Sunday, June 24, 2012

ಮಕ್ಕಳ ಮೇಳದ ಕಲಾವಿದರಿಗೆ ಸಂಮಾನ


ಕಟೀಲು ಶ್ರೀದುರ್ಗಾ ಮಕ್ಕಳ ಮೇಳದ ಕಲಾವಿದರ ಸದಸ್ಯರಾದ, ಕಲಿಕೆಯಲ್ಲಿ ಸಾಧನೆಗೈದ ಅನುಜ್ಞಾ ಭಟ್, ಅಶ್ವಿನಿ ಕೆ.ಎಸ್, ಸುಶ್ಮಿತಾರನ್ನು ನಗದು ಬಹುಮಾನ ನೀಡಿ ಸಂಮಾನಿಸಲಾಯಿತು. ಮೇಳದ ಅಧ್ಯಕ್ಷ ಹರಿನಾರಾಯಣದಾಸ ಆಸ್ರಣ್ಣ, ಮಾಲತಿ ಭಟ್, ವಾಸುದೇವ ಶೆಣೈ, ಲೀಲಾವತಿ ಬೈಪಡಿತ್ತಾಯ, ಬಲಿಪ ಶಿವಶಂಕರ ಭಟ್, ರಾಜೇಶ್ ಐ ಕಟೀಲು, ಪಶುಪತಿ ಶಾಸ್ತ್ರಿ, ದಯಾನಂದ ಮಾಡ ಮತ್ತಿತರರಿದ್ದರು.

ಸಂಮಾನ

ಕಟೀಲು ವಿಜಯಾಬ್ಯಾಂಕ್ ಶಾಖೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿನಿ ಲೋಕೇಶ್ ಅಂಚನ್‌ರ ಪುತ್ರಿ, ನಿಶ್ಚಿತಾರನ್ನು ಸಂಮಾನಿಸಲಾಯಿತು. ಬ್ಯಾಂಕಿನ ಪ್ರಬಂಧಕ ಭುವನಪ್ರಸಾದ ಹೆಗ್ಡೆ, ಅಧಿಕಾರಿ ರಮೇಶ್, ಮತ್ತಿತರರಿದ್ದರು. ಚಿತ್ರ ಈಮೆಲ್

Sunday, May 27, 2012

ಕಟೀಲು ಮೇಳಗಳ 2011-12ರ ತಿರುಗಾಟ ಮುಕ್ತಾಯ

ಕಟೀಲು ಯಕ್ಷಗಾನ ಮೇಳಗಳ ಈ ವರ್ಷದ ತಿರುಗಾಟ ಶುಕ್ರವಾರ ರಾತ್ರಿ ಕೊನೆಯ ಸೇವೆಯಾಟದೊಂದಿಗೆ ಮುಕ್ತಾಯಗೊಂಡಿತು. ಕಲಾವಿದರು ಭ್ರಾಮರೀಯ ಸನ್ನಿಧಿಯಲ್ಲಿ ಇನ್ನೂರು ಕಲಾವಿದರು ಗೆಜ್ಜೆ ಬಿಚ್ಚುವ ಮೂಲಕ ಈ ವರ್ಷದ ತಿರುಗಾಟ ಮುಗಿಸಿದರು. ಇನ್ನೂ ಐದಾರು ತಿಂಗಳುಗಳ ಸುದೀರ್ಘ ರಜಾಕಾಲ. ಮಳೆಗಾಲದಲ್ಲಿ ಅನೇಕ ಕಲಾವಿದರು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡರೆ, ಕೆಲವರು ಮಳೆಗಾಲದಲ್ಲೂ ಆಟ, ಕೂಟಗಳಲ್ಲಿ ಬ್ಯುಸಿಯಾಗಲಿದ್ದಾರೆ. ಮುಂಬೈ, ದುಬೈಗಳಿಗೆ ಯಕ್ಷಗಾನ ಪ್ರವಾಸಕ್ಕೂ ಸಿದ್ಧರಾದವರೂ ಇದ್ದಾರೆ. ಇನ್ನು ಕೆಲವರು ಅಲ್ಲಲ್ಲಿ ಯಕ್ಷಗಾನ ತರಗತಿಗಳಿಗೆ ಶಿಕ್ಷಕರಾಗಿ ಕ್ರಿಯಾಶೀಲರಾಗುತ್ತಾರೆ. ಮತ್ತೆ ಅನೇಕರು ಕೂಲಿಕೆಲಸಗಳಲ್ಲಿ ತೊಡಗಿಕೊಳ್ಳುತ್ತಾರೆ. ಬೆರಳೆಣಿಕೆಯ ಮಂದಿ ಈವರೆಗೆ ದುಡಿದದ್ದನ್ನು ಕುಡಿದು, ತಿರುಗಿ ದಿನಕಳೆಯುತ್ತಾರೆ. ಇದು ಕಟೀಲು ಮಾತ್ರವಲ್ಲ ಹೆಚ್ಚಿನೆಲ್ಲ ಮೇಳಗಳ ಕಲಾವಿದರ ರಜಾ ಕಾಲದ ಬದುಕು.

