Monday, March 28, 2011

ಶಿಲ್ಪಾ ಶೆಟ್ಟಿ ರಾಜ್ ಕುಂದ್ರ ಭೇಟಿ







ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲಕ್ಕೆ ಸೋಮವಾರ ಹಿಂದಿ ಚಿತ್ರ ನಟಿ ಶಿಲ್ಪಾ ಶೆಟ್ಟಿ ತನ್ನ ಪತಿ ರಾಜ್ ಕುಂದ್ರ ಹಾಗೂ ತಾಯಿ ಸುನಂದಾ ಶೆಟ್ಟಿಯೊಂದಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಬಳಿಕ ನಿಡ್ಡೋಡಿ ಮುದಲಾಡಿಯ ಮೂಲ ಮನೆಗೆ ಹೋಗಿ ಅಲ್ಲಿ ದೈವ, ನಾಗದೇವರಿಗೆ, ಮನೆ ದೇವರಿಗೆ ವಂದಿಸಿ, ಮನೆಯಲ್ಲಿ ಊಟ ಮಾಡಿ ಹಿಂತಿರುಗಿದರು.

ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ ಉಪಸ್ಥಿತರಿದ್ದರು.

Saturday, March 26, 2011

ವಾರ್ಷಿಕೋತ್ಸವ

ಯಾವುದೇ ಕ್ಷೇತ್ರದಲ್ಲಿ ಕಾರ್‍ಯನಿರ್ವಹಿಸುವ ಮಹಿಳೆಯರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾರೆ ಎಂಬ ಕಾರಣಕ್ಕಾಗಿ ಉದ್ಯೋಗಾವಕಾಶಗಳು ಹೆಚ್ಚಿವೆ. ವಿದ್ಯಾರ್ಥಿನಿಯರು ಶಿಕ್ಷಣದ ಅವಕಾಶಗಳನ್ನು ಸದುಪಯೋಗಪಡಿಸಬೇಕು ಎಂದು ಮಂಗಳೂರು ವಿವಿಯ ಉಪನ್ಯಾಸಕಿ ವಿಜಯಲಕ್ಷ್ಮೀ ಕೆ.ಕೆ. ಹೇಳಿದರು.
ಅವರು ಗುರುವಾರ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಮಾತನಾಡಿದರು.
ವಿವಿ ಮಟ್ಟದ ಯಕ್ಷಗಾನ ಸ್ಪರ್ಧೆಗಳಲ್ಲಿ ವಿಜೇತವಾದ ಕಾಲೇಜಿನ ಯಕ್ಷಗಾನ ತಂಡದ ಸದಸ್ಯರನ್ನು, ಕ್ರೀಡಾ ಸಾಧಕ ವಿದ್ಯಾರ್ಥಿಗಳನ್ನು, ಎಂಬಿಎಯಲ್ಲಿ ೭ನೇ ರ್‍ಯಾಂಕ್ ಪಡೆದ ಉಪನ್ಯಾಸಕ ವಿಜಯ್‌ರನ್ನು ಸಂಮಾನಿಸಲಾಯಿತು.
ದೇಗುಲದ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ, ಶಿಕ್ಷಕ ರಕ್ಷಕ ಸಂಘದ ಕೊಡೆತ್ತೂರು ವೇದವ್ಯಾಸ ಉಡುಪ, ವಿದ್ಯಾರ್ಥಿ ನಾಯಕರಾದ ವಿಷ್ಣುಪ್ರಸಾದ್, ವಿಶ್ವೇಶ, ತುಷಾರ್, ಪ್ರಣೀತಾ ಮತ್ತಿತರರಿದ್ದರು. ಉಪನ್ಯಾಸಕ ಸುರೇಶ್ ಸ್ವಾಗತಿಸಿದರು. ಪ್ರಾಚಾರ್‍ಯ ಎಂ. ಬಾಲಕೃಷ್ಣ ಶೆಟ್ಟಿ ಪ್ರಸ್ತಾವನೆಗೈದರು. ಸೋಂದಾ ಭಾಸ್ಕರ ಭಟ್ ವಂದಿಸಿದರು. ಪರಮೇಶ್ವರ ಸಿ.ಎಚ್. ಕಾರ್‍ಯಕ್ರಮ ನಿರೂಪಿಸಿದರು.

