ಭಾರತೀಯರಲ್ಲಿ ಗಳಿಸಿದ್ದರಲ್ಲಿ ಉಳಿಸುವ ಗುಣ ಸಹಜವಾಗಿ ರೂಢಿಯಾಗಿದೆ ಎಂದು ಉನ್ನತ ಶಿಕ್ಷಣ ಹಾಗೂ ಮುಜರಾಯಿ ಸಚಿವ ಡಾ.ವಿ.ಎಸ್.ಆಚಾರ್‍ಯ ಹೇಳಿದರು.ಅವರು ಶುಕ್ರವಾರ ಕಟೀಲಿನ ಸೌಂದರ್‍ಯ ಪ್ಯಾಲೇಸ್ ವಾಣಿಜ್ಯ ಸಂಕೀರ್ಣದಲ್ಲಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ೪೩೨ನೇ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು.
ಕರಾವಳಿ ಜಿಲ್ಲೆ ಬ್ಯಾಂಕಿಂಗ್ ಕ್ಷೇತ್ರದ ತೊಟ್ಟಿಲು ಆಗಿದೆ. ೧೯೬೯ರಲ್ಲಿ ಬ್ಯಾಂಕುಗಳ ರಾಷ್ಟ್ರೀಕರಣವಾದ ಬಳಿಕ ಬ್ಯಾಂಕುಗಳ, ಶಾಖೆಗಳ ಸಂಖ್ಯೆ ದೊಡ್ಡ ಮಟ್ಟದಲ್ಲಿ ಬೆಳೆದಿದೆ. ಆದರೆ ದೇಶದಲ್ಲಿ ಇವತ್ತಿಗೂ ೨೦ರಿಂದ ೩೦ಶೇಕಡಾ ಮಂದಿ ಬ್ಯಾಂಕಿಂಗ್ ಕ್ಷೇತ್ರದಿಂದ ಹೊರಗಿದ್ದಾರೆ ಎಂದು ಡಾ. ಆಚಾರ್‍ಯ ಹೇಳಿದರು.
ಸಾಂಸದ ನಳಿನ್ ಕುಮಾರ್, ಶಾಸಕ ಅಭಯಚಂದ್ರ, ಕಟೀಲು ದೇಗುಲದ ಅರ್ಚಕರಾದ ವಾಸುದೇವ ಆಸ್ರಣ್ಣ, ಲಕ್ಷ್ಮೀನಾರಾಯಣ ಆಸ್ರಣ್ಣ, ಹರಿನಾರಾಯಣದಾಸ ಆಸ್ರಣ್ಣ, ಸೌಂದರ್‍ಯ ಪ್ಯಾಲೇಸ್‌ನ ರಮೇಶ್, ಮೆನ್ನಬೆಟ್ಟು ಗ್ರಾ.ಪಂ.ಅಧ್ಯಕ್ಷೆ ಶೈಲಾ ಶೆಟ್ಟಿ, ಬ್ಯಾಂಕಿನ ಪ್ರಾದೇಶಿಕ ಪ್ರಬಂಧಕರಾದ ಎಸ್.ಸಿ.ಬಿರಾದಾರ ಮತ್ತಿತರರಿದ್ದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಬ್ಯಾಂಕಿನ ಮಹಾಪ್ರಬಂಧಕ ವಾಸುದೇವ ಕೆ.ಕಾಲಕುಂದ್ರಿ, ಈ ಹಿಂದೆ ನೇತ್ರಾವತಿ, ಮಲಪ್ರಭಾ, ವರದಾ, ಬಿಜಾಪುರ ಹೀಗೆ ೯ಜಿಲ್ಲೆಗಳಲ್ಲಿದ್ದ ಸಣ್ಣ ಬ್ಯಾಂಕ್‌ಗಳನ್ನು ಒಂದಾಗಿಸಿ ಮಾಡಲಾದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಇವತ್ತು ೮ಸಾವಿರ ಕೋಟಿ ರೂ.ವ್ಯವಹಾರಗಳ ಸಾಧನೆ ಮಾಡಿದೆ. ೪೫ಲಕ್ಷ ಗ್ರಾಹಕರಿದ್ದಾರೆ ಎಂದು ಮಾಹಿತಿ ನೀಡಿದರು.ನಾರಾಯಣ ಯಾಜಿ ಕಾರ್‍ಯಕ್ರಮ ನಿರೂಪಿಸಿದರು. ಶೇಖರ ಶೆಟ್ಟಿ ಸ್ವಾಗತಿಸಿದರು. ಗ್ರಾಹಕರ ಪರವಾಗಿ ಪಿ.ಸತೀಶ್ ರಾವ್ ಮಾತನಾಡಿದರು. ಶಾಖಾಧಿಕಾರಿ ಶ್ರೀಪಾದ ರಾವ್ ಎಂ.ವಂದಿಸಿದರು.
No comments:
Post a Comment