Wednesday, October 13, 2010

ಯಕ್ಷಗಾನ ಮೇಳಗಳಿಗೂ ಬಂತು ಚಿನ್ನದ ಕಿರೀಟ!


ದೇಗುಲಗಳಿಗೆ, ದೇವರಿಗೆ ಬೆಳ್ಳಿಯ, ಚಿನ್ನದ ಕಿರೀಟ ಕೊಡುವುದು ಗೊತ್ತುಂಟು, ಯಕ್ಷಗಾನ ಮೇಳಗಳೂ ಚಿನ್ನದ ಕಿರೀಟಗಳು ಸಮರ್ಪಿತವಾಗುವ ದಿನಗಳು ಬಂದಿವೆ. ಕಟೀಲಿನ ಹಿಂದಿನ ನಾಲ್ಕು ಹಾಗೂ ಈ ಬಾರಿಯ ಹೊಸದಾದ ಐದನೇ ಯಕ್ಷಗಾನ ಮೇಳಕ್ಕೂ ಚಿನ್ನದ ಕಿರೀಟಗಳು ಸಮರ್ಪಣೆಯಾಗಲಿವೆ!
ಕಟೀಲಿನ ಯಕ್ಷಗಾನ ಮೇಳವನ್ನು ಕೇವಲ ಕಲೆಯಾಗಿ ನೋಡದೆ, ಖುದ್ದು ಕಟೀಲು ದೇವರೇ ನಮ್ಮ ಮನೆಗೆ ಬಂದಂತೆ ಎಂಬ ನಂಬಿಕೆ ಭಕ್ತರದ್ದು. ಹಾಗಾಗಿಯೇ ಎಂಟೂವರೆ ಸಾವಿರ ಸಂಖ್ಯೆಗಳಷ್ಟು ಹರಕೆಯಾಟಗಳು ಮುಂಗಡ ಬುಕ್ಕಿಂಗ್ ಆಗಿವೆ.
ಈಗಾಗಲೇ ಕಟೀಲಿನ ಯಕ್ಷಗಾನ ಮೇಳಗಳು ಬೆಳ್ಳಿಯ ಕಿರೀಟ, ತೊಟ್ಟಿಲು, ದೇವರ ಪ್ರಭಾವಳಿ, ಬಿಲ್ಲುಬಾಣ, ಶಂಖ, ಚಕ್ರ, ಗದಾ, ಪದ್ಮಾ, ತ್ರಿಶೂಲ, ತುರಾಯಿ, ರಾಜಕಿರೀಟ, ಮುಂತಾದ ಆಭರಣ, ಆಯುಧಗಳನ್ನು ಹೊಂದಿವೆ.
ಈ ಬಾರಿ ಭಕ್ತರು ಮೇಳಗಳಲ್ಲಿ ಪೂಜಿಸಲ್ಪಡುವ ರಾಮಲಕ್ಷ್ಮಣರ ಕಿರೀಟಗಳಿಗೆ ಚಿನ್ನದ ರಂಗು ತುಂಬಿಸಲಿದ್ದಾರೆ.
ನಾಲ್ಕು ಮೇಳಗಳಲ್ಲಿರುವ ಎಂಟು ಕಿರೀಟಗಳು ಸೇರಿದಂತೆ ಐದು ಮೇಳಗಳ ಹತ್ತು ಕಿರೀಟಗಳಿಗೆ ಚಿನ್ನದ ಲ್ಯಾಮಿನೇಟ್ ತಗಡನ್ನು ಹಾಕುವ ಮೂಲಕ ಮೇಳದ ದೇವರನ್ನು ಶ್ರೀಮಂತಗೊಳಿಸಲಿದ್ದಾರೆ. ಪ್ರತಿ ಕಿರೀಟಕ್ಕೆ ೬೦ಗ್ರಾಮ್ ಚಿನ್ನದಂತೆ ಒಟ್ಟು ೧೦ಕಿರೀಟಗಳಿಗೆ ಆರುನೂರು ಗ್ರಾಮ್ ಚಿನ್ನ ಬಳಸಲಾಗುತ್ತದೆ. ಇದಕ್ಕಾಗಿ ಸುಮಾರು ೧೪ಲಕ್ಷ ರೂ. ಖರ್ಚಾಗಲಿದ್ದು, ಈಗಾಗಲೇ ಎಂಟು ಲಕ್ಷ ರೂಗಳು ಭಕ್ತರು ನೀಡಿದ್ದಾರೆ.
ಕಟೀಲಿನ ಹೊಸ ಮೇಳಕ್ಕೆ ಈಗಾಗಲೇ ಹತ್ತಕ್ಕೂ ಹೆಚ್ಚು ಭಕ್ತರು ವೇಷಭೂಷಣ, ಬಸ್, ರಂಗಸ್ಥಳ, ಬೆಳ್ಳಿ ಕಿರೀಟ, ಪ್ರಭಾವಳಿ, ತೊಟ್ಟಿಲು ಮುಂತಾದ ಎಲ್ಲ ವಸ್ತುಗಳನ್ನೂ ನೀಡಲು ಮುಂದೆ ಬಂದಿರುವುದರಿಂದ ಹೊಸ ಮೇಳದ ರಚನೆಗೆ ದೇಗುಲಕ್ಕೆ ಯಾವುದೇ ಖರ್ಚಿಲ್ಲ. ದೇವರ ಜಂಗಮ ಸ್ವರೂಪದಂತಿರುವ ಕಟೀಲಿನ ಯಕ್ಷಗಾನ ಮೇಳಗಳಿಗೆ ಇನ್ನಷ್ಟು ಕೊಡುಗೆಗಳನ್ನು ನೀಡಲು ಭಕ್ತರನೇಕರು ಮುಂದೆ ಬರುತ್ತಿರುವುದು ಯಕ್ಷಗಾನಕ್ಕೆ ಚೈತನ್ಯದಾಯಕವಾಗಿದೆ.

No comments:

Post a Comment