

ಬೆಂಗಳೂರಿನ ಶಮಿಕಾ ಎಂಬವರು ಕಟೀಲು ದೇಗುಲದ ಶ್ರೀ ದುರ್ಗಾಪರಮೇಶ್ವರೀ ದೇವರ ಅಲಂಕಾರ ಮಂಟಪವನ್ನು ೩೫೦ಗ್ರಾಂ ಚಿನ್ನ ಹಾಗೂ ೪.೫ಕೆಜಿ ಬೆಳ್ಳಿಯಿಂದ ನಿರ್ಮಿಸಿ ಸಮರ್ಪಿಸಿದ್ದಾರೆ.




















ಕಟೀಲಿನ ರಥಬೀದಿಯಲ್ಲಿ ಹುಲಿವೇಷಗಳ ಸ್ಪರ್ಧೆ ಫೋಟೋಗಳು
ಗ್ರಾಮಸ್ಥರ ಮೆರವಣಿಗೆಗಳೂ ಹೆಚ್ಚಿಸುತ್ತವೆ. ಇಲ್ಲಿನ ಊರುಗಳ ಗ್ರಾಮಸ್ಥರು ಹುಲಿವೇಷ ಸೇರಿದಂತೆ ನಾನಾ ವೇಷಗಳೊಂದಿಗೆ ಕಟೀಲಿಗೆ ಮೆರವಣಿಗೆಯಲ್ಲಿ ಬರುವುದು ಸಂಪ್ರದಾಯ. ಇಷ್ಟಾರ್ಥ ಸಿದ್ದಿಗೆ, ಕಷ್ಟಗಳ ನಿವಾರಣೆಗೆ ವೇಷ ಹಾಕುವ ಹರಕೆ ಹೊತ್ತವರು ಜಾತಿ ಬೇಧಗಳಿಲ್ಲದೆ ನವರಾತ್ರಿ ಮೆರವಣಿಗೆಯಲ್ಲಿ ಬಂದು ದೇವರ ಎದುರು ಕುಣಿದು ಹರಕೆ ತೀರಿಸುತ್ತಾರೆ. ಅ
ನೇಕರು ವರ್ಷಂಪ್ರತಿಯೂ ವೇಷ ಹಾಕಿ ಕುಣಿಯುವ ಮೂಲಕ ದೇವರ ಸೇವೆ ಸಲ್ಲಿಸಿದ ಕೃತಾರ್ಥಭಾವ ಹೊಂದುತ್ತಾರೆ. ಅನೇಕ ಉದ್ಯಮಿಗಳೂ ಈ ಮೆರವಣಿಗೆಯಲ್ಲಿ ಭಕ್ತಿಯಿಂದ ಭಾಗವಹಿಸುವುದನ್ನು ಕಟೀಲಿನಲ್ಲಿ ಕಾಣಬಹುದು. ವೇಷಧಾರಿಗಳು ಮೆರವಣಿಗೆಯ ದಿನ ನಿಷ್ಟೆ, ಭಕ್ತಿಯಿಂದ ಬಣ್ಣಹಚ್ಚಿಕೊಳ್ಳುತ್ತಾರೆ. ನವರಾತ್ರಿಯ ದಿನಗಳಲ್ಲಿ ಒಂದು ಸಾವಿರಕ್ಕೂ ಹೆಚ್ಚು ಹುಲಿವೇಷಧಾರಿಗಳು ಬಂದು ಹರಕೆ ತೀರಿಸುವುದು ಕಟೀಲಿನ ವಿಶೇಷ.ವೈಯಕ್ತಿಕವಾಗಿ ವೇಷ ಹಾಕಿ ಹರಕೆ ತೀರಿಸುತ್ತಿದ್ದ ದಿನಗಳು ಕಳೆದು ಊರಿನ ಅನೇಕ ಮಂದಿ ಸಾಮೂಹಿಕವಾಗಿ ವೇಷ ಧರಿಸಿ, ಮೆರವಣಿಗೆಯಲ್ಲಿ ಬರುವ ಸಂಪ್ರದಾಯ ಆರಂಭವಾದ ಮೇಲೆ ನವರಾತ್ರಿ ಮೆರವಣಿಗೆ ಸಮಿತಿಗಳು ಹುಟ್ಟಿಕೊಂಡವು.