Sunday, August 11, 2013

ಬನ್ನಂಜೆಗೆ ಪ್ರಜ್ಞಾದೀಪ್ತಿ ಪ್ರಶಸ್ತಿ, ವೇಙ್ಕಟೇಶ್ವರ ಉಪಾಧ್ಯಾಯ ಪ್ರತಿಷ್ಠಾನಕಟೀಲು : ಅನೇಕ ಪುರೋಹಿತರು ಸಂಸ್ಕೃತ ಜ್ಞಾನವಿಲ್ಲದೆ, ಮಂತ್ರಗಳನ್ನು ಕಂಠಪಾಠ ಮಾಡಿ ಉಚ್ಛರಿಸುತ್ತಾರೆ. ಇದು ಸರಿಯಲ್ಲ. ಹಾಗಾಗಿ ಪುರೋಹಿತರನ್ನು ತಿದ್ದಬೇಕಾಗಿದೆ ಎಂದು ಹೇಳಿದವರು ಬನ್ನಂಜೆ ಗೋವಿಂದಾಚಾರ್ಯರು.
 ಆ.10;
ಕಟೀಲು ದೇಗುಲದ ಸರಸ್ವತೀ ಸದನದಲ್ಲಿ ಕೊರ್ಗಿ ವೇಙ್ಕಟೇಶ್ವರ ಉಪಾಧ್ಯಾಯ ಪ್ರತಿಷ್ಠಾನ ಕೊಡಮಾಡಿದ ಪ್ರಥಮ ಪ್ರಜ್ಞಾದೀಪ್ತಿ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಅವರು ಇಂಗ್ಲಿಷ್ ಮಾಧ್ಯಮದ ಕಲಿಕೆಯಿಂದ ಮಕ್ಕಳು ಸರಿಯಾಗಿ ಕನ್ನಡವನ್ನೂ ಮಾತನಾಡುತ್ತಿಲ್ಲ, ಇಂಗ್ಲಿಷ್‌ನಲ್ಲೂ ಮಾತನಾಡುತ್ತಿಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ. ಪತ್ರಿಕೋದ್ಯಮ ಅಪಶಬ್ದಗಳನ್ನು ಸೃಷ್ಟಿಸುವ ಕಾರ್ಖಾನೆಯಾಗುತ್ತಿದೆ. ಭಾಷಾ ಶುದ್ಧತೆ, ವಿಚಾರಶುದ್ಧತೆಗಾಗಿ ನಿಷ್ಟುರವಾದಿಯಾಗಿದ್ದ ಜ್ಞಾನಿ ಉಪಾಧ್ಯಾಯರ ಹೆಸರಿನಲ್ಲಿ ನೀಡುತ್ತಿರುವ ಪ್ರಜ್ಞಾದೀಪ್ತಿ ಪ್ರಶಸ್ತಿಯನ್ನು ಪ್ರೀತಿಗಾಗಿ ಸ್ವೀಕರಿಸುತ್ತಿದ್ದೇನೆ ಎಂದ ಅವರು ತನ್ನ ಬಾಲ್ಯದಲ್ಲಿ ಆಶುಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿದ್ದನ್ನು ನೆನಪಿಸಿಕೊಂಡರು. ಗೆಳೆಯರು ಒತ್ತಾಯಿಸಿ ಎಳೆದೊಯ್ದು ಆಶುಭಾಷಣ ಸ್ಪರ್ಧೆಯೊಂದರ ವೇದಿಕೆ ಹತ್ತಿಸಿದರು. ಶಿವರಾಮ ಕಾರಂತರ ಕಾದಂಬರಿಗಳು ವಿಷಯ. ಮೂರು ನಿಮಿಷದ ಅವಧಿ. ಕಾರಂತರ ಅಷ್ಟೂ ಕಾದಂಬರಿಗಳನ್ನು ಓದಿಕೊಂಡಿದ್ದ ನನಗೆ ಮಾತು ಬಾರದು. ಸನ್ಮಾನ್ಯ ತೀರ್ಪುಗಾರರೆ, ಸಭಾಸದರೆ ನಮಸ್ಕಾರಗಳು. ಕಾರಂತರು ಪ್ರಸಿದ್ಧ ಕಾದಂಬರಿಕಾರರು ಎಂದಷ್ಟೇ ಹೇಳಿ ಭಾಷಣ ಮುಗಿಸಿದೆ. ಅನಂತರ ಅರಿವಾಯಿತು, ವಿಷಯ ತಿಳಿದಿದ್ದರೆ ಸಾಲದು. ಹೇಳಲು ಧೈರ‍್ಯ ಬೇಕು ಎಂಬುದು.
ಉಪಾಧ್ಯಾಯ ಪ್ರತಿಷ್ಠಾನವನ್ನು ಕಟೀಲು ದೇಗುಲದ ಮೊಕ್ತೇಸರ ವಾಸುದೇವ ಆಸ್ರಣ್ಣ ಉದ್ಘಾಟಿಸಿದರು.
ಈಶ್ವರಯ್ಯ ಬನ್ನಂಜೆಯವರನ್ನು ಅಭಿನಂದಿಸಿದರು. ಕೊರ್ಗಿ ಉಪಾಧ್ಯಾಯರ ಸಂಸ್ಮರಣೆಯನ್ನು ಮಾಡಿದ ಮೇಲುಕೋಟೆ ಉಮಾಕಾಂತ ಭಟ್, ಯಕ್ಷಗಾನ, ಪೌರೋಹಿತ್ಯ, ಸಾಹಿತ್ಯ ಕ್ಷೇತ್ರಕ್ಕೆ ಉಪಾಧ್ಯಾಯರ ಕೊಡುಗೆ ದೊಡ್ಡದು. ಅವರ ವಿದ್ವತನ್ನು ಗುರುತಿಸುವ ಕಾರ‍್ಯ ಆಗಿಲ್ಲ ಎಂದರು.
ಕಲ್ಲಾಡಿ ದೇವೀಪ್ರಸಾದ ಶೆಟ್ಟಿ, ಡಾ.ಭಾಸ್ಕರಾನಂದ ಕುಮಾರ್, ದೇಗುಲದ ಆಡಳಿತಾಧಿಕಾರಿ ಶಾನಾಡಿ ಅಜಿತ್ ಕುಮಾರ ಹೆಗ್ಡೆ, ಡಾ.ಶಶಿಕುಮಾರ್, ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ, ಅನಂತಪದ್ಮನಾಭ ಆಸ್ರಣ್ಣ ಮತ್ತಿತರರಿದ್ದರು. ಹಿರಣ್ಯ ವೇಂಕಟೇಶ್ವರ ಭಟ್ ಕಾರ‍್ಯಕ್ರಮ ನಿರೂಪಿಸಿದರು. ಪಂಜ ಭಾಸ್ಕರ ಭಟ್ ಸ್ವಾಗತಿಸಿದರು. ಹರಿನಾರಾಯಣದಾಸ ಆಸ್ರಣ್ಣ ವಂದಿಸಿದರು. ತಾಳಮದ್ದಲೆ, ಭಾವನಾ ತಂಡದಿಂದ ಯೇಗ್ದಾಗೆಲ್ಲಾ ಐತೆ ನಾಟಕ ಪ್ರದರ್ಶನಗೊಂಡಿತು.
ಚಿತ್ರ ಈಮೆಲ್No comments:

Post a Comment