Sunday, October 17, 2010

ಕಟೀಲು ಅಭಿವೃದ್ಧಿಗೆ ಅಧಿಕಾರಿಗಳ ಸಭೆ-ಸಚಿವ ಪಾಲೇಮಾರ್


ಪುರಾಣ ಪ್ರಸಿದ್ಧ ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ಯಾತ್ರಿ ನಿವಾಸ ನಿರ್ಮಾಣ, ಭೋಜನಾಲಯ ಹಾಗೂ ಒಳಚರಂಡಿ ನಿರ್ಮಾಣಕ್ಕೆ ಶೀಘ್ರ ಚಾಲನೆ ನೀಡುವ ಪ್ರಯತ್ನ ಮಾಡುವುದಾಗಿ ಮುಜರಾಯಿ ಸಚಿವ ಕೃಷ್ಣ ಪಾಲೇಮಾರ್ ಹೇಳಿದರು.
ಅವರು ಭಾನುವಾರ(ಅ೧೭) ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲಕ್ಕೆ ಭೇಟಿ ನೀಡಿದ ಸಂದರ್ಭ ಸಾಂಸದ ನಳಿನ್ ಕುಮಾರ್, ಶಾಸಕ ಅಭಯಚಂದ್ರ ಜೊತೆಗೆ ಕಟೀಲು ಅಭಿವೃದ್ಧಿ ಕುರಿತು ಮಾಹಿತಿ ಪಡೆದರು.ದೇಗುಲ ಮತ್ತು ಪರಿಸರದ ಅಭಿವೃದ್ಧಿಯ ಕುರಿತು ವಿವಿಧ ಇಲಾಖೆಗಳ ಉನ್ನತಾಧಿಕಾರಿಗಳ ಸಭೆ ಕರೆಯುವುದಾಗಿ ತಿಳಿಸಿದ ಪಾಲೇಮಾರ್, ಎ ದರ್ಜೆಯ ದೇಗುಲಗಳಲ್ಲಿ ಡ್ರೈನೇಜ್ ಆಗಲೇಬೇಕು. ಪರಿಸರ ಸಚಿವನಾಗಿಯೂ ಈ ಜವಾಬ್ದಾರಿ ತನಗಿದೆ ಎಂದ ಸಚಿವರು ಕಟೀಲಿನಲ್ಲಿ ನಿರ್ಮಾಣವಾಗುತ್ತಿರುವ ಚಿನ್ನದ ರಥದ ಕಾರ‍್ಯಕ್ಕೆ ವೇಗ ಕೊಡಲಾಗುವುದು ಎಂದರು.ಕಟೀಲಿನಲ್ಲಿ ರಥಬೀದಿ ಅಗಲಗೊಳಿಸುವುದು ಮತ್ತು ಶೀಘ್ರ ಬೈಪಾಸ್ ನಿರ್ಮಾಣ ಮಾಡಬೇಕೆಂದು ಸಾಂಸದ ನಳಿನ್ ಕುಮಾರ್ ಸಚಿವರನ್ನು ಒತ್ತಾಯಿಸಿದರು. ಕುಕ್ಕೆ ಸುಬ್ರಹ್ಮಣ್ಯದಂತೆ ಕಟೀಲಿನಲ್ಲೂ ಅಂಗಡಿಗಳ ಏಲಂ ಮೂಲಕ ದೇಗುಲದ ಆದಾಯವನ್ನು ಹೆಚ್ಚಿಸಬೇಕು. ಕಿನ್ನಿಗೋಳಿ ಮೂರುಕಾವೇರಿಯಿಂದ ಕಟೀಲುವರೆಗಿನ ರಸ್ತೆ ಅಗಲಗೊಳಿಸಬೇಕೆಂದು ಹರಿಕೃಷ್ಣ ಪುನರೂರು ಸಚಿವರ ಗಮನ ಸೆಳೆದರು.ವಿದ್ಯುತ್ ಅಸಾಧ್ಯದೇಗುಲದ ಸುತ್ತಲೂ ಹರಿಯುತ್ತಿರುವ ನಂದಿನಿ ನದಿಯಿಂದ ದೇಗುಲದ ಉಪಯೋಗಕ್ಕೆ ೫ಲಕ್ಷ ರೂ.ನಿಂದ ೨೫ಕಿ.ವ್ಯಾ. ವಿದ್ಯುತ್ ಉತ್ಪಾದಿಸುವ ಕುರಿತು ಸಲ್ಲಿಕೆಯಾಗಿರುವ ಪ್ರಸ್ತಾವವನ್ನು ಸಚಿವರ ಗಮನಕ್ಕೆ ತಂದಾಗ ’ಅದು ಅಸಾಧ್ಯ. ವಿದ್ಯುತ್ ಉತ್ಪಾದನೆಯಾದರೆ ಅದು ಕೇಂದ್ರಕ್ಕೆ ಕಳುಹಿಸಿ ಅಲ್ಲಿಂದಲೇ ತರಬೇಕು. ಕಾನೂನು ತೊಡಕುಗಳೂ ಇವೆ. ವಿದ್ಯುತ್ ಯೋಜನೆ ಆಗುವ ಹೋಗುವ ಮಾತಲ್ಲ’ ಎಂದರು.ಟೆಂಡರು ಕರೆಯದೆ ದಿನಸಿ ಸಾಮಾನುಗಳನ್ನು ಖರೀದಿಸುತ್ತಿರುವುದರಿಂದ ದೇಗುಲಕ್ಕೆ ನಷ್ಟವಾಗುತ್ತಿದೆ ಎಂದಾಗ, ಆ ಕುರಿತು ಪರಿಶೀಲಿಸುವುದಾಗಿ ಸಚಿವ ಪಾಲೇಮಾರ್ ಹೇಳಿದರು.ದೇಗುಲದ ಪ್ರಬಂಧಕ ವಿಶ್ವೇಶ ರಾವ್, ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ ಉಪಸ್ಥಿತರಿದ್ದರು.

No comments:

Post a Comment