Thursday, April 19, 2012

katil jatre hagalu ratotsava 2012



ಅಬ್ಬರದ ಮಳೆಯಲ್ಲೇ ವೈಭವದ ಕಟೀಲು ಜಾತ್ರೆ ’ಧೋ’ ಎಂದು ಸುರಿದ ಗಾಳಿ ಮಳೆಯ ಮಧ್ಯೆಯೇ ಶುಕ್ರವಾರ ರಾತ್ರಿ ನೂರಾರು ಮಂದಿ ತೇರನ್ನೆಳೆದು ಕಟೀಲು ಶ್ರೀ ಭ್ರಾಮರಿಯ ರಥೋತ್ಸವದ ಸಂಭ್ರಮದಲ್ಲಿ ಪಾಲ್ಗೊಂಡರು. ಇದೇ ಸಂದರ್ಭ ದೇಗುಲದ ಆಡಳಿತಾಧಿಕಾರಿ ವೆಂಕಟೇಶ್, ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ಜಿ.ಪಂ.ಸದಸ್ಯ ಈಶ್ವರ್, ಭಾಸ್ಕರಾನಂದ ಕುಮಾರ್, ಮೋನಪ್ಪ ಶೆಟ್ಟಿ ಉಪಸ್ಥಿತಿಯಲ್ಲಿ ಕಟೀಲಿನಲ್ಲಿ ದೇಗುಲದ ವತಿಯಿಂದ ಸುಮಾರು ಹದಿನೈದು ಲಕ್ಷ ರೂ.ವೆಚ್ಚದಲ್ಲಿ ಮಾಡಲಾದ ಇಂಟರ್‌ಲಾಕ್ ಅಳವಡಿಸಿದ ನೂತನ ಬಸ್‌ನಿಲ್ದಾಣದ ಉದ್ಘಾಟನೆ ನಡೆಯಿತು. ವಿಜಯಾ ಬ್ಯಾಂಕ್ ಪ್ರಾಯೋಜಕತ್ವದ ಲೇಸರ್ ಶೋ, ಸುಮನಸಾ ಕಲಾವಿದರ ಭೀಷ್ಮನ ಕಡೆತ ದಿನಕುಲು ನಾಟಕ, ಹಾಗೂ ಕೊಪ್ಪಳದ ಮಾರಪ್ಪ ದಾಸರಿಂದ ಜನಪದ ಗೀತೆಗಳು ನಡೆಯಿತು. ಶುಕ್ರವಾರ ಸಂಜೆ ಎಕ್ಕಾರುವರೆಗೆ ವೈಭವದ ಮೆರವಣಿಗೆಯಲ್ಲಿ ಚಿನ್ನದ ಪಾಲ್ಲಕ್ಕಿಯಲ್ಲಿ ಶ್ರೀ ದುರ್ಗಾಪರಮೇಶ್ವರೀ ದೇವರ ಉತ್ಸವ ಮೂರ್ತಿಯನ್ನು ಕೊಂಡೊಯ್ಯಲಾಯಿತು. ದಾರಿಯುದ್ಧಕ್ಕೂ ಭಕ್ತರ ಕಟ್ಟೆಪೂಜೆಗಳನ್ನು ಸ್ವೀಕರಿಸಿ ಕಟೀಲಿಗೆ ವಾಪಾಸಾದ ಶ್ರೀ ದೇವೀ ಮತ್ತು ಶಿಬರೂರು ಕೊಡಮಣಿತ್ತಾಯ ದೈವದ ಭೇಟಿಯ ಬಳಿಕ ರಾತ್ರಿ ಎರಡು ಗಂಟೆಯ ಸುಮಾರಿಗೆ ರಥಬೀದಿಗೆ ಬರುತ್ತಿದ್ದಂತೆ ಭರ್ಜರಿ ಮಳೆಯಾಯಿತು. ಅರ್ಧ ಗಂಟೆಯ ಕಾಲ ಸುರಿದ ಮಳೆಯ ಮಧ್ಯೆಯೇ ದೇವರ ರಥದ ಎದುರಿನ ಬಲಿಯನ್ನು ಕಡಿತಗೊಳಿಸಿ, ನೇರ ರಥಾರೋಹಣಗೈಯಲಾಯಿತು. ಮಳೆ ನಿಂತ ಬಳಿಕ ನೂರಾರು ಮಂದಿ ರಥ ಎಳೆದು ಸಂಭ್ರಮಿಸಿದರು. ಬಳಿಕ ಸಿಡಿಮದ್ದು ಪ್ರದರ್ಶನ ನಡೆಯಿತು. ಶ್ರೀ ದೇವರ ಜಳಕದ ಬಳಿಕ ಬೆಳಿಗ್ಗೆ ಅತ್ತೂರು ಕೊಡೆತ್ತೂರಿನ ಇನ್ನೂರರಷ್ಟು ಹರಕೆಯ ಸೇವಾ ಕರ್ತರು ಅಜಾರು ಮತ್ತು ಕಟೀಲು ರಥಬೀದಿಯಲ್ಲಿ ಸೂಟೆದಾರ ಸೇವೆಯಲ್ಲಿ ಪಾಲ್ಗೊಂಡರು.

