














ದೇವೀ ಮಾಹಾತ್ಮ್ಯೆಯ ಮಹಿಷಾಸುರ ವೇಷಕ್ಕೆ ಈಗ ಇರುವ ನಾಟಕೀಯ ಕೊಂಬಿನ ಬದಲು ಕಿರೀಟ ಕಟ್ಟಿ ಅದಕ್ಕೆ ಸಣ್ಣ ಕೊಂಬುಗಳನ್ನು ಇಟ್ಟರೆ ಹೇಗೆ ಎಂಬ ಅಭಿಪ್ರಾಯಕ್ಕೆ ಬಜಪೆಯಲ್ಲಿ ನಡೆದ ಶ್ರೀ ದೇವೀ ಮಾಹಾತ್ಮ್ಯೆ ಪ್ರಸಂಗ ಪ್ರದರ್ಶನಗಳ ಅಧ್ಯಯನ ಶಿಬಿರದಲ್ಲಿ ವಿದ್ವಾಂಸರು, ಕಲಾವಿದರು ಒಪ್ಪಿಗೆ ಸೂಚಿಸಲಿಲ್ಲ. ಈಗ ಇರುವ ಕೊಂಬಿನ ವೇಷವೇ ಚೆಂದ. ಕಿರೀಟಕ್ಕೆ ಕೊಂಬು ಅಳವಡಿಸಿದರೆ ಚಂದಕ್ಕೂ ಕೊರತೆ, ಕುಣಿತಕ್ಕೂ ಕಷ್ಟ ಎಂಬ ಅಭಿಪ್ರಾಯವನ್ನು ಹೆಚ್ಚಿನವರು ವ್ಯಕ್ತಪಡಿಸಿದರು.
ನಾಟ್ಯಶಾಸ್ತ್ರ ಪ್ರಕಾರದಂತೆ ರೂಪಿಸಿದ ದೇವೀ ಪಾತ್ರದ ಹೊಸ ವಿನ್ಯಾಸದ ವೇಷಕ್ಕೆ ಭವ್ಯತೆ ಇದೆ ಆದರೆ ದಿವ್ಯತೆ ಕಾಣುತ್ತಿಲ್ಲ ಎಂಬ ಅಭಿಪ್ರಾಯ ಬಂದ ಹಿನ್ನಲೆಯಲ್ಲಿ ನಿರ್ಣಯವು ಮುಂದೂಡಲ್ಪಟ್ಟಿತು.ವಿದ್ಯುನ್ಮಾಲಿ ಪಾತ್ರ ಬೇಕೇ ಬೇಡವೇ ಎಂಬುದೂ ಚರ್ಚೆಗೊಳಗಾಯಿತು. ಹಿಂದೆ ಈ ಪಾತ್ರ ಇರಲಿಲ್ಲ. ನಾನು ಬಂದ ಮೇಲೆ ಸೇರಿಸಿದ್ದು ಎಂದವರು ಬಲಿಪ ನಾರಾಯಣ ಭಾಗವತರು. ವಿದ್ಯುನ್ಮಾಲಿಯ ಮದುವೆ, ಪುರೋಹಿತರ ವೇಷಗಳ ಬಗ್ಗೆಯೂ ಜಿಜ್ಞಾಸೆ ನಡೆಯಿತು. ಚಂಡಮುಂಡರ ಪಾತ್ರಗಳು ಇನ್ನಷ್ಟು ಸುಧಾರಿಸಬೇಕು ಎಂದ ಗೋವಿಂದ ಭಟ್ಟರು ಅಕ್ಷಗತಿ, ರಥಗತಿ, ಗಜಗತಿಗಳ ಪ್ರಾತ್ಯಕ್ಷಿಕೆಯನ್ನು ಚೆನ್ನಾಗಿ ತೋರಿಸಿಕೊಟ್ಟರು. ಮಧುಕೈಟಭರು ನಾಟಕೀಯ ವೇಷಗಳ ಬದಲಾಗಿ ಕಿರೀಟಕಟ್ಟಿ ಪಾತ್ರಗಳನ್ನು ಯಕ್ಷಗಾನೀಯವಾಗಿಸುವುದು, ಬ್ರಹ್ಮ ವಿಷ್ಣು ಮಹೇಶ್ವರರ ಮಾತುಗಳನ್ನು ಘನತೆಗನುಗುಣವಾಗಿ ಚೆನ್ನಾಗಿಸುವುದು, ತ್ರಿಮೂರ್ತಿಗಳ ವೇಷ ಪಗಡಿ ಕಟ್ಟಿ ಮಾಡುವುದು ಹೀಗೆ ಕೆಲ ನಿರ್ಣಯಗಳಾದವು.