ದೇಶದಲ್ಲೇ ಮೊದಲು
ಕಟೀಲು : ಸ್ವಂತ ಬಳಕೆಗಾಗಿ ಖಾಸಗಿ ಸಂಸ್ಥೆಯೊಂದು ಟರ್ಬೋ ತಂತ್ರಜ್ಞಾನ ಬಳಸಿ ಕೇವಲ ಐದಾರು ಲಕ್ಷ ರೂ.ನಲ್ಲಿ ಇಪ್ಪತ್ತೈದು ಕಿಲೋ ವಾಟ್ ವಿದ್ಯುತನ್ನು ನದಿಯಿಂದ ಉತ್ಪಾದಿಸುವ ಸಾಧನೆಗೆ ಕಟೀಲು ದೇಗುಲ ಸಿದ್ಧವಾಗಿದ್ದು, ಇಂತಹ ಸಾಧನೆ ದೇಶದಲ್ಲೇ ಮೊದಲನೆಯದ್ದಾಗಿದೆ ಎಂದು ಹೇಳಲಾಗಿದೆ.javascript:void(0)
ನಂದಿನೀ ನದೀ ಮಧ್ಯದಲ್ಲಿರುವ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದ ಉಪಯೋಗಕ್ಕೆ ಸುತ್ತಲೂ ಹರಿಯುವ ನಂದಿನೀ ನದಿಯಿಂದಲೇ ಮಳೆಗಾಲದ ಆರು ತಿಂಗಳ ವಿದ್ಯುತ್ ಉತ್ಪಾದನೆ ಮಾಡುವ ಕನಸು ಮುಂದಿನ ಜೂನ್ ತಿಂಗಳಲ್ಲಿ ನನಸಾಗಲಿದ್ದು, ಇದಕ್ಕಾಗಿ ಟರ್ಬೋ ಯಂತ್ರವನ್ನು ಅಳವಡಿಸುವ ಕಾರ‍್ಯವನ್ನು ಶೃಂಗೇರಿ ಜಯಪುರದ ಜಿ.ಕೆ.ರತ್ನಾಕರ್ ಶುಕ್ರವಾರ ಮುಗಿಸಿದ್ದಾರೆ.
ನಿರಂತರ ಏಳೆಂಟು ತಿಂಗಳಲ್ಲಿ ೨೫ಕಿಲೋವ್ಯಾಟ್ ವಿದ್ಯುತ್ ಪಡೆಯುವುದು ಕಷ್ಟವೇ ಅಲ್ಲ ಎಂದು ಈಗಾಗಲೇ ೨೭೭ಕಡೆಗಳಲ್ಲಿ ಜಲವಿದ್ಯುತ್ ಘಟಕಗಳನ್ನು ಸ್ಥಾಪಿಸಿರುವ ಹಾಗೂ ಕಟೀಲಿನಲ್ಲಿ ಟರ್ಬೋ ಯಂತ್ರವನ್ನು ಸ್ಥಾಪಿಸಿರುವ ರಾಷ್ಟ್ರಪ್ರಶಸ್ತಿ ಪುರಸ್ಕೃತ ಜಿ.ಕೆ.ರತ್ನಾಕರ್ ತಿಳಿಸಿದ್ದಾರೆ.
ಕಟೀಲು ದೇಗುಲದಲ್ಲಿ ೭೦ಕಿಲೋವ್ಯಾಟ್‌ನ ೩ ಜನರೇಟರ್‌ಗಳು ಇವೆ. ಇಷ್ಟು ಸಾಕಾಗುವುದಿಲ್ಲವೆಂದು ನೂರು ಕಿಲೋವ್ಯಾಟ್ ವಿದ್ಯುತ್ ಸಾಮರ್ಥ್ಯದ ಜನರೇಟರ್ ಪರಿಶೀಲನೆಯಲ್ಲಿದೆ. ನಾಲ್ಕು ವಿದ್ಯಾ ಸಂಸ್ಥೆಗಳಲ್ಲಿ ೨೫ಕಿಲೋ ವ್ಯಾಟ್ ವಿದ್ಯುತ್ ಖರ್ಚಾಗುತ್ತದೆ. ಮಾಸ್ಟರ್ ಪ್ಲಾನ್ ಬಳಿಕ ನೂರು ಕೋಣೆಗಳ ವಸತಿಗೃಹ, ಅಡಿಟೋರಿಯಂ ಇತ್ಯಾದಿ ಕಟ್ಟಡಗಳಾದರೆ ಇನ್ನಷ್ಟು ವಿದ್ಯುತ್ ಬೇಕಾಗುತ್ತದೆ. ಅಂದರೆ ೧೦೦ ಕಿಲೋವ್ಯಾಟ್ ವಿದ್ಯುತ್ ಕಟೀಲು ದೇವಸ್ಥಾನ ಹಾಗೂ ಸಹಸಂಸ್ಥೆಗಳಿಗೆ ಬೇಕಾಗುತ್ತದೆ. ಈಗಾಗಲೇ ವಾರ್ಷಿಕ ಹತ್ತು ಲಕ್ಷ ರೂಪಾಯಿಗಳಿಗೆ ಕಡಿಮೆಯಿಲ್ಲದಂತೆ ಹಣವನ್ನು ವಿದ್ಯುತ್‌ಗಾಗಿಯೇ ಕಟೀಲು ದೇಗುಲ ಭರಿಸುತ್ತಿದೆ.
ಇಂತಹ ಹಿನ್ನಲೆಗಳಿರುವಾಗ ವೇಗದಿಂದ ಹರಿಯುವ ನಂದಿನೀ ನದಿಯಲ್ಲೇ ವಿದ್ಯುತ್ ಉತ್ಪಾದನೆ ಮಾಡುವ ಯೋಜನೆಯನ್ನು ಕಟೀಲು ದೇಗುಲದ ಆಡಳಿತ ಯೋಜಿಸಿ, ಕೆಲಸವನ್ನು ಜಯಪುರದ ಟರ್ಬೋ ಜಲವಿದ್ಯುತ್ ದೀಪಗಳು ಸಂಸ್ಥೆಯ ರತ್ನಾಕರ್‌ಗೆ ವಹಿಸಲಾಗಿತ್ತು.
ಕಟೀಲಿನಲ್ಲಿ ದೇಗುಲದ ಎದುರು ಕಟ್ಟಲಾಗಿರುವ ಕಿಂಡಿ ಅಣೆಕಟ್ಟಿಗೆ ಟರ್ಬನೈರ್ ಅಳವಡಿಸಲಾಗಿದ್ದು, ಮೂಲಕ ೨೫ಕಿಲೋ ವಾಟ್ ವಿದ್ಯುತ್ ಉತ್ಪಾದನೆಯಾಗುತ್ತದೆ. ಒಂದಿಷ್ಟು ಬದಲಾವಣೆ ಮಾಡಿದರೆ ೫೦ಕಿಲೋ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲೂ ಸಾಧ್ಯವಿದೆ. ಸುಮಾರು ನೂರು ಮೀಟರ್ ದೂರದಲ್ಲಿ ಕುದ್ರು ಸಮೀಪ ಮತ್ತೊಂದು ಕಿಂಡಿ ಅಣೆಕಟ್ಟು ಕಟ್ಟಿ ಅಲ್ಲಿಂದ ನೀರನ್ನು ಪೈಪು ಮೂಲಕ ವೇಗವಾಗಿ ಹರಿಸಿದರೆ ೪