Tuesday, April 17, 2012

ತಾ.೨೩ರಿಂದ ಕಟೀಲಿನಲ್ಲಿ ವಸಂತವೇದ ಶಿಬಿರ

ಕಟೀಲು : ಇಲ್ಲಿನ ದುರ್ಗಾ ಸಂಸ್ಕೃತ ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನ ಕೇಂದ್ರದಲ್ಲಿ ಮುಂಬೈನ ಸಂಜೀವನೀ ಟ್ರಸ್ಟ್ ನಡೆಸುವ ಒಂದು ತಿಂಗಳ ಕಾಲದ ವಸಂತವೇದ ಶಿಬಿರ ತಾ.೨೩ರಂದು ಉದ್ಘಾಟನೆಗೊಳ್ಳಲಿದೆ.

ಕಟೀಲು ಕಾಲೇಜಿಗೆ ಎಂಆರ್‌ಪಿಎಲ್‌ನಿಂದ ೧೦ಲಕ್ಷ ರೂ.


ಕಟೀಲು : ಇಲ್ಲಿನ ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜಿಗೆ ಕಂಪ್ಯೂಟರ್‌ಗಳ ಅಳವಡಿಕೆಗೆ ಎಂ.ಆರ್.ಪಿ.ಎಲ್. ರೂ. ಹತ್ತು ಲಕ್ಷವನ್ನು ನೀಡಿದೆ. ಚೆಕ್‌ನ್ನು ಎಂಆರ್‌ಪಿಎಲ್‌ನ ಲಕ್ಷ್ಮೀ ಕುಮಾರನ್ ಪ್ರಾಚಾರ‍್ಯ ಎಂ.ಬಾಲಕೃಷ್ಣ ಶೆಟ್ಟಿಯವರಿಗೆ ಹಸ್ತಾಂತರಿಸಿದರು. ಅರ್ಚಕರಾದ ಅನಂತಪದ್ಮನಾಭ ಆಸ್ರಣ್ಣ, ಹರಿನಾರಾಯಣ ಆಸ್ರಣ್ಣ, ದೇಗುಲದ ಪ್ರಬಂಧಕ ವಿಶ್ವೇಶ ರಾವ್ ಉಪಸ್ಥಿತರಿದ್ದರು.