Wednesday, March 16, 2011

ಕಟೀಲು ದೇಗುಲದ ವಸಂತ ಮಂಟಪಕ್ಕೆ ಚಿನ್ನ ಬೆಳ್ಳಿಯ ಕುಸುರಿ

ಕಟೀಲು : ಪುರಾಣ ಪ್ರಸಿದ್ಧ ಭ್ರಾಮರೀ ದುರ್ಗಾಪರಮೇಶ್ವರೀ ದೇಗುಲದಲ್ಲಿರುವ ವಸಂತ ಮಂಟಪಕ್ಕೆ ಚಿನ್ನ ಬೆಳ್ಳಿಯಿಂದ ಅಲಂಕೃತ ಕುಸುರಿ ಕೆಲಸವನ್ನು ಮಾಡಲಾಗಿದ್ದು, ತಾ. ೧೮ರ ಶುಕ್ರವಾರ ಶ್ರೀ ದೇವಿಗೆ ಸಮರ್ಪಿಸಲಾಗುವುದು ಎಂದು ದಾನಿ ಪೋಪ್ಯುಲರ್ ಜಗದೀಶ ಸಿ.ಶೆಟ್ಟಿ ಹೇಳಿದರು.
ಅವರು ಬುಧವಾರ ಕಟೀಲು ದೇಗುಲದಲ್ಲಿ ಕರೆದ ಸುದ್ಧಿಗೋಷ್ಟಿಯಲ್ಲಿ ವಿವರ ನೀಡಿದರು.
ವಸಂತ ಮಂಟಪಕ್ಕೆ ೧೯೮೬ರಲ್ಲಿ ಕನ್ನಡಿಗಳಿಮದ ಅಲಂಕರಿಸಿ ಗ್ಲಾಸ್ ಹೌಸ್ ಸೇವೆ ನೀಡಿದ್ದು, ಇದೀಗ ಅದೇ ಮಂಟಪಕ್ಕೆ ೫೦ಕೆಜಿ ಬೆಳ್ಳಿ, ೧೦ಕೆಜಿ ಜರ್ಮನ್ ಬೆಳ್ಳಿ, ೨೦೦ಗ್ರಾಂ. ಚಿನ್ನದಿಂದ ನಿರ್ಮಿಸಲಾಗಿದೆ. ಬೆಳ್ಳಿಯಿಂದ ವಸಂತ ಮಂಟಪ ಪೀಠಗಳನ್ನು ಅಲಂಕರಿಸಲಾಗಿದ್ದು, ನವಿಲುಗಳು, ಪಾರ್ಥಸಾರಥಿ ಕುಸುರಿ ಕೆಲಸ ಆಕರ್ಷಣೀಯವಾಗಿದೆ. ಮಂಟಪದೊಳಗೆ ಶ್ರೀ ದೇವಿ ಬಿಂಬವನ್ನು ಚಿನ್ನದ ಲೇಪನದಲ್ಲಿ ಮಾಡಲಾಗಿದ್ದು, ವಜ್ರದ ಮೂಗುತಿಯಿಂದ ಅಲಂಕರಿಸಲಾಗಿದೆ. ತಾ.೧೮ರ ಸಂಜೆ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥರು ಶ್ರೀ ದೇವಿಗೆ ಸಮರ್ಪಿಸಲಿದ್ದಾರೆ. ಹಯಗ್ರೀವ ತಂತ್ರಿ, ವೇದವ್ಯಾಸ ತಂತ್ರಿ, ದೇಗುಲದ ಅರ್ಚಕರಾದ ಆಸ್ರಣ್ಣ ಬಂಧುಗಳು ಭಾಗವಹಿಸಲಿದ್ದಾರೆ ಎಂದು ಜಗದೀಶ ಶೆಟ್ಟಿ ತಿಳಿಸಿದರು.
ಕಟೀಲು ದೇಗುಲಕ್ಕೆ ಈಗಾಗಲೇ ಜಗದೀಶ ಶೆಟ್ಟರು ದೇವಿಯ ರತ್ನಾಭರಣ ಇಡುವ ಟ್ರೆಜರಿಯನ್ನು ನೀಡಿದ್ದು, ಮುಂಬೈಯಲ್ಲಿ ಹೋಟೇಲು ಉದ್ಯಮಿಯಾಗಿದ್ದು, ಮರವೂರಿನಲ್ಲಿ ಪಾಪ್ಯುಲರ್ ಎಜುಕೇಶನ್ ಸೆಂಟರ್‌ನ ಸ್ಥಾಪಕರೂ ಆಗಿದ್ದಾರೆ. ಅಲ್ಲದೆ ಕಟೀಲು ಯಕ್ಷಗಾನ ಮೇಳಗಳಿಗೆ ಸಹಕಾರ ನೀಡುತ್ತಿರುವ ಯಕ್ಷಧರ್ಮಬೋಧಿನಿ ಟ್ರಸ್ಟ್‌ನ ನಿರ್ದೇಶಕರಲ್ಲೊಬ್ಬರಾಗಿದ್ದಾರೆ ಎಂದು ಕಟೀಲು ದೇಗುಲದ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಹೇಳಿದರು.
ವಸಂತ ಮಂಟಪದಲ್ಲಿ ವೈಶಾಖ ಮಾಸದ ಒಂದು ತಿಂಗಳ ಕಾಲ ವಸಂತ ಪೂಜೆಯಲ್ಲಿ ಹಾಗೂ ಉತ್ಸವದ ಸಂದರ್ಭ ಎಂಟು ದಿನಗಳ ಕಾಲ ಶ್ರೀ ಭ್ರಾಮರೀಯ ಉತ್ಸವ ಮೂರ್ತಿಯನ್ನಿಟ್ಟು ಪೂಜೆ ನಡೆಯುತ್ತದೆ.
ಸುದ್ದಿಗೋಷ್ಟಿಯಲ್ಲಿ ಅರ್ಚಕರಾದ ಅನಂತಪದ್ಮನಾಭ ಆಸ್ರಣ್ಣ, ಹರಿನಾರಾಯಣದಾಸ ಆಸ್ರಣ್ಣ, ಉಮೇಶ ರಾವ್ ಎಕ್ಕಾರು, ದೀಪಕ್ ಶೆಟ್ಟಿ, ಸುನೇತ್ರ ಶೆಟ್ಟಿ, ಪ್ರಭಾಕರ ಆಚಾರ್‍ ಮತ್ತಿತರರಿದ್ದರು.

