದ್ದಾದರೆ, ನಮ್ಮ ದೇಶದ ಕಲೆ ಮನಸ್ಸನ್ನು ಅರಳಿಸುವಂತಹದ್ದು ಎಂದು ಸಾಂಸದ ನಳಿನ್ ಕುಮಾರ್ ಹೇಳಿದರು.
ಅವರು ಗುರುವಾರ ಕಟೀಲಿನ ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳೂರು ವಿವಿ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯದ ಸಹಯೋಗದಲ್ಲಿ ನಡೆಯುವ ೨ದಿನಗಳ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ರಂಗಕಲಾ ಸ್ಪರ್ಧೆ -ರಂಗೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ದೇಗುಲದ ಆಡಳಿತಾಧಿಕಾರಿ ಡಾ.ಎಂ.ವಿ.ವೆಂಕಟೇಶ್, ಮೊಕ್ತೇಸರ ವಾಸುದೇವ ಆಸ್ರಣ್ಣ, ಮಂಗಳ ಗಂಗೋತ್ರಿಯ ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶನಾಲಯದ ಡಾ.ಎ.ಎಂ.ಎ.ಖಾದರ್, ಉಪನ್ಯಾಸಕಾರದ ಜಗದೀಶ್ಚಂದ್ರ ಕೆ.ಕೆ, ವಿಜಯ ವಿ., ಕಟೀಲು ಪ.ಪೂ.ಕಾಲೇಜಿನ ಪ್ರಾಚಾರ‍್ಯ ಜಯರಾಮ ಪೂಂಜ ಮತ್ತಿತರರಿದ್ದರು.
ಪ್ರಾಚಾರ‍್ಯ ಎಂ.ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿದರು. ಉಪನ್ಯಾಸ ಸುರೇಶ್ ವಂದಿಸಿದರು. ತೀಕ್ಷಿತಾ ಮತ್ತು ಸೌಮ್ಯ ಕಾರ‍್ಯಕ್ರಮ ನಿರೂಪಿಸಿದರು.
ವಿವಿಯಲ್ಲಿ ಸುಮಾರು ೧೯೭ರಷ್ಟು ಕಾಲೇಜುಗಳಿದ್ದು, ೧೬ ಕಾಲೇಜು ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿವೆ.
ವಿವಿ ರಂಗಕಲಾ ಸ್ಪರ್ಧೆ : ಆಳ್ವಾಸ್‌ಗೆ ಸಮಗ್ರ ಪ್ರಶಸ್ತಿ
ಕಟೀಲು : ಇಲ್ಲಿನ ದುರ್ಗಾಪರಮೇಶ್ವರೀ ದೇಗುಲ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಮಂಗಳೂರು ವಿವಿ ಮಟ್ಟದ ರಂಗಕಲಾ ಸ್ಪರ್ಧೆಯಲ್ಲಿ ಮೂಡುಬಿದ್ರೆ ಆಳ್ವಾಸ್ ಕಾಲೇಜು ಸಮಗ್ರ ಪ್ರಶಸ್ತಿ ತನ್ನದಾಗಿಸಿಕೊಂಡಿದೆ.
ಪ್ರಹಸನ : ಆಳ್ವಾಸ್ ಮೂಡುಬಿದ್ರೆ(ಪ್ರಥಮ), ಉಜಿರೆ ಎಸ್‌ಡಿಎಂ(ದ್ವಿತೀಯ)
ಮೈಮ್ : ಆಳ್ವಾಸ್ ಮೂಡುಬಿದ್ರೆ(ಪ್ರಥಮ), ಹಳೆಯಂಗಡಿ ಸರಕಾರಿ ಕಾಲೇಜು(ದ್ವಿತೀಯ)
ಮಿಮಿಕ್ರಿ : ಆಳ್ವಾಸ್ ಮೂಡುಬಿದ್ರೆ(ಪ್ರಥಮ), ವಿವಿ ಕಾಲೇಜು ಮಂಗಳೂರು(ದ್ವಿತೀಯ)
ಏಕಾಂಕ : ಆಳ್ವಾಸ್ ಮೂಡುಬಿದ್ರೆ(ಪ್ರಥಮ), ಉಜಿರೆ ಎಸ್‌ಡಿಎಂ(ದ್ವಿತೀಯ)
ಪ್ರಶಸ್ತಿ ವಿತರಣೆಯಲ್ಲಿ ಎಂ.ಬಾಲಕೃಷ್ಣ ಶೆಟ್ಟಿ, ಸತೀಶ್ಚಂದ್ರ ಹೆಗ್ಡೆ ಮತ್ತಿತರರಿದ್ದರು.


