Sunday, April 26, 2015

ಕಟೀಲಿಗೆ ಮುಜರಾಯಿ ಆಯುಕ್ತೆ ಪಲ್ಲವಿ ಭೇಟಿ

ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಮುಜರಾಯಿ ಆಯುಕ್ತೆ ಪಲ್ಲವಿ ಅಕುರಾತಿ ಭಾನುವಾರ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು. 
ಹೊಸದಾಗಿ ಆಗಿರುವ ಚಿನ್ನದ ರಥ, ಕುದ್ರು ಭ್ರಾಮರೀವನದ ಗುಡಿಗಳನ್ನು ಗಮನಿಸಿದರು. ದ್ರವ ತ್ಯಾಜ್ಯ ಘಟಕವನ್ನು ವೀಕ್ಷಿಸಿ ಮಾಹಿತಿ ಪಡೆದ ಆಯುಕ್ತೆ ಪಲ್ಲವಿ ಕಟೀಲು, ದ್ರವ ತ್ಯಾಜ್ಯ ಘಟಕ ಮಾಡಿರುವ ರಾಜ್ಯದ ಮೊದಲ ದೇವಸ್ಥಾನವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ, ನದಿ ಹಾಗೂ ಪರಿಸರವನ್ನು ಇನ್ನಷ್ಟು ಸ್ವಚ್ಚವಾಗಿರಿಸಲು ಮುತುವರ್ಜಿ ವಹಿಸಲು ಸೂಚಿಸಿದರು. ಬಯೋಗ್ಯಾಸ್ ವ್ಯವಸ್ಥೆ ಅಳವಡಿಸಿ ಅನ್ನದಾನದ ಅಡುಗೆ ತಯಾರಿಸುವ ಬಗ್ಗೆ ಯೋಜನೆ ರೂಪಿಸಲು ಸೂಚಿಸಿದರು. 
ಅನ್ನಛತ್ರ, ಭೋಜನ ವ್ಯವಸ್ಥೆಗಳನ್ನು ನೋಡಿದ ಅವರು ಅನ್ನದಾನಕ್ಕೆ ಮತ್ತು ವಿದ್ಯಾ ದಾನಕ್ಕೆ ೮೦ಜಿ ತೆರಿಗೆ ವಿನಾಯತಿಯ ನೀಡುವ ಮೊದಲ ದೇವಸ್ಥಾನ ಆಗಿರುವ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದರು. ಆಡಿಟ್ ಆಗಿರುವ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ, ನೂತನ ಗೋಶಾಲೆ, ಸಂಸ್ಕೃತ ಶಿಕ್ಷಣದ ಬಗ್ಗೆ ಮಾಹಿತಿ ಪಡೆದರು. 
ಮೊಕ್ತೇಸರ ವಾಸುದೇವ ಆಸ್ರಣ್ಣ, ಆಡಳಿತಾಧಿಕಾರಿ ನಿಂಗಯ್ಯ, ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ಶ್ರೀಹರಿ ಆಸ್ರಣ್ಣ, ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಮಂಗಳೂರು ಸಹಾಯಕ ಆಯುಕ್ತ ಶಿವಕುಮಾರಯ್ಯ, ಅಧಿಕಾರಿಗಳಾದ ಉಮೇಶ ಸುಧಾಕರ, ಪ್ರಬಂಧಕ ವಿಜಯ ಕುಮಾರ್ ಉಪಸ್ಥಿತರಿದ್ದರು.

ಚಿತ್ರ : ಕಟೀಲ್ ಸ್ಟುಡಿಯೋ

No comments:

Post a Comment