Tuesday, March 15, 2011

ಕದ್ರಿ ಗೋಪಾಲನಾಥರಿಂದ ಸ್ಯಾಕ್ಸೋಫೋನ್ ವಾದನ



ಕಟೀಲು ಶ್ರೀ ಭ್ರಾಮರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಪದ್ಮಶ್ರೀ ಕದ್ರಿ ಗೋಪಾಲನಾಥರಿಂದ ಸ್ಯಾಕ್ಸೋಫೋನ್ ವಾದನ ಸೇವೆ ನಡೆಯಿತು.


Monday, March 14, 2011

ಕಟೀಲ್ ಟ್ರೋಫಿ


ಕಟೀಲಿನಲ್ಲಿ ಸ್ಥಳೀಯ ಸ್ಪೋರ್ಟ್ಸ್ ಮತ್ತು ಗೇಮ್ಸ್ ಕ್ಲಬ್ ಆಯೋಜಿಸಿದ ಕ್ರಿಕೆಟ್ ಟೂರ್ನಿಯಲ್ಲಿ ಕಟೀಲ್ ಟ್ರೋಫಿ ಹಾಗೂ ನಗದು ಬಹುಮಾನವನ್ನು ಮೂಡುಬಿದ್ರೆಯ ನಜ್ಮಾ ತಂಡ ದ್ವಿತೀಯ ಪ್ರಶಸ್ತಿಯನ್ನು ಕುಳಾಯಿಯ ಅಜಯ್ ಸ್ಪೋರ್ಟ್ಸ್ ಪಡೆದವು. ಮೂಡುಬಿದ್ರೆಯ ವಿಜೇತ್ ಸರಣಿಶ್ರೇಷ್ಟ ಬಹುಮಾನ ಪಡೆದರು. ಗಿರೀಶ್ ಶೆಟ್ಟಿ, ಪ್ರವೀಣ್, ಐವನ್ ಡಿಸೋಜ, ವೆಂಕಟರಮಣ ಮಯ್ಯ, ದಾಮೋದರ ಆಚಾರ್‍ಯ, ಕೇಶವ್, ಚಂದ್ರಹಾಸ್, ದೇವೀಪ್ರಸಾದ್ ಬಿ. ಉಪಸ್ಥಿತರಿದ್ದರು.