Sunday, September 18, 2011

ತಾಳಮದ್ದಲೆ ಸಮಾರೋಪ








ಕಟೀಲಿನಲ್ಲಿ ನಡೆದ ತಾಳಮದ್ದಲೆ ಸಪ್ತಾಹದ ಸಮಾರೋಪದ ಕೆಲ ಚಿತ್ರಗಳು

Tuesday, September 13, 2011

ಅಧ್ಯಕ್ಷರಾಗಿ ವಸಂತ


ಕಟೀಲು : ಇಲ್ಲಿನ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷರಾಗಿ ವಸಂತ ಪೂಜಾರಿ, ಉಪಾಧ್ಯಕ್ಷರಾಗಿ ಸದಾಶಿವ, ಕಾರ‍್ಯದರ್ಶಿಯಾಗಿ ಲಕ್ಷ್ಮಣ, ಸಹಕಾರ‍್ಯದರ್ಶಿಯಾಗಿ ಪುಷ್ಪರಾಜ್, ಕೋಶಾದಿಕಾರಿ ಭಾಸ್ಕರ ದೇವರಗುಡ್ಡೆ, ಗೌರವಾಧ್ಯಕ್ಷರಾಗಿ ಹರೀಶ್ ಶೆಟ್ಟಿ ಆಯ್ಕೆಯಾಗಿದ್ದಾರೆ.

ಧರ್ಮಸ್ಯ ಸೂಕ್ಷ್ಮಾ ಗತಿಃ : ತಾಳಮದ್ದಲೆ ಸಪ್ತಾಹ ಆರಂಭ



ಕಟೀಲು : ಯಕ್ಷಗಾನವನ್ನು ಅಕಡಮಿಕ್ ಆಗಿ ಬೆಳೆಸುವ, ರಾಷ್ಟ್ರಾಂತರ ಮಟ್ಟಕ್ಕೇರಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ಹಾಕಲಾಗುವುದು ಎಂದು ಯಕ್ಷಗಾನ ಬಯಲಾಟ ಅಕಾಡಮಿಯ ನೂತನ ಅಧ್ಯಕ್ಷ ಎಂ.ಎಲ್.ಸಾಮಗ ಹೇಳಿದರು.
ಅವರು ಸೋಮವಾರ ಕಟೀಲಿನ ಸರಸ್ವತೀ ಸದನದಲ್ಲಿ ಶ್ರೀ ದುರ್ಗಾಪರಮೇಶ್ವರೀ ದೇಗುಲದ ವತಿಯಿಂದ ತಾಳಮದ್ದಲೆ ಸಪ್ತಾಹ ಧರ್ಮಸ್ಯ ಸೂಕ್ಷ್ಮಾ ಗತಿಃ ಉದ್ಘಾಟಿಸಿ ಮಾತನಾಡಿದರು.
ಕುಂಬ್ಳೆ ಸುಂದರರಾಯರು ಹಾಗೂ ಇತರರು ಅಕಾಡಮಿಯನ್ನು ಹೇಗೆ ನಡೆಸಬೇಕೆಂಬ ಕಲ್ಪನೆ ನೀಡಿದ್ದಾರೆ. ಅದನ್ನು ಮುಂದುವರಿಸುವ ಕಾರ‍್ಯವನ್ನು ತಮ್ಮೆಲ್ಲರ ಸಹಕಾರದಿಂದ ಮಾಡುತ್ತೇವೆ ಎಂದು ಅವರು ಹೇಳಿದರು.
ಕಟೀಲು ದೇಗುಲದ ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ಹರಿನಾರಾಯಣದಾಸ ಆಸ್ರಣ್ಣ, ಕಮಲಾದೇವಿ ಪ್ರಸಾದ ಆಸ್ರಣ್ಣ, ಪ್ರಭಾಕರ ಜೋಷಿ, ವಿಜಯಾ ಬ್ಯಾಂಕಿನ ಪ್ರಬಂಧಕ ಭುವನಪ್ರಸಾದ ಹೆಗ್ಡೆ ಮತ್ತಿತರರಿದ್ದರು. ಬಳಿಕ ಪ್ರಸಿರ್ದದ ಕಲಾವಿದರಿಂದ ಕೌಶಿಕ ಚರಿತ್ರೆ ನಡೆಯಿತು.

