Friday, January 9, 2015

ಕಟೀಲಿನಲ್ಲಿ ಯಕ್ಷಗಾನ ಬಯಲಾಟ ರಂಗಸಂಭ್ರಮ ಆರಂಭ



ಯಕ್ಷಗಾನ ಸಕಾಲಿಕ ಸಾರ್ವಕಾಲಿಕವಾಗಿರಲಿ - ಡಾ. ಚಿನ್ನಪ್ಪ ಗೌಡ
ಕಟೀಲು : ಕಾಲದ ಒತ್ತಡವನ್ನು ನಿಭಾಯಿಸಿಕೊಂಡು ಯಕ್ಷಗಾನವನ್ನು ಸಕಾಲಿಕವಾಗಿ ಸಾರ್ವಕಾಲಿಕವಾಗಿಸಬೇಕು. ಯಕ್ಷಗಾನಕ್ಕೆ ಒಪ್ಪುವ ಹಾಗೆ ಬದಲಾವಣೆ ಅಗತ್ಯವಿದೆ ಎಂದು ಮಂಗಳೂರು ವಿವಿಯ ಡಾ. ಚಿನ್ನಪ್ಪ ಗೌಡ ಹೇಳಿದರು. 
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದ ಸರಸ್ವತೀ ಸದನದಲ್ಲಿ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡಮಿಯ ಆಶ್ರಯದಲ್ಲಿ ಮೂರು ದಿನಗಳ ಕಾಲ ನಡೆಯುವ ಯಕ್ಷಗಾನ ಬಯಲಾಟ ರಂಗಸಂಭ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅಕಾಡಮಿ ಅಧ್ಯಕ್ಷ ನಾಡೋಜ ಬೆಳಗಲ್ಲು ವೀರಣ್ಣ ಮಾತನಾಡಿ ಎರಡು ಮೂರು ಜಿಲ್ಲೆಗಳಲ್ಲಿ ಹುಟ್ಟಿಕೊಂಡ ಯಕ್ಷಗಾನ ಇವತ್ತು ವಿಶ್ವವ್ಯಾಪಿಯಾಗಿದೆ. ಇಲ್ಲಿನ ವೀರಪ್ಪ ಮೊಯ್ಲಿಯಂತಹವರೂ ತಾನು ಯಕ್ಷಗಾನಕ್ಕೆ ಗೆಜ್ಜೆ ಕಟ್ಟಿದ್ದೇನೆ ಎಂದು ಹೆಮ್ಮೆ ಪಡುತ್ತಾರೆ. ಆದರೆ ಉತ್ತರಕರ್ನಾಟಕದಲ್ಲಿ ರಾಜಕೀಯ ಹಾಗೂ ಜನರ ಅಸಡ್ಡೆಯ ಕಾರಣದಿಂದ ಮೂಡಲಪಾಯ, ದೊಡ್ಡಾಟ, ಸಣ್ಣಾಟದಂತಹ ಪ್ರಕಾರಗಳು ಬೆಳವಣಿಗೆ ಕಂಡಿಲ್ಲ ಎಂದು ವಿಷಾದಿಸಿದರು. 
ಆಶಯ ಭಾಷಣ ಮಾಡಿದ ಅಕಾಡಮಿ ಸದಸ್ಯ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್ ಯಕ್ಷಗಾನ ರಂಗಪ್ರಾಕಾರವನ್ನು ಇನ್ನಷ್ಟು ಪ್ರೋತ್ಸಾಹಿಸುವ ಹಿನ್ನಲೆಯಲ್ಲಿರಾಜ್ಯಾದ್ಯಂತ ೧೬ಕಡೆಗಳಲ್ಲಿ ರಂಗಸಂಭ್ರಮವನ್ನು ನಡೆಸುತ್ತಿದ್ದೇವೆ ಎಂದರು.
ಕಟೀಲು ದೇಗುಲದ ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ, ಕಸಾಪದ ಹರಿಕೃಷ್ಣ ಪುನರೂರು, ಪ್ರದೀಪಕುಮಾರ ಕಲ್ಕೂರ, ಶ್ರೀಮತಿ ಗೋಪಿಕಾ ಮಯ್ಯ, ರಮೇಶ್ ಭಟ್, ವಾಸುದೇವ ಶೆಣೈ ಮತ್ತಿತರರಿದ್ದರು. 
ಅಕಾಡಮಿ ರಿಜಿಸ್ಟ್ರಾರ್ ಡಿ.ಆರ್.ಮೈಥಿಲಿ ಸ್ವಾಗತಿಸಿದರು. ಸದಸ್ಯ ತಾರಾನಾಥ ವರ್ಕಾಡಿ ವಂದಿಸಿದರು. ಸುಮಂಗಲಾ ರತ್ನಾಕರ್ ರಾವ್ ಕಾರ‍್ಯಕ್ರಮ ನಿರೂಪಿಸಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಹಾಗೂ ಶ್ರೀ ದುರ್ಗಾ ಮಕ್ಕಳ ಮೇಳದ ಸಹಯೋಗದಲ್ಲಿ ಈ ರಂಗ ಸಂಭ್ರಮ ನಡೆಯುತ್ತಿದೆ.
ಶುಕ್ರವಾರ ದುರ್ಗಾ ಮಕ್ಕಳ ಮೇಳದವರಿಂದ ಯಕ್ಷಗಾನ ಪಂಚವಟಿ, ಬೆಳಗಾವಿ ಅಥಣಿಯ ವೀರಭದ್ರೇಶ್ವರ ತಂಡದಿಂದ ಶ್ರೀ ಕೃಷ್ಣ ಪಾರಿಜಾತ, ಶಿವಮೊಗ್ಗ ಶ್ರೀ ಸಾಯಿ ಕಲಾ ಪ್ರತಿಷ್ಟಾನದಿಂದ ಬಡಗುತಿಟ್ಟು ಯಕ್ಷಗಾನ ದಕ್ಷಯಜ್ಞ ಪ್ರದರ್ಶನಗೊಂಡಿತು.