Friday, April 13, 2012

ಕಟೀಲಿನಲ್ಲಿ ಸಾಂಸ್ಕೃತಿಕ ಕಾರ‍್ಯಕ್ರಮಗಳು

ಕಟೀಲು : ಕಟೀಲು ಶ್ರೀ ಭ್ರಾಮರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ಉತ್ಸವಾಂಗ ದಿನಂಪ್ರತಿ ಸಾಂಸ್ಕೃತಿಕ ಕಾರ‍್ಯಕ್ರಮಗಳು ನಡೆಯಲಿವೆ. ತಾ.೧೪ರಂದು ಶ್ರೀನಿವಾಸ ಆಚಾರ್ಯ ಬಳಗ ತೋಕೂರು, ಹಳೆಂಯಗಡಿ ಇವರಿಂದ ಭಜನೆ, ಸಂಜೆ ತಾಳಮದ್ದಲೆ ’ರಾವಣಾಂತರಂಗ’ ಯಕ್ಷ ಸಿಂಧೂರ, ಮಹಿಳಾ ಯಕ್ಷಗಾನ ಕೂಟ, ತಲಪಾಡಿ ಇವರಿಂದ. ತಾ. ೧೫ ಶ್ರೀ ವಾಗ್ದೇವಿ ಭಜನಾ ಮಂಡಳಿ ಕಿನ್ನಿಗೋಳಿಯವರಿಂದ ಭಜನೆ ಸಂಜೆ, ಕು| ದೀಕ್ಷಾ. ಕೆ. ಕೊಟ್ಟಾರ ಇವರಿಂದ ಭರತನಾಟ್ಯ, ತಾ. ೧೬ಕ್ಕೆ ಭಜನೆ ಸಂಗೀತ ಶಾಲೆ, ಕಿನ್ನಿಗೋಳಿ ಮಕ್ಕಳಿಂದ, ಸಂಜೆ ’ಭರತನಾಟ್ಯ’ ಶ್ರೀ ಗುರುದೇವ ಲಲಿತಾ ಕಲಾ ಅಕಾಡೆಮಿ, ಮಂಡ್ಯದವರಿಂದ. ತಾ. ೧೭ ಸಂಜೆ ಬೆಳ್ಳಿ ರಥೋತ್ಸವ ಬೆಳಿಗ್ಗೆ ಶ್ರೀ ಭ್ರಾಮರೀ ಮಹಿಳಾ ಭಜನಾ ಮಂಡಳಿಯವರಿಂದ ಭಜನೆ, ಸಂಜೆ ’ರಸಮಂಜರಿ’ ಕರಾವಳಿ ಮೆಲೋಡೀಸ್ ಮಂಗಳೂರು ಇವರಿಂದ ನಡೆಯಲಿದೆ. ತಾ.೧೮ಕ್ಕೆ ಶ್ರೀ ದೇವಿ ಭಜನಾ ಮಂಡಳಿ ಕಟೀಲು ಇವರಿಂದ ಭಜನೆ, ಸಂಜೆ ’ನೃತ್ಯ ಕಾರ್ಯಕ್ರಮ’ ಡ್ಯಾನ್ಸಿಂಗ್ ಸ್ಟಾರ‍್ಸ್ ಅತ್ತಾವರದವರಿಂದ ಇದೆ. ತಾ. ೧೯ರಂದು ಹಗಲು ರಥೋತ್ಸವ ಬೆಳಿಗ್ಗೆ ಭಜನೆ ಬಾಲಗೋಪಾಲ ತಂಡದಿಂದ, ಸಂಜೆ ’ಯಕ್ಷಗಾನ ಪ್ರದರ್ಶನ’ ಶ್ರೀ ದುರ್ಗಾ ಮಕ್ಕಳ ಮೇಳ ಕಟೀಲು ’ಶಿವಭಕ್ತ ವೀರಮಣಿ’ ಪ್ರದರ್ಶನಗೊಳ್ಳಲಿದೆ. ತಾ. ೨೦ರಂದು ದಿನ ಆರಟ ಬೆಳಿಗ್ಗೆ ಭಕ್ತಿ ಗಾಯನ-ಗಜಲ್ ವೈಶಾಲಿ ಪಾಟೀಲ ಮತ್ತು ಬಳಗದವರಿಂದ ಸಂಜೆ ೭.೩೦ರಿಂದ ’ಲೇಸರ್ ಶೋ’ ವಿಜಯಾ ಬ್ಯಾಂಕಿನ ಪ್ರಯೋಜಕತ್ವದಲ್ಲಿ ನಡೆಯಲಿದೆ. ರಾತ್ರಿ ೮.೦೦ರಿಂದ ’ಭೀಷ್ಮನ ಕಡೆತ ದಿನೊಕುಲು’ ನಾಟಕ ಸುಮನಸಾ ಸಾಂಸ್ಕೃತಿಕ ಸೇವಾ ಸಂಘಟನೆ ಕೊಡವೂರು ಇವರಿಂದ ಪ್ರದರ್ಶನಗೊಳ್ಳಲಿದೆ. ರಾತ್ರಿ ೧೦.೦೦ರಿಂದ ತತ್ವಪದ-ಜಾನಪದ ಮಾರಪ್ಪ ಮಾರಪ್ಪ ಚೆನ್ನದಾಸರ ಕೊಪ್ಪಳ ಇವರಿಂದ ಕನ್ನಡ ಸಂಸ್ಕೃತಿ ಇಲಾಖೆಯ ಪ್ರಾಯೋಜಕತ್ವದಲ್ಲಿ ಜರಗಲಿದೆ.

