Saturday, November 19, 2011

ಕಟೀಲು ೫ ಮೇಳಗಳ ತಿರುಗಾಟ

ಕಟೀಲು : ಯಕ್ಷಗಾನ ನಂಬಿ ಬದುಕು ಕಷ್ಟ ಎಂಬ ತರ್ಕ ಜಾರಿಯಲ್ಲಿರುವಂತೆಯೇ ಕಲಾವಿದರಿಗೆ ಮತ್ತಷ್ಟು ಭದ್ರತೆ ಒದಗಿಸಿ, ಯಕ್ಷಗಾನವನ್ನು ವೃತ್ತಿಯನ್ನಾಗಿ ಧೈರ‍್ಯವಾಗಿ ಸ್ವೀಕರಿಸಬಹುದು ಎಂಬ ಭರವಸೆ ಹುಟ್ಟಿಸುವ ಕೆಲಸಗಳು ಕಟೀಲು ಮೇಳಗಳಲ್ಲಿ ವರುಷದಿಂದ ವರುಷಕ್ಕೆ ಹೆಚ್ಚುತ್ತಿದ್ದು, ಈ ಬಾರಿ ಎಲ್ಲ ಕಲಾವಿದರ ಕುಟುಂಬಗಳಿಗೆ ಆರೋಗ್ಯ ವಿಮೆ ಮಾಡುವ ಚಿಂತನೆ ಮಾಡಲಾಗಿದೆ.
ಈಗಾಗಲೇ ಐದೂ ಮೇಳಗಳ ಇನ್ನೂರೈವತ್ತು ಕಲಾವಿದರಿಗೆ ಸಣ್ಣಪುಟ್ಟ ಔಷಧಿ ಖರ್ಚಿಗಾಗಿ ಕ್ಷೇಮನಿಧಿಯಿಂದ ಆರ್ಥಿಕ ಸಹಾಯ ನೀಡಲಾಗುತ್ತಿತ್ತು. ಯಕ್ಷಗಾನ ಬಯಲಾಟ ಆಡಿಸುವವರ ವೀಳ್ಯದಲ್ಲಿ ೩೦೦ರೂ.ಗಳನ್ನು ಕಲಾವಿದರ ಕ್ಷೇಮನಿಧಿಗೆಂದು ತೆಗೆದಿರಿಸಲಾಗುತ್ತಿತ್ತು. ಕಳೆದ ವರುಷ ಸುಮಾರು ಒಂದು ಲಕ್ಷ ರೂ.ಗಳನ್ನು ಕಲಾವಿದರ ಸಣ್ಣಪುಟ್ಟ ಚಿಕಿತ್ಸೆಗಾಗಿ ಖರ್ಚು ಮಾಡಲಾಗಿದೆ. ಇದಲ್ಲದೆ ಕಟೀಲು ಮೇಳಗಳ ಭಕ್ತರು ಸ್ಥಾಪಿಸಿರುವ ಯಕ್ಷಧರ್ಮಬೋಧಿನೀ ಟ್ರಸ್ಟ್ ಬಾಡಿಗೆಗೆ ನೀಡುವ ಬಸ್ಸು ಮತ್ತು ರಂಗಸ್ಥಳಗಳಿಂದ ಬಂದ ಆದಾಯದ ೧೬ಲಕ್ಷ ರೂ.ಗಳನ್ನು ಎಲ್ಲ ಕಲಾವಿದರ ಆರು ತಿಂಗಳ ರಜಾಕಾಲದ ಗೌರವಧನ ನೀಡಲು ಬಳಸಲಾಗಿದೆ. ಹೀಗೆ ಕಲಾವಿದರಿಗೆ ಒಂದಿಷ್ಟು ಧೈರ‍್ಯ ತುಂಬುವ ಕೆಲಸವನ್ನು ಈ ಬಾರಿ ಇನ್ನಷ್ಟು ಹೆಚ್ಚಿಸುವ ಪ್ರಯತ್ನ ನಡೆಸಲಾಗುತ್ತಿದೆ.
