Saturday, November 20, 2010

ಕಟೀಲಿನಲ್ಲಿ ಬಯಲು ರಂಗಮಂಟಪಕ್ಕೆ ಶಿಲಾನ್ಯಾಸ


ಸರಕಾರ ಎಲ್ಲ ಸವಲತ್ತುಗಳನ್ನು ಕೊಟ್ಟರೂ ಇಂಗ್ಲಿಷ್ ವ್ಯಾಮೋಹಕ್ಕೆ ಕನ್ನಡ ಶಾಲೆಗಳು ಮುಚ್ಚುತ್ತಿದ್ದು, ಕರಾವಳಿ ಜಿಲ್ಲೆಯಲ್ಲಿ ಮುಂದಿನ ಮೂರು ವರುಷಗಳಲ್ಲಿ ಶೇಕಡಾ ಇಪ್ಪತ್ತೈದರಷ್ಟು ಶಾಲೆಗಳು ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚುವ ಹಂತದಲ್ಲಿವೆ. ಶಿಕ್ಷಣದ ವ್ಯವಸ್ಥೆಯಲ್ಲಿ ಬದಲಾವಣೆ ಅಗತ್ಯವೇ ಎಂಬ ಚಿಂತನೆ ಆಗಬೇಕಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.ಅವರು ಶನಿವಾರ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪದವೀ ಪೂರ್ವ ಕಾಲೇಜಿನಲ್ಲಿ ರಜತ ಮಹೋತ್ಸವ ನೆನಪಿಗಾಗಿ ಸುಮಾರು ರೂ.೫೦ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಬಯಲು ರಂಗಮಂಟಪದ ಶಿಲಾನ್ಯಾಸ ಸಮಾರಂಭದಲ್ಲಿ ಮಾತನಾಡಿದರು.ಅವರು ಕಳ್ಳರು ಇವರು ಖದೀಮರು ಎಂಬುದಕ್ಕಿಂತ ನಾವೆಷ್ಟು ಪ್ರಾಮಾಣಿಕರಾಗಿದ್ದೇವೆ ಎಂಬುದು ಮುಖ್ಯ. ನಾವೆಲ್ಲರೂ ದಕ್ಷರಾಗಿದ್ದರೆ ವ್ಯವಸ್ಥೆಯೂ ಸರಿಯಾಗಿರುತ್ತದೆ. ಲೋಕಾಯುಕ್ತದ ಅಗತ್ಯವೂ ಇರುವುದಿಲ್ಲ ಎಂದು ಹೇಳಿದ ಶ್ರೀನಿವಾಸ ಪೂಜಾರಿ ಶಿಕ್ಷಕರು ಪುಸ್ತಕದ ಪಾಠವನ್ನಷ್ಟೇ ಹೇಳದೆ ಪರಿಸರದ ಬಗ್ಗೆಯೂ ಹೇಳಿಕೊಡಬೇಕು ಎಂದು ಹೇಳಿದರು.ಶಿಲಾನ್ಯಾಸಗೈದ ಸಚಿವ ಕೃಷ್ಣ ಪಾಲೇಮಾರ್, ರಂಗಮಂದಿರಕ್ಕೆ ಹತ್ತು ಲಕ್ಷ ರೂ.ಗಳ ಅನುದಾನದ ಭರವಸೆ ನೀಡಿದರು. ಇನ್ನು ಮಕ್ಕಳು ತಾರಾಲಯ ನೋಡಲು ಬೆಂಗಳೂರಿಗೇ ಹೋಗಬೇಕಿಲ್ಲ. ಪಿಲಿಕುಳದಲ್ಲಿ ೧೫.೩೦ ಕೋಟಿ ರೂ.