Monday, March 26, 2012

ವೆಂಕಟೇಶ ಪ್ರಸಾದ ಕಟೀಲಿಗೆ ಭೇಟಿ


ಕ್ರಿಕೆಟಿಗ ವೆಂಕಟೇಶ ಪ್ರಸಾದ ಕಟೀಲಿಗೆ ಭೇಟಿ ನೀಡಿದರು.

Wednesday, March 21, 2012

ಕಟೀಲು ದೇಗುಲಕ್ಕೆ ನಂದಿನೀ ನದಿಯಿಂದ ೨೫ಕಿ.ವ್ಯಾ.ವಿದ್ಯುತ್





ದೇಶದಲ್ಲೇ ಮೊದಲು

ಕಟೀಲು : ಸ್ವಂತ ಬಳಕೆಗಾಗಿ ಖಾಸಗಿ ಸಂಸ್ಥೆಯೊಂದು ಟರ್ಬೋ ತಂತ್ರಜ್ಞಾನ ಬಳಸಿ ಕೇವಲ ಐದಾರು ಲಕ್ಷ ರೂ.ನಲ್ಲಿ ಇಪ್ಪತ್ತೈದು ಕಿಲೋ ವಾಟ್ ವಿದ್ಯುತನ್ನು ನದಿಯಿಂದ ಉತ್ಪಾದಿಸುವ ಸಾಧನೆಗೆ ಕಟೀಲು ದೇಗುಲ ಸಿದ್ಧವಾಗಿದ್ದು, ಇಂತಹ ಸಾಧನೆ ದೇಶದಲ್ಲೇ ಮೊದಲನೆಯದ್ದಾಗಿದೆ ಎಂದು ಹೇಳಲಾಗಿದೆ.javascript:void(0)
ನಂದಿನೀ ನದೀ ಮಧ್ಯದಲ್ಲಿರುವ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದ ಉಪಯೋಗಕ್ಕೆ ಸುತ್ತಲೂ ಹರಿಯುವ ನಂದಿನೀ ನದಿಯಿಂದಲೇ ಮಳೆಗಾಲದ ಆರು ತಿಂಗಳ ವಿದ್ಯುತ್ ಉತ್ಪಾದನೆ ಮಾಡುವ ಕನಸು ಮುಂದಿನ ಜೂನ್ ತಿಂಗಳಲ್ಲಿ ನನಸಾಗಲಿದ್ದು, ಇದಕ್ಕಾಗಿ ಟರ್ಬೋ ಯಂತ್ರವನ್ನು ಅಳವಡಿಸುವ ಕಾರ‍್ಯವನ್ನು ಶೃಂಗೇರಿ ಜಯಪುರದ ಜಿ.ಕೆ.ರತ್ನಾಕರ್ ಶುಕ್ರವಾರ ಮುಗಿಸಿದ್ದಾರೆ.
