Friday, June 20, 2014

ಕಟೀಲು ಪ್ರೌಢಶಾಲೆ ಸುವರ್ಣ ಮಹೋತ್ಸವ ಸಂಭ್ರಮ



ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ 
ಪ್ರೌಢಶಾಲೆ ಸುವರ್ಣ ಮಹೋತ್ಸವ ಸಂಭ್ರಮ
 
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರೌಢಶಾಲೆಯು ಅಂದು ದೇವಸ್ಥಾನದ ಮೊಕ್ತೇಸರರಾಗಿದ್ದ ಕೊಡೆತ್ತೂರು ಗುತ್ತು ದಿ. ಶ್ರೀಧರ ಶೆಟ್ರು ಹಾಗೂ ಮೊಕ್ತೇಸರ ಶ್ರೀ ಗೋಪಾಲಕೃಷ್ಣ ಆಸ್ರಣ್ಣರ ಪರಿಶ್ರಮದ ಫಲರೂಪವಾಗಿ ೬-೬-೧೯೬೩ರಂದು ಕರ್ನಾಟಕ ಸರಕಾರದ ಅಂದಿನ ವಿದ್ಯಾ ಮಂತ್ರಿಗಳಾದ ದಿ. ಎಸ್. ಆರ್ ಕಂಠಿಯವರಿಂದ ಉದ್ಘಾಟನೆಗೊಂಡಿತು. ಇಂದು ಈ ವಿದ್ಯಾಲಯಕ್ಕೆ ಐವತ್ತರ ಸಂಭ್ರಮ. ಸುವರ್ಣ ಮಹೋತ್ಸವ.
ಕರ್ನಾಟಕ ರಾಜ್ಯದಲ್ಲಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಅತ್ಯಧಿಕ ವಿದ್ಯಾರ್ಥಿಗಳಿರುವ ಪ್ರೌಢಶಾಲೆ ಇದು. ಈ ವರ್ಷ ೮,೯,೧೦ ನೇ ತರಗತಿಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ೫೨೦. ಪ್ರತಿ ತರಗತಿಗಳಲ್ಲಿ ಮೂರು ವಿಭಾಗಗಳಿವೆ. ಸಂಸ್ಥೆಯಲ್ಲಿ ೧೮ ಶಿಕ್ಷಕರು, ಐವರು ಶಿಕ್ಷಕೇತರರು ದುಡಿಯುತ್ತಿದ್ದು ೬ ಶಿಕ್ಷಕರಿಗೆ ಮಾತ್ರ ಸರಕಾರದಿಂದ ಅನುದಾನ ದೊರೆಯುತ್ತಿದೆ. ಉಳಿದವರ ವೇತನವನ್ನು ದೇವಸ್ಥಾನವೇ ಭರಿಸುತ್ತಿದೆ. ಇಲ್ಲಿ ದೇಣಿಗೆ ರಹಿತ ಶಿಕ್ಷಣ ವಿದ್ಯಾದಾನವಾಗಿರುತ್ತದೆ. ೮ನೇ ತರಗತಿಗೆ ೫೦ ವರ್ಷಗಳಲ್ಲಿ ದಾಖಲಾದ ವಿದ್ಯಾರ್ಥಿಗಳ ಸಂಖ್ಯೆ ೭,೦೭೨. ವಿದ್ಯಾರ್ಥಿಗಳಿಗೆ ದೊರಕುವ ವಿದ್ಯಾರ್ಥಿವೇತನ ಮತ್ತು ದತ್ತಿ ಬಹುಮಾನದ ಮೊತ್ತ ವಾರ್ಷಿಕ ರೂ ೧೨,೪೫,೦೦೦ ಆಗಿರುತ್ತದೆ.
ಕಳೆದ ಐವತ್ತು ವರ್ಷಗಳಲ್ಲಿ S.S.ಐ.ಅಯಲ್ಲಿ ಸರಾಸರಿ ೯೫%ಕ್ಕಿಂತ ಹೆಚ್ಚು ಫಲಿತಾಂಶ ಬಂದಿರುತ್ತದೆ. ಮಾತ್ರವಲ್ಲದೆ ಹಿಂದೆ ರ‍್ಯಾಂಕ್ ನೀಡುವ ಪದ್ಧತಿಯಿದ್ದಾಗ ಈ ಶಾಲೆಯ ಎರಡು ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ.ಯಲ್ಲಿ ರ‍್ಯಾಂಕ್ ಗಳಿಸಿರುವುದು ಇಲ್ಲಿಯ ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ಸಾಕ್ಷಿ. ಕ್ರೀಡಾರಂಗದಲ್ಲಿ ಮಾಡಿರುವ ಸಾಧನೆ ಅದ್ವಿತೀಯ. ಹೋಬಳಿ ೪೭೫, ವಿಭಾಗ ೨೦, ತಾಲೂಕು ೨೮೮೩, ಜಿಲ್ಲೆ ೧೦೫೫, ರಾಜ್ಯ ೯೨, ರಾಷ್ಟ್ರ ಮಟ್ಟದಲ್ಲಿ ೦೪ ಕ್ರೀಡಾ ಪ್ರಶಸ್ತಿಗಳನ್ನು ಪಡೆದ ಹೆಮ್ಮೆಯ ಶಾಲೆಯಿದು.