ವೆಚ್ಚದಲ್ಲಿ ತಾರಾಲಯವನ್ನು ಸ್ಥಾಪಿಸಲಾಗುವುದು. ಹೋಬಳಿ ಮಟ್ಟದಲ್ಲಿ ಪಡೆಯಲಾಗುತ್ತಿದ್ದ ಹವಾಮಾನದ ಮಾಹಿತಿಯನ್ನು ಗ್ರಾಮಮಟ್ಟದಿಂದಲೂ ಪಡೆಯುವ ಪ್ರಯತ್ನ ನಡೆದಿದೆ ಎಂದರು.ರಂಗಮಂದಿರಕ್ಕೆ ಐದು ಲಕ್ಷ ರೂ.ಗಳ ಅನುದಾನ ನೀಡುವುದಾಗಿ ಹೇಳಿದ ಸಾಂಸದ ನಳಿನ್ ಕುಮಾರ್, ಕಟೀಲಿನಂತಹ ಗ್ರಾಮೀಣ ಪ್ರದೇಶದಲ್ಲಿ ಅತ್ಯುತ್ತಮ ಮಟ್ಟದಲ್ಲಿ ಶಿಕ್ಷಣ ನೀಡುತ್ತಿರುವ ಇಲ್ಲಿ ಡೊನೇಶನ್ ರಹಿತ ಶಿಕ್ಷಣ ನೀಡುತ್ತಿರುವುದು ಮಹತ್ವದ ಸಂಗತಿಯೆಂದರು. ಶಾಸಕ ಅಭಯಚಂದ್ರ ಕೂಡ ರೂ.೫ಲಕ್ಷ ರೂ.ಗಳ ಅನುದಾನದ ಆಶ್ವಾಸನೆ ನೀಡಿ, ರಂಗಮಂದಿರ ಶಿಕ್ಷಣ ಸಂಸ್ಥೆ ಹಾಗೂ ದೇಗುಲದ ಸಾಂಸ್ಕೃತಿಕ ಚಟುವಟಿಕೆಗಳಿಗೆ ಪೂರಕವಾಗಲಿ. ಒಳಾಂಗಣ ಕ್ರೀಡಾಂಗಣವೂ ಈ ರಂಗಮಂದಿರಲ್ಲಿದ್ದರೆ ಕ್ರೀಡಾಪಟುಗಳ ಬೆಳವಣಿಗೆಗೆ ಪೂರಕವಾಗಲಿದೆ ಎಂದರು.ಕಟೀಲು ದೇಗುಲದ ಅರ್ಚಕರಾದ ವಾಸುದೇವ ಆಸ್ರಣ್ಣ, ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ಮುಂಬೈ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ತುಕಾರಾಮ ಶೆಟ್ಟಿ, ಭಾಸ್ಕರ ದೇವಸ್ಯ, ಸಂತೋಷ್ ಶೆಟ್ಟಿ, ರಜತ ಮಹೋತ್ಸವ ಸಮಿತಿಯ ಚಿತ್ತರಂಜನ ರೈ, ಶಿಕ್ಷಕ ರಕ್ಷಕ ಸಂಘದ ವೈ.ಮೋನಪ್ಪ ಶೆಟ್ಟಿ, ಜಿ.ಪಂ.ಸದಸ್ಯ ಶೈಲಾ ಸಿಕ್ವೇರ, ಮೆನ್ನಬೆಟ್ಟು ಗ್ರಾ.ಪಂ.ಅಧ್ಯಕ್ಷೆ ಶೈಲಾ ಶೆಟ್ಟಿ ಮತ್ತಿತರರಿದ್ದರು.ಪ್ರಾಚಾರ್‍ಯ ಜಯರಾಮ ಪೂಂಜ ಸ್ವಾಗತಿಸಿದರು. ಉಪಪ್ರಾಚಾರ್‍ಯ ಸುರೇಶ್ ಭಟ್ ವಂದಿಸಿದರು. ಸಾಯಿನಾಥ ಶೆಟ್ಟಿ ಕಾರ್‍ಯಕ್ರಮ ನಿರೂಪಿಸಿದರು.ಕಟೀಲು ಪ.ಪೂ.ಕಾಲೇಜಿನ ರೂ.೫೦ಲಕ್ಷ ರೂ. ರಂಗಮಂದಿರಕ್ಕೆ ಕೃಷ್ಣ ಪಾಲೇಮಾರ್, ನಳಿನ್ ಕುಮಾರ್, ಅಭಯಚಂದ್ರ, ಕಟೀಲಿನ ಅರ್ಚಕರು ಶಿಲಾನ್ಯಾಸಗೈದರು.

No comments:

Post a Comment