Tuesday, January 6, 2015

ಜ.೯-೧೧ : ಕಟೀಲಿನಲ್ಲಿ ಯಕ್ಷಗಾನ ಬಯಲಾಟ ಸಂಭ್ರಮ

ಮಕ್ಕಳ, ಹವ್ಯಾಸಿ, ಮಹಿಳಾ ಯಕ್ಷಗಾನ ಬಗ್ಗೆ ವಿಚಾರಗೋಷ್ಟಿ.
ಮೂರು ದಿನಗಳ ಸಂಭ್ರಮ
ತೆಂಕು ಬಡಗು ಮೂಡಲಪಾಯ ಯಕ್ಷಗಾನ, ಸಣ್ಣಾಟ, ಬೊಂಬೆಯಾಟ, ಸಂಗ್ಯಾಬಾಳ್ಯ ಪ್ರದರ್ಶನ
ಐವತ್ತಕ್ಕೂ ಹೆಚ್ಚು ವಿದ್ವಾಂಸರ ಉಪಸ್ಥಿತಿಯಲ್ಲಿ ೬ವಿಚಾರ ಗೋಷ್ಟಿಗಳು

ಕಟೀಲು : ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡಮಿಯ ಆಶ್ರಯದಲ್ಲಿ ಜನವರಿ ೯ರಿಂದ ೧೧ರತನಕ ಕಟೀಲಿನಲ್ಲಿ ಯಕ್ಷಗಾನ ಬಯಲಾಟ ಸಂಭ್ರಮ ನಡೆಯಲಿದೆ. ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಹಾಗೂ ಶ್ರೀ ದುರ್ಗಾ ಮಕ್ಕಳ ಮೇಳದ ಸಹಯೋಗದಲ್ಲಿ ನಡೆಯುವ ಮಕ್ಕಳ ಯಕ್ಷಗಾನ, ಮಹಿಳಾ ಯಕ್ಷಗಾನ, ಹವ್ಯಾಸಿ ಯಕ್ಷಗಾನದ ಪರಿಕಲ್ಪನೆಯ ಈ ಯಕ್ಷಗಾನ ಬಯಲಾಟ ಸಂಭ್ರಮವನ್ನು ಅಕಾಡಮಿ ಅಧ್ಯಕ್ಷ ನಾಡೋಜ ಬೆಳಗಲ್ಲು ವೀರಣ್ಣ, ವಾಸುದೇವ ಆಸ್ರಣ್ಣ, ಕಬ್ಬಿನಾಲೆ ವಸಂತ ಭಾರದ್ವಾಜ, ನಿಂಗಯ್ಯ, ಹರಿಕೃಷ್ಣ ಪುನರೂರು, ಪ್ರದೀಪ ಕಲ್ಕೂರ ಮುಂತಾದವರ ಉಪಸ್ಥಿತಿಯಲ್ಲಿ ಡಾ. ಚಿನ್ನಪ್ಪ ಗೌಡ ಉದ್ಘಾಟಿಸಲಿದ್ದಾರೆ.
ಅಂದು ದುರ್ಗಾ ಮಕ್ಕಳ ಮೇಳದವರಿಂದ ಯಕ್ಷಗಾನ ಪಂಚವಟಿ, ಬೆಳಗಾವಿ ಅಥಣಿಯ ವೀರಭದ್ರೇಶ್ವರ ತಂಡದಿಂದ ಶ್ರೀ ಕೃಷ್ಣ ಪಾರಿಜಾತ, ಶಿವಮೊಗ್ಗ ಶ್ರೀ ಸಾಯಿ ಕಲಾ ಪ್ರತಿಷ್ಟಾನದಿಂದ ಬಡಗುತಿಟ್ಟು ಯಕ್ಷಗಾನ ದಕ್ಷಯಜ್ಞ ನಡೆಯಲಿದೆ. ಅಂದು ಮಕ್ಕಳ ಮೇಳದ ಹೆಜ್ಜೆ ಗುರುತುಗಳು ಮತ್ತು ಕಲಾ ಸಂರಕ್ಷರಣೆಯಲ್ಲಿ ಮಕ್ಕಳ ಮೇಳದ ಪಾತ್ರ ಕುರಿತು ವಿಚಾರಗೋಷ್ಟಿ ನಡೆಯಲಿದ್ದು ಡಾ.ದಿನಕರ ಪಚ್ಚನಾಡಿ, ಶ್ರೀಹರಿನಾರಾಯಣದಾಸ ಆಸ್ರಣ್ಣ ಉಪನ್ಯಾಸ ನೀಡಲಿದ್ದಾರೆ. ವಾಸುದೇವ ಸಾಮಗ, ಗೋವಿಂದ ಭಟ್ ಮುಂತಾದ ತಜ್ಞರು ಚರ್ಚೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಕಾಡಮಿಯ ಸದಸ್ಯ ತಾರಾನಾಥ ವರ್ಕಾಡಿ ತಿಳಿಸಿದ್ದಾರೆ.