ಎಕ್ಕಾರಿನಿಂದ ಕಟೀಲಿಗೆ ದಸರಾ ಮೆರವಣಿಗೆ ಮೂಲಾನಕ್ಷತ್ರದಂದು ಬರುವ ಸಂಪ್ರದಾಯ. ಇಲ್ಲಿನ ಸಮಿತಿ ಈ ವರ್ಷ ೫೧ವರ್ಷಗಳ ಸೇವೆಯ ಸಾರ್ಥಕ್ಯದಲ್ಲಿದ್ದರೆ, ಕೊಡೆತ್ತೂರು ಹುಲಿವೇಷ ಮೆರವಣಿಗೆ ಸಮಿತಿ ೪೫ವರ್ಷಗಳಿಂದ ಲಲಿತಾ ಪಂಚಮಿಯ ದಿನದಂದು ಮೆರವಣಿಗೆ ಬಂದು ಕಟೀಲಮ್ಮನ ಸೇವೆ ಮಾಡುತ್ತಿದೆ. ಕಟೀಲು ಮೆರವಣಿಗೆ ಸಮಿತಿಯವರು ಕಳೆದ ಇಪ್ಪತ್ತೈದು ವರ್ಷಗಳಿಂದ ನವರಾತ್ರಿಯ ತೃತೀಯ ದಿನ ಮೆರವಣಿಗೆ ಬರುವ ಮೂಲಕ ಉತ್ಸವಕ್ಕೆ ಕಳೆಗಟ್ಟುತ್ತಿದ್ದಾರೆ. ಹುಲಿ, ಕರಡಿ, ಸಿಂಹ, ಬೆಂರ್ಕ, ಕಾಡು ಜನರ ವೇಷ ಇತ್ಯಾದಿ ಬಣ್ಣದ ವೇಷಗಳಲ್ಲದೆ, ತಾಲೀಮು, ಚೆಂಡೆ, ಡೋಲು ಮುಂತಾದ ವಾದ್ಯಪರಿಕರಗಳೊಂದಿಗೆ ಮೆರವಣಿಗೆಯ ಸೊಬಗನ್ನು ಹೆಚ್ಚಿಸುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಸ್ತಬ್ಧ ಚಿತ್ರಗಳು ಮೆರವಣಿಗೆಯ ಸೌಂದರ್ಯವನ್ನು ಇನ್ನಷ್ಟು ಜಾಸ್ತಿ ಮಾಡುತ್ತಿವೆ. ಸುಡುಮದ್ದುಗಳ ಗದ್ದಲವೂ ಜೊತೆಗಿರುತ್ತದೆ. ಕಟೀಲಿನಲ್ಲಿ ನವರಾತ್ರಿಯ ದಿನಗಳಲ್ಲಿ ಉತ್ಸವದ ವಾತಾವರಣ ಇರಬೇಕೆಂದು ದೇಗುಲದ ಅರ್ಚಕರಾದ ದಿ.ಗೋಪಾಲಕೃಷ್ಣ ಆಸ್ರಣ್ಣರು ಪರಿಸರದ ಮಕ್ಕಳು ಯುವಕರಿಂದ ವೇಷ ಹಾಕಿಸಿ ಕುಣಿಸುತ್ತಿದ್ದರು. ಮುಂದೆ ಇದೇ ಬೆಳೆದು ಸಮಿತಿಯ ರೂಪ ತಾಳಿತು. ಕಳೆದ ಇಪ್ಪತ್ತೈದು ವರುಷಗಳಿಂದ ನವರಾತ್ರಿ ಮೆರವಣಿಗೆ ನಡೆಸಿಕೊಂಡು ಬರುತ್ತಿರುವ ಕಟೀಲಿನ ಮೆರವಣಿಗೆ ಸಮಿತಿಯವರು ಈ ವರ್ಷ ರಜತ ಸಂಭ್ರಮಕ್ಕಾಗಿ ಭಾನುವಾರ(ತಾ.