ಪುರಾಣ ಪ್ರಸಿದ್ಧ ಶ್ರೀ ಭ್ರಾಮರೀ ದುರ್ಗಾಪರಮೇಶ್ವರೀ ದೇಗುಲದ ವತಿಯಿಂದ ತೊಂಭತ್ತೈದು ವರ್ಷಗಳಿಂದ ನಡೆಯುತ್ತಿರುವ ಹಿರಿಯ ಪ್ರಾಥಮಿಕ ಶಾಲೆಗೆ ಕೊನೆಗೂ ಹೊಸ ಕಟ್ಟಡದ ಭಾಗ್ಯ ಬಂದಿದೆ. ೧೯೧೬ರಲ್ಲಿ ಸ್ಥಾಪನೆಗೊಂಡ ಹಿರಿಯಪ್ರಾಥಮಿಕ ಶಾಲೆಯ ಈಗಿನ ಕಟ್ಟಡ ಆವಾಗಲೇ ಕಟ್ಟಲಾಗಿತ್ತಂತೆ. ಕೆಲ ತಿಂಗಳು ಶಾಲೆ ದೇಗುಲದ ಈಗಿನ ಗೋಪುರವಿರುವ ಜಾಗದಲ್ಲಿ ನಡೆಯುತ್ತಿತ್ತಂತೆ. ತೊಂಭತ್ತೈದು ವರುಷಗಳಿಂದ ಕಟೀಲು ದೇಗುಲದ ಎದುರಿನ ಕಟ್ಟಡದಲ್ಲಿ ನಡೆಯುತ್ತಿದ್ದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೆಲವೇ ವರ್ಷಗಳ ಹಿಂದೆ ಒಂದು ಸಾವಿರ ವಿದ್ಯಾರ್ಥಿಗಳು, ೨೧ಶಿಕ್ಷಕರು ಇದ್ದರು. ಇವತ್ತು ಎಲ್ಲ ಕನ್ನಡ ಶಾಲೆಗಳಂತೆ ಮಕ್ಕಳ ಸಂಖ್ಯೆ ಕುಸಿದು ೩೫೦ ವಿದ್ಯಾರ್ಥಿಗಳಿದ್ದಾರೆ. ಇವತ್ತು ಕಟೀಲಿನಲ್ಲಿ ಪ್ರೌಢ, ಪದವೀಪೂರ್ವ, ಪದವೀ, ಸಂಸ್ಕೃತ ಸ್ನಾತಕೋತ್ತರದಷ್ಟು ಶಿಕ್ಷಣ ವ್ಯವಸ್ಥೆಯಿದೆ. ಆದರೂ ಈ ಪ್ರಾಥಮಿಕ ಶಾಲೆಗೆ ಅನೇಕ ಕಾರಣಗಳಿಗಾಗಿ ಮಹತ್ವವಿದೆ.ಪ್ರಾಥಮಿಕ ಶಾಲೆಯ ಸರಸ್ವತೀ ಸದನದಲ್ಲಿ ದೇಗುಲದ ಸಾವಿರಾರು ಸಾಂಸ್ಕೃತಿಕ ಕಾರ‍್ಯಕ್ರಮಗಳು ನಡೆದಿವೆ. ನಡೆಯುತ್ತಿವೆ. ರಾಷ್ಟ್ರ, ರಾಷ್ಟ್ರಾಂತರ ಖ್ಯಾತಿಯ ಕಲಾವಿದರು ಇಲ್ಲಿ ಕಾರ‍್ಯಕ್ರಮ ನೀಡಿದ್ದಾರೆ. ದೇಗುಲದ ಎಲ್ಲ ಸಾಂಸ್ಕೃತಿಕ ಕಾರ‍್ಯಕ್ರಮಗಳಿಗೆ ಇದೇ ಶಾಲೆಯೇ ಸಭಾಭವನ. ಹಾಗಾಗಿ ಇಲ್ಲಿ ನಡೆದಷ್ಟು ಕಾರ‍್ಯಗಾರ, ವಿಚಾರ ಸಂಕಿರಣ, ಸಾಂಸ್ಕೃತಿಕ ಕಾರ‍್ಯಕ್ರಮ ಮತ್ಯಾವ ಶಾಲೆಯಲ್ಲೂ ನಡೆದಿರಲಿಕ್ಕಿಲ್ಲ. ಕಟೀಲಿನ ರಥಬೀದಿಯಲ್ಲಿ ವರುಷದ ಆರು ತಿಂಗಳೂ ಯಕ್ಷಗಾನ ನಡೆಯುತ್ತದೆ. ಹಾಗಾಗಿ ಹಗಲು ಶಾಲೆ, ರಾತ್ರಿ ಯಕ್ಷಗಾನದ ಚೌಕಿ. ಇಲ್ಲಿ ಬಣ್ಣ ಹಚ್ಚಿದ ಕಲಾವಿದರು ಲೆಕ್ಕವಿಲ್ಲದಷ್ಟು ಮಂದಿ. ದೇಗುಲದಲ್ಲಿ ವಸತಿಗೃಹದ ಸಮಸ್ಯೆಯಿದ್ದುದರಿಂದ ಆಟಕ್ಕೆ ದೇಗುಲಕ್ಕೆ ಎಂದು ಬಂದವರು ರಾತ್ರಿ ಮಲಗುತ್ತಿದ್ದುದು ಇದೇ ಶಾಲೆಯ ಜಗಲಿಯಲ್ಲಿ. ಯಕ್ಷಗಾನ ಈ ಶಾಲೆಯಲ್ಲಿ ಕಲಿಯುವ ಮಕ್ಕಳಿಗೆ ಸಿದ್ದಿಸುವ ಕಲೆ. ಇಲ್ಲಿನ ಗ್ರಂಥಾಲಯವೂ ಗಮನೀಯ. ಶಾಲೆಯ ಭಜನೆ, ಶಾರದಾ ಪೂಜೆ ಅತ್ಯಂತ ಪ್ರಸಿದ್ಧಿ. ರಥಬೀದಿಯಿಂದ ಎತ್ತರದ ಮೆಟ್ಟಿಲುಗಳನ್ನು ಕೈಮುಗಿಯುತ್ತ ಹತ್ತಿ ಶಾಲೆ ಪ್ರವೇಶಿಸುವ ಇಲ್ಲಿನ ವಿದ್ಯಾರ್ಥಿಗಳು ಕ್ರೀಡೆಯಲ್ಲೂ ದೊಡ್ಡ ಹೆಸರು ಮಾಡಿದವರು.ದೇಗುಲದ ಎದುರೇ ಇರುವ ಶಾಲಾ ಕಟ್ಟಡ ಹಳೆಯದಾದರೂ ಗಟ್ಟಿಯಾಗಿದೆ. ಆದರೂ ವಾಹನಗಳ ಅಬ್ಬರ, ದೇಗುಲದ ಎದುರು ಸಭಾಭವನ ಇತ್ಯಾದಿ ಉದ್ದೇಶಗಳಿಗಾಗಿ ಶಾಲೆಯನ್ನು ಬೇರೆಡೆಗೆ ವರ್ಗಾಯಿಸುವುದು ಅಗತ್ಯವಾಗಿತ್ತು. ಈ ಹಿನ್ನಲೆಯಲ್ಲಿ ಕಳೆದ ಏಳು ವರ್ಷಗಳ ಹಿಂದೆಯೇ ಪ್ರಾಥಮಿಕ ಶಾಲೆಗೆ ಅಜಾರು ಬಳಿ ಹೊಸ ಕಟ್ಟಡ ಕಾಮಗಾರಿ ಆರಂಭವಾಗಿತ್ತಾದರೂ ಮುಜರಾಯಿ ಇಲಾಖೆಯ ನೀತಿನಿಯಮಗಳಿಂದಾಗಿ ಆಮೆಗತಿಯಲ್ಲಿ ಕಾಮಗಾರಿ ಸಾಗಿತ್ತು. ಹದಿನಾಲ್ಕು ತರಗತಿಗಳ ಕೊಠಡಿಗಳ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿ ವರುಷ ಎರಡು ಕಳೆದರೂ ಹೊಸ ಕಟ್ಟಡಕ್ಕೆ ಶಾಲೆ ಸ್ಥಳಾಂತರಗೊಂಡಿಲ್ಲ ಎಂದು ಹೊಸದಿಗಂತ ಸೇರಿದಂತೆ ಪತ್ರಿಕೆಗಳಲ್ಲಿ ಸುದ್ದಿಯಾಗಿತ್ತು. ಇದೀಗ ಶುಕ್ರವಾರ ವಿದ್ಯಾರ್ಥಿಗಳು ಹೊಸ ಶಾಲೆ ಕಟ್ಟಡಕ್ಕೆ ಸ್ಥಳಾಂತರಗೊಂಡಿದ್ದು ತರಗತಿಗಳು ಎಂದಿನಂತೆ ನಡೆಯುತ್ತಿವೆ. ಜುಲೈ ೨೮ರಂದು ಅಧಿಕೃತವಾಗಿ ಹೊಸ ಕಟ್ಟಡದ ಉದ್ಘಾಟನೆ ನಡೆಯಲಿದೆ. ಶಾಲೆ ಕಟ್ಟಡ, ಕಂಪೌಂಡ್, ಟ್ಯಾಂಕ್ ಎಲ್ಲ ಸೇರಿದರೆ ೪೫ಲಕ್ಷ ರೂ. ಕಾಮಗಾರಿಯ ಮೊತ್ತವಾಗುತ್ತದೆ.ಹಳೆ ಶಾಲೆ ಕಟ್ಟಡ ಸರಸ್ವತೀ ಸದನ ಕಟ್ಟುವ ಸಂದರ್ಭ ಮರಗಳನ್ನು ದೂರದ ಮಚ್ಚಾರಿನಿಂದ ನಂದಿನಿ ಹೊಳೆಯ ನೆರೆಯಲ್ಲಿ ತರಲಾಗಿತ್ತು. ಕಟೀಲು ದೇಗುಲದಷ್ಟೇ ಈ ಶಾಲೆಗೂ ಪ್ರಾಮುಖ್ಯವಿದೆ ಎಂದು ಇಲ್ಲಿ ಶಿಕ್ಷಕರಾಗಿದ್ದ ಪು.ಶ್ರೀನಿವಾಸ ಭಟ್ಟರು ಅಭಿಪ್ರಾಯಪಡುತ್ತಾರೆ. ಕಾಶಿ ವಿವಿ ಉಪಕುಲಪತಿ ಪದ್ಮಶ್ರೀ ಡಾ.ಕೆ.ಎನ್.ಉಡುಪ, ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥರು ಹೀಗೆ ಅನೇಕ ಗಣ್ಯರು ಕಲಿತ ಈ ಶಾಲೆಯಲ್ಲಿ ಹತ್ತು ಸಾವಿರದಷ್ಟು ಮಂದಿ ಶಿಕ್ಷಣ ಪಡೆದಿದ್ದಾರೆ. ಲಾಲ್ ಬಹದ್ದೂರ್ ಶಾಸ್ತ್ರಿ ರೈಲ್ವೆ ಸಚಿವರಾಗಿದ್ದಾಗ ಈ ಶಾಲೆಗೆ ಬಂದು ಭಾಷಣ ಮಾಡಿ ಹೋಗಿದ್ದರಂತೆ. ಇಲ್ಲಿನ ಶಾಲೆಯ ಮಕ್ಕಳಿಗೆ ಆವಾಗಾವಾಗ ದೇಗುಲದ ಕಾಣಿಕೆ ಡಬ್ಬಿಯ ಲಕ್ಷಗಟ್ಟಲೆ ರೂಪಾಯಿ ಕಾಣಿಕೆ(ನಾಣ್ಯ) ದುಡ್ಡು ಲೆಕ್ಕ ಮಾಡುವ ಸಂಭ್ರಮವೂ ಇದೆ. ಮಧ್ಯಾಹ್ನ ಊಟ ಎರಡು ದಶಕಗಳ ಹಿಂದೆಯೇ ಈ ಶಾಲೆಯಲ್ಲಿ ಆರಂಭವಾಗಿತ್ತು.ಅನೇಕ ಕಾರಣಗಳಿಗಾಗಿ ಮಹತ್ವ ಪಡೆದಿರುವ ಸರಸ್ವತೀ ಸದನ ಹೆಸರಿನ ಕಟೀಲಿನ ಪ್ರಾಥಮಿಕ ಶಾಲೆಯ ಹಳೆಯ ಕಟ್ಟಡದಿಂದ ಹೊಸ ಕಟ್ಟಡಕ್ಕೆ ಹೋಗುವುದು ಇಲ್ಲಿನ ಮಕ್ಕಳಿಗೆ, ಶಿಕ್ಷಕರಿಗೆ ಖುಷಿಯೂ ಹೌದು, ಬೇಸರವೂ ಹೌದು!
No comments:
Post a Comment