ಬಜಪೆಯಲ್ಲಿ ನಡೆದ ದೇವೀ ಮಾಹಾತ್ಮ್ಯೆ ಕಾರ್ಯಾಗಾರದಲ್ಲಿ ಯಕ್ಷರಂಗದ ದಿಗ್ಘಜರೊಂದಿಗೆ ಎರಡನೆ ಸಾಲಿನ ಖುರ್ಚಿಯಲ್ಲಿ ಕಾಲು ಮಡಚಿ ಕೂತವರು ಕೊರ್ಗಿ ಉಪಾಧ್ಯಾಯರು. ಪಕ್ಕದಲ್ಲಿ ಗೋವಿಂದ ಭಟ್ ಮತ್ತು ಸುಣ್ಣಂಬಳ ವಿಶ್ವೇಶ್ವರ ಭಟ್
ಕಟೀಲು : ಖ್ಯಾತ ಯಕ್ಷಗಾನ ಅರ್ಥವಾದಿ, ಸಂಸ್ಕೃತ, ಕನ್ನಡ ಪಂಡಿತ, ವಿದ್ವಾಂಸ, ಪ್ರಸಂಗಕರ್ತ, ಸಾಹಿತಿ, ವಿಮರ್ಶಕ, ಶಿಕ್ಷಕರಾಗಿದ್ದ ದ್ವಿವೇದಿ ಕೊರ್ಗಿ ವೇಂಕಟೇಶ್ವರ ಉಪಾಧ್ಯಾಯ(೫೯ವರ್ಷ) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅಲ್ಪ ಕಾಲದ ಅಸೌಖ್ಯದಿಂದ ಸೋಮವಾರ ನಿಧನರಾದರು. ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
೧೯೫೨ರಲ್ಲಿ ಜನಿಸಿದ್ದ ಕೊರ್ಗಿ ವೇಂಕಟೇಶ್ವರ ಉಪಾಧ್ಯಾಯರು ೮ನೇ ವರ್ಷದಲ್ಲಿ ಶೃಂಗೇರಿಯಲ್ಲಿ ವೇದಾಧ್ಯಯನ, ಋಗ್ವೇದ, ಉಡುಪಿಯಲ್ಲಿ ಯಜುರ್ವೇದ ಅಧ್ಯಯನ, ೧೯೭೫ರಲ್ಲಿ ನವೀನ ನ್ಯಾಯ ವಿದ್ವತ್ ಬಳಿಕ ಕನ್ನಡ ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ೧೯೭೫ರಿಂದ ಕಟೀಲು ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದ ಉಪಾಧ್ಯಾಯರು ಪಂಡಿತರೆಂದೇ ಖ್ಯಾತರಾಗಿದ್ದರು. ಶಾಸ್ತ್ರ, ಪುರಾಣ, ವೇದ ಇತ್ಯಾದಿ ಯಾವುದೇ ವಿಚಾರವನ್ನು ಅಧಿಕಾರಯುತವಾಗಿ ಮಾತಾಡಬಲ್ಲವರಾಗಿದ್ದರು. ತನ್ನ ೧೦ನೆಯ ವರ್ಷದಲ್ಲಿ ಯಕ್ಷಗಾನ ವೇಷಧಾರಿಯಾಗಿ ರಂಗಸ್ಥಳವೇರಿದ ಅವರು ೧೪ನೇ ವಯಸ್ಸಿಗೇ ತಾಳಮದ್ದಲೆ ಅರ್ಥವಾದಿಯಾಗಿ ಬೆಳೆದವರು. ಶೇಣಿ, ಸಾಮಗ, ಪೆರ್ಲರಂತಹ ಹಿರಿಯರಿಗೆ ಸಮಾನವಾಗಿ ಸಾವಿರಾರು ತಾಳಮದ್ದಲೆ ಕೂಟಗಳಲ್ಲಿ ಅರ್ಥವಾದಿಯಾಗಿ ಮೆರೆದು, ಪಂಡಿತ ಹೆಸರಿಗೆ ಅನ್ವರ್ಥರಾಗಿದ್ದರು. ವಾಲಿವಧೆಯ ರಾಮ, ಕರ್ಮಬಂಧದ ಕೃಷ್ಣ, ಸುಭದ್ರಾ ಕಲ್ಯಾಣದ ಅರ್ಜುನ ಸನ್ಯಾಸಿ, ವಾಮನ ಚರಿತ್ರೆಯ ಶುಕ್ರಾಚಾರ‍್ಯ ಮುಂತಾದ ಪಾತ್ರಗಳನ್ನು ಉಪಾಧ್ಯಾಯರು ಕಟ್ಟಿಕೊಟ್ಟ ಪರಿ ಅದ್ಭುತ.