Monday, September 12, 2011

ದ್ವಿವೇದಿ ಕೊರ್ಗಿ ವೇಂಕಟೇಶ್ವರ ಉಪಾಧ್ಯಾಯ

ಒಂದು ಅಪೂರ್ವ ಫೋಟೋ.
ಬಜಪೆಯಲ್ಲಿ ನಡೆದ ದೇವೀ ಮಾಹಾತ್ಮ್ಯೆ ಕಾರ್ಯಾಗಾರದಲ್ಲಿ ಯಕ್ಷರಂಗದ ದಿಗ್ಘಜರೊಂದಿಗೆ ಎರಡನೆ ಸಾಲಿನ ಖುರ್ಚಿಯಲ್ಲಿ ಕಾಲು ಮಡಚಿ ಕೂತವರು ಕೊರ್ಗಿ ಉಪಾಧ್ಯಾಯರು. ಪಕ್ಕದಲ್ಲಿ ಗೋವಿಂದ ಭಟ್ ಮತ್ತು ಸುಣ್ಣಂಬಳ ವಿಶ್ವೇಶ್ವರ ಭಟ್

ಕಟೀಲು : ಖ್ಯಾತ ಯಕ್ಷಗಾನ ಅರ್ಥವಾದಿ, ಸಂಸ್ಕೃತ, ಕನ್ನಡ ಪಂಡಿತ, ವಿದ್ವಾಂಸ, ಪ್ರಸಂಗಕರ್ತ, ಸಾಹಿತಿ, ವಿಮರ್ಶಕ, ಶಿಕ್ಷಕರಾಗಿದ್ದ ದ್ವಿವೇದಿ ಕೊರ್ಗಿ ವೇಂಕಟೇಶ್ವರ ಉಪಾಧ್ಯಾಯ(೫೯ವರ್ಷ) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅಲ್ಪ ಕಾಲದ ಅಸೌಖ್ಯದಿಂದ ಸೋಮವಾರ ನಿಧನರಾದರು. ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
೧೯೫೨ರಲ್ಲಿ ಜನಿಸಿದ್ದ ಕೊರ್ಗಿ ವೇಂಕಟೇಶ್ವರ ಉಪಾಧ್ಯಾಯರು ೮ನೇ ವರ್ಷದಲ್ಲಿ ಶೃಂಗೇರಿಯಲ್ಲಿ ವೇದಾಧ್ಯಯನ, ಋಗ್ವೇದ, ಉಡುಪಿಯಲ್ಲಿ ಯಜುರ್ವೇದ ಅಧ್ಯಯನ, ೧೯೭೫ರಲ್ಲಿ ನವೀನ ನ್ಯಾಯ ವಿದ್ವತ್ ಬಳಿಕ ಕನ್ನಡ ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ೧೯೭೫ರಿಂದ ಕಟೀಲು ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದ ಉಪಾಧ್ಯಾಯರು ಪಂಡಿತರೆಂದೇ ಖ್ಯಾತರಾಗಿದ್ದರು. ಶಾಸ್ತ್ರ, ಪುರಾಣ, ವೇದ ಇತ್ಯಾದಿ ಯಾವುದೇ ವಿಚಾರವನ್ನು ಅಧಿಕಾರಯುತವಾಗಿ ಮಾತಾಡಬಲ್ಲವರಾಗಿದ್ದರು. ತನ್ನ ೧೦ನೆಯ ವರ್ಷದಲ್ಲಿ ಯಕ್ಷಗಾನ ವೇಷಧಾರಿಯಾಗಿ ರಂಗಸ್ಥಳವೇರಿದ ಅವರು ೧೪ನೇ ವಯಸ್ಸಿಗೇ ತಾಳಮದ್ದಲೆ ಅರ್ಥವಾದಿಯಾಗಿ ಬೆಳೆದವರು. ಶೇಣಿ, ಸಾಮಗ, ಪೆರ್ಲರಂತಹ ಹಿರಿಯರಿಗೆ ಸಮಾನವಾಗಿ ಸಾವಿರಾರು ತಾಳಮದ್ದಲೆ ಕೂಟಗಳಲ್ಲಿ ಅರ್ಥವಾದಿಯಾಗಿ ಮೆರೆದು, ಪಂಡಿತ ಹೆಸರಿಗೆ ಅನ್ವರ್ಥರಾಗಿದ್ದರು. ವಾಲಿವಧೆಯ ರಾಮ, ಕರ್ಮಬಂಧದ ಕೃಷ್ಣ, ಸುಭದ್ರಾ ಕಲ್ಯಾಣದ ಅರ್ಜುನ ಸನ್ಯಾಸಿ, ವಾಮನ ಚರಿತ್ರೆಯ ಶುಕ್ರಾಚಾರ‍್ಯ ಮುಂತಾದ ಪಾತ್ರಗಳನ್ನು ಉಪಾಧ್ಯಾಯರು ಕಟ್ಟಿಕೊಟ್ಟ ಪರಿ ಅದ್ಭುತ.
