
ಧಾರ್ಮಿಕ ದತ್ತಿ ಇಲಾಖೆ ಆಯುಕ್ತ ನಂದಕುಮಾರ್ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಸೋಮವಾರ ಭೇಟಿ ನೀಡಿ, ಅಭಿವೃದ್ಧಿ ಕಾರ್‍ಯಗಳಿಗೆ ಸೂಚನೆ ನೀಡಿದರು.ದೇಗುಲ ಮತ್ತು ಪರಿಸರದಲ್ಲಿ ಮೂರು ಗಂಟೆಗಳ ಕಾಲ ಸುತ್ತಾಡಿದ ಆಯುಕ್ತರು, ನದಿ, ಸ್ನಾನಘಟ್ಟ, ಪಾಕಶಾಲೆ, ಭೋಜನ ಶಾಲೆ, ಗಣ್ಯರ ವಸತಿಗೃಹ, ಶೌಚಾಲಯ, ಬಸ್‌ನಿಲ್ದಾಣ ಹೀಗೆ ಎಲ್ಲವನ್ನೂ ನೋಡಿದರು. ದೇಗುಲದಲ್ಲಿ ಉಪಯೋಗವಾಗದಿರುವ ಯಂತ್ರಗಳನ್ನು ಬಳಸಲು ಸೂಚಿಸಿದರು. ಸ್ನಾನಘಟ್ಟವನ್ನು ಸರಿಪಡಿಸಬೇಕು, ಸ್ವಚ್ಛತೆಯನ್ನು ಕಾಪಾಡಬೇಕು. ತೋಟಗಾರಿಕೆ ಇಲಾಖೆ ಸಹಕಾರದಿಂದ ಉದ್ಯಾನವನ ನಿರ್ಮಿಸಬೇಕು ಇತ್ಯಾದಿ ಸೂಚನೆಗಳನ್ನು ನೀಡಿದರು. ಸ್ವಚ್ಛತೆಯ ಜೊತೆಗೆ ದೇಗುಲಕ್ಕೆ ಬರುವ ಭಕ್ತರಿಗೆ ಅನುಕೂಲವಾಗುವಂತಹ ವ್ಯವಸ್ಥೆಗಳನ್ನು ಕಲ್ಪಿಸಬೇಕು ಎಂದು ನಂದಕುಮಾರ್ ಹೇಳಿದರು.ಇದೇ ಸಂದರ್ಭ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಬೇಕು. ಗೋಶಾಲೆ, ನಂದಿನಿ ನದಿಯಿಂದ ವಿದ್ಯುತ್ ಉತ್ಪಾದನೆ, ಕುದ್ರುವಿನ ಅಭಿವೃದ್ಧಿ, ಬಾಡಿಗೆ ಅಂಗಡಿಗಳ ಏಲಂ ಹೀಗೆ ಅನೇಕ ಯೋಜನೆಗಳ ಕುರಿತು ಮಾಹಿತಿ ಪಡೆದ ಆಯುಕ್ತ ನಂದಕುಮಾರ್‌ಗೆ ದೇಗುಲಕ್ಕೆ ಜಮೀನು ಖರೀದಿ, ದಾನಿಗಳ ನೆರವಿನಿಂದ ಆಸ್ಪತ್ರೆ ನಿರ್ಮಿಸಲು ಜಮೀನು ನೀಡುವಿಕೆ ಇತ್ಯಾದಿ ವಿಚಾರಗಳ ಬಗ್ಗೆ ಗಮನ ಸೆಳೆಯಲಾಯಿತು.ದೇಗುಲದ ಮಾಸ್ಟರ್ ಪ್ಲಾನ್, ಹಾಗೂ ವಿವಿಧ ಯೋಜನೆಗಳ ಪ್ರಸ್ತಾವನೆಗಳು ಇಲಾಖೆ ದೇಗುಲದ ಆಡಳಿತಾಧಿಕಾರಿ ಸಿಂಧೂರಿ ಹಾಗೂ ದೇಗುಲದ ಪ್ರಬಂಧಕ ವಿಶ್ವೇಶ ರಾವ್ ವಿವರಿಸಿದರು. ಬಾಡಿಗೆ ಅಂಗಡಿಗಳನ್ನು ಸ್ಥಳಾಂತರಿಸುವ ಕುರಿತು ಅಂಗಡಿ ಮಾಲಿಕರನ್ನು ಕರೆದು ಸಭೆ ನಡೆಸಿದರು.ಅರ್ಚಕರಾದ ಅನಂತಪದ್ಮನಾಭ ಆಸ್ರಣ್ಣ, ಹರಿನಾರಾಯಣದಾಸ ಆಸ್ರಣ್ಣ, ಧಾರ್ಮಿಕ ದತ್ತಿ ಇಲಾಖೆಯ ಪ್ರಭಾಕರ್, ಕೃಷ್ಣಕುಮಾರ್, ಸುಧಾಕರ್, ಶೇಷಪ್ಪ ಮತ್ತಿತರ ಅಧಿಕಾರಿಗಳಿದ್ದರು.
No comments:
Post a Comment