ಪ್ರೇಕ್ಷಕನಿಗೆ ಮನೋರಂಜನೆ ನೀಡುವುದು ಮುಖ್ಯ ಎಂಬ ಅಭಿಪ್ರಾಯ ಕಲಾವಿದರಿಂದ ವ್ಯಕ್ತವಾದಾಗ ಜನರ ಮಟ್ಟಕ್ಕೆ ಕಲೆಯನ್ನು ತೆಗೆದುಕೊಂಡು ಹೋಗದೆ ಕಲೆಯ ಮಟ್ಟಕ್ಕೆ ಪ್ರೇಕ್ಷಕನನ್ನು ಎತ್ತರಕ್ಕೇರಿಸಬೇಕು. ದೇವರ ಹೆಸರಿನಲ್ಲಿ ಹೊರಡುವ ಮೇಳಗಳು ಆಧ್ಯಾತ್ಮ ಜಾಗೃತಿ ಮಾಡಬೇಕೆಂದರು ವಿದ್ವಾಂಸರು. ದೇವೀ ಮಾಹಾತ್ಮ್ಯೆಯನ್ನು ಜನರು ಭಕ್ತಿಯಿಂದ ಆಡಿಸುತ್ತಾರೆ. ಐದು ಸಾವಿರ ರೂ.ನ ಹೂವುಗಳನ್ನು ದೇವೀ ಪಾತ್ರಧಾರಿಗೆ ಹಾಕುತ್ತಾರೆ. ಮಹಿಷಾಸುರನನ್ನು ಹಾಲು ಕೊಟ್ಟು ವೈಭವದಿಂದ ರಂಗಸ್ಥಳಕ್ಕೆ ಬರುವಂತೆ ಮಾಡುತ್ತಾರೆ. ದೇವೀ ಪ್ರತ್ಯಕ್ಷವಾದಾಗ ಕರ್ಪೂರ ಇಟ್ಟು ಎದ್ದು ನಿಂತು ಕೈಮುಗಿಯುವವರೂ ಇದ್ದಾರೆ ಎಂಬ ಅಭಿಪ್ರಾಯಗಳು ದೇವೀಮಾಹಾತ್ಯೆಯನ್ನು ಕಲಾ ದೃಷ್ಟಿಗಿಂತಲೂ ಭಾವನಾತ್ಮಕವಾಗಿ ನೋಡಬೇಕು ಎಂಬ ವಾದಕ್ಕೆ ವ್ಯಕ್ತವಾದವು. ಸಿಡಿಮದ್ದು ವಾದ್ಯ ಬ್ಯಾಂಡುಗಳು ಕಲಾವಿದರಿಗೆ ಕಿರಿಕಿರಿ ಮಾಡುತ್ತವೆ ಎಂಬ ಅಭಿಪ್ರಾಯವೂ ಕೇಳಿಬಂತು.ಕೊರ್ಗಿ ವೇಂಕಟೇಶ್ವರ ಉಪಾಧ್ಯಾಯ, ಕುಂಬ್ಳೆ ಸುಂದರ ರಾವ್, ಸುಣ್ಣಂಬಳ ವಿಶ್ವೇಶ್ವರ ರಾವ್, ಎಂ.ಎಲ್.ಸಾಮಗ, ಕುಷ್ಟ ಗಾಣಿಗ, ದಿವಾಣ ಭೀಮ ಭಟ್, ಕೋಳ್ಯೂರು ರಾಮಚಂದ್ರ ರಾವ್, ರೆಂಜಾಳ ರಾಮಕೃಷ್ಣ ರಾವ್, ಉಜಿರೆ ಅಶೋಕ್ ಭಟ್, ಶ್ರೀಹರಿ ಆಸ್ರಣ್ಣ, ಕೆ.ಎಲ್.ಕುಂಡಂತಾಯ, ಬಲಿಪ ನಾರಾಯಣ ಭಾಗವತ. ಗಂಗಯ್ಯ ಶೆಟ್ಟಿ, ದಿನೇಶ್ ಕಾವಳಕಟ್ಟೆ, ದೇವಕಾನ ಕೃಷ್ಣ ಭಟ್, ಡಾ. ನಾರಾಯಣ ಶೆಟ್ಟಿ, ಶ್ರೀಧರ ಹಂದೆ, ವಾಸುದೇವ ರಂಗ ಭಟ್ ಮುಂತಾದ ಅನೇಕರು ಚರ್ಚೆಗಳಲ್ಲಿ ಪಾಲ್ಗೊಂಡರು.
No comments:
Post a Comment