ಕಟೀಲಿನಲ್ಲಿ ಭ್ರಾಮರೀ ಯಕ್ಷಗಾನ ಮಂಡಳಿಯ ಸ್ಥಾಪನೆಗೆ ಕಾರಣಕರ್ತರಲ್ಲಿ ಒಬ್ಬರಾಗಿ, ಪ್ರೌಢಶಾಲೆಯ ಮಕ್ಕಳ ಯಕ್ಷಗಾನ ತಂಡವನ್ನು ರಾಜ್ಯಾದ್ಯಂತ ತಿರುಗಾಡಿಸಿದವರು. ಕಟೀಲಿನಲ್ಲಿ ಯಕ್ಷಗಾನದ ವಾತಾವರಣವನ್ನು ಸೃಷ್ಟಿಸಿದವರಲ್ಲಿ ಕೊರ್ಗಿ ಉಪಾಧ್ಯಾಯರೂ ಪ್ರಮುಖರು. ಈಗಿನ ಖ್ಯಾತನಾಮರಾದ ಅನೇಕ ಯಕ್ಷಗಾನ ಕಲಾವಿದರಿಗೆ ಗುರುಗಳಾಗಿದ್ದ ಕೊರ್ಗಿ ಉಪಾಧ್ಯಾಯರು ಬಡಗು ಹಾಗೂ ತೆಂಕು ಎರಡೂ ಯಕ್ಷಗಾನ ಪ್ರಾಕಾರಗಳ ನಾಟ್ಯ ಕಲಿತಿದ್ದರು. ಇತ್ತೀಚಿಗೆ ಬಜಪೆಯಲ್ಲಿ ಅಕಾಡಮಿ ಆಯೋಜಿಸಿದ ದೇವೀ ಮಾಹಾತ್ಮ್ಯೆ ಕಾರ‍್ಯಾಗಾರದಲ್ಲಿ ಪ್ರಮುಖ ಸಂಪನ್ಮೂಲ ವ್ಯಕ್ತಿಯಾಗಿ ಪ್ರಸಂಗಕ್ಕೆ ಹೊಸ ಕಲ್ಪನೆಗಳನ್ನು ಕೊಟ್ಟಿದ್ದರು.
ಪುರೋಹಿತರಾಗಿಯೂ ದೊಡ್ಡ ಹೆಸರು ಮಾಡಿದ್ದ ಉಪಾಧ್ಯಾಯರು ಅನೇಕ ದೇಗುಲಗಳ ಬ್ರಹ್ಮಕಲಶ ಮುಂತಾದ ಧಾರ್ಮಿಕ ಕಾರ‍್ಯಕ್ರಮಗಳ ನೇತೃತ್ವ ವಹಿಸಿದ್ದರು.
ನಾಡಿನ ಅನೇಕ ಪತ್ರಿಕೆಗಳಲ್ಲಿ ಪ್ರಬುದ್ಧ ಲೇಖನ, ಕಲಾ ವಿಮರ್ಶೆಗಳನ್ನು ಬರೆಯುತ್ತಿದ್ದ ಉಪಾಧ್ಯಾಯರು, ತನ್ನ ಪ್ರಜ್ಞಾದೀಪ್ತಿ ಪ್ರಕಾಶನದ ಮೂಲಕ ಅಕ್ಷರ ಯಕ್ಷಗಾನ ಪ್ರಬಂಧ ಸಂಕಲನ, ಸಂಸ್ಕೃತ ಯಕ್ಷಗಾನ ಪ್ರಸಂಗಗಳಾದ ಶ್ರೀರಾಮ ಪಟ್ಟಾಭಿಷೇಕಂ, ವಾತಾಪೇ ಜೀರ್ಣೋಭವ, ಕಟೀಲು ಕ್ಷೇತ್ರ ಮಾಹಾತ್ಮ್ಯೆಯ ಅರ್ಥ ಇತ್ಯಾದಿ ಪ್ರಸಂಗಗಳಲ್ಲದೆ, ಪಂಚ ಪ್ರಪಂಚ, ಮೂರರ ಮಹಿಮೆ, ಭಾಸ ಭಾಷಿತ, ಲಕ್ಷ್ಮೀನಾರಾಯಣ ಹೃದಯ, ಮಹಾಮೃತ್ಯುಂಜಯ ಹೋಮ ವಿಧಿಃ, ಸುದರ್ಶನ ಹೋಮ ವಿಧಿಃ, ಪಂಚದುರ್ಗಾದೀಪ ನಮಸ್ಕಾರ ವಿಧಿಃ, ಮಹಾಗಣಪತಿ ಹವನ ವಿಧಿಃ, ಬ್ರಹ್ಮಕಲಶ ವಿಧಿಃಯಂತಹ ಧಾರ್ಮಿಕ ಕರ್ಮಗಳ ಕೃತಿಗಳನ್ನೂ ಬರೆದು ಪ್ರಕಟಿಸಿದ್ದರು. ಇವರ ಮಂತ್ರಗಳ ಒಂಭತ್ತು ಧ್ವನಿಸುರುಳಿಗಳು ಬಿಡುಗಡೆಗೊಂಡಿವೆ. ಆಕಾಶವಾಣಿ, ದೂರದರ್ಶನಗಳಲ್ಲಿ ಅನೇಕ ಉಪನ್ಯಾಸ, ಚಿಂತನ ಕಾರ‍್ಯಕ್ರಮಗಳು ಬಿತ್ತರಗೊಂಡಿವೆ.
ಸೋಮವಾರ ಕಟೀಲಿನಲ್ಲಿ ಉದ್ಘಾಟನೆಗೊಂಡ ತಾಳಮದ್ದಲೆ ಸಪ್ತಾಹದ ಮೊದಲೆರಡು ದಿನಗಳಲ್ಲಿ ಭಾಗವಹಿಸಬೇಕಿದ್ದ ಉಪಾಧ್ಯಾಯರು, ಸೋಮವಾರದ ಕೌಶಿಕ ಚರಿತ್ರೆಯಲ್ಲಿ ವಿಶ್ವಾಮಿತ್ರನ ಪಾತ್ರವನ್ನು ನಿರ್ವಹಿಸಬೇಕಿತ್ತು. ಆದರೆ ವಿಧಿವಶರಾದ ಉಪಾಧ್ಯಾಯರ ಆತ್ಮಸದ್ಗತಿಗಾಗಿ ಮೌನಪ್ರಾರ್ಥನೆ ಸಲ್ಲಿಸಲಾಯಿತು.
ಉಪಾಧ್ಯಾಯರಿಗೆ ಪೇಜಾವರಶ್ರೀಗಳಿಂದ ಶ್ರೀರಾಮ ವಿಠಲ, ಯಕ್ಷಲಹರಿ, ದುರ್ಗಾ ಮಕ್ಕಳ ಮೇಳ, ಮೂಡುಬಿದ್ರೆ, ಧಾರವಾಡ ಮುಂತಾದೆಡೆ ಸಂಮಾನಗಳು ಸಂದಿವೆ.
ಸಂತಾಪ
ಯಕ್ಷಗಾನ ಅಕಾಡಮಿ ಅಧ್ಯಕ್ಷ ಎಂ.ಎಲ್.ಸಾಮಗ, ಪ್ರಭಾಕರ ಜೋಷಿ, ಕಟೀಲಿನ ಅರ್ಚಕರಾದ ಆಸ್ರಣ್ಣ ಬಂಧುಗಳು, ಪಂಜ ಭಾಸ್ಕರ ಭಟ್ ಸೇರಿದಂತೆ ಹಲವಾರು ಮಂದಿ ಸಂತಾಪ ವ್ಯಕ್ತಪಡಿಸಿದ್ದಾರೆ.