ಕಟೀಲಿನ ಐದು ಮೇಳಗಳಲ್ಲಿ ೧೨೫ಕಲಾವಿದರು, ೧೨೫ ಇತರ ಕರ್ಮಚಾರಿಗಳಿದ್ದಾರೆ. ಅಂದರೆ ಒಟ್ಟು ೨೫೦ಮಂದಿ. ಪ್ರತಿಯೊಬ್ಬನ ಕುಟುಂಬದ ಐದು ಮಂದಿ ಸದಸ್ಯರಿಗೆ ಪ್ರಯೋಜನವಾಗುವಂತೆ ಆರೋಗ್ಯ ವಿಮೆ ಮಾಡುವ ಚಿಂತನೆ ಮಾಡಲಾಗಿದೆ.
ಉಡುಪಿಯ ಕಲಾರಂಗದವರು ವಿವಿಧ ಮೇಳಗಳ ೨೦೦ಮಂದಿಗೆ ಈಗಾಗಲೇ ಆರೋಗ್ಯ ವಿಮೆ ಮಾಡಿದ್ದು, ಕಳೆದ ವರ್ಷ ಒಂದು ಲಕ್ಷ ರೂ.ಗಳಷ್ಟು ವಿಮೆಯನ್ನು ವಿವಿಧ ಕಲಾವಿದರು ಪಡೆದಿದ್ದಾರೆ. ಇದೇ ಮಾದರಿಯಲ್ಲಿ ಕಟೀಲು ಮೇಳಗಳ ಎಲ್ಲ ಕಲಾವಿದರಿಗೆ ಆರೋಗ್ಯವಿಮೆ ಮಾಡುವ ಬಗ್ಗೆ ಯೋಚನೆ ಮಾಡಲಾಗಿದೆ. ಇದರಿಂದ ಕಲಾವಿದ ಅಥವಾ ಕಲಾವಿದನ ಮನೆಯ ಐದು ಮಂದಿಯಲ್ಲಿ ಒಬ್ಬರು ಸುಮಾರು ರೂ.ಮೂವತ್ತು ಸಾವಿರದಷ್ಟು ಆಸ್ಪತ್ರೆ ಖರ್ಚು ಪಡೆಯುವ ಅವಕಾಶವಿದೆ. ಯಕ್ಷಗಾನಾಭಿಮಾನಿಗಳು ಅಥವಾ ಕಟೀಲು ಮೇಳಗಳ ಆಟವಾಡಿಸುವವರು ಒಂದಿಷ್ಟು ಕಲಾವಿದರ ಆರೋಗ್ಯವಿಮೆಯ ಪ್ರಾಯೋಜಕತ್ವ ಪಡೆದು ತಮ್ಮ ಕಲಾಪ್ರೀತಿ, ಭಕ್ತಿಗಳನ್ನು ವ್ಯಕ್ತಪಡಿಸಲು ಅವಕಾಶವಿದೆ.

ದೇವೀ ಮಾಹಾತ್ಮ್ಯೆಯಲ್ಲಿ ಒಂದಿಷ್ಟು ಬದಲಾವಣೆ
ಆಗಸ್ಟ್ ತಿಂಗಳಲ್ಲಿ ನಡೆದ ದೇವೀಮಾಹಾತ್ಮ್ಯೆ ಕಾರ‍್ಯಾಗಾರದಲ್ಲಿ ಚರ್ಚಿತವಾದಂತೆ ಕೆಲ ಬದಲಾವಣೆಗಳು ಕಟೀಲು ಮೇಳಗಳು ಆಡುವ ದೇವೀ ಮಾಹಾತ್ಮ್ಯೆ ಪ್ರಸಂಗದಲ್ಲಿ ಕಂಡು ಬರಲಿದೆ.
ತ್ರಿಮೂರ್ತಿಗಳ ಬಣ್ಣಗಳಲ್ಲಿ ಬದಲಾವಣೆಯಾಗಲಿದೆ. ಉದಾಹರಣೆಗೆ ವಿಷ್ಣು ನೀಲಿ ಬದಲಿಗೆ ಹಸುರು ಬಣ್ಣಧಾರಿಯಾಗಲಿದ್ದಾನೆ.
