Friday, December 26, 2014

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವಿದ್ಯಾಸಂಸ್ಥೆಗಳ ವಿದ್ಯಾ ಸಂಭ್ರಮ

ಕಟೀಲು : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವಿದ್ಯಾಸಂಸ್ಥೆಗಳ ವಿದ್ಯಾ ಸಂಭ್ರಮವು ದಿನಾಂಕ 27-12-2014 ಶನಿವಾರದಿಂದ ದಿನಾಂಕ 2-1-2015 ರ ಶುಕ್ರವಾರದವರೆಗೆ ನಡೆಯಲಿದೆ.
ದಿನಾಂಕ ೨೭-೧೨-೨೦೧೪ ಶನಿವಾರ ಬೆಳಗ್ಗೆ ಶಾಲೆಯ ಹಳೆವಿದ್ಯಾರ್ಥಿ, ಶ್ರೀ ಫಲಿಮಾರು ಮಠ ಶ್ರೀ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ ವಿದ್ಯಾ ಸಂಭ್ರಮಕ್ಕೆ ಚಾಲನೆ ನೀಡಲಿದ್ದಾರೆ. ಸಚಿವರಾದ ಕೆ. ಅಭಯಚಂದ್ರ ಜೈನ್ ಅಧ್ಯಕ್ಷತೆಯಲ್ಲಿ ಪ್ರೌಢಶಾಲೆಯ ಸುವರ್ಣಸೌಧದ ಕಛೇರಿ ಕೊಠಡಿಯನ್ನು ಸಚಿವರಾದ ಬಿ. ರಮಾನಾಥ ರೈ ಉದ್ಘಾಟಿಸಲಿದ್ದು, ಪದವೀಪೂರ್ವ ಕಾಲೇಜಿನ ವಿಜ್ಞಾನ ವಿಭಾಗ ಕಟ್ಟಡದ ೨ನೇ ಮಹಡಿ ನಿರ್ಮಾಣಕ್ಕೆ ಚಾಲನೆಯನ್ನು ಐವನ್ ಡಿ’ಸೋಜ ನೀಡಲಿದ್ದಾರೆ. 
ಸುವರ್ಣಸೌಧ ಕಂಪ್ಯೂಟರ್ ವಿಭಾಗದ ಉದ್ಘಾಟನೆಯನ್ನು ಸಾಂಸದ ನಳಿನ್‌ಕುಮಾರ್ ಕಟೀಲ್ ನೆರವೇರಿಸಲಿದ್ದು, ಶ್ರೀವಿದ್ಯಾ ಸದನ ಸಭಾಂಗಣವನ್ನು ಶ್ರೀ ಆಸ್ಕರ್ ಫೆರ್ನಾಂಡಿಸ್ ಉದ್ಘಾಟಿಸಲಿದ್ದಾರೆ. 
ತಾ. ೨೮ರಂದು ಪ್ರೌಢಶಾಲೆಯ ಸುವರ್ಣ ಮಹೋತ್ಸವ ಸಮಾರೋಪದಲ್ಲಿ ಅಭಯಚಂದ್ರ ಜೈನ್, ಯು.ಟಿ.ಖಾದರ್, ಮೊಯ್ದಿನ್ ಬಾವಾ, ನಳಿನ್ ಕುಮಾರ್, ಡಾ.ಸುರೇಂದ್ರ ವಿ.ಶೆಟ್ಟಿ, ಡಾ.ಸುರೇಶ್ ರಾವ್ ಮುಂತಾದ ಗಣ್ಯರು ಭಾಗವಹಿಸಲಿದ್ದಾರೆ.
ತಾ.೨೯ರಂದು ಶ್ರೀ ದುರ್ಗಾಪರಮೇಶ್ವರೀ ದೇವಳ ಪದವೀಪೂರ್ವ ಕಾಲೇಜಿನ ತ್ರಿಂಶದುತ್ಸವ ನಡೆಯಲಿದ್ದು, ಅಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ, ಹರೇಕಳ ಹಾಜಬ್ಬ, ಹರಿಕೃಷ್ಣ ಪುನರೂರು ಮುಂತಾದ ಗಣ್ಯರು ಭಾಗವಹಿಸಲಿದ್ದಾರೆ. ತಾ.೩೦ರಂದು ತ್ರಿಂಶದುತ್ಸವ ಸಮಾರೋಪದಲ್ಲಿ ಅಭಯಚಂದ್ರ ಜೈನ್, ಜೆ.ಆರ್.ಲೋಬೋ, ವಸಂತ ಬಂಗೇರ, ನಳಿನ್ ಕುಮಾರ್, ಅಮರನಾಥ ಶೆಟ್ಟಿ ಮತ್ತಿತರರು ಭಾಗವಹಿಸಲಿದ್ದಾರೆ.