ಮಕ್ಕಳ ತೆಂಕುತಿಟ್ಟು ಯಕ್ಷಗಾನ ಸ್ಪರ್ಧೆ




ಯಕ್ಷಗಾನ ಕಲಿಕೆಯಿಂದ ಮಕ್ಕಳಲ್ಲಿ ಆತ್ಮವಿಶ್ವಾಸ- ರಘುಪತಿ ಭಟ್
ಸಂಗೀತ, ನಾಟ್ಯ, ಮಾತು, ಬಣ್ಣಗಾರಿಕೆಯಂತಹವುಗಳನ್ನು ಕಲಿಸುವ ಯಕ್ಷಗಾನ ಕಲಿಕೆಯಿಂದ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ. ಸಂಸ್ಕಾರವನ್ನೂ ನೀಡಿದಂತಾಗುತ್ತದೆ ಎಂದು ಉಡುಪಿಯ ಶಾಸಕ, ಯಕ್ಷಶಿಕ್ಷಣ ಟ್ರಸ್ಟ್‌ನ ರಘುಪತಿ ಭಟ್ ಹೇಳಿದರು.
ಅವರು ಕಟೀಲು ದುರ್ಗಾ ಮಕ್ಕಳ ಮೇಳದ ವಾರ್ಷಿಕೋತ್ಸವದಲ್ಲಿ ಮಕ್ಕಳ ಯಕ್ಷಗಾನ ಸ್ಪರ್ಧೆಯ ಬಹುಮಾನ ವಿತರಿಸಿ ಮಾತನಾಡಿದರು.
ಯಕ್ಷಗಾನ ಕಲಾವಿದ ಹೊಸಹಿತ್ತಲು ಮಹಾಲಿಂಗ ಭಟ್, ಡಾ.ನಾರಾಯಣ ಶೆಟ್ಟಿಯವರನ್ನು ಸಂಮಾನಿಸಲಾಯಿತು. ಸ್ಪರ್ಧೆಯ ಬಗ್ಗೆ ತೀರ್ಪುಗಾರರ ಪರವಾಗಿ ಕೆ.ಎಲ್.ಕುಂಡಂತಾಯ ಅಭಿಪ್ರಾಯ ವ್ಯಕ್ತಪಡಿಸಿದರು.