ಶಾಲಾ ವತಿಯಿಂದ ಪ್ರತಿವಾರ ಭ್ರಮರವಾಣಿ ಭಿತ್ತಿ ಪತ್ರಿಕೆ ಪ್ರಕಟವಾಗುತ್ತಿದೆ. ವಿಜ್ಞಾನ, ಕತೆ, ಕವನ, ಚಿತ್ರಕಲೆ, ವ್ಯಂಗ್ಯಚಿತ್ರ, ಪರಿಸರ ಮೊದಲಾದ ವಿಷಯಗಳಲ್ಲಿ ಪ್ರತಿವರ್ಷ ೧೫ಕ್ಕೂ ಹೆಚ್ಚು ಅರ್ಥಪೂರ್ಣ ಹಸ್ತ ಪತ್ರಿಕೆಗಳು ಪ್ರಕಟವಾಗುತ್ತವೆ. ಮಕ್ಕಳು ಬರೆದ ಕತೆ, ಕವನಗಳ ೧೩ ಕೃತಿಗಳು ಶಾಲಾವತಿಯಿಂದ ಮುದ್ರಣಗೊಂಡಿವೆ. ಶಾಲಾ ವಾರ್ಷಿಕ ಸಂಚಿಕೆ ಭ್ರಮರವಾಣಿ ಪ್ರತಿವರ್ಷ ಪ್ರಕಟವಾಗುತ್ತದೆ. ೧೯೯೦ರಿಂದ ಪ್ರತಿವರ್ಷ ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮದವರು ಏರ್ಪಡಿಸಿದ ಶಾಲಾ ಸಂಚಿಕೆ ಸ್ಪರ್ಧೆಯಲ್ಲಿ ಭ್ರಮರವಾಣಿ ಪ್ರಥಮ ಬಹುಮಾನ ಗಳಿಸುತ್ತಾ ಬಂದಿರುವುದು ಹೆಮ್ಮೆಯ ವಿಚಾರ. ಸಾಹಿತ್ಯ ಕ್ಷೇತ್ರಕ್ಕೂ ಅನನ್ಯ ಕೊಡುಗೆ ಇತ್ತ ಶಾಲೆ ಇದು.
ಶಾಲೆಯಲ್ಲಿ ಶಾಲಾ ಪಾರ್ಲಿಮೆಂಟು, ಗೈಡ್ಸ್, ಸಾಹಿತ್ಯಸಂಘ, ಪರಿಸರ ಸಂಘ, ಕ್ರೀಡಾ ಸಂಘ, ಯೋಗ, ಸಂಗೀತ, ಹವ್ಯಾಸ, ಯಕ್ಷಗಾನ, ಇತಿಹಾಸ ಸಂಘಗಳಿವೆ. ಇಂಗ್ಲಿಷ್, ಸಂಸ್ಕೃತ, ಹಿಂದಿ ಸಂಭಾಷಣಾ ಸಂಘ, ರೆಡ್ ಕ್ರಾಸ್, ಭಜನಾ ಸಂಘ, ಸಂಗೀತ ಸಂಘ, ಓ.ಅ.ಅ ಮೊದಲಾದ ಸಂಘಗಳ ವಿದ್ಯಾರ್ಥಿಯ ಪ್ರತಿಭೆಗೆ ಸರಿಯಾದ ಮಾರ್ಗದರ್ಶನ ನೀಡುತ್ತಿವೆ. ಪಠ್ಯ ಪೂರಕ ಚಟುವಟಿಕೆಗಳಿಗೆ ಕೊಡುವ ಪ್ರೋತ್ಸಾಹಕ್ಕೆ ಸಾಕ್ಷಿಯಾಗಿದೆ.