ನಿರಂತರ ಏಳೆಂಟು ತಿಂಗಳಲ್ಲಿ ೨೫ಕಿಲೋವ್ಯಾಟ್ ವಿದ್ಯುತ್ ಪಡೆಯುವುದು ಕಷ್ಟವೇ ಅಲ್ಲ ಎಂದು ಈಗಾಗಲೇ ೨೭೭ಕಡೆಗಳಲ್ಲಿ ಜಲವಿದ್ಯುತ್ ಘಟಕಗಳನ್ನು ಸ್ಥಾಪಿಸಿರುವ ಹಾಗೂ ಕಟೀಲಿನಲ್ಲಿ ಟರ್ಬೋ ಯಂತ್ರವನ್ನು ಸ್ಥಾಪಿಸಿರುವ ರಾಷ್ಟ್ರಪ್ರಶಸ್ತಿ ಪುರಸ್ಕೃತ ಜಿ.ಕೆ.ರತ್ನಾಕರ್ ತಿಳಿಸಿದ್ದಾರೆ.
ಕಟೀಲು ದೇಗುಲದಲ್ಲಿ ೭೦ಕಿಲೋವ್ಯಾಟ್‌ನ ೩ ಜನರೇಟರ್‌ಗಳು ಇವೆ. ಇಷ್ಟು ಸಾಕಾಗುವುದಿಲ್ಲವೆಂದು ನೂರು ಕಿಲೋವ್ಯಾಟ್ ವಿದ್ಯುತ್ ಸಾಮರ್ಥ್ಯದ ಜನರೇಟರ್ ಪರಿಶೀಲನೆಯಲ್ಲಿದೆ. ನಾಲ್ಕು ವಿದ್ಯಾ ಸಂಸ್ಥೆಗಳಲ್ಲಿ ೨೫ಕಿಲೋ ವ್ಯಾಟ್ ವಿದ್ಯುತ್ ಖರ್ಚಾಗುತ್ತದೆ. ಮಾಸ್ಟರ್ ಪ್ಲಾನ್ ಬಳಿಕ ನೂರು ಕೋಣೆಗಳ ವಸತಿಗೃಹ, ಅಡಿಟೋರಿಯಂ ಇತ್ಯಾದಿ ಕಟ್ಟಡಗಳಾದರೆ ಇನ್ನಷ್ಟು ವಿದ್ಯುತ್ ಬೇಕಾಗುತ್ತದೆ. ಅಂದರೆ ೧೦೦ ಕಿಲೋವ್ಯಾಟ್ ವಿದ್ಯುತ್ ಕಟೀಲು ದೇವಸ್ಥಾನ ಹಾಗೂ ಸಹಸಂಸ್ಥೆಗಳಿಗೆ ಬೇಕಾಗುತ್ತದೆ. ಈಗಾಗಲೇ ವಾರ್ಷಿಕ ಹತ್ತು ಲಕ್ಷ ರೂಪಾಯಿಗಳಿಗೆ ಕಡಿಮೆಯಿಲ್ಲದಂತೆ ಹಣವನ್ನು ವಿದ್ಯುತ್‌ಗಾಗಿಯೇ ಕಟೀಲು ದೇಗುಲ ಭರಿಸುತ್ತಿದೆ.
ಇಂತಹ ಹಿನ್ನಲೆಗಳಿರುವಾಗ ವೇಗದಿಂದ ಹರಿಯುವ ನಂದಿನೀ ನದಿಯಲ್ಲೇ ವಿದ್ಯುತ್ ಉತ್ಪಾದನೆ ಮಾಡುವ ಯೋಜನೆಯನ್ನು ಕಟೀಲು ದೇಗುಲದ ಆಡಳಿತ ಯೋಜಿಸಿ, ಕೆಲಸವನ್ನು ಜಯಪುರದ ಟರ್ಬೋ ಜಲವಿದ್ಯುತ್ ದೀಪಗಳು ಸಂಸ್ಥೆಯ ರತ್ನಾಕರ್‌ಗೆ ವಹಿಸಲಾಗಿತ್ತು.
