Friday, October 25, 2013

ಕಟೀಲಿನಲ್ಲಿ ಕಲಾಪರ್ವ

ಮಕ್ಕಳಲ್ಲಿ ಸಂಸ್ಕಾರದ ನಿರ್ಮಾಣ -ಅಜಿತ್ ಕುಮಾರ ಹೆಗ್ಡೆ
ಕಟೀಲು : ಯಕ್ಷಗಾನ ಪ್ರದರ್ಶನಗಳಿಗೆ ಹೋದರೆ ಅಲ್ಲಿ ವಯೋವೃದ್ಧರೇ ಕಾಣುತ್ತಾರೆ. ಯುವಕರ ಸಂಖ್ಯೆ ಕಡಿಮೆ ಕಾಣುತ್ತದೆ. ಮೊಬೈಲು, ಫೇಸುಬುಕ್ಕುಗಳಲ್ಲಿ ಮುಳುಗಿ ಹಾದಿತಪ್ಪುತ್ತಿರುವ ಮಕ್ಕಳಲ್ಲಿ ಯಕ್ಷಗಾನಾಸಕ್ತಿಯನ್ನು ಬೆಳೆಸಿದರೆ ಕಲಾವಿದರ ಜೊತೆಗೆ ಪ್ರೇಕ್ಷಕರ ಸಂಖ್ಯೆಯನ್ನೂ ಹೆಚ್ಚಿಸಿದಂತಾಗುತ್ತದೆ. ಅವರಲ್ಲಿ ಸಂಸ್ಕಾರವನ್ನು ನಿರ್ಮಿಸಿದಂತಾಗುತ್ತದೆ. ಕಟೀಳಿನ ದುರ್ಗಾ ಮಕ್ಕಳದ್ದು ಸೇರಿದಂತೆ ಜಿಲ್ಲೆಯಲ್ಲಿ ಅನೇಕ ಮಕ್ಕಳ ಯಕ್ಷಗಾನ ಮೇಳಗಳು ಈ ನಿಟ್ಟಿನಲ್ಲಿ ಕ್ರಿಯಾಶೀಲವಾಗಿರುವುದು ಸಮಾಧಾನಕರ ಎಂದು ಮಂಗಳೂರು ಮಹಾನಗರ ಪಾಳಿಕೆ ಆಯುಕ್ತ, ಕಟೀಲು ದೇಗುಲದ ಆಡಳಿತಾಧಿಕಾಇರ ಶಾನಾಡಿ ಅಜಿತ್ ಕುಮಾರ ಹೆಗ್ಡೆ ಹೇಳಿದರು.
ಅವರು ಭಾನುವಾರ ರಾತ್ರಿ ಕಟೀಲು ಶ್ರೀ ದುರ್ಗಾ ಮಕ್ಕಳ ಮೇಳದ ಐದನೆ ವರ್ಷದ ಕಲಾಪರ್ವದಲ್ಲಿ ಮಾತನಾಡಿದರು.
ಮುಂಬೈನ ಜ್ಯೋತಿಷಿ ಪೆರ್ಣಂಕಿಲ ಹರಿದಾಸ ಭಟ್ ಮಾತನಾಡಿ ರಾಮ ರಾವಣವನ್ನು ಕೊಂದರೆ, ಕೃಷ್ಣ ಕಂಸನನ್ನು, ದುರ್ಗಾಸುರನನ್ನು ದುರ್ಗೆ, ಮಹಿಷಾಸುರನ್ನು ಮಹಿಷಮರ್ಧಿನಿ, ರಕ್ತಬೀಜನನ್ನು ರಕ್ತೇಶ್ವರೀ, ಗಾಂಧಿಯನ್ನು ಗೋಡ್ಸೆ, ಒಸಾಮಾನನ್ನು ಒಬಾಮಾ ಹೀಗೆ ಆಯಾಯ ಅಕ್ಷರದವರೇ ಶತ್ರುಗಳಾಗಿರುವ ವಿಚಾರಗಳನ್ನು ಅಧ್ಯಯನದಿಂದ ಗಮನಿಸಬಹುದು. ಶುದ್ಧ ಕನ್ನಡವನ್ನು ಯಕ್ಷಗಾನದಿಂದ ಮಾತಾಡಬಹುದು ಎಂದು ಹೇಳಿದರು.
