Wednesday, June 9, 2010

ಕಟೀಲು ಸೀರೆ ಕಾಣಿಕೆಯ ದಾಖಲೆ


ಕಟಿಲಿನ ಪುರಾಣ ಪ್ರಸಿದ್ಧ ಶ್ರೀ ದುರ್ಗಾಪರಮೇಶ್ವರೀ ದೇಗುಲಕ್ಕೆ ಕಳೆದ ವರ್ಷದ ಎಪ್ರಿಲ್‌ನಿಂದ ಈ ವರ್ಷದ ಮಾರ್ಚ್‌ವರೆಗಿನ ಒಂದು ವರ್ಷದ ಅವಧಿಯಲ್ಲಿ ದಾಖಲೆಯ ೧೫೩೮೦ರಷ್ಟು ಸೀರೆಗಳೂ, ಸುಮಾರು ಮೂರು ಸಾವಿರದಷ್ಟು ಕೆಂಪು ಪಟ್ಟೆ ಕಣಗಳೂ ಭಕ್ತರಿಂದ ಕಾಣಿಕೆ ರೂಪದಲ್ಲಿ ಸಮರ್ಪಣೆಯಾಗಿವೆ. ಕಳೆದ ಎಪ್ರಿಲ್ ತಿಂಗಳಲ್ಲಿ ಸುಮಾರು ೨ಸಾವಿರ ಹಾಗೂ ಮೇಯ ಒಂದೇ ತಿಂಗಳಲ್ಲಿ ಎರಡೂವರೆ ಸಾವಿರದಷ್ಟು ಸೀರೆಗಳು ಸಮರ್ಪಣೆಯಾಗಿರುವುದು ಕೂಡ ದಾಖಲೆಯೆನಿಸಿದೆ. ಮೇ ತಿಂಗಳ ಶುಕ್ರವಾರಗಳಂದು ಇನ್ನೂರರಷ್ಟು ಸೀರೆಗಳು ನೀಡಲ್ಪಟ್ಟಿರುವುದು ವಿಶೇಷ.ಕಟೀಲು ದೇಗುಲಕ್ಕೆ ಭಕ್ತರು ತಮ್ಮ ಇಷ್ಟಾರ್ಥ ಸಿದ್ದಿಗೆ, ಮದುವೆ ಮುಂತಾದ ಶುಭ ಸಮಾರಂಭಗಳ ಸಂದರ್ಭದಲ್ಲಿ, ಜವುಳಿ ಖರೀದಿಸುವ ಸಂದರ್ಭ, ಆರೋಗ್ಯ ಮತ್ತಿತರ ಕಾರಣಗಳಿಗಾಗಿ ಹರಕೆ ಹೇಳಿಕೊಂಡು ಸೀರೆ ಸಮರ್ಪಣೆ ಮಾಡುತ್ತಾರೆ. ಸೀರೆಗಳ ಮೌಲ್ಯ ಸುಮಾರು ಇನ್ನೂರು ರೂಪಾಯಿಯಿಂದ ಹನ್ನೆರಡು ಸಾವಿರ ರೂ.ವರೆಗಿನವರೆಗೆ ಇದೆ ಎಂದು ಲೆಕ್ಕ ಹಾಕಲಾಗಿದೆ. ಕಟೀಲು ದೇಗುಲದಲ್ಲಿ ದೇವರಿಗೆ ನೀಡಲಾದ ಸೀರೆಗಳನ್ನು ಏಲಂ ಮಾಡುವುದಿಲ್ಲ. ಬದಲಾಗಿ ವಾಪಾಸು ಭಕ್ತರಿಗೇ ಪ್ರಸಾದ ರೂಪದಲ್ಲಿ ನೀಡುವುದು ಗಮನೀಯ.