ಅನುದಾನಿತ ವಿದ್ಯಾಸಂಸ್ಥೆ ಇದಾಗಿದ್ದರೂ ೧೮ ಶಿಕ್ಷಕ ಮತ್ತು ೧೫ ಸಿಬ್ಬಂದಿಗಳಲ್ಲಿ ೬ ಮಂದಿಗೆ ಮಾತ್ರ ಸರಕಾರದಿಂದ ಸಂಬಳ ದೊರಕುತ್ತಿದೆ. ಕಟ್ಟಡ ನಿರ್ಮಾಣ, ಪಾಠೋಪಕರಣ, ಪೀಠೋಪಕರಣಗಳು, ಶಿಕ್ಷಕ ಶಿಕ್ಷಕೇತರರ ವೇತನ ದೇವಾಲಯ ವತಿಯಿಂದಲೇ ಕೊಡಲ್ಪಡುತ್ತಿದೆ. ಮಾತ್ರವಲ್ಲದೆ ಪ್ರಾಥಮಿಕದಿಂದ ಪದವಿ ಕಾಲೇಜಿನವರೆಗಿನ ಮಧ್ಯಾಹ್ನದ ಬಿಸಿಯೂಟ ದೇವರ ಅನ್ನಪ್ರಸಾದವೇ ಆಗಿದೆ. ಕಾಲೇಜಿನ ಸಂಪೂರ್ಣ ಶಿಕ್ಷಕ ವೆಚ್ಚ, ಪದವಿಪೂರ್ವ ಕಾಲೇಜು, ಸಂಸ್ಕೃತ ವಿದ್ಯಾಲಯ, ಹಿರಿಯ ಪ್ರಾಥಮಿಕ ಶಾಲೆಗಳ ಹೆಚ್ಚಿನ ವೆಚ್ಚವನ್ನು ದೇವಸ್ಥಾನವೇ ಭರಿಸಬೇಕಾಗಿದೆ.
೨೦೧೩-೧೪ರಲ್ಲಿ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಪದವಿಪೂರ್ವ ಕಾಲೇಜು, ಪ್ರಥಮ ದರ್ಜೆ ಕಾಲೇಜು, ಸಂಸ್ಕೃತ ಸ್ನಾತಕೋತ್ತರ ಕೇಂದ್ರಗಳಿಗೆ ದೇವಳವು ವೇತನ ಹಾಗೂ ಅಭಿವೃದ್ಧಿ ಕಾಮಗಾರಿಗಳಿಗೆ ಮಾಡಿದ ವೆಚ್ಚ ಒಟ್ಟು ಮೂರು ಕೋಟಿ ಇಪ್ಪತ್ತೇಳು ಲಕ್ಷ ರೂಪಾಯಿಗಳು. ಮಾತ್ರವಲ್ಲದೆ ಪ್ರತಿವರ್ಷ ಈ ವಿದ್ಯಾಸಂಸ್ಥೆಗಳ ಪೀಠೋಪಕರಣ, ಊಟ, ಸುಣ್ಣ-ಬಣ್ಣ, ಹೊಸ ಕಟ್ಟಡಗಳ ನಿರ್ಮಾಣ, ಹಳೆ ಕಟ್ಟಡಗಳ ದುರಸ್ತಿ ಕಾರ್ಯಗಳಿಗೆ ಅತ್ಯಧಿಕ ವೆಚ್ಚವನ್ನು ದೇವಸ್ಥಾನವೇ ಭರಿಸುತ್ತಿದೆ. 
ದೇವಸ್ಥಾನವು ಸರಕಾರದ ಧಾರ್ಮಿಕ ದತ್ತಿ ಇಲಾಖಾ ಆಡಳಿತಕ್ಕೆ ಒಳಪಟ್ಟಿರುವ ಕಾರಣ ಯಾವುದೇ ವೆಚ್ಚಕ್ಕೆ ಇಲಾಖಾ ವತಿಯಿಂದ ಪರವಾನಿಗೆ ಪಡೆಯಬೇಕು. ದೇವಸ್ಥಾನದ ಕುದ್ರುವಿನ ನವೀಕರಣ, ಸುವರ್ಣ ರಥ, ಅಭಿವೃದ್ಧಿ ಮೊದಲಾದ ಕೆಲಸಗಳಿಗೆ ಭಕ್ತರಿಂದಲೇ ಹಣ ಸಂಗ್ರಹಿಸಿ ಮಾಡಬೇಕಾಗಿದೆ. ಆದುದರಿಂದ ಶಾಲೆಯ ಸುವರ್ಣ ಮಹೋತ್ಸವದ ಯೋಜನೆ ಯೋಚನೆಗಳು ಸಾಕಾರಗೊಳ್ಳಲು ಹಳೆ ವಿದ್ಯಾರ್ಥಿಗಳ, ಶಿಕ್ಷಣ ಪ್ರೇಮಿಗಳ ಹಾಗೂ ವಿದ್ಯಾಭಿಮಾನಿಗಳ ಸಹಕಾರ ಅತ್ಯಗತ್ಯವಾಗಿದೆ
ಸುವರ್ಣ ಮಹೋತ್ಸವದ ಅಂಗವಾಗಿ ವಸ್ತುಪ್ರದರ್ಶನ, ತರಬೇತಿ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ ವಿವಿಧ ಶಾಲಾ ವಿದ್ಯಾರ್ಥಿಗಳಿಗೆ ಸ್ಪರ್ಧೆಗಳು, ವಿಚಾರಗೋಷ್ಠಿಗಳು ಅಭಿವೃದ್ಧಿ ಕಾರ್ಯಗಳು, ಇತರ ಹಲವಾರು ಕಾರ್ಯಕ್ರಮಗಳನ್ನು ಮಾಡಬೇಕಾಗಿದೆ. ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸ್ಥಳಾವಕಾಶ ಕಡಿಮೆ ಇರುವ ಕಾರಣ ಶಾಲಾ ಕಟ್ಟಡದ ವಿಸ್ತರಣೆ ಕಾಮಗಾರಿ ಪ್ರಾರಂಭಿಸಲಾಗಿದೆ. ಶಾಲೆಗೆ ವಿಸ್ತೃತ ಕಟ್ಟಡ, ಸಭಾಂಗಣ ಬೇಕಾಗಿದೆ. 
ಸುವರ್ಣ ಮಹೋತ್ಸವದ ಅಂಗವಾಗಿ ಯೋಜನೆಗಳು. ತರಗತಿ ಕೊಠಡಿಗಳು, ಸಭಾಂಗಣ, ಸ್ಮರಣ ಸಂಚಿಕೆ, ಸುವರ್ಣ ವರ್ಷಾಚರಣೆ ಹಮ್ಮಿಕೊಳ್ಳಲಾಗಿದೆ. 
ದೇವಸ್ಥಾನದೊಂದಿಗೆ ಸೇರಿ ಶಾಶ್ವತ ಐದು ಕೋಟಿ ರೂ. ವೆಚ್ಚದಲ್ಲಿ ವಸ್ತುಸಂಗ್ರಹಾಲಯವನ್ನು ಮಾಡಬೇಕೆಂಬ ಮಹತ್ವಾಕಾಂಕ್ಷೆ ಇದೆ. ಈ ಕಟ್ಟಡ ವಸ್ತುಗಳ ಸಂಗ್ರಹ ನಿರ್ವಹಣೆಗೆ ಯೋಗ್ಯ ರೀತಿಯಲ್ಲಿ ನಡೆಸಬೇಕು ಎಂಬ ಯೋಜನೆಯನ್ನೂ ಹಮ್ಮಿಕೊಳ್ಳಲಾಗಿದೆ. 
 ೨೦೧೪ರ ನವಂಬರ ತಿಂಗಳಿನಲ್ಲಿ ಒಂದು ವಾರದ ಅದ್ದೂರಿಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಆಯೋಜಿಸಲಾಗಿದ್ದು, ಶಾಲೆಯ ಹಳೆ ವಿದ್ಯಾರ್ಥಿಗಳು, ವಿದ್ಯಾಭಿಮಾನಿಗಳು, ಶ್ರೀ ಕ್ಷೇತ್ರ ಕಟೀಲಿನ ಭಕ್ತರ ಸಭೆಯನ್ನು ಇಂದು ತಾ೨೧ರಂದು ಸಂಜೆ ೫ಗಂಟೆಗೆ ಅಂಧೇರಿ ಅದಮಾರು ಮಠದಲ್ಲಿ ಕರೆಯಲಾಗಿದೆ ಎಂದು ಶ್ರೀ ಕ್ಷೇತ್ರ ಕಟೀಲಿನ ಅನಂತಪದ್ಮನಾಭ ಆಸ್ರಣ್ಣ,(೯೪೪೮೪೮೦೫೭೮) ಸುವರ್ಣ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಮಧುಕರ ಅಮೀನ್,(೯೪೪೮೨೧೬೯೭೫) ಉಪಪ್ರಾಚಾರ್ಯ ಕೆ.ವಿ.ಶೆಟ್ಟಿ(೯೪೮೦೬೯೬೩೯೪) ತಿಳಿಸಿದ್ದಾರೆ.

No comments:

Post a Comment