೧೦) ದಿನವಿಡೀ ಅಂದರೆ ಸತತ ೨೪ ಗಂಟೆಗಳ ಕಾರ್ಯಕ್ರಮಗಳನ್ನು ಆಯೋಜಿಸಿದೆ.ರಜತ ವರ್ಷಕ್ಕಾಗಿ ದೊಡ್ಡಯ್ಯ ಮೂಲ್ಯ(ಗೌರವಾಧ್ಯಕ್ಷ), ರಾಮಗೋಪಾಲ್(ಅಧ್ಯಕ್ಷ), ಕೇಶವ ಕಟೀಲ್(ಕಾರ್ಯದರ್ಶಿ), ಚಂದ್ರಹಾಸ(ಕೋಶಾಧಿಕಾರಿ) ಮುಂತಾದವರನ್ನೊಳಗೊಂಡ ಸಮಿತಿ ರಚಿಸಲಾಗಿದೆ. ತಾ.10ರ ಬೆಳಿಗ್ಗೆ ೮.೩೦ರಿಂದ ಸಂಜೆ ೫ರತನಕ ಕಟೀಲಿನ ರಥಬೀದಿಯಲ್ಲಿ ಹುಲಿವೇಷಗಳ ಸ್ಪರ್ಧೆ ನಡೆಯಲಿದೆ. ವಿಜೇತರಿಗೆ ೨೦ಸಾವಿರ ರೂ, ೧೨ಸಾವಿರ ರೂ. ನಗದು ಬಹುಮಾನವಿದೆ. ಸಂಜೆ ೫ಗಂಟೆಗೆ ಕಿನ್ನಿಗೋಳಿಯ ವಸಂತ ಮಂಟಪದಿಂದ ಟ್ಯಾಬ್ಲೋ ಸ್ಪರ್ಧೆ ಆರಂಭವಾಗಲಿದ್ದು, ನಾಲ್ಕು ಕಿಮೀ ದೂರದ ಕಟೀಲುವರೆಗೆ ಸ್ತಬ್ಧಚಿತ್ರ ಮೆರವಣಿಗೆ ಬರಲಿದೆ. ಈ ಸ್ಪರ್ಧೆಯಲ್ಲಿ ೧೫ಟ್ಯಾಬ್ಲೋಗಳಿದ್ದು ವಿಜೇತರಿಗೆ ೨೫ಸಾವಿರ, ೧೫ಸಾವಿರ ರೂ. ನಗದು ಬಹುಮಾನವಿದೆ. ಇದಲ್ಲದೆ ಒಂಭತ್ತು ಹುಲಿವೇಷಗಳ ಟ್ಯಾಬ್ಲೋಗಳಿಗೂ ಪ್ರತ್ಯೇಕ ಸ್ಪರ್ಧೆಯಿದ್ದು, ವಿಜೇತರಿಗೆ ೧೦ಸಾವಿರ, ೫ಸಾವಿರ ರೂ. ನಗದು ಬಹುಮಾನವಿದೆ. ಹೀಗೆ ೨೫ಟ್ಯಾಬ್ಲೋಗಳು ಮೆರವಣಿಗೆಯಲ್ಲಿ ಬರಲಿವೆ.
ಈ ಮಧ್ಯೆ ಕಟೀಲಿನಲ್ಲಿ ಹಾಕಲಾಗಿರುವ ವೇದಿಕೆಯಲ್ಲಿ ಸಂಜೆ ೫ರಿಂದ ಮಂಜುಶ್ರೀ ಒಕ್ಕೂಟದ ಮಹಿಳಾ ತಂಡದವರಿಂದ ಹುಲಿವೇಷ ಕುಣಿತ, ಶಿವಮೊಗ್ಗದ ಮಹಿಳಾ ತಂಡದಿಂದ ಡೊಳ್ಳುಕುಣಿತ, ನಿಟ್ಟೂರಿನ ಡಿಡಿ ಮಹಿಳಾ ತಂಡದಿಂದ ಡ್ರಾಗನ್ ನೃತ್ಯ ರಂಜಿಸಲಿವೆ.
