Friday, May 24, 2013

ತಾ.೨೫ :ಕಟೀಲು ಮೇಳಗಳ ತಿರುಗಾಟ ಮುಕ್ತಾಯ


ತಾ.೨೫ :ಕಟೀಲು ಮೇಳಗಳ ತಿರುಗಾಟ ಮುಕ್ತಾಯ
ರಜಾಕಾಲದಲ್ಲಿ ಹಿಮ್ಮೇಳ ಕಾರ‍್ಯಾಗಾರ, ಕಲಾವಿದರು ಸಿಕ್ಕರೆ ಆರನೇ ಮೇಳ
ಕಟೀಲು : ಇಲ್ಲಿನ ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮೇಳಗಳ ಈ ವರ್ಷದ ತಿರುಗಾಟ ಪತ್ತನಾಜೆಯ ಮರುದಿನ (ತಾ.೨೫) ಮುಗಿಯಲಿದೆ. ಮುಂದಿನ ತಿರುಗಾಟ ದೀಪಾವಳಿಯ ಅನಂತರ ಅಂದರೆ ನವೆಂಬರ್ ೭ರಂದೇ ಆರಂಭವಾಗಲಿದೆ. ಈವರೆಗೆ ದೇಗುಲದಲ್ಲಿ ದೀಪೋತ್ಸವದ ಬಳಿಕ ಮೇಳಗಳ ತಿರುಗಾಟ ಆರಂಭವಾಗುತ್ತಿದ್ದರೆ ಈ ಬಾರಿ ಸುಮಾರು ಇಪ್ಪತ್ತು ದಿನಗಳ ಮುಂಚಿತವಾಗಿಯೇ ತಿರುಗಾಟ ಆರಂಭವಾಗಲಿದ್ದು, ೧೧೦ ಆಟಗಳು ಹೆಚ್ಚುವರಿಯಾಗಿ ಸಿಗಲಿವೆ. ಇದರಿಂದ ಹರಕೆಯಾಟ ಆಡಿಸುವ ಭಕ್ತರಿಗೆ ಪ್ರಯೋಜನವಾಗಲಿದೆ. ಮುಂದಿನ ಇಪ್ಪತ್ತೈದು ವರ್ಷಗಳವರೆಗೆ ಹತ್ತು ಸಾವಿರಕ್ಕಿಂತಲೂ ಹೆಚ್ಚು ಹರಕೆಯಾಟಗಳು ಕಟೀಲು ಮೇಳಗಳಿಗೆ ಬುಕ್ಕಿಂಗ್ ಆಗಿರುವುದು ದಾಖಲೆಯಾಗಿದೆ.
ಯಕ್ಷಗಾನ ಕಲಾವಿದರ ಕೊರತೆ ಇರುವುದರಿಂದ ಮುಂದಿನ ವರುಷಕ್ಕೆ ಆರನೆಯ ಮೇಳ ತಿರುಗಾಟ ಪ್ರಾರಂಭಿಸುವ ಯೋಚನೆಗೆ ಒಂದಿಷ್ಟು ಹಿನ್ನಡೆಯಾಗಿದ್ದರೂ ಹೆಚ್ಚುವರಿ ಕಲಾವಿದರ ಸೇರ್ಪಡೆಯಾದರೆ ಆರನೆಯ ಮೇಳ ಕಟೀಲಿನಿಂದ ಹೊರಡುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.
ಹಿಮ್ಮೇಳ ಕಾರ‍್ಯಾಗಾರ
ಎರಡು ವರುಷಗಳ ಹಿಂದೆ ಶ್ರೀ ದೇವೀ ಮಾಹಾತ್ಮ್ಯ ಕಾರ‍್ಯಾಗಾರ ನಡೆದಿದ್ದು, ಈ ಬಾರಿ ಕಟೀಲಿನಲ್ಲೇ ಜೂನ್ ೯ಮತ್ತು ೧೦ರಂದು ಹಿಮ್ಮೇಳ ಕಾರ‍್ಯಾಗಾರವನ್ನು ಆಯೋಜಿಸಲಾಗಿದೆ. ಈ ಮೂಲಕ ಕಟೀಲು ಮತ್ತು ತೆಂಕುತಿಟ್ಟಿನ ಇತರ ಮೇಳಗಳ ಹಿಮ್ಮೇಳವನ್ನು ಇನ್ನಷ್ಟು ಸುಂದರಗೊಳಿಸುವ ಪ್ರಯತ್ನ ನಡೆಯಲಿದೆ. ಈ ಕಾರ‍್ಯಾಗಾರಕ್ಕೆ ಕಟೀಲು ದೇಗುಲದೊಂದಿಗೆ ಯಕ್ಷಗಾನ ಬಯಲಾಟ ಅಕಾಡಮಿ ಸಹಯೋಗ ನೀಡಲಿದೆ.
ಕಟೀಲು ಮೇಳಗಳ ಕಲಾವಿದರಿಗೆ ಮಳೆಗಾಲದ ರಜಾ ಕಾಲದಲ್ಲೂ ಗೌರವ ಧನವನ್ನು ನೀಡುತ್ತಿರುವುದು ವಿಶೇಷವಾಗಿದೆ. ಯಕ್ಷಗಾನಾಸಕ್ತ ಉದ್ಯಮಿಗಳು ಸೇರಿ ಸಂಘಟಿಸುವ ಯಕ್ಷ ಧರ್ಮ ಬೋಧಿನೀ ಟ್ರಸ್ಟ್ ಐದು ಮೇಳಗಳಿಗೆ ನೀಡಿರುವ ಬಸ್ಸು ಹಾಗೂ ರಂಗಸ್ಥಳಗಳಿಂದ ಸಂಗ್ರಹಿತವಾಗುವ ಬಾಡಿಗೆ ಮೊತ್ತವನ್ನು ರಜಾಕಾಲದ ಗೌರವ ಧನ ನೀಡಲು ಬಳಸಲಾಗುತ್ತಿದ್ದು ಸುಮಾರು ಹದಿನೈದು ಲಕ್ಷ ರೂಪಾಯಿಗಳನ್ನು ಇದಕ್ಕಾಗಿ ವ್ಯಯಿಸಲಾಗುತ್ತದೆ. ಮೇಳಗಳ ಎಲ್ಲ ಕಲಾವಿದರಿಗೂ ಆರೋಗ್ಯ ವಿಮೆಯನ್ನೂ ಮಾಡಲಾಗಿದೆ.


No comments:

Post a Comment