Wednesday, March 16, 2011

ಕಟೀಲು ದೇಗುಲದ ವಸಂತ ಮಂಟಪಕ್ಕೆ ಚಿನ್ನ ಬೆಳ್ಳಿಯ ಕುಸುರಿ

ಕಟೀಲು : ಪುರಾಣ ಪ್ರಸಿದ್ಧ ಭ್ರಾಮರೀ ದುರ್ಗಾಪರಮೇಶ್ವರೀ ದೇಗುಲದಲ್ಲಿರುವ ವಸಂತ ಮಂಟಪಕ್ಕೆ ಚಿನ್ನ ಬೆಳ್ಳಿಯಿಂದ ಅಲಂಕೃತ ಕುಸುರಿ ಕೆಲಸವನ್ನು ಮಾಡಲಾಗಿದ್ದು, ತಾ. ೧೮ರ ಶುಕ್ರವಾರ ಶ್ರೀ ದೇವಿಗೆ ಸಮರ್ಪಿಸಲಾಗುವುದು ಎಂದು ದಾನಿ ಪೋಪ್ಯುಲರ್ ಜಗದೀಶ ಸಿ.ಶೆಟ್ಟಿ ಹೇಳಿದರು.
ಅವರು ಬುಧವಾರ ಕಟೀಲು ದೇಗುಲದಲ್ಲಿ ಕರೆದ ಸುದ್ಧಿಗೋಷ್ಟಿಯಲ್ಲಿ ವಿವರ ನೀಡಿದರು.
ವಸಂತ ಮಂಟಪಕ್ಕೆ ೧೯೮೬ರಲ್ಲಿ ಕನ್ನಡಿಗಳಿಮದ ಅಲಂಕರಿಸಿ ಗ್ಲಾಸ್ ಹೌಸ್ ಸೇವೆ ನೀಡಿದ್ದು, ಇದೀಗ ಅದೇ ಮಂಟಪಕ್ಕೆ ೫೦ಕೆಜಿ ಬೆಳ್ಳಿ, ೧೦ಕೆಜಿ ಜರ್ಮನ್ ಬೆಳ್ಳಿ, ೨೦೦ಗ್ರಾಂ. ಚಿನ್ನದಿಂದ ನಿರ್ಮಿಸಲಾಗಿದೆ. ಬೆಳ್ಳಿಯಿಂದ ವಸಂತ ಮಂಟಪ ಪೀಠಗಳನ್ನು ಅಲಂಕರಿಸಲಾಗಿದ್ದು, ನವಿಲುಗಳು, ಪಾರ್ಥಸಾರಥಿ ಕುಸುರಿ ಕೆಲಸ ಆಕರ್ಷಣೀಯವಾಗಿದೆ. ಮಂಟಪದೊಳಗೆ ಶ್ರೀ ದೇವಿ ಬಿಂಬವನ್ನು ಚಿನ್ನದ ಲೇಪನದಲ್ಲಿ ಮಾಡಲಾಗಿದ್ದು, ವಜ್ರದ ಮೂಗುತಿಯಿಂದ ಅಲಂಕರಿಸಲಾಗಿದೆ. ತಾ.೧೮ರ ಸಂಜೆ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥರು ಶ್ರೀ ದೇವಿಗೆ ಸಮರ್ಪಿಸಲಿದ್ದಾರೆ. ಹಯಗ್ರೀವ ತಂತ್ರಿ, ವೇದವ್ಯಾಸ ತಂತ್ರಿ, ದೇಗುಲದ ಅರ್ಚಕರಾದ ಆಸ್ರಣ್ಣ ಬಂಧುಗಳು ಭಾಗವಹಿಸಲಿದ್ದಾರೆ ಎಂದು ಜಗದೀಶ ಶೆಟ್ಟಿ ತಿಳಿಸಿದರು.
ಕಟೀಲು ದೇಗುಲಕ್ಕೆ ಈಗಾಗಲೇ ಜಗದೀಶ ಶೆಟ್ಟರು ದೇವಿಯ ರತ್ನಾಭರಣ ಇಡುವ ಟ್ರೆಜರಿಯನ್ನು ನೀಡಿದ್ದು, ಮುಂಬೈಯಲ್ಲಿ ಹೋಟೇಲು ಉದ್ಯಮಿಯಾಗಿದ್ದು, ಮರವೂರಿನಲ್ಲಿ ಪಾಪ್ಯುಲರ್ ಎಜುಕೇಶನ್ ಸೆಂಟರ್‌ನ ಸ್ಥಾಪಕರೂ ಆಗಿದ್ದಾರೆ. ಅಲ್ಲದೆ ಕಟೀಲು ಯಕ್ಷಗಾನ ಮೇಳಗಳಿಗೆ ಸಹಕಾರ ನೀಡುತ್ತಿರುವ ಯಕ್ಷಧರ್ಮಬೋಧಿನಿ ಟ್ರಸ್ಟ್‌ನ ನಿರ್ದೇಶಕರಲ್ಲೊಬ್ಬರಾಗಿದ್ದಾರೆ ಎಂದು ಕಟೀಲು ದೇಗುಲದ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಹೇಳಿದರು.
ವಸಂತ ಮಂಟಪದಲ್ಲಿ ವೈಶಾಖ ಮಾಸದ ಒಂದು ತಿಂಗಳ ಕಾಲ ವಸಂತ ಪೂಜೆಯಲ್ಲಿ ಹಾಗೂ ಉತ್ಸವದ ಸಂದರ್ಭ ಎಂಟು ದಿನಗಳ ಕಾಲ ಶ್ರೀ ಭ್ರಾಮರೀಯ ಉತ್ಸವ ಮೂರ್ತಿಯನ್ನಿಟ್ಟು ಪೂಜೆ ನಡೆಯುತ್ತದೆ.
ಸುದ್ದಿಗೋಷ್ಟಿಯಲ್ಲಿ ಅರ್ಚಕರಾದ ಅನಂತಪದ್ಮನಾಭ ಆಸ್ರಣ್ಣ, ಹರಿನಾರಾಯಣದಾಸ ಆಸ್ರಣ್ಣ, ಉಮೇಶ ರಾವ್ ಎಕ್ಕಾರು, ದೀಪಕ್ ಶೆಟ್ಟಿ, ಸುನೇತ್ರ ಶೆಟ್ಟಿ, ಪ್ರಭಾಕರ ಆಚಾರ್‍ ಮತ್ತಿತರರಿದ್ದರು.

No comments:

Post a Comment