ದುಬೈನ ಉದ್ಯಮಿ ಕಳತ್ತೂರು ಶೇಖರ ಶೆಟ್ಟಿ, ಮುಂಬೈನ ಬಂಟರ ಸಂಘದ ಐಕಳ ಹರೀಶ ಶೆಟ್ಟಿ, ಐಕಳ ಗಣೇಶ ಶೆಟ್ಟಿ, ಕಟೀಲು ಮೇಳಗಳ ಸಂಚಾಲಕ ಕಲ್ಲಾಡಿ ದೇವಪ್ರಸಾದ ಶೆಟ್ಟಿ, ಕೋಮಜಾಲುಗುತ್ತು ಪ್ರಭಾಕರ ಶೆಟ್ಟಿ, ಕಲಾಜಗತ್ತಿನ ತೋನ್ಸೆ ವಿಜಯಕುಮಾರ ಶೆಟ್ಟಿ, ಕಟೀಲು ದೇಗುಲದ ಮೊಕ್ತೇಸರ ವಾಸುದೇವ ಆಸ್ರಣ್ಣ, ಅನಂತ ಆಸ್ರಣ್ಣ, ಮುಖ್ಯ ಶಿಕ್ಷ ಸುರೇಶ್ ಭ್ಟ, ಮಾಲತಿ, ಯಕ್ಷಬೋಧಿನಿ ಟ್ರಸ್ಟ್‌ನ ಬಜಪೆ ರಾಘವೇಂದ್ರ ರಾವ್ ಮತ್ತಿತರರಿದ್ದರು.
ಮಕ್ಕಳ ಮೇಳದ ಅಧ್ಯಕ್ಷ ಹರಿನಾರಾಯಣದಾಸ ಆಸ್ರಣ್ಣ ಸ್ವಾಗತಿಸಿದರು. ವಾಸುದೇವ ಶೆಣೈ ವಂದಿಸಿದರು.
ಬಳಿಕ ಮಕ್ಕಳಮೇಳದ ಕಲಾವಿದರಿಂದ ಯಕ್ಷಗಾನ ನಡೆಯಿತು.


ಪಣಂಬೂರು, ವಿದ್ಯಾದಾಯಿನಿಗಳಿಗೆ ಪ್ರಶಸ್ತಿ
ದುರ್ಗಾ ಮಕ್ಕಳ ಮೇಳ ಆಯೋಜಿಸಿದ ಮಕ್ಕಳ ತೆಂಕು ತಿಟ್ಟು ಯಕ್ಷಗಾನ ಸ್ಪರ್ಧೆಯಲ್ಲಿ ಪಣಂಬುರು ಮಕ್ಕಳ ಮೇಳ ಪ್ರದರ್ಶಿಸಿದ ಭಕ್ತ ಸುಧನ್ವ ಪ್ರಥಮ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರೆ ವೀರಬಬ್ರುವಾಹನ ಪ್ರದರ್ಶಿಸಿದ ಸುರತ್ಕಲ್ ವಿದ್ಯಾದಾಯಿನಿ ಯಕ್ಷಕಲಾ ಮಕ್ಕಳ ಮೇಳ ದ್ವಿತೀಯ ಪ್ರಶಸ್ತಿಯನ್ನು ಪಡೆದಿದೆ.
ಪಣಂಬೂರು ಮಕ್ಕಳ ಮೇಳದಲ್ಲಿ ಸುಧನ್ವ ಪಾತ್ರಧಾರಿ ಮಿಲನ್ ಕುಮಾರ್ (ಪುಂಡು ವೇಷ), ಅರ್ಜುನ ವೇಷಧಾರಿ ಶಿವಾನಿ(ರಾಜ ವೇಷ), ಅನುಸಾಲ್ವ ವೇಷಧಾರಿ ಶಿವತೇಜ ಐತಾಳ್(ಬಣ್ಣದ ವೇಷ) ವೈಯಕ್ತಿಕ ಪ್ರಶಸ್ತಿ ಪಡೆದರೆ, ಕದ್ರಿ ಬಾಲಯಕ್ಷಕೂಟದ ಪಾರ್ವತಿ ಪಾತ್ರಧಾರಿ ಸ್ವಾತಿ ದೇವಾಡಿಗ(ಸ್ತ್ರೀ ವೇಷ), ವನಪಾಲಕನಾದ ನಿಖಿಲ್ ಕುಮಾರ್(ಹಾಸ್ಯ), ನಂದಿ ಮಾಡಿದ ಶ್ರೀವತ್ಸ ಕುಮಾರ್(ಪೋಷಕ ಪಾತ್ರ) ಪ್ರಶಸ್ತಿ ಪಡೆದಿದ್ದಾರೆ.

