Friday, November 8, 2013

ಕಟೀಲು ಆರನೆಯ ಮೇಳ ಉದ್ಘಾಟನೆ

ದೇವೀ ಭಕ್ತಿ, ಕಲಾ ಪ್ರೀತಿಯಿಂದ ಸಂಸ್ಕೃತಿಯ ಉಳಿವು-ಪೇಜಾವರ ಶ್ರೀ
ಕಟೀಲು : ಯಕ್ಷಗಾನ ಪ್ರಪಂಚದ ಅದ್ಭುತವೆನಿಸಿದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಮಂಡಳಿಯ ಆರನೆಯ ಮೇಳದ ಉದ್ಘಾಟನೆ ಹಾಗೂ ಎಲ್ಲ ಮೇಳಗಳ ಈ ವರುಷದ ತಿರುಗಾಟದ ಆರಂಭ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶುಕ್ರವಾರ ವೈಭವದಿಂದ ನಡೆಯಿತು.
ಸಂಜೆ ಕ್ಷೇತ್ರದ ಅರ್ಚಕರಾದ ಆಸ್ರಣ್ಣ ಬಂಧುಗಳಾದ ವಾಸುದೇವ, ಅನಂತಪದ್ಮನಾಭ, ವೆಂಕಟರಮಣ, ಕಮಲಾದೇವೀ ಪ್ರಸಾದ, ಶ್ರೀಹರಿನಾರಾಯಣದಾಸ, ಮೇಳದ ಸಂಚಾಲಕ ಕಲ್ಲಾಡಿ ದೇವೀಪ್ರಸಾದ ಶೆಟ್ಟಿ, ಆಡಳಿತಾಧಿಕಾರಿ ಅಜಿತ್ ಕುಮಾರ ಹೆಗ್ಡೆ, ದೇಗುಲದ ತಂತ್ರಿಗಳಾದ ವೇದವ್ಯಾಸ ತಂತ್ರಿ ಸೇರಿದಂತೆ ನೂರಾರು ಮಂದಿ ಭಕ್ತರ ಉಪಸ್ಥಿತಿಯಲ್ಲಿ ದೇವರ ಸಮ್ಮುಖದಲ್ಲಿ ಲಕ್ಷ್ಮೀನಾರಾಯಣ ಆಸ್ರಣ್ಣ ಆರೂ ಮೇಳಗಳ ಕಲಾವಿದರಿಗೆ ಗೆಜ್ಜೆ ನೀಡುವ ಮೂಲಕ ತಿರುಗಾಟಕ್ಕೆ ಚಾಲನೆ ನೀಡಿದರು. ಇದಕ್ಕಿಂತ ಮೊದಲು ಮೇಳದ ಭಾಗವತರಾದ ಪದ್ಯಾಣ ಗೋವಿಂದ ಭಟ್, ಬಲಿಪ ಪ್ರಸಾದ ಭಟ್, ಗೋಪಾಲಕೃಷ್ಣ, ಮಯ್ಯ,  ಕುಬಣೂರು ಶ್ರೀಧರ ರಾವ್, ಪಟ್ಲ ಸತೀಶ ಶೆಟ್ಟಿ, ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಹಾಗೂ ಹಿಮ್ಮೇಳ ಕಲಾವಿದರಿಂದ ದೇವರ ಎದುರು ತಾಳಮದ್ದಲೆ ನಡೆಯಿತು. ಬಳಿಕ ಸರಸ್ವತೀ ಸದನದಲ್ಲಿ ಮೇಳದ ದೇವರಿಗೆ ಮುನ್ನೂರು ಕಲಾವಿದರ ಉಪಸ್ಥಿತಿಯಲ್ಲಿ ಚೌಕಿಪೂಜೆ ನಡೆಯಿತು.
ಉದ್ಘಾಟನೆ
ಪೇಜಾವರ ಮಠದ ಶ್ರೀ ವಿಶ್ವೇಶತೀಥ ಸ್ವಾಮೀಜಿ ಶ್ರೀ ದೇವೀ ಭಕ್ತಿ ಹಾಗೂ ಯಕ್ಷಗಾನದ ಮೇಲಿನ ಪ್ರೀತಿಯಿಂದ ಕಟೀಲಿನಲ್ಲಿ ಯಕ್ಷಗಾನ ಮೇಳಗಳು ಆರಕ್ಕೇರಿವೆ. ಆ ಮೂಲಕ ಸಂಸ್ಕೃತಿಯ ಔನತ್ಯವನ್ನು ಹೆಚ್ಚಿಸಿದಂತಾಗಿದೆ. ಈ ಕಾಲದಲ್ಲೂ ದೇವರ ಮೇಲಿನ ಭಕ್ತಿ ಹೆಚ್ಚಾಗಿದೆ. ಕಲೆಯ ಬಗೆಗಿನ ಪ್ರೀತಿ ಹೆಚ್ಚಾಗಿದೆ ಎಂದು ಹೇಳಬಹುದು. ಧರ್ಮ ಪ್ರಸಾರದ ಜೊತೆಗೆ ಒಳಿತನ್ನು ಸಾರುವ ಯಕ್ಷಗಾನ ಎಂದರೆ ಅದು ದೇವರಿಗೆ ಮಾಡುವ ನೃತ್ಯ, ಸಂಗೀತ ಆರಾಧನೆ. ಯಕ್ಷಗಾನ ಮೇಳಗಳಿಗೆ ಕಟೀಲು ಸೇನಾಧಿಪತಿಯಂತೆ ಇದೆ. ಅನೇಕ ಮೇಳಗಳಿಗೆ ಆಟಗಳು ಸಿಗುವುದಿಲ್ಲ. ಆದರೆ ಕಟೀಲು ಮೇಳಗಳಿಗೆ ಪುರುಸೊತ್ತೇ ಇಲ್ಲ ಎಂಬ ಸ್ಥಿತಿ.ಭಕ್ತರ ಹೃದಯ ರಂಗಸ್ಥಳದಲ್ಲಿ ಕಲೆ ಮತ್ತು ದೇವರು ಯಕ್ಷಗಾನದ ಮೂಲಕ ಸ್ಥಿರವಾಗಿ ನಿಲ್ಲುವಂತಾಗಲಿ. ಕಟೀಲಿನಲ್ಲಿ ಆಟ, ಊಟ, ಪಾಠದ ಕಾರ‍್ಯಗಳು ನಿರಂತರವಾಗಿ ನಡೆಯಲಿ ಎಂದು ಹೇಳಿದರು,

ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಹಾಗೂ ಮಾಲತಿ ಮೊಯ್ಲಿ ಆರನೆಯ ಮೇಳ ಉದ್ಘಾಟಿಸಿದರು. ಡಾ.ವೀರೇಂದ್ರ ಹೆಗ್ಗಡೆ, ಸಚಿವ ವಿನಯಕುಮಾರ ಸೊರಕೆ, ಮಾಣಿಲ ಸ್ವಾಮೀಜಿ, ಸಾಂಸದ ನಳಿನ್ ಕುಮಾರ್, ಆಸ್ರಣ್ಣ ಬಂಧುಗಳು ವೇದಿಕೆಯಲ್ಲಿದ್ದರು. ಮಳೆಗಾಲದಲ್ಲೂ ಕಾಲಮಿತಿಯ ಮೇಳ ಆರಂಭವಾಗಲಿದ್ದು, ೭೦ವರ್ಷ ಮೀರಿದವರು ಆಟ ನೋಂದಾಯಿಸಿದರೆ ಕೂಡಲೇ ಅವಕಾಶ ನೀಡಲಾಗುವುದು. ೮೫೦೦ಯಕ್ಷಗಾನ ಮುಂಗಡ ನೋಂದಾವಣೆಯಾಗಿದ್ದು, ಮುಂದಿನ ದಿನಗಳಲ್ಲಿ ಅಗತ್ಯವಿದ್ದರೆ ಹತ್ತು ಮೇಳಗಳನ್ನು ಮಾಡುವ ಮನಸ್ಸು ಇದೆ ಎಂದು ಅಜಿತ್ ಕುಮಾರ ಹೆಗ್ಡೆ ಹೇಳಿದರು. ಬಾಲಕೃಷ್ಣ ಶೆಟ್ಟಿ ಕಾರ‍್ಯಕ್ರಮ ನಿರೂಪಿಸಿದರು.
photo by katil studio

No comments:

Post a Comment