ಮಕ್ಕಳ ಯಕ್ಷಗಾನ ವಿಚಾರಗೋಷ್ಟಿ
ಮಕ್ಕಳಲ್ಲಿ ಯಕ್ಷಗಾನದ ಆಸಕ್ತಿ ಮೂಡಿಸಿದರೆ ಅವರಲ್ಲಿ ಪುರಾಣ ಕಥೆಗಳ ವಿಚಾರ ತಿಳಿದು ಸಂಸ್ಕಾರ ತಿಳಿಯುತ್ತದೆ. ಆದರೆ ಯಕ್ಷಗಾನ ಕಲಿಕೆಯ ಉದ್ದೇಶವಿಟ್ಟುಕೊಂಡು ಮಕ್ಕಳಲ್ಲಿ ಹಣದ ಆಸೆ, ಪ್ರಶಸ್ತಿಯ ಆಮಿಷ ಒಡ್ಡಬಾರದು ಎಂದು ಕಟೀಲು ದುರ್ಗಾಮಕ್ಕಳ ಮೇಳದ ಅಧ್ಯಕ್ಷ ಶ್ರೀಹರಿನಾರಾಯಣದಾಸ ಆಸ್ರಣ್ಣ ಹೇಳಿದರು.
ಅವರು ರಂಗಸಂಭ್ರಮದಲ್ಲಿ ಕಲಾ ಸಂರಕ್ಷಣೆಯಲ್ಲಿ ಮಕ್ಕಳ ಮೇಳದ ಪಾತ್ರದ ಕುರಿತು ಉಪನ್ಯಾಸ ನೀಡಿದರು.  
ಖ್ಯಾತ ಕಲಾವಿದ ಕೆ.ಗೋವಿಂದ ಭಟ್ ಮಕ್ಕಳಲ್ಲಿ ಯಕ್ಷಗಾನ ಆಸಕ್ತಿ ಬೆಳೆಸಲು ಹೆತ್ತವರ, ಶಾಲೆಗಳ ಪಾತ್ರ ಪ್ರಮುಖವಾದುದು ಎಂದರು.

ಮಕ್ಕಳ ಮೇಳದ ಹೆಜ್ಜೆ ಗುರುತುಗಳು ಕುರಿತು ಡಾ.ದಿನಕರ ಪಚ್ಚನಾಡಿ ಉಪನ್ಯಾಸ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಎಂ.ಆರ್. ವಾಸುದೇವ ಸಾಮಗ ಮಾತನಾಡಿ ಶಿಕ್ಷಣದಂತೆ ಯಕ್ಷಗಾನವೂ ವ್ಯಾಪಾರೀಕರಣವಾಗಿದೆ. ಮಕ್ಕಳಲ್ಲಿ ಯಕ್ಷಗಾನ ವೇಷ ಹಾಕಿಸುವುದಷ್ಟೇ ಅಲ್ಲ, ಅಧ್ಯಯನ ಮಾಡಿಸಬೇಕು ಎಂದರು.
ಪಾತಾಳ ವೆಂಕಟರಮಣ ಭಟ್, ಡಾ.ಶ್ರೀಧರ ಭಂಡಾರಿ, ಕರ್ಗಲ್ಲು ವಿಶ್ವೇಶ್ವರ ಭಟ್, ದೇವಾನಂದ ಭಟ್ ಬೆಳುವಾಯಿ, ಗಿರೀಶ ನಾವಡ, ಮಹಾಬಲೇಶ್ವರ ಆಚಾರ‍್ಯ ಚರ್ಚೆಯಲ್ಲಿ ಭಾಗವಹಿಸಿದ್ದರು. ಗಾಯತ್ರೀ ಎಸ್ ಉಡುಪ ಕಾರ‍್ಯಕ್ರಮ ನಿರೂಪಿಸಿದರು. 

ಇಂದು(೧೦) ಹವ್ಯಾಸಿ ಯಕ್ಷಗಾನ, ಮೂಡಲಪಾಯ, ಸಣ್ಣಾಟ, ಸೂತ್ರದ ಬೊಂಬೆಯಾಟ, ಎಲ್‌ಸಿಡಿ ಪ್ರದರ್ಶನ ಹಾಗೂ ವಿಚಾರಗೋಷ್ಟಿಗಳಿವೆ.

No comments:

Post a Comment