Sunday, September 4, 2011

ದಿ.ಗೋಪಾಲಕೃಷ್ಣ ಆಸ್ರಣ್ಣ ಜನ್ಮ ಶತಾಬ್ದಿ ಉದ್ಘಾಟನೆ





ಕಟೀಲು :ಇಲ್ಲಿನ ದೇಗುಲದಲ್ಲಿ ಅರ್ಚಕರಾಗಿ ಪೂಜ್ಯರಾದ ದಿ.ಗೋಪಾಲಕೃಷ್ಣ ಆಸ್ರಣ್ಣರ ಜನ್ಮ ಶತಾಬ್ದದ ಉದ್ಘಾಟನೆ ಸ.5ರ ರಾತ್ರಿ ಕಟೀಲಿನ ಗೋಪಾಲಕೃಷ್ಣ ಸಭಾಭವನದಲ್ಲಿ ನಡೆಯಿತು.

ಇದೇ ಸಂದರ್ಭ ಆಸ್ರಣ್ಣ ಶಿಷ್ಯ ವೃಂದದ ವತಿಯಿಂದ ದಿ.ಆಸ್ರಣ್ಣ ಕಲಾವಿದ ಪ್ರಶಸ್ತಿಯನ್ನು ಗೇರುಕಟ್ಟೆ ಗಂಗಯ್ಯ ಶೆಟ್ಟರಿಗೆ ನೀಡಿ ಸಂಮಾನಿಸಲಾಯಿತು. ತಲಪಾಡಿ ದೇಗುಲದ ಅರ್ಚಕ ಬಾಲಕೃಷ್ಣ ಭಟ್, ಭಾಗವತರಾದ ಕುಬಣೂರು ಶ್ರೀಧರ ರಾವ್, ಸುರಗಿರಿ ಮಹಾಲಿಂಗೇಶ್ವರ ದೇಗುಲದ ಮೊಕ್ತೇಸರ ಸೀತಾರಾಮ ಶೆಟ್ಟರನ್ನು ಗೌರವಿಸಲಾಯಿತು. ಪಂಜ ಭಾಸ್ಕರ ಭಟ್, ಡಾ.ಭಾಸ್ಕರಾನಂದ ಕುಮಾರ್, ಪುತ್ತಿಗೆ ಪದ್ಮನಾಭ ಉಡುಪ, ದುರ್ಗಾದಾಸ ಬಳ್ಕೂರು, ಪ್ರವೀಣ್ ಸೋಮೇಶ್ವರ, ಡಾ.ಮಾಧವ ರಾವ್, ಮುರಳೀಧರ ಆಚಾರ‍್ಯ, ಜಗದೀಶ್ಚಂದ್ರ ಕುಮಾರ್ ಮುಂತಾದವರನ್ನು ಅಭಿನಂದಿಸಲಾಯಿತು.

ಧರ್ಮಸ್ಥಳದ ಹರ್ಷೇಂದ್ರಕುಮಾರ್, ವಿಮಾನ ನಿಲ್ದಾಣ ಪ್ರಾಧಿಕಾರದ ಎಂ.ಆರ್.ವಾಸುದೇವ್, ಹರಿಕೃಷ್ಣ ಪುನರೂರು, ಮಿಜಾರುಗುತ್ತು ಆನಂದ ಆಳ್ವ, ಇಂಡಿಯನ್ ಓವರ್‌ಸೀಸ್ ಬ್ಯಾಂಕಿನ ಅನಿಲ್, ಮರವೂರು ಜಗದೀಶ ಶೆಟ್ಟಿ, ಮೂಡುಬಿದ್ರೆ ಶ್ರೀಪತಿ ಭಟ್, ಪ್ರದೀಪ ಕುಮಾರ ಕಲ್ಕೂರ, ಪಿ.ಸತೀಶ್ ರಾವ್ ಮತ್ತಿತರರಿದ್ದರು. ಸಂಘಟಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ ಸ್ವಾಗತಿಸಿದರು. ಶರತ್ ಶೆಟ್ಟಿ ಮತ್ತು ರಮ್ಯಾ ಆಸ್ರಣ್ಣ ಕಾರ‍್ಯಕ್ರಮ ನಿರೂಪಿಸಿದರು.