ಅರಸು ಕುಂಜರಾಯ ನೇಮ




ಕಟೀಲಲು ಕೊಡೆತ್ತೂರಿನ ಅರಸು ಕುಂಜರಾಯ ದೈವಸ್ಥಾನದಲ್ಲಿ ನೇಮ ನಡೆಯಿತು

Saturday, February 19, 2011

ಎನ್‌ಎಸ್‌ಎಸ್ ವಿದ್ಯಾರ್ಥಿಗಳಿಂದ ರಕ್ತದಾನ ಶಿಬಿರ




ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜಿನಲ್ಲಿ ಎನ್‌ಎಸ್‌ಎಸ್ ಘಟಕಗಳ ವಿದ್ಯಾರ್ಥಿಗಳಿಂದ ಮಂಗಳೂರು ಕೆಎಂಸಿ ಆಸ್ಪತ್ರೆಯ ಸಹಯೋಗದಲ್ಲಿ ಕಿನ್ನಿಗೋಳಿ ರೋಟರಿ, ರೋಟರ್‍ಯಾಕ್ಟ್‌ಗಳ ಸಹಕಾರದಲ್ಲಿ ರಕ್ತದಾನ ಶಿಬಿರ ನಡೆಯಿತು. ಕೆಎಂಸಿ ರಕ್ತನಿಧಿಯ ಮುಖ್ಯಸ್ಥೆ ಪೂರ್ಣಿಮಾ ರಾವ್ ಶಿಬಿರ ಉದ್ಘಾಟಿಸಿದರು. ಪದವಿ ಕಾಲೇಜಿನ ಪ್ರಾಚಾರ್‍ಯ ಎಂ. ಬಾಲಕೃಷ್ಣ ಶೆಟ್ಟಿ, ಪ.ಪೂ.ಕಾಲೇಜಿನ ಜಯರಾಮ ಪೂಂಜ, ಮೆನ್ನಬೆಟ್ಟು ಗ್ರಾ.ಪಂ.ಉಪಾಧ್ಯಕ್ಷ ಜನಾರ್ದನ ಕಿಲೆಂಜೂರು, ರೋಟರಿಯ ಸತೀಶ್ಚಂದ್ರ ಹೆಗ್ಡೆ, ಜೆರಾಲ್ಡ್ ಮಿನೇಜಸ್, ರೋಟರ್‍ಯಾಕ್ಟ್‌ನ ಪ್ರಕಾಶ್ ಉಪಸ್ಥಿತರಿದ್ದರು. ಎನ್‌ಎಸ್‌ಎಸ್ ಯೋಜನಾಧಿಕಾರಿ ಕೇಶವ ಎಚ್. ಸ್ವಾಗತಿಸಿದರು. ಡಾ.ಕೃಷ್ಣ ಕಾಂಚನ್ ವಂದಿಸಿದರು. ೫೯ ವಿದ್ಯಾರ್ಥಿಗಳು ರಕ್ತ ನೀಡಿದರು.

ಧೀಂಕಿಟ-ಕೃತಿ ಬಿಡುಗಡೆ, ಗುರುವಂದನೆ











ಭ್ರಾಮರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ನಂದಿನೀ ಅವತರಣ ದಿನದ ಪ್ರಯುಕ್ತ ಆಯೋಜಿಸಲಾದ ಕೃಷ್ಣ ಆಸ್ರಣ್ಣ ಸಂಸ್ಮರಣಾರ್ಥ ಯಕ್ಷಗಾನ ಬಯಲಾಟ ಅಕಾಡಮಿ, ದುರ್ಗಾಮಕ್ಕಳ ಮೇಳ, ಕಮಲಾದೇವಿ ಆಸ್ರಣ್ಣರ ಸಹಯೋಗದಲ್ಲಿ ಆಯೋಜಿಸಲಾದ ಕಾರ್‍ಯಕ್ರಮದಲ್ಲಿ ಹರಿನಾರಾಯಣ ಬೈಪಾಡಿತ್ತಾಯ ರಚಿತ ಧೀಂಕಿಟ-ಚೆಂಡೆ ಮದ್ದಲೆ ಪಠ್ಯಕ್ರಮದ ಕೃತಿಯನ್ನು ಮಧೂರಿನ ತಂತ್ರಿವರ್‍ಯ ಉಳಿತ್ತಾಯ ವಿಷ್ಣು ಆಸ್ರ ಬಿಡುಗಡೆಗೊಳಿಸಿದರು.ಡಾ.ಕೆ.ಭಾಸ್ಕರಾನಂದ ಕುಮಾರ್‌ರನ್ನು ಸಂಮಾನಿಸಲಾಯಿತು. ಕಟೀಲಿನಲ್ಲಿ ಯಕ್ಷಗಾನ ಹಿಮ್ಮೇಳ, ಮುಮ್ಮೇಳ ಕಲಿಸುವ ಬಲಿಪ ಶಿವಶಂಕರ ಭಟ್, ಹರಿನಾರಾಯಣ ಬೈಪಡಿತ್ತಾಯ, ರಾಜೇಶ್ ಐ.ಯವರನ್ನು ಅಭಿನಂದಿಸಲಾಯಿತು. ಪುಚ್ಚಕರೆ ಕೃಷ್ಣ ಭಟ್ ಅಭಿನಂದನೆ ಮಾತುಗಳನ್ನಾಡಿದರು.ಕಟೀಲಿನ ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತ ಪದ್ಮನಾಭ ಆಸ್ರಣ್ಣ, ಎಂಆರ್‌ಪಿಎಲ್‌ನ ಲಕ್ಷ್ಮೀಕುಮಾರನ್, ಬಜಪೆ ರಾಘವೇಂದ್ರ ಭಟ್ ಮತ್ತಿತರರಿದ್ದರು.ಹರಿನಾರಾಯಣ ಆಸ್ರಣ್ಣ ಸ್ವಾಗತಿಸಿದರು. ಪ್ರಸಾದ ಆಸ್ರಣ್ಣ ವಂದಿಸಿದರು. ವಾಸುದೇವ ಶೆಣೈ ಕಾರ್‍ಯಕ್ರಮ ನಿರುಉಪಿಸಿದರು.