ಕಟೀಲಿನಲ್ಲಿ ಭ್ರಾಮರೀ ಯಕ್ಷಗಾನ ಮಂಡಳಿಯ ಸ್ಥಾಪನೆಗೆ ಕಾರಣಕರ್ತರಲ್ಲಿ ಒಬ್ಬರಾಗಿ, ಪ್ರೌಢಶಾಲೆಯ ಮಕ್ಕಳ ಯಕ್ಷಗಾನ ತಂಡವನ್ನು ರಾಜ್ಯಾದ್ಯಂತ ತಿರುಗಾಡಿಸಿದವರು. ಕಟೀಲಿನಲ್ಲಿ ಯಕ್ಷಗಾನದ ವಾತಾವರಣವನ್ನು ಸೃಷ್ಟಿಸಿದವರಲ್ಲಿ ಕೊರ್ಗಿ ಉಪಾಧ್ಯಾಯರೂ ಪ್ರಮುಖರು. ಈಗಿನ ಖ್ಯಾತನಾಮರಾದ ಅನೇಕ ಯಕ್ಷಗಾನ ಕಲಾವಿದರಿಗೆ ಗುರುಗಳಾಗಿದ್ದ ಕೊರ್ಗಿ ಉಪಾಧ್ಯಾಯರು ಬಡಗು ಹಾಗೂ ತೆಂಕು ಎರಡೂ ಯಕ್ಷಗಾನ ಪ್ರಾಕಾರಗಳ ನಾಟ್ಯ ಕಲಿತಿದ್ದರು. ಇತ್ತೀಚಿಗೆ ಬಜಪೆಯಲ್ಲಿ ಅಕಾಡಮಿ ಆಯೋಜಿಸಿದ ದೇವೀ ಮಾಹಾತ್ಮ್ಯೆ ಕಾರ‍್ಯಾಗಾರದಲ್ಲಿ ಪ್ರಮುಖ ಸಂಪನ್ಮೂಲ ವ್ಯಕ್ತಿಯಾಗಿ ಪ್ರಸಂಗಕ್ಕೆ ಹೊಸ ಕಲ್ಪನೆಗಳನ್ನು ಕೊಟ್ಟಿದ್ದರು.
ಪುರೋಹಿತರಾಗಿಯೂ ದೊಡ್ಡ ಹೆಸರು ಮಾಡಿದ್ದ ಉಪಾಧ್ಯಾಯರು ಅನೇಕ ದೇಗುಲಗಳ ಬ್ರಹ್ಮಕಲಶ ಮುಂತಾದ ಧಾರ್ಮಿಕ ಕಾರ‍್ಯಕ್ರಮಗಳ ನೇತೃತ್ವ ವಹಿಸಿದ್ದರು.