ಕಟೀಲು ಮಕ್ಕಳ ಯಕ್ಷಗಾನ ಸ್ಪರ್ಧೆ ಉದ್ಘಾಟನೆ

ಕಟೀಲು : ಇಲ್ಲಿನ ದೇಗುಲದ ಸರಸ್ವತೀ ಸದನದಲ್ಲಿ ದುರ್ಗಾ ಮಕ್ಕಳ ಮೇಳ ತೃತೀಯ ವಾರ್ಷಿಕೋತ್ಸವದ ನಿಮಿತ್ತ ಒಂದು ವಾರಗಳ ಕಾಲ ಆಯೋಜಿಸಿರುವ ಮಕ್ಕಳ ತೆಂಕುತಿಟ್ಟಿನ ಯಕ್ಷಗಾನ ಸ್ಪರ್ಧೆ ಭಾನುವಾರ ಉದ್ಘಾಟನೆಗೊಂಡಿತು.
ಧರ್ಮಸ್ಥಳದ ಹರ್ಷೇಂದ್ರಕುಮಾರ್ ಮಾತನಾಡಿ ಯಕ್ಷಗಾನ ಕ್ಷೇತ್ರಕ್ಕೆ ಜನ ಬರುತ್ತಿಲ್ಲ ಎಂಬ ಸ್ಥಿತಿಯಲ್ಲಿ ಮಕ್ಕಳನ್ನು ಯಕ್ಷಗಾನ ಕಲಾವಿದರನ್ನಾಗಿ ತಯಾರು ಮಾಡುವ ಕಾರ‍್ಯ ಸ್ತುತ್ಯರ್ಹವಾಗಿದ್ದು, ವಿವಿಧೆಡೆ ಬೆಳೆಯುತ್ತಿರುವ ಮಕ್ಕಳ ಯಕ್ಷಗಾನ ಮೇಳಗಳಿಗೆ ಉತ್ತೇಜನ ನೀಡುವುದಕ್ಕೆ ಸ್ಪರ್ಧೆಗಳು ಪೂರಕ ಎಂದರು.
ಧಾರ್ಮಿಕ ಪರಿಷತ್‌ನ ಪಂಜ ಭಾಸ್ಕರ ಭಟ್, ಕಟೀಲು ಯಕ್ಷಗಾನಕ್ಕೆ ಕೊಡುತ್ತಿರುವ ಕೊಡುಗೆ ಅನನ್ಯ ಎಂದರು.
ಕಟೀಲಿನ ಅರ್ಚಕ ಅನಂತಪದ್ಮನಾಭ ಆಸ್ರಣ್ಣ, ಖ್ಯಾತ ಕಲಾವಿದ ಡಾ.ಭಾಸ್ಕರಾನಂದ ಕುಮಾರ್, ಮುಂಬೈನ ಉದ್ಯಮಿ ಜೆ.ಸಿ.ಕುಮಾರ್, ಮಕ್ಕಳ ಮೇಳದ ಅಧ್ಯಕ್ಷ ಶ್ರೀಹರಿನಾರಾಯಣದಾಸ ಆಸ್ರಣ್ಣ, ಕಾರ‍್ಯದರ್ಶಿ ವಾಸುದೇವ ಶೆಣೈ, ಟ್ರಸ್ಟಿ ಬಜಪೆ ರಾಘವೇಂದ್ರ ಭಟ್ ಮತ್ತಿತರರಿದ್ದರು.
ಜಿಲ್ಲೆಯ ವಿವಿಧ ಮಕ್ಕಳ ತಂಡಗಳು ದಿನಂಪ್ರತಿ ಸಂಜೆ ೬ಗಂಟೆಯಿಂದ ೮ತನಕ ವಿವಿಧ ಪ್ರಸಂಗಗಳನ್ನು ಪ್ರದರ್ಶಿಸಲಿದ್ದು, ತಾ.೧೧ರಂದು ಬಹುಮಾನ ವಿತರಣೆ ನಡೆಯಲಿದೆ.

Thursday, September 1, 2011

ಮಕ್ಕಳ ತೆಂಕುತಿಟ್ಟು ಯಕ್ಷಗಾನ ಸ್ಪರ್ಧೆ




ಕಟೀಲು ಗಣಪಗೆ ಬಂಗಾರದ ಮುಖವಾಡ


ಶಿಬರೂರು ಹಯಗ್ರೀಯ ತಂತ್ರಿ ಮತ್ತವರ ಕುಟುಂಬಿಕರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದ ಗಣಪತಿ ದೇವರಿಗೆ ಬೆಳ್ಳಿಯ ಕವಚ ನೀಡಿದ್ದು ಈಗ ಅದಕ್ಕೆ ಬಂಗಾರದ ಲೇಮಿನೇಷನ್ (80ಗ್ರಾಂ.) ಮಾಡಿಸಿ ನೀಡಿದ್ದಾರೆ. ಹಸ್ತಾಂತರ ಕಾರ್ಯಕ್ರಮದಲ್ಲಿ ಆಸ್ರಣ್ಣ ಬಂಧುಗಳಿದ್ದರು.