ಇದೇ ಸಂದರ್ಭ ಯಕ್ಷಗಾನ ತಾಳಮದ್ದಲೆ, ದುರ್ಗಾ ಮಕ್ಕಳ ಮೇಳದಿಂದ, ಮಡಾಮಕ್ಕಿ ಮೇಳದಿಂದ ಬಡಗುತಿಟ್ಟು ಬಯಲಾಟ, ನೃತ್ಯ ಭಾರತಿ ತಂಡದಿಂದ ಭರತನಾಟ್ಯ ನಡೆಯಿತು.ನಂದಿನೀ ಅವತರಣ ದಿನಾಚರಣೆಯ ಸಲುವಾಗಿ ಶ್ರೀ ಭ್ರಾಮರೀಗೆ ನಾಲ್ಕು ಸಾವಿರ ಬೊಂಡಾಭಿಷೇಕ ನಡೆಯಿತು.
ಚಿತ್ರಗಳು : ಕಟೀಲ್ ಸ್ಟುಡಿಯೋ

















Friday, February 18, 2011

ನಂದಿನಿ ನದಿ ಅವತರಣ ದಿನ







ನಂದಿನಿ ನದಿ ಅವತರಣ ದಿನ
ಹೀಗೊಂದು ಕಲ್ಪನೆಯೇ ಎಷ್ಟೊಂದು ಚೆಂದ!ನದೀ ನಂದಿನೀಯ ಅವತರಣ ದಿನ ಅಥವಾ ಇಳೆಯಲ್ಲಿ ಆಕೆ ಜನ್ಮ ತಾಳಿದ ದಿನ!
ಇದು ಪುರಾಣ ಕಥೆಭೂಮಿಯಲ್ಲಿ ಹನ್ನೆರಡು ವರುಷಗಳ ಭೀಕರ ಬರಗಾಲ. ಎಲ್ಲೆಲ್ಲಿಯೂ ಜನರ ಹಾಹಾಕಾರ. ಇದರಿಮದ ನೊಂದ ಮುನಿ ಜಾಬಾಲಿ ಯಜ್ಞ ಮಾಡಬೇಕೆಂದು ಯೋಚಿಸಿ, ಕಾಮಧೇನುವನ್ನು ಕರೆತರಲು ದೇವಲೋಕಕ್ಕೆ ಹೋದನು. ಮುನಿ ಜಾಬಾಲಿಯ ವಿನಂತಿಗೆ ಸ್ಪಂದಿಸಿದ ಸುರಪಾಲ, ಕಾಮಧೇನುವು ವರುಣಲೋಕಕ್ಕೆ ಯಜ್ಞಕ್ಕಾಗಿ ಹೋಗಿರುವಳೆಂದೂ, ಆಕೆಯ ಮಗಳಾದ ನಂದಿನೀಯನ್ನು ಕಳುಹಿಕೊಡುವುನೆಂದೂ ಹೇಳಿದನು. ಅದರಂತೆ ನಂದಿನೀಯನ್ನು ಕರೆದು, 'ಭೂಲೋಕಕ್ಕೆ ಹೋಗಿ ಜನರ ಕಷ್ಟವನ್ನು ಹೋಗಲಾಡಿಸು' ಎಂದನು. ನಂದಿನಿಯಾದರೋ ಅಜ್ಞಾನಕ್ಕೊಳಗಾಗಿ ಸ್ವಾರ್ಥ ಪ್ರಪಂಚಕ್ಕೆ ಬರಲಾರೆನೆಂದು ಹೇಳಿ ಮಾನವಲೋಕವನ್ನು ನಿಂದಿಸಿದಳು. ಒಡನೆ ಕೋಪಗೊಂಡ ಮುನಿ, ಭೂಮಿಯಲ್ಲಿ ನದಿಯಾಗಿ ಜನ್ಮ ತಾಳು ಎಂದು ಶಪಿಸಿದನು. ತಪ್ಪನ್ನರಿತ ನಂದಿನಿ ಮುನಿಯನ್ನು ಯಾಚಿಸಲು, ಕರುಣಾರ್ದ್ರ ಹೃದಯನಾಗಿ, ಆದಿಮಾಯೆಯನ್ನು ಸ್ತುತಿಸು. ಅವಳೇ ನಿನಗೆ ವಿಶಾಪದ ದಾರಿಯನ್ನು ತೋರುವಳು ಎಂದನು.