ವಿದ್ಯುನ್ಮತಿ ಪ್ರಸಂಗದಲ್ಲಿ ಇದುವರೆಗೆ ಬರುತಿದ್ದ ಬ್ರಾಹ್ಮಣ ಪುರೋಹಿತ ರಾಕ್ಷಸ ಪುರೋಹಿತ(ಮೇದೋಹುತ)ನ ರೂಪದಲ್ಲಿ ಬರಲಿದ್ದಾನೆ. ಮೂಲ ಪ್ರಸಂಗದಲ್ಲಿ ವಿದ್ಯುನ್ಮತಿ, ಮಾಲಿನಿ ವಿವಾಹ ಪ್ರಸಂಗವಿಲ್ಲದಿದ್ದರೂ ಹಾಸ್ಯ, ಮನೋರಂಜನೆಗಾಗಿ ಇದನ್ನು ಉಳಿಸಿಕೊಳ್ಳಲಾಗಿದೆ.
ಪಿಂಗಲಾಕ್ಷನ ಕಣ್ಣಿಗೆ ಕೆಂಪು ಬಣ್ಣ ಬರಲಿದೆ. ವಿದುನ್ಮತಿ ಮರಣಾನಂತರ ಬಾ ಮಗನೇ ಮಹಿಷಾ ಎಂದು ಮಾಲಿನಿ ಕರೆದು, ಮಹಿಷನ ರಂಗ ಪ್ರವೇಶವಾಗುವಾಗ ಮಾಲಿನಿ ಪಾತ್ರಧಾರಿ ವಿಧವೆಯಂತೆ ಬಿಳಿ ಸೀರೆ ಉಟ್ಟು ಬರುವುದನ್ನು ನಿಲ್ಲಿಸಿ, ಕೇವಲ ಕುಂಕುಮ ಅಳಿಸುವುದುದೆಂದು ನಿರ್ಣಯಿಸಲಾಗಿದೆ. ಸುಗ್ರೀವನ ಪಾತ್ರಧಾರಿ ನಾಟಕೀಯ ಕಿರೀಟ ಬಿಟ್ಟು ಧರ್ಮರಾಯನ ಪಾತ್ರದಂತೆ ಕಿರೀಟ ಧರಿಸುವುದು. ಮಧುಕೈಟಭರು ಕಿರೀಟ ಧರಿಸುವುದು, ರಕ್ತೇಶ್ವರೀ ಭೂತ ಕೋಲದಂತೆ ಅಣಿ ಧರಿಸಿ ಬರುವುದರ ಬದಲಾಗಿ ಕುತ್ತರಿ ಹಾಕಿ, ವೀರಗಾಸೆಯನ್ನು ನಾಲಗೆಯಂತೆ ಮಾಡಿ ಯಕ್ಷಗಾನೀಯ ವೇಷಭೂಷಣಗಳಿಂದ ರಂಗಕ್ಕೆ ಬರುವುದೆಂದು ತೀರ್ಮಾನವಾಗಿದೆ. ಆದರೆ ಅನಗತ್ಯವಾದರೂ ರಂಜನೆಯ ದೃಷ್ಟಿಯಿಂದ ರಕ್ತೇಶ್ವರೀಯೊಂದಿಗೆ ಬರುವ ದೈವದ ಪಾತ್ರಧಾರಿಯನ್ನು ಈ ವರುಷದ ಮಟ್ಟಿಗೆ ಮುಂದುವರಿಸಲಾಗಿದೆ.
ದೇವೀ ಪಾತ್ರದ ವೇಷಭೂಷಣಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಹಿಂದಿನಂತೆಯೇ ದೇವಿಯ ವೇಷ ಇತ್ಯಾದಿಗಳು ಇರುತ್ತವೆ. ಆದರೆ ಪಾತ್ರಗಳ ಮಾತುಗಾರಿಕೆಯ ಮೌಲ್ಯವನ್ನು ಹೆಚ್ಚಿಸಲಾಗಿದೆ. ಎಲ್ಲ ಪಾತ್ರಗಳ ಮಾತುಗಳಿಗೆ ಇನ್ನಷ್ಟು ಜೀವ, ಸತ್ವ, ಗಟ್ಟಿತನಗಳನ್ನು ತುಂಬಲಾಗಿದೆ. ಬ್ರಹ್ಮ ವಿಷ್ಣು ಮಹೇಶ್ವರರ ವಾದಗಳು, ಸುಗ್ರೀವ, ರಕ್ತಬೀಜ ಪಾತ್ರಗಳ ಮಾತು ಹಿಂದಿಗಿಂತಲೂ ಚೆಂದವಾಗಿ ಮೂಡಿಬರಲಿದೆ. ದೇವೀಸ್ತುತಿ ಶ್ಲೋಕಗಳಲ್ಲಿ ಅಗತ್ಯ ಬದಲಾವಣೆ ಇದೆ. ಒಟ್ಟಾರೆ ದೇವೀ ಮಾಹಾತ್ಮ್ಯೆ ಪ್ರಸಂಗವನ್ನು ಸುಂದರವಾಗಿಸುವ ಪ್ರಯತ್ನವನ್ನು ಈ ಬಾರಿಯ ಪ್ರದರ್ಶನಗಳಲ್ಲಿ ಕಾಣಬಹುದಾಗಿದೆ.
