Friday, June 25, 2010

ಕಟೀಲಿನಲ್ಲಿ ತ್ಯಾಜ್ಯ ವಿಲೇವಾರಿ ಕಾರ್ಯಾಗಾರ


ಘನ ಹಾಗೂ ದ್ರವ ತ್ಯಾಜ್ಯ ವಿಲೇವಾರಿಗೆ ದೊಡ್ಡ ಮೊತ್ತದ ಯೋಜನೆಗಳಿಗಾಗಿ ಕಾಯದೆ, ಆಯಾಯ ಸಂಸ್ಥೆಗಳೇ ವ್ಯವಸ್ಥೆ ಮಾಡಿಕೊಂಡಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಕಷ್ಟವಲ್ಲ ಎಂದು ದ.ಕ.ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಶಂಕರ್ ಹೇಳಿದರು. ಅವರು ಶುಕ್ರವಾರ (ಜೂನ್ ೨೫) ಕಟೀಲಿನ ಸೌಂದರ್ಯ ಪ್ಯಾಲೇಸಿನ ಸಭಾಂಗಣದಲ್ಲಿ ದ.ಕ.ಜಿ.ಪಂ., ಮೈಸೂರಿನ ಭಾಗೀರಥಿ ಸಂಸ್ಥೆ ಹಾಗೂ ಮೆನ್ನಬೆಟ್ಟು ಗ್ರಾಮ ಪಂಚಾಯತ್‌ಗಳ ಆಶ್ರಯದಲ್ಲಿ ಗ್ರಾ.ಪಂ.ಸದಸ್ಯರಿಗಾಗಿ ಆಯೋಜಿಸಲಾದ ಘನ ಹಾಗೂ ದ್ರವ ತ್ಯಾಜ್ಯಗಳ ವಿಲೇವಾರಿ ಕುರಿತು ಕಾರ್ಯಗಾರದಲ್ಲಿ ಮಾತನಾಡಿದರು. ಮೈಸೂರಿನಲ್ಲಿ ವ್ಯವಸ್ಥಿತ ರೀತಿಯಲ್ಲಿ ತ್ಯಾಜ್ಯ ವಿಲೇವಾರಿ ಆಗುವಂತೆ ಭಾಗೀರಥೀ ಸಂಸ್ಥೆ ಮಾಡಿರುವ ಕಾರ್‍ಯವನ್ನು ಗಮನಿಸಿದ್ದೇವೆ. ದಕ್ಷಿಣ ಕನ್ನಡದಲ್ಲೂ ಇದೇ ರೀತಿ ಗ್ರಾಮ ಪಂಚಾಯತ್‌ಗಳಲ್ಲಿ ಜಾಗೃತಿ ಮಾಡಿ, ಸ್ವಚ್ಛತೆಯ ಯೋಜನೆಗಳನ್ನು ಅನುಷ್ಟಾನಗೊಳಿಸಲಾಗುವುದು ಎಂದು ಶಿವಶಂಕರ್ ಹೇಳಿದರು.ಕಟೀಲು ಪ್ರದೇಶದಲ್ಲಿ ನೀರಿನ ಯೋಜನೆಗಳ ಸಂಖ್ಯೆ ಎಷ್ಟಿದೆ ಎಂದು ಶಿವಶಂಕರ್ ಸಭೆಯಲ್ಲಿ ಉಪಸ್ಥಿತರಿದ್ದ ಇಂಜಿನಿಯರೊಬ್ಬರಲ್ಲಿ ಮಾಹಿತಿ ಕೇಳಿದಾಗ ಇಂಜಿನಿಯರ್ ನಿರುತ್ತರರಾದರು. ಆಗ ಇಂಜಿನಿಯರುಗಳು ಹೀಗೆಯೇ; ಸಚಿವರು, ಉನ್ನತ ಇಲಾಖಾಧಿಕಾರಿಗಳು ಸಭೆಗಳಲ್ಲಿ ಮಾಹಿತಿ ಕೇಳಿದಾಗ ಸರಿಯಾಗಿ ಹೇಳುವುದಿಲ್ಲ, ತಪ್ಪು ತಪ್ಪು ಮಾಹಿತಿ ನೀಡಿ ಜಾರಿಕೊಳ್ಳುತ್ತಾರೆ. ಹಾಗಾಗಿ ಅನೇಕ ಯೋಜನೆಗಳು ಅನುಷ್ಟಾನಗೊಳ್ಳುವುದಿಲ್ಲ. ಹಾಳಾಗುತ್ತವೆ ಎಂದ ಶಿವಶಂಕರ್, ಕಟೀಲಿನಲ್ಲಿ ೧೬ನೀರಿನ ಯೋಜನೆಗಳಿವೆ ಎಂದು ತಾವೇ ಮಾಹಿತಿ ನೀಡಿದರು.ಕಟೀಲು ಜಿ.ಪಂ.ಸದಸ್ಯೆ ಶೈಲಾ ಸಿಕ್ವೇರಾ ಕಾರ್ಯಾಗಾರ ಉದ್ಘಾಟಿಸಿದರು. ಮಂಗಳೂರು ತಾ.ಪಂ. ಕಾರ್‍ಯನಿರ್ವಹಣಾಧಿಕಾರಿ ತಾಕತ್ ರಾವ್, ಮಾಧುರಿ, ಕಟೀಲು ದೇಗುಲದ ಪ್ರಬಂಧಕ ವಿಶ್ವೇಶರಾವ್, ಮೆನ್ನಬೆಟ್ಟು ಗ್ರಾ.ಪಂ.ಅಧ್ಯಕ್ಷೆ ಶೈಲಾ ಶೆಟ್ಟಿ, ಕಿನ್ನಿಗೋಳಿ ಗ್ರಾ.ಪಂ.ಅಧ್ಯಕ್ಷ ದೇವಪ್ರಸಾದ್, ಸಿ.ಎಂ.ಕುಲಕರ್ಣಿ, ವಿಶ್ವನಾಥ ಪೂಜಾರಿ, ಚಂದ್ರಶೇಖರ್, ಸೌಂದರ್‍ಯ ಪ್ಯಾಲೇಸ್‌ನ ಮೇನೇಜರ್ ರೆಬೆಲ್ಲೋ ಮತ್ತಿತರರಿದ್ದರು. ಸರೋಜಿನಿ, ರೇವತಿ ಪ್ರಾರ್ಥಿಸಿದರು. ಮೆನ್ನಬೆಟ್ಟು ಗ್ರಾ.ಪಂ.ಕಾರ್ಯದರ್ಶಿ ಗಣೇಶ ಬಡಿಗೇರ ಸ್ವಾಗತಿಸಿದರು. ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

No comments:

Post a Comment