ನಂದಿನೀ ಅನನ್ಯ ಭಕ್ತಿಯಿಂದ ಸ್ತುತಿಸಲಾಗಿ ಜಗಜ್ಜನನೀ ಪ್ರತ್ಯಕ್ಷಳಾದಳು; ಮಗಳೇ ದುಃಖಿಸದಿರು, ನಿನ್ನ ಮಾತೆಯಾದ ನಾನು ನಿನ್ನ ಮಗಳಾಗಿ ಜನಿಸುವೆನು ಎಂದು ಅಭಯವಿತ್ತಳು.ಕೂಡಲೇ ನಂದಿನಿಯು ಮಾಘ ಶುದ್ಧ ಪೂರ್ಣಿಮಾ ದಿನದಂದು ಕಾಂಚನಗಿರಿಯಲ್ಲಿ(ಕನಕಗಿರಿ) ನದಿಯಾಗಿ ಹುಟ್ಟಿ ಹರಿದು ಪಡುಗಡಲನ್ನು ಸೇರುವಳು.ಅರುಣಾಸುರನನ್ನು ಭ್ರಮರ ರೂಪ ತಾಳಿ ವಧಿಸಿದ ಜಗನ್ಮಾತೆಯನ್ನು ಸುರರು ಹೂಮಳೆಗೈದು ಸ್ತುತಿಸಿದರು. ದೇವೇಂದ್ರನು ಕಲ್ಪವೃಕ್ಷದ ಫಲವನ್ನು ತಂದು ಅಭಿಷೇಕಗೈದನು. ಆಗ ಪ್ರಸನ್ನಳಾದ ಜಗನ್ಮಾಥೆ ದುಷ್ಟನ ಖಡ್ಗಾಘಾತದಿಂದಲೂ, ದುರ್ಜನರ ರಕ್ತಪಾತದಿಂದಲೂ ಈ ಸ್ಥಳವು ಅಪವಿತ್ರವಾಗಿದೆ. ಆದುದರಿಂದ ಇದೇ ನಂದಿನೀ ನದಿ ಮಧ್ಯದಲ್ಲೇ ಪ್ರಸನ್ನಳಾಗುವಳೆಂದು ಅಭಯವನ್ನಿತ್ತು, ಲಿಂಗಕ್ಯಳಾದಳು.
೪೦ಕಿಲೋ ಮೀಟರ್...ಈಗಿನ ಮಿಜಾರುವಿನ ಕನಕಬೆಟ್ಟುವಿನ ನಾಗಬನವೊಂದರ ಸಮೀಪ ಪುಟ್ಟ ಕಾಡಮಧ್ಯೆ ನೀರ ಒಸರು ಕಾಣುತ್ತದೆ. ಇಲ್ಲೇ ನಂದಿನಿ ಉಗಮವಾದದ್ದು ಎನ್ನುತ್ತಾರೆ ಸ್ಥಳೀಯರು. ಅಲ್ಲಿಂದ ದೊಡ್ಡದಾಗುತ್ತ ಮುಚ್ಚಾರು, ಮಚ್ಚಾರು, ಕಟೀಲು, ಎಕ್ಕಾರು, ಶಿಬರೂರು, ಚೇಳಾರು, ಪಾವಂಜೆಗಳ ಮೂಲಕ ಹಾದು ಸಸಿಹಿತ್ಲು, ಚಿತ್ರಾಪಿನಲ್ಲಿ ಶಾಂಭವಿ ನದಿಯೊಂದಿಗೆ ಕಡಲನ್ನ ಸೇರುತ್ತದೆ. ಒಂದು ಲೆಕ್ಕಾಚಾರದ ಪ್ರಕಾರ ಕಟೀಲಿನಿಂದ ಹದಿನಾರು ಮೈಲು ದೂರದಲ್ಲಿ ಹುಟ್ಟಿ ಹದಿನಾರು ಮೈಲುಗಳ ಬಳಿಕ ಸಮುದ್ರ ಸೇರುತ್ತದೆ. ಅಂದರೆ ನದಿಯ ಉದ್ದ ಮೂವತ್ತೆರಡು ಮೈಲುಗಳು. ಸಣ್ಣ ನೀರಾವರಿ ಇಲಾಖೆಯ ಮಾಹಿತಿಯಂತೆ ನಂದಿನೀಯ ಉದ್ದ ೪೦ಕಿಲೋ ಮೀಟರ್. ಜಲಾನಯನ ಇಲಾಖೆಯ ಪ್ರಕಾರ ನದಿಯ ಜಲಾಯನದ ವ್ಯಾಪ್ತಿ ೯೧೧೨ ಹೆಕ್ಟೇರ್ ಪ್ರದೇಶ.