ಕಟೀಲು ಮೇಳಗಳಾಡುವ ದೇವೀ ಮಾಹಾತ್ಮ್ಯೆ ಪ್ರಸಂಗಕ್ಕೆ ಇಷ್ಟೆಲ್ಲ ಮಹತ್ವ ಯಾಕೆಂದರೆ ಐದು ಮೇಳಗಳು ಒಂದು ತಿರುಗಾಟದಲ್ಲಿ ಆಡುವ ಒಂದು ಸಾವಿರ ಪ್ರದರ್ಶನಗಳಲ್ಲಿ ಐನೂರು ಪ್ರದರ್ಶನ ಕಾಣುವ ಪ್ರಸಂಗ ದೇವೀ ಮಾಹಾತ್ಮ್ಯೆಯೇ ಆಗಿರುವುದು. ಉಳಿದಂತೆ ಕಟೀಲು ಕ್ಷೇತ್ರ ಮಾಹಾತ್ಮ್ಯೆ, ಶ್ರೀದೇವಿ ಲಲಿತೋಪಾಖ್ಯಾನ ಅಲ್ಲದೆ ಇತರ ಪೌರಾಣಿಕ ಪ್ರಸಂಗಗಳೂ ಪ್ರದರ್ಶನ ಕಾಣುತ್ತವೆ.
ಯಕ್ಷಗಾನ ಮೇಳಗಳಿಗೆ ಪ್ರೇಕ್ಷಕರ, ಕಲಾವಿದರ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬ ಆತಂಕದ ಮಧ್ಯೆಯೇ ಕಟೀಲಿನ ಮೇಳಗಳಿಗೆ ಹತ್ತಕ್ಕಿಂತಲೂ ಹೆಚ್ಚು ಕಲಾವಿದರು ಈ ವರುಷ ಸೇರಿರುವುದು ಮತ್ತು ಮುಂದಿನ ಇಪ್ಪತ್ತೈದು ವರುಷಗಳಿಗೆ ಬಾಕಿ ಇರುವಷ್ಟು ಅಂದರೆ ಸುಮಾರು ಹನ್ನೆರಡೂವರೆ ಸಾವಿರಗಳಷ್ಟು ಹರಕೆಯಾಟಗಳು ಮುಂಗಡ ಬುಕ್ಕಿಂಗ್ ಆಗಿರುವುದು. ಅದರಲ್ಲೂ ಹತ್ತು ಸಮಸ್ತರು ಆಡಿಸುವ ಆಟಗಳನ್ನು ಲೆಕ್ಕ ಹಾಕಿ ಸುಮಾರು ೪೫೦ರಷ್ಟು ಖಾಯಂ ಆಟಗಳು ಕಟೀಲು ಮೇಳಗಳಿಗಿರುವುದು ದಾಖಲೆಯ ಮಹತ್ವದ ಸಂಗತಿಯಾಗಿದೆ. ಇಂದು(ತಾ.೨೦) ಕಟೀಲಿನ ಐದು ಮೇಳಗಳು ತಿರುಗಾಟ ಆರಂಭಿಸಲಿದ್ದು, ಮೇ ತಿಂಗಳ ಪತ್ತಜಾನೆಯಂದು ಮೇಳಗಳು ಒಳಗಾಗಲಿವೆ.

No comments:

Post a Comment