ಕಲಾವಿದ ಮಂಜೇಶ್ವರ ಜನಾರ್ದನ ಜೋಗಿಯವರನ್ನು ಹತ್ತು ಸಾವಿರ ರೂ.. ನಗದು ಸಹಿತ ಸಂಮಾನಿಸಲಾಯಿತು. ಯಕ್ಷಗಾನೀಯ ಶೈಲಿಯಲ್ಲಿ ಬಲಿಪ ಶಿವಶಂಕರ ಭಟ್ ಸಂಮಾನಪತ್ರ ವಾಚಿಸಿದರು.
ಪ್ರಸಂಗಕರ್ತ ಶ್ರೀಧರ ಡಿ.ಎಸ್. ಮತ್ತು ಯಕ್ಷಗಾನ ವಿಮರ್ಶಕ ಕೆ.ಎಲ್.ಕುಂಡಂತಾಯರನ್ನು ಗೌರವಿಸಲಾಯಿತು. ಇದೇ ಸಂದರ್ಭ ಯಕ್ಷಗಾನ ಶಿಕ್ಷಣ ಪಡೆದ ವಿದ್ಯಾರ್ಥೀಗಳಿಗೆ ಪ್ರಮಾಣಪತ್ರ ವಿತರಣೆ, ಯಕ್ಷಗಾನ ಪ್ರತಿಭಾ ಪುರಸ್ಕಾರ, ಗುರುವಂದನೆ ನಡೆಯಿತು.
ಸಚಿವ ಅಭಯಚಂದ್ರ ಜೈನ್, ಸೂರ್‍ಯನಾರಾಯಣ ಉಪಾಧ್ಯಾಯ, ವಾಸುದೇವ ಆಸ್ರಣ್ಣ, ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ಅಜಿತ್ ಕುಮಾರ ಹೆಗ್ಡೆ, ಡಾ.ಪದ್ಮನಾಭ ಕಾಮತ್, ಅಜಿತ್ ಕುಮಾರ ಹೆಗ್ಡೆ, ಬಿ.ಟಿ.ಬಂಗೇರ, ತಲ್ಲೂರು ಶಿವರಾಮ ಶೆಟ್ಟಿ, ಮರವೂರು ಜಗದೀಶ ಶೆಟ್ಟಿ, ಕಲ್ಲಾಡಿ ದೇವೀಪ್ರಸಾದ ಶೆಟ್ಟಿ, ಅಶೋಕ ಶೆಟ್ಟಿ, ಗಣೇಶ ಶೆಟ್ಟಿ, ಲೀಲಯ್ಯ ಶೆಟ್ಟಿಗಾರ, ಲೀಲಾಕ್ಷ ಕರ್ಕೇರ ಮತ್ತಿತರರಿದ್ದರು.
ಮಕ್ಕಳ ಮೇಳದ ಅಧ್ಯಕ್ಷ ಶ್ರೀಹರಿನಾರಾಯಣದಾಸ ಆಸ್ರಣ್ಣ ಸ್ವಾಗತಿಸಿದರು. ವಾಸುದೇವ ಶೆಣೈ ಕಾರ್‍ಯಕ್ರಮ ನಿರೂಪಿಸಿದರು. ಪಶುಪತಿ ಶಾಸ್ತ್ರಿ ವಂದಿಸಿದರು. ಶ್ರೀ ದುರ್ಗ ಮಕ್ಕಳ ಮೇಳದವರಿಂದ ನೂರನೇ ಪ್ರದರ್ಶನವಾದ ರಾಮಲಕ್ಷ್ಮಣರ ಒಡ್ಡೋಲಗ ಸಹಿತವಾದ ಪಂಚವಟಿ ಪ್ರದರ್ಶನಗೊಂಡಿತು.

No comments:

Post a Comment