ತಾ. ೧೦ರಂದು ಬೆಳ್ಮಣ್ಣು ಯಕ್ಷಮಿತ್ರರಿಂದ ಹವ್ಯಾಸಿ ಯಕ್ಷಗಾನ ಸುದರ್ಶನ ವಿಜಯ, ಬೆಳಗಾಂ ಶ್ರೀ ಸದಾಶಿವ ಮಹಿಳೆಯರ ಸಣ್ಣಾಟ ಸಂಘ ಸಾಲಹಳ್ಳಿಯವರಿಂದ ಸಣ್ಣಾಟ ಸಂಗ್ಯಾ ಬಾಳ್ಯಾ, ತುಮಕೂರು ಬಸವೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯವರಿಂದ ಮೂಡಲಪಾಯ ಯಕ್ಷಗಾನ ಭಕ್ತ ಪ್ರಹ್ಲಾದ, ಮಂಡ್ಯ ನಾಗಮಂಗಲದ ಕಾಳಿಕಾಂಬಾ ಪ್ರಸನ್ನ ಯುವಜನ ಸೂತ್ರದ ಬೊಂಬೆಮೇಳದವರಿಂದ ಸೂತ್ರದ ಬೊಂಬೆಯಾಟ ಕನಕಾಂಗಿ ಕಲ್ಯಾಣ, ಕುಳಾಯಿ ಯಕ್ಷಮಂಜೂಷದವರಿಂದ ವಿಶ್ವವ್ಯಾಪಿ ಯಕ್ಷಗಾನದ ಅಪೂರ್ವ ಎಲ್‌ಸಿಡಿ ಪ್ರದರ್ಶನ ನಡೆಯಲಿದೆ. 
ಅಂದು ಹರಕೆ ಆಟಗಳು ಕಲಾತ್ಮಕತೆ ಮತ್ತು ಕಲಾ ಸಂರಕ್ಷಣೆ ಹಾಗೂ ಹವ್ಯಾಸಿ ಯಕ್ಷಗಾನ ಸಾಧ್ಯತೆ ಮತ್ತು ಸಮಸ್ಯೆ ಬಗ್ಗೆ ವಿಚಾರಗೋಷ್ಟಿಯಲ್ಲಿ ಸುಣ್ಣಂಬಳ ವಿಶ್ವೇಶ್ವರ ಭಟ್, ಭಾಸ್ಕರ ರೈ ಕುಕ್ಕುವಳ್ಳಿ ಉಪನ್ಯಾಸ ನೀಡಲಿದ್ದು, ಕಮಲಾದೇವಿಪ್ರಸಾದ ಆಸ್ರಣ್ಣ, ಚಂದ್ರಶೇಖರ ದಾಮ್ಲೆ ಮುಂತಾದ ತಜ್ಞರು ಚರ್ಚೆಯಲ್ಲಿ ಭಾಗವಹಿಸಲಿದ್ದಾರೆ.
ತಾ.೧೧ರಂದು ಮಹಿಳಾ ಯಕ್ಷಗಾನ ಉಗಮ ಮತ್ತು ವಿಕಾಸ ಹಾಗೂ ಮಹಿಳಾ ಮೇಳ ಕಲಾತ್ಮಕತೆ ಮತ್ತು ಕಲಾ ಪ್ರಸರಣದ ಬಗ್ಗೆ ಡಾ. ನಾಗವೇಣಿ ಮಂಚಿ, ವಿದ್ಯಾ ಕೋಳ್ಯೂರು ಉಪನ್ಯಾಸ ನೀಡಿಲಿದ್ದಾರೆ. ಲೀಲಾವತೀ ಬೈಪಾಡಿತ್ತಾಯ, ವಿದ್ಯಾ ರಮೇಶ್ ಭಟ್ ಮುಂತಾದ ಸಾಧಕ ಮಹಿಳೆಯರು ಚರ್ಚೆಯಲ್ಲಿ ಭಾಗವಹಿಸಲಿದ್ದಾರೆ.
ಅಂದು ಪ್ರಸಿದ್ಧ ಕಲಾವಿದರಿಂದ ತಾಳಮದ್ದಲೆ ಕರ್ಣಾರ್ಜುನ, ಉಜಿರೆ ಬಿಂದು ಹವ್ಯಾಸಿ ಮಹಿಳಾ ತಂಡದಿಂದ ತೆಂಕುತಿಟ್ಟು ಯಕ್ಷಗಾನ ನರಕಾಸುರ ಮೋಕ್ಷ ನಡೆಯಲಿದೆ. ಸಮಾರೋಪ ಸಮಾರಂಭದಲ್ಲಿ ಪ್ರಭಾಖರ ಜೋಷಿ ಶಿಖರೋಪನ್ಯಾಸ ನೀಡಲಿದ್ದು, ಸಚಿವ ಅಭಯಚಂದ್ರ, ನಳಿನ್ ಕುಮಾರ್, ಪಂಜ ಭಾಸ್ಕರ ಭಟ್, ಡಾ.ನಾರಾಯಣ ಶೆಟ್ಟಿ, ಎಂ.ಎಲ್.ಸಾಮಗ, ಕಿಶನ್ ಹೆಗ್ಡೆ ಮುಂತಾದವರು ಭಾಗವಹಿಸಲಿದ್ದಾರೆ ಎಂದು ಮಕ್ಕಳ ಮೇಳದ ಶ್ರೀಹರಿನಾರಾಯಣದಾಸ ಆಸ್ರಣ್ಣ ತಿಳಿಸಿದ್ದಾರೆ.

No comments:

Post a Comment