ತಾ. ೩೦ರಂದು ಹಿರಿಯ ಪ್ರಾಥಮಿಕ ಶಾಲೆಯ ೯೮ನೇ ವಾರ್ಷಿಕೋತ್ಸವದ ಸಂದರ್ಭ ಜಿ.ಪಂ.ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ ಶಾರದಾ ಸದನದ ಉದ್ಘಾಟನೆ ಮಾಡಲಿದ್ದು, ಅಭಯಚಂದ್ರ ಜೈನ್, ನಳಿನ್ ಕುಮಾರ್, ಮಾಜಿ ಶಾಸಕ ವಿಜಯಕುಮಾರ ಶೆಟ್ಟಿ, ಎಕ್ಕಾರು ಮೋನಪ್ಪ ಶೆಟ್ಟಿ ಮುಂತಾದವರು ಭಾಗವಹಿಸಲಿದ್ದಾರೆ.
ಜನವರಿ ೧ರಂದು ಪ್ರಥಮ ದರ್ಜೆ ಕಾಲೇಜಿನ ರಜತ ಮಹೋತ್ಸವ ನಡೆಯಲಿದ್ದು, ಈ ನೆನಪಿನ ಕಟ್ಟಡಕ್ಕೆ ನಿಟ್ಟೆ ವಿನಯ ಹೆಗ್ಡೆ ಶಿಲಾನ್ಯಾಸಗೈಯಲಿದ್ದಾರೆ. ಅಭಯಚಂದ್ರ ಜೈನ್, ಗಣೇಶ್ ಕಾರ್ಣಿಕ್, ನಳಿನ್ ಕುಮಾರ್, ಕೃಷ್ಣ ಜೆ.ಪಾಲೇಮಾರ್, ಮಂಗಳೂರು ವಿವಿ ಕುಲಸಚಿವರಾದ ಪಿ.ಎಸ್.ಎಡಪಡಿತ್ತಾಯ, ಎಂ.ಬಿ.ಪುರಾಣಿಕ್, ಅಜಿತ್‌ಕುಮಾರ ರೈ ಮಾಲಾಡಿ, ಪ್ರದೀಪಕುಮಾರ ಕಲ್ಕೂರ ಮುಂತಾದವರು ಭಾಗವಹಿಸಲಿದ್ದಾರೆ.
ತಾ. ೨ರಂದು ಕಟೀಲು ದೇಗುಲದ ಎಲ್ಲ ಶಿಕ್ಷಣ ಸಂಸ್ಥೆಗಳ ಹಳೆ ವಿದ್ಯಾರ್ಥಿಗಳ ಸಂಗಮೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಅಂದು ರಾಜ್ಯ, ರಾಷ್ಟ್ರಮಟ್ಟದಲ್ಲಿ ಸಾಧನೆಗೈದ ಹಳೆವಿದ್ಯಾರ್ಥಿಗಳನ್ನು ಸಚಿವ ವಿನಯಕುಮಾರ ಸೊರಕೆ ಅಭಿನಂದಿಸಲಿದ್ದು, ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ ವಿದ್ಯಾಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಎಲ್ಲ ಶಿಕ್ಷಕರನ್ನು ಗೌರವಿಸಲಿದ್ದಾರೆ. ಅಭಯಚಂದ್ರ ಜೈನ್, ನಳಿನ್ ಕುಮಾರ್, ಡಾ.ಮೋಹನ ಆಳ್ವ, ಎ.ಸದಾನಂದ ಶೆಟ್ಟಿ, ಡಾ.ಗಣನಾಥ ಎಕ್ಕಾರು ಮುಂತಾದ ಗಣ್ಯರು ಭಾಗವಹಿಸಲಿದ್ದಾರೆ. 
ದಿನಂಪ್ರತಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳಿವೆ.


ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲವು ಪ್ರಾಥಮಿಕದಿಂದ ಸಂಸ್ಕೃತ ಸ್ನಾತಕೋತ್ತರ ಪದವಿ ಶಿಕ್ಷಣದವರೆಗೆ ವಿದ್ಯಾಲಯಗಳನ್ನು ನಡೆಸುತ್ತಿದೆ.
ಸಂಸ್ಕೃತ ಸ್ನಾತಕೋತ್ತರ ಅಧ್ಯಯನಕ್ಕಾಗಿರುವ ಶ್ರೀ ದುರ್ಗಾ ಸಂಸ್ಕೃತ ಅಧ್ಯಯನ ಮತ್ತು ಸಂಶೋಧನ ಕೇಂದ್ರವು ಮಂಗಳೂರು ವಿವಿಯ ಏಕೈಕ ಕೇಂದ್ರವಾಗಿದ್ದು, ವಿದ್ಯಾರ್ಥಿಗಳಿಗೆ ಉಚಿತ ಊಟ ವಸತಿ ವ್ಯವಸ್ಥೆಯಿದೆ.
ಕಟೀಲು ಶಿಕ್ಷಣ ಸಂಸ್ಥೆಗಳಲ್ಲಿ ಈವರೆಗೆ ಸುಮಾರು ಐವತ್ತು ಸಾವಿರದಷ್ಟು ವಿದ್ಯಾರ್ಥಿಗಳು ವಿದ್ಯಾರ್ಜನೆಗೈದಿದ್ದು, ಪ್ರಸ್ತುತ ೨೫೦೦ ವಿದ್ಯಾರ್ಥಿಗಳು ವ್ಯಾಸಂಗ ನಿರತರಾಗಿದ್ದಾರೆ. ಎಲ್ಲ ವಿದ್ಯಾಸಂಸ್ಥೆಗಳಲ್ಲಿ ದೇಣಿಗೆ ರಹಿತ ಶಿಕ್ಷಣ ನೀಡಲಾಗುತ್ತಿದೆ. ಕನ್ನಡ ಮಾಧ್ಯಮದ ಪ್ರೌಢಶಾಲೆಗಳಲ್ಲಿ ರಾಜ್ಯದಲ್ಲಿ ಅತ್ಯಂತ ಹೆಚ್ಚು ವಿದ್ಯಾರ್ಥಿಗಳನ್ನೊಳಗೊಂಡಿರುವ ದಾಖಲೆ ಕಟೀಲು ಪ್ರೌಢಶಾಲೆಯದ್ದು. 
ಎಲ್ಲ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ, ಕಂಪ್ಯೂಟರ್ ಶಿಕ್ಷಣದಂತಹ ಸವಲತ್ತುಗಳನ್ನೂ ಒದಗಿಸಲಾಗುತ್ತಿದೆ. ದೇಗುಲವು ಶಿಕ್ಷಣಕ್ಕಾಗಿ ಕಳೆದ ವರ್ಷ ರೂ.೨.೭೧ಕೋಟಿಗಳಷ್ಟನ್ನು ಖರ್ಚು ಮಾಡಿದೆ. ದೇಗುಲದ ವಿದ್ಯಾದಾನಕ್ಕೆ ದೇಣಿಗೆ ನೀಡಿದ್ದಲ್ಲಿ ಆದಾಯ ತೆರಿಗೆ ಕಾಯಿದೆಯ ೮೦ ಜಿ. ತೆರಿಗೆ ವಿನಾಯಿತಿ ಇದೆ.
ಕಟೀಲು ದೇಗುಲವು ಊಟ, ಆಟಗಳಂತೆ ಪಾಠಕ್ಕೆ ಪ್ರಸಿದ್ಧಿ ಹೊಂದಿದ್ದು, ಜಿಲ್ಲೆಯ ವಿವಿಧ ವಿಶೇಷ ಶಾಲೆಗಳ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಖರ್ಚನ್ನು ಭರಿಸುತ್ತಿದೆ.

No comments:

Post a Comment