ಕಟೀಲಿನ ಮೆರವಣಿಗೆ ಸಮಿತಿಯ ವೇಷಗಳೊಂದಿಗೆ ಟ್ಯಾಬ್ಲೋಗಳು ಮೆರವಣಿಗೆಯಲ್ಲಿ ಕಟೀಲನ್ನು ರಾತ್ರಿ ೯ಗಂಟೆಗೆ ತಲುಪಲಿದ್ದು, ಬಳಿಕ ಸಭಾ ಕಾರ್ಯಕ್ರಮವಿದೆ. ಸುಬ್ರಹ್ಮಣ್ಯ ಸ್ವಾಮೀಜಿ, ಮಾಣಿಲ ಸ್ವಾಮೀಜಿ, ಕಟೀಲು ದೇಗುಲದ ಅರ್ಚಕರಾದ ಆಸ್ರಣ್ಣ ಬಂಧುಗಳು, ಪಿ.ಕೃಷ್ಣ ಭಟ್, ಸಾಂಸದ ನಳಿನ್ ಕುಮಾರ್, ಶಾಸಕ ಅಭಯಚಂದ್ರ ಮುಂತಾದವರು ಭಾಗವಹಿಸಲಿದ್ದಾರೆ. ಕೊರ್ಗಿ ವೇಂಕಟೇಶ್ವರ ಉಪಾಧ್ಯಾಯರಿಂದ ಧಾರ್ಮಿಕ ಉಪನ್ಯಾಸವಿದೆ.ಬಳಿಕ ಬೆಳಿಗ್ಗಿನವರೆಗೆ ತೆಂಕು ಬಡಗು ತಿಟ್ಟುಗಳ ಪ್ರಸಿದ್ಧ ಕಲಾವಿದರಿಂದ ಕೂಡಾಟ ಪ್ರತಿಜ್ಞಾಫಲ ಪ್ರದರ್ಶನಗೊಳ್ಳಲಿದೆ. ಉಭಯತಿಟ್ಟುಗಳ ವೇಷಧಾರಿಗಳು ಏಕಕಾಲದಲ್ಲಿ ರಂಗಸ್ಥಳದಲ್ಲಿ ಕಾಣಿಸಿಕೊಳ್ಳುವುದು ವಿಶಿಷ್ಟವೆನಿಸಲಿದೆ.
ಭಾಗವಹಿಸುವ ಸ್ಪರ್ಧಾ ಹುಲಿವೇಷ
ಸ್ಪರ್ಧೆಯಲ್ಲಿ ದೇವರಗುಡ್ಡೆ ಫ್ರೆಂಡ್ಸ್, ಸುರೇಂದ್ರ ಕಾಡಬೆಟ್ಟು, ತುಕಾರಾಂ ಕೂಳೂರು, ಬಲ್ಲಣ ಫ್ರೆಂಡ್ಸ್ ಮಂಗಳೂರು, ಓಂಕಾರೇಶ್ವರೀ ಮಂದಿರ ೧೦ನೇ ತೋಕೂರು, ಅಶೋಕ್ರಾಜ್ ಕಾಡಬೆಟ್ಟು, ವಿಟಿ ಟೈಗರ್ ಬಾಯ್ಸ್, ಲಿಂಗಪ್ಪಯ್ಯಕಾಡು ಅಯ್ಯಪ್ಪ ಭಕ್ತವೃಂದ ತಂಡಗಳು ಭಾಗವಹಿಸಲಿವೆ.