ನವರಾತ್ರಿಯ ಲಲಿತಾ ಪಂಚಮಿಯ ದಿನದಂದು ಭೋಜನ ಪ್ರಸಾದ ಸ್ವೀಕರಿಸುವ ಸಂದರ್ಭ ಮಹಿಳಾ ಭಕ್ತರಿಗೆ ಶ್ರೀ ದೇವಿಯ ಶೇಷವಸ್ತ್ರವನ್ನು ನೀಡಲಾಗುತ್ತದೆ. ಕಳೆದ ನವರಾತ್ರಿಯ ದಿನ ಇಪತ್ತು ಸಾವಿರಕ್ಕೂ ಹೆಚ್ಚು ಭಕ್ತರಿಗೆ ಸೀರೆಗಳನ್ನು ರವಿಕೆಕಣಗಳನ್ನಾಗಿ ಮಾಡಿ ವಿತರಿಸಲಾಗಿತ್ತು. ಅಲ್ಲದೆ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಹತ್ತು ಸಾವಿರ ಸೀರೆಗಳನ್ನು ಕೊಂಡೊಯ್ದು ನೀಡಲಾಗಿತ್ತು. ದೇಗುಲಕ್ಕೆ ವಿಶೇಷ ಕಾಣಿಕೆ, ಕೊಡುಗೆಗಳನ್ನು ನೀಡಿದವರಿಗೆ, ದೇಗುಲಕ್ಕೆ ಭೇಟಿ ನೀಡುವ ರಾಜಕಾರಣಿ, ಗಣ್ಯರಿಗೆ, ಕಲಾವಿದರಿಗೆ ದೇವಿಯ ಶೇಷವಸ್ತ್ರವನ್ನು ಗೌರವ ಹಾಗೂ ಪ್ರಸಾದ ರೂಪವಾಗಿ ನೀಡಲಾಗುತ್ತದೆ. ಅಲ್ಲದೆ ನಾಲ್ಕು ಯಕ್ಷಗಾನ ಮೇಳಗಳಿಗೆ ವೇಷಕ್ಕೆ, ಕಲಾವಿದರಿಗೆ ಪ್ರಸಾದ ರೂಪದಲ್ಲೂ ನೀಡಲಾಗುತ್ತದೆ. ಹೀಗೆ ಒಂದು ಸಾವಿರದಷ್ಟು ಸೀರೆಗಳನ್ನು ನೀಡಲಾಗುತ್ತದೆ. ಭಕ್ತರು ತಾವೇ ಖರೀದಿಸಿ ತಂದು ಸೀರೆಗಳನ್ನು ನೀಡಬಹುದು. ಅನುಕೂಲವಾಗುವಂತೆ ದೇಗುಲದಲ್ಲಿಯೂ ಸೀರೆ ಮಾರಾಟ ಕೌಂಟರ್ ತೆರೆಯಲಾಗಿದೆ. ದೇಗುಲದ ಒಳಗೆ ದೇವರ ಎದುರು ಪ್ರಾರ್ಥಿಸಿ, ಪ್ರಸಾದ ಸ್ವೀಕರಿಸಿ, ಕಚೇರಿಯಲ್ಲಿ ಮೂವತ್ತು ರೂ. ಅಲಂಕಾರ ಕಾಣಿಕೆ ನೀಡಿ ಸಮರ್ಪಿಸಬಹುದಾಗಿದೆ.ವರ್ಷದಿಂದ ವರ್ಷಕ್ಕೆ ಕಟೀಲು ದೇವರಿಗೆ ಭಕ್ತರು ನೀಡುತ್ತಿರುವ ಸೀರೆಗಳ ಸಂಖ್ಯೆ ಏರುತ್ತಲೇ ಇರುವುದು ಕ್ಷೇತ್ರದ ಕಾರ್ಣಿಕಕ್ಕೆ ಉದಾಹರಣೆಯಾಗಿದೆ. ಮತ್ತು ಆ ಸೀರೆಗಳು ಸದುಪಯೋಗವಾಗುತ್ತಿರುವುದೂ ಹೌದು.

No comments:

Post a Comment