ಮುಚ್ಚೂರು, ಮೂಡುಪೆರಾರ, ಬಡಗ ಎಡಪದವು, ಪೆರ್ಮುದೆ, ಎಕ್ಕಾರು, ಮೆನ್ನಬೆಟ್ಟು, ಬಜಪೆ, ಸೂರಿಂಜೆ, ಚೇಳಾಯರು ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯ ಹದಿನೈದರಷ್ಟು ಗ್ರಾಮಗಳ ವ್ಯಾಪ್ತಿಯಲ್ಲಿ ಈ ನದಿ ಹರಿದು ಹೋಗುತ್ತದೆ.ನದಿಗೆ ಕನಕಬೆಟ್ಟು, ಪಿಜಿನಬೆಟ್ಟು, ಒಂಟಿಮಾರು, ಗುಂಡಾವು, ನೀರ್ ಕೆರೆ, ಮುಚ್ಚೂರು ಕಾನ, ಕಾಯರ್‌ಮುಗೇರ್, ಮುಚ್ಚೂರು ಕೊಂಠಿಕಟ್ಟ, ಮಚ್ಚಾರು, ನಿಡ್ಡೋಡಿ, ಅಜಾರು ಜಲಕದ ಕಟ್ಟೆ, ಕಟೀಲು, ಪರಕಟ್ಟ, ಎಕ್ಕಾರು ಕಂಬಳಪದವು, ಶಿಬರೂರು, ಪುಚ್ಚಾಡಿ, ಸೂರಿಂಜೆ, ಚೇಳಾಯರುಗಳಲ್ಲಿ ರೈತರು ಕಟ್ಟಿದ ಕಟ್ಟಗಳು, ಇಲಾಖೆಗಳು ಕಟ್ಟಿದ ಕಿಂಡಿ ಅಣೆಕಟ್ಟು, ಉಪ್ಪು ನೀರು ತಡೆಯುವ ಅಣೆಕಟ್ಟುಗಳಿವೆ. ಒಂದೂವರೆ ಸಾವಿರ ಎಕರೆಗಳಿಗಿಂತಲೂ ಹೆಚ್ಚು ಕೃಷಿ ಭೂಮಿಗಳಿಗೆ ಈ ಕಟ್ಟಗಳು ನೀರಾಶ್ರಯ ನೀಡುತ್ತವೆ.
ದೇಗುಲಗಳನ್ನು ಹಾಡುಮಿಜಾರು ವಿಷ್ಣುಮೂರ್ತಿ, ಕಾಂಬೆಟ್ಟು ಸೋಮನಾಥೇಶ್ವರ, ಮುಚ್ಚೂರು ದುರ್ಗಾಪರಮೇಶ್ವರೀ, ಕಟೀಲು ದುರ್ಗಾಪರಮೇಶ್ವರೀ, ನಂದಬೆಟ್ಟು ಆಲಡೆ, ಸುರಗಿರಿ ಮಹಾಲಿಂಗೇಶ್ವರ, ಅತ್ತೂರು ಬೈಲು ಮಹಾಗಣಪತಿ ಮಂದಿರ, ಎಕ್ಕಾರು, ಶಿಬರೂರು ಕೊಡಮಣಿತ್ತಾಯ ದೈವಸ್ಥಾನಗಳು, ಪಾವಂಜೆ ಮಹಾಲಿಂಗೇಶ್ವರ, ಸಸಿಹಿತ್ಲು ಸಾರಂತಾಯ ಗರಡಿ, ಹೊಯಿಗೆಗುಡ್ಡೆ ಉಮಾಮಹೇಶ್ವರ ದೇವಸ್ಥಾನಗಳು ಸೇರಿದಂತೆ ಅನೇಕ ನಾಗಬನಗಳು, ದೈವ, ದೇವಸ್ಥಾನಗಳು ಈ ನದಿಯ ತಟದಲ್ಲಿವೆ.
ಕಟೀಲಿನಲ್ಲಿಂದು ವಿಶೇಷನಂದಿನೀ ಅವತರಣ ದಿನವಾದ ತಾ.೧೮ ಕಟೀಲಿನಲ್ಲಿ ಭ್ರಾಮರಿಗೆ ಒಂದು ಸಾವಿರ ಗೆಂದಾಳಿ ಬೊಂಡ ಸೇರಿದಂತೆ ನಾಲ್ಕು ಸಾವಿರ ಸೀಯಾಳಾಭಿಷೇಕ, ಕ್ಷೀರಾಭಿಷೇಕ, ಕ್ಷೀರ ಪಾಯಸ ಸೇವೆ ಇದೆ. ಮಧ್ಯಾಹ್ನ ತಾಳಮದ್ದಲೆ, ಯಕ್ಷಗಾನ, ನೃತ್ಯ ಕಾರ್‍ಯಕ್ರಮಗಳನ್ನು ಆಯೋಜಿಸಲಾಗಿದೆ. ಇಂದು ನಂದಿನೀ ನದಿಯಲ್ಲಿ ತೀರ್ಥ ಸ್ನಾನ ವಿಶೇಷವಾಗಿದೆ.