ಟ್ಯಾಬ್ಲೋ ಸ್ಪರ್ಧೆಯಲ್ಲಿ ಮಾರುತಿ ಮೂಡುಬಿದ್ರೆ, ಕಿನ್ನಿಗೋಳಿ ಫ್ರೆಂಡ್ಸ್, ನ್ಯೂರವಿ ಇಂಡಸ್ಟ್ರೀಸ್, ಜಿಕೆ ಗ್ರೂಪ್ಸ್ ಮೂಡುಬಿದ್ರೆ, ಮಹಮ್ಮಾಯೀ ಫ್ರೆಂಡ್ಸ್, ಪುತ್ತಿಗೆ ಫ್ರೆಂಡ್ಸ್, ತುಳುನಾಡು ಫ್ರೆಂಡ್ಸ್, ಮಾಸ್ಟರ್ ಲಕ್ಷ್ಮೀ ಅರ್ಪಣ್ ಬಳಗ ಪುತ್ತೂರು, ಆನಂದ ಬಂಗೇರ ಮೂಡುಪೆರಾರ, ದುರ್ಗಾಂಬಾ ಗಿಡಿಗೆರೆ, ಅಶೋಕ್ ಕಾಡಬೆಟ್ಟು, ಕೃಷ್ಣ ಪೂಜಾ ಅರೆಂಜರ್ಸ್ ಹಳೆಯಂಗಡಿ ತಂಡಗಳು ಭಾಗವಹಿಸಲಿವೆ.
ಕಟೀಲು ದುರ್ಗಾಪರಮೇಶ್ವರೀ ದೇವಳ ಪದವೀಪೂರ್ವ ಕಾಲೇಜಿನಲ್ಲಿ ರಜತಮಹೋತ್ಸವ ಪ್ರಯುಕ್ತ ಪೂರ್ವಭಾವಿ ಸಭೆ ನಡೆಯಿತು.ಸಮಿತಿಯ ಗೌರವಾಧ್ಯಕ್ಷ, ಸಾಂಸದ ನಳಿನ್ ಕುಮಾರ್, ಅಧ್ಯಕ್ಷರಾದ ಶಾಸಕ ಅಭಯಚಂದ್ರ, ಕಾರ್ಯಾಧ್ಯಕ್ಷ ಚಿತ್ತರಂಜನ ರೈ, ಮಾಜಿ ಸಚಿವ ಅಮರನಾಥ ಶೆಟ್ಟಿ, ಮೋನಪ್ಪ ಶೆಟ್ಟಿ ಎಕ್ಕಾರು, ಲಕ್ಷ್ಮೀನಾರಾಯಣ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ಸಂತೋಷ್ ಶೆಟ್ಟಿ, ಪ್ರಾಚಾರ್ಯ ಜಯರಾಮ ಪೂಂಜ, ಸುರೇಶ್ ಭಟ್ ಮತ್ತಿತರರಿದ್ದರು.ರಜತ ಮಹೋತ್ಸವ ನೆನಪಿಗಾಗಿ ಸುಮಾರು ರೂ.45 ಲಕ್ಷ ರೂ.ವೆಚ್ಚದಲ್ಲಿ ಬಯಲು ರಂಗಮಂಟಪವನ್ನು ರಚಿಸುವ ಬಗ್ಗೆ ಚರ್ಚಿಸಲಾಯಿತು.