ಕಟೀಲಿನಲ್ಲಿ ದೇಗುಲದ ಎದುರು ಕಟ್ಟಲಾಗಿರುವ ಕಿಂಡಿ ಅಣೆಕಟ್ಟಿಗೆ ಟರ್ಬನೈರ್ ಅಳವಡಿಸಲಾಗಿದ್ದು, ಮೂಲಕ ೨೫ಕಿಲೋ ವಾಟ್ ವಿದ್ಯುತ್ ಉತ್ಪಾದನೆಯಾಗುತ್ತದೆ. ಒಂದಿಷ್ಟು ಬದಲಾವಣೆ ಮಾಡಿದರೆ ೫೦ಕಿಲೋ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲೂ ಸಾಧ್ಯವಿದೆ. ಸುಮಾರು ನೂರು ಮೀಟರ್ ದೂರದಲ್ಲಿ ಕುದ್ರು ಸಮೀಪ ಮತ್ತೊಂದು ಕಿಂಡಿ ಅಣೆಕಟ್ಟು ಕಟ್ಟಿ ಅಲ್ಲಿಂದ ನೀರನ್ನು ಪೈಪು ಮೂಲಕ ವೇಗವಾಗಿ ಹರಿಸಿದರೆ ೪ ತಿಂಗಳ ಕಾಲ ಒಂದು ಮೆಗಾವ್ಯಾಟ್‌ನಷ್ಟೂ ವಿದ್ಯುತ್ ಉತ್ಪಾದನೆ ಮಾಡಬಹುದು. ಅಣೆಕಟ್ಟಿನ ೩-೪ ಕಿಂಡಿಗಳಲ್ಲಿ ಟರ್ಬನೈರ್‌ನಿಂದ ನೂರು ಕೆವಿಯಷ್ಟು ವಿದ್ಯುತನ್ನು ಆರು ತಿಂಗಳ ಕಾಲ ನಿರಂತರ ಆರಾಮವಾಗಿ ಪಡೆಯಬಹುದು ಎಂದು ಅವರು ಅಭಿಪ್ರಾಯ ಪಡುತ್ತಾರೆ.
ಸದ್ಯಕ್ಕೆ ೨೫ಕೆವಿಯಷ್ಟನ್ನೇ ಉತ್ಪಾದನೆ ಮಾಡುವ ಯಂತ್ರ ಅಳವಡಿಸಿದ್ದು, ಕೇವಲ ರೂ.ಐದಾರು ಲಕ್ಷದಲ್ಲಿ ಇಷ್ಟು ಮೊತ್ತದ ವಿದ್ಯುತ್ ಘಟಕವನ್ನು ಖಾಸಗಿ ಸಂಸ್ಥೆಯೊಂದು ತಯಾರಿಸಿರುವುದು ದೇಶದಲ್ಲೇ ಮೊದಲು ಎಂದು ರತ್ನಾಕರ್ ಹೇಳುತ್ತಾರೆ. ನೂರಾರು ಕಡೆಗಳಲ್ಲಿ ನೀರಿನಿಂದ ವಿದ್ಯುತ್ ತಯಾರಿಸುವ ಘಟಕಗಳಿವೆ. ನಾನೇ ನಕ್ಸಲ್ ಬಾಧಿತ ಪ್ರದೇಶ ಸೇರಿದಂತೆ ರಾಜ್ಯಾದ್ಯಂತ ಮುನ್ನೂರರಷ್ಟು ಘಟಕಗಳನ್ನು ಸ್ಥಾಪಿಸಿದ್ದೇನೆ. ಅವೆಲ್ಲ ಒಂದು ಎರಡು ಮೂರು ನಾಲ್ಕು ಕೆವಿಯಷ್ಟೇ ಇವೆ. ಆದರೆ ೨೫ ಕೆವಿಯಷ್ಟು ದೊಡ್ಡ ಘಟಕ ಖಾಸಗಿಯಾಗಿ ಸ್ಥಾಪಿಸಿದ್ದು ಕಟೀಲಿನಲ್ಲೇ ಮೊದಲು ಎಂದು ಅವರು ಹೇಳಿದ್ದಾರೆ.
ಕಾಶೀ ಹರಿದ್ವಾರದಲ್ಲಿ ಇದೇ ರೀತಿಯ ಘಟಕ ಮಾಡಬೇಕು ಅಂತ ಬೇಡಿಕೆ ಬಂದಿತ್ತಾದರೂ ಸಾಧ್ಯವಾಗಿರಲಿಲ್ಲ ಎಂದು ರತ್ನಾಕರ್ ಹೇಳಿದ್ದಾರೆ. ವರ್ಷಕ್ಕೆ ಹತ್ತು ಲಕ್ಷ ರೂ. ಖರ್ಚು ಮಾಡುವ ಕಟೀಲು ದೇಗುಲಕ್ಕೆ ಈ ಘಟಕಕ್ಕೆ ತೊಡಗಿಸಿದ ಹಣ ಒಂದೇ ವರ್ಷದಲ್ಲಿ ವಾಪಾಸಾದಂತಾಗುತ್ತದೆ. ಇದೇ ತಂತ್ರಜ್ಞಾನಕ್ಕೆ ನೀರು ಮೇಲೆತ್ತುವ ಯಂತ್ರ ಅಳವಡಿಸಿದರೆ ಭಕ್ತರಿಗೆ ಕಾಲು ತೊಳೆಯಲು ನೀರನ್ನು ಯಾವುದೇ ಖರ್ಚಿಲ್ಲದೆ ದಿನವಿಡೀ ನದಿಯಿಂದ ಮೇಲೆತ್ತಬಹುದು. ವಿದ್ಯುತ್ ಉಪಯೋಗವಿಲ್ಲದ ವೇಳೆಯಲ್ಲಿ ಅಕ್ಕಿ ಗೋಧಿ ಇತ್ಯಾದಿ ಹಿಟ್ಟು ಮಾಡುವ ಗಿರಣಿಯನ್ನೂ ಇಲ್ಲೇ ನಡೆಸುವ ಮೂಲಕ ದೇಗುಲಕ್ಕೆ ಇನ್ನಷ್ಟು ಉಪಯೋಗ ಪಡೆಯಬಹುದು. ಆದರೆ ಈ ಘಟಕಕ್ಕೆ ನದಿಯಲ್ಲಿ ಹೋಗುವ ದಿಮ್ಮಿಗಳು ಸಮಸ್ಯೆಯಾಗದಂತೆ ರಕ್ಷಣೆ ಅಗತ್ಯವಿದೆ ಎಂದು ರತ್ನಾಕರ್ ತಿಳಿಸಿದ್ದಾರೆ.
ಆದರೆ ವಿದ್ಯುತ್ ಉತ್ಪಾದನೆಯನ್ನು ನೋಡಲು ಮಳೆ ಬರುವ ಜೂನ್‌ವರೆಗೆ ಕಾಯಬೇಕು.
ಚಿತ್ರ : ಕಟೀಲ್ ಸ್ಟುಡಿಯೋ