Tuesday, February 15, 2011

ಕಟೀಲು ದೇಗುಲಕ್ಕೆ ಧಾರ್ಮಿಕ ಆಯುಕ್ತ ನಂದಕುಮಾರ್



ಧಾರ್ಮಿಕ ದತ್ತಿ ಇಲಾಖೆ ಆಯುಕ್ತ ನಂದಕುಮಾರ್ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಸೋಮವಾರ ಭೇಟಿ ನೀಡಿ, ಅಭಿವೃದ್ಧಿ ಕಾರ್‍ಯಗಳಿಗೆ ಸೂಚನೆ ನೀಡಿದರು.ದೇಗುಲ ಮತ್ತು ಪರಿಸರದಲ್ಲಿ ಮೂರು ಗಂಟೆಗಳ ಕಾಲ ಸುತ್ತಾಡಿದ ಆಯುಕ್ತರು, ನದಿ, ಸ್ನಾನಘಟ್ಟ, ಪಾಕಶಾಲೆ, ಭೋಜನ ಶಾಲೆ, ಗಣ್ಯರ ವಸತಿಗೃಹ, ಶೌಚಾಲಯ, ಬಸ್‌ನಿಲ್ದಾಣ ಹೀಗೆ ಎಲ್ಲವನ್ನೂ ನೋಡಿದರು. ದೇಗುಲದಲ್ಲಿ ಉಪಯೋಗವಾಗದಿರುವ ಯಂತ್ರಗಳನ್ನು ಬಳಸಲು ಸೂಚಿಸಿದರು. ಸ್ನಾನಘಟ್ಟವನ್ನು ಸರಿಪಡಿಸಬೇಕು, ಸ್ವಚ್ಛತೆಯನ್ನು ಕಾಪಾಡಬೇಕು. ತೋಟಗಾರಿಕೆ ಇಲಾಖೆ ಸಹಕಾರದಿಂದ ಉದ್ಯಾನವನ ನಿರ್ಮಿಸಬೇಕು ಇತ್ಯಾದಿ ಸೂಚನೆಗಳನ್ನು ನೀಡಿದರು. ಸ್ವಚ್ಛತೆಯ ಜೊತೆಗೆ ದೇಗುಲಕ್ಕೆ ಬರುವ ಭಕ್ತರಿಗೆ ಅನುಕೂಲವಾಗುವಂತಹ ವ್ಯವಸ್ಥೆಗಳನ್ನು ಕಲ್ಪಿಸಬೇಕು ಎಂದು ನಂದಕುಮಾರ್ ಹೇಳಿದರು.ಇದೇ ಸಂದರ್ಭ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಬೇಕು. ಗೋಶಾಲೆ, ನಂದಿನಿ ನದಿಯಿಂದ ವಿದ್ಯುತ್ ಉತ್ಪಾದನೆ, ಕುದ್ರುವಿನ ಅಭಿವೃದ್ಧಿ, ಬಾಡಿಗೆ ಅಂಗಡಿಗಳ ಏಲಂ ಹೀಗೆ ಅನೇಕ ಯೋಜನೆಗಳ ಕುರಿತು ಮಾಹಿತಿ ಪಡೆದ ಆಯುಕ್ತ ನಂದಕುಮಾರ್‌ಗೆ ದೇಗುಲಕ್ಕೆ ಜಮೀನು ಖರೀದಿ, ದಾನಿಗಳ ನೆರವಿನಿಂದ ಆಸ್ಪತ್ರೆ ನಿರ್ಮಿಸಲು ಜಮೀನು ನೀಡುವಿಕೆ ಇತ್ಯಾದಿ ವಿಚಾರಗಳ ಬಗ್ಗೆ ಗಮನ ಸೆಳೆಯಲಾಯಿತು.ದೇಗುಲದ ಮಾಸ್ಟರ್ ಪ್ಲಾನ್, ಹಾಗೂ ವಿವಿಧ ಯೋಜನೆಗಳ ಪ್ರಸ್ತಾವನೆಗಳು ಇಲಾಖೆ ದೇಗುಲದ ಆಡಳಿತಾಧಿಕಾರಿ ಸಿಂಧೂರಿ ಹಾಗೂ ದೇಗುಲದ ಪ್ರಬಂಧಕ ವಿಶ್ವೇಶ ರಾವ್ ವಿವರಿಸಿದರು. ಬಾಡಿಗೆ ಅಂಗಡಿಗಳನ್ನು ಸ್ಥಳಾಂತರಿಸುವ ಕುರಿತು ಅಂಗಡಿ ಮಾಲಿಕರನ್ನು ಕರೆದು ಸಭೆ ನಡೆಸಿದರು.ಅರ್ಚಕರಾದ ಅನಂತಪದ್ಮನಾಭ ಆಸ್ರಣ್ಣ, ಹರಿನಾರಾಯಣದಾಸ ಆಸ್ರಣ್ಣ, ಧಾರ್ಮಿಕ ದತ್ತಿ ಇಲಾಖೆಯ ಪ್ರಭಾಕರ್, ಕೃಷ್ಣಕುಮಾರ್, ಸುಧಾಕರ್, ಶೇಷಪ್ಪ ಮತ್ತಿತರ ಅಧಿಕಾರಿಗಳಿದ್ದರು.