ರಥಬೀದಿಯಲ್ಲಿ ಅಕ್ಟೋಬರ್ ೧೦ರಂದು ದಿನವಿಡೀ ನೂರಾರು ಹುಲಿಗಳು ದಿನವಿಡೀ ಕುಣಿಯಲಿವೆ. ನವರಾತ್ರಿಯ ದಿನಗಳಲ್ಲಿ ಸಾವಿರಕ್ಕೂ ಹುಲಿವೇಷಗಳು ಕಟೀಲಿಗೆ ಬಂದು ಕುಣಿದು ಹರಕೆ ತೀರಿಸಿಹೋಗುವುದು ಸಂಪ್ರದಾಯ. ಹಾಗೆಯೇ ಕೊಡೆತ್ತೂರು, ಎಕ್ಕಾರು, ಕಟೀಲು ಗ್ರಾಮಗಳಿಂದ ಹುಲಿ ಸೇರಿದಂತೆ ಅನೇಕ ವೇಷಧಾರಿಗಳು ಮೆರವಣಿಗೆಯಲ್ಲಿ ಬಂದು ಕಟೀಲಿನ ರಥಬೀದಿಯಲ್ಲಿ ನರ್ತಿಸಿ, ಶ್ರೀ ದೇವಿಯ ಸೇವೆ ಸಲ್ಲಿಸಿ ಹೋಗುತ್ತಾರೆ. ಕಟೀಲು ಊರಿನ ಸಮಿತಿಯವರು ನವರಾತ್ರಿಯ ಮೂರನೇ ದಿನ ಮೆರವಣಿಗೆಯನ್ನು ನಡೆಸುತ್ತಾರೆ. ಕಟೀಲಿನ ತೃತೀಯ ದಿನದ ಮೆರವಣಿಗೆಗೆ ಈ ಬಾರಿ ಇಪ್ಪತ್ತೈದನೇ ವರ್ಷ. ಈ ಸಂಭ್ರಮಕ್ಕಾಗಿ ತಾ.೧೦ರಂದು ಹುಲಿವೇಷ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಕರಾವಳಿಯ ಹತ್ತು ತಂಡಗಳು ಸ್ಪರ್ಧೆಯಲ್ಲಿವೆ. ಅಂದು ಬೆಳಿಗ್ಗೆ ೮.೩೦ಕ್ಕೆ ಅರ್ಚಕ ಕಮಲಾದೇವಿ ಪ್ರಸಾದ ಆಸ್ರಣ್ಣ ಸ್ಪರ್ಧೆ ಉದ್ಘಾಟಿಸಲಿದ್ದಾರೆ. ಸಂಜೆ ೫.೩೦ಕ್ಕೆ ಕಿನ್ನಿಗೋಳಿಯಿಂದ ಕಟೀಲುವರೆಗೆ ಸ್ತಬ್ದಚಿತ್ರ ಸ್ಪರ್ಧೆ ನಡೆಯಲಿದ್ದು ೧೫ಟ್ಯಾಬ್ಲೋಗಳು ಸ್ಪರ್ಧೆಯಲ್ಲಿವೆ. ವೆಂಕಟರಮಣ ಆಸ್ರಣ್ಣ ಸ್ಪರ್ಧೆ ಉದ್ಘಾಟಿಸಲಿದ್ದಾರೆ. ವೈಭವದ ಮೆರವಣಿಗೆಯ ಬಳಿಕ ರಾತ್ರಿ ನಡೆಯಲಿರುವ ಸಭಾಕಾರ್ಯಕ್ರಮದಲ್ಲಿ ಪಿ.ಕೃಷ್ಣ ಭಟ್, ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಮಾಣಿಲದ ಮೋಹನದಾಸ ಸ್ವಾಮೀಜಿ, ಕಟೀಲಿನ ವಾಸುದೇವ ಆಸ್ರಣ್ಣ, ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತ ಆಸ್ರಣ್ಣ, ಕೊರ್ಗಿ ವೇಂಕಟೇಶ್ವರ ಉಪಾಧ್ಯಾಯ, ಸಾಂಸದ ನಳಿನ್ ಕುಮಾರ್, ಶಾಸಕ ಅಭಯಚಂದ್ರ ಮುಂತಾದ ಗಣ್ಯರ ಭಾಗವಹಿಸಲಿದ್ದಾರೆ. ಬಳಿಕ ತೆಂಕು ಬಡಗು ತಿಟ್ಟಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ಬಯಲಾಟವಿದೆ ಎಂದು ಪ್ರಕಟನೆ ಸಮಿತಿ ಅಧ್ಯಕ್ಷ ರಾಮಗೋಪಾಲ್ ತಿಳಿಸಿದ್ದಾರೆ.