ನಾಡಿನ ಅನೇಕ ಪತ್ರಿಕೆಗಳಲ್ಲಿ ಪ್ರಬುದ್ಧ ಲೇಖನ, ಕಲಾ ವಿಮರ್ಶೆಗಳನ್ನು ಬರೆಯುತ್ತಿದ್ದ ಉಪಾಧ್ಯಾಯರು, ತನ್ನ ಪ್ರಜ್ಞಾದೀಪ್ತಿ ಪ್ರಕಾಶನದ ಮೂಲಕ ಅಕ್ಷರ ಯಕ್ಷಗಾನ ಪ್ರಬಂಧ ಸಂಕಲನ, ಸಂಸ್ಕೃತ ಯಕ್ಷಗಾನ ಪ್ರಸಂಗಗಳಾದ ಶ್ರೀರಾಮ ಪಟ್ಟಾಭಿಷೇಕಂ, ವಾತಾಪೇ ಜೀರ್ಣೋಭವ, ಕಟೀಲು ಕ್ಷೇತ್ರ ಮಾಹಾತ್ಮ್ಯೆಯ ಅರ್ಥ ಇತ್ಯಾದಿ ಪ್ರಸಂಗಗಳಲ್ಲದೆ, ಪಂಚ ಪ್ರಪಂಚ, ಮೂರರ ಮಹಿಮೆ, ಭಾಸ ಭಾಷಿತ, ಲಕ್ಷ್ಮೀನಾರಾಯಣ ಹೃದಯ, ಮಹಾಮೃತ್ಯುಂಜಯ ಹೋಮ ವಿಧಿಃ, ಸುದರ್ಶನ ಹೋಮ ವಿಧಿಃ, ಪಂಚದುರ್ಗಾದೀಪ ನಮಸ್ಕಾರ ವಿಧಿಃ, ಮಹಾಗಣಪತಿ ಹವನ ವಿಧಿಃ, ಬ್ರಹ್ಮಕಲಶ ವಿಧಿಃಯಂತಹ ಧಾರ್ಮಿಕ ಕರ್ಮಗಳ ಕೃತಿಗಳನ್ನೂ ಬರೆದು ಪ್ರಕಟಿಸಿದ್ದರು. ಇವರ ಮಂತ್ರಗಳ ಒಂಭತ್ತು ಧ್ವನಿಸುರುಳಿಗಳು ಬಿಡುಗಡೆಗೊಂಡಿವೆ. ಆಕಾಶವಾಣಿ, ದೂರದರ್ಶನಗಳಲ್ಲಿ ಅನೇಕ ಉಪನ್ಯಾಸ, ಚಿಂತನ ಕಾರ‍್ಯಕ್ರಮಗಳು ಬಿತ್ತರಗೊಂಡಿವೆ.
ಸೋಮವಾರ ಕಟೀಲಿನಲ್ಲಿ ಉದ್ಘಾಟನೆಗೊಂಡ ತಾಳಮದ್ದಲೆ ಸಪ್ತಾಹದ ಮೊದಲೆರಡು ದಿನಗಳಲ್ಲಿ ಭಾಗವಹಿಸಬೇಕಿದ್ದ ಉಪಾಧ್ಯಾಯರು, ಸೋಮವಾರದ ಕೌಶಿಕ ಚರಿತ್ರೆಯಲ್ಲಿ ವಿಶ್ವಾಮಿತ್ರನ ಪಾತ್ರವನ್ನು ನಿರ್ವಹಿಸಬೇಕಿತ್ತು. ಆದರೆ ವಿಧಿವಶರಾದ ಉಪಾಧ್ಯಾಯರ ಆತ್ಮಸದ್ಗತಿಗಾಗಿ ಮೌನಪ್ರಾರ್ಥನೆ ಸಲ್ಲಿಸಲಾಯಿತು.
ಉಪಾಧ್ಯಾಯರಿಗೆ ಪೇಜಾವರಶ್ರೀಗಳಿಂದ ಶ್ರೀರಾಮ ವಿಠಲ, ಯಕ್ಷಲಹರಿ, ದುರ್ಗಾ ಮಕ್ಕಳ ಮೇಳ, ಮೂಡುಬಿದ್ರೆ, ಧಾರವಾಡ ಮುಂತಾದೆಡೆ ಸಂಮಾನಗಳು ಸಂದಿವೆ.
ಸಂತಾಪ
ಯಕ್ಷಗಾನ ಅಕಾಡಮಿ ಅಧ್ಯಕ್ಷ ಎಂ.ಎಲ್.ಸಾಮಗ, ಪ್ರಭಾಕರ ಜೋಷಿ, ಕಟೀಲಿನ ಅರ್ಚಕರಾದ ಆಸ್ರಣ್ಣ ಬಂಧುಗಳು, ಪಂಜ ಭಾಸ್ಕರ ಭಟ್ ಸೇರಿದಂತೆ ಹಲವಾರು ಮಂದಿ ಸಂತಾಪ ವ್ಯಕ್ತಪಡಿಸಿದ್ದಾರೆ.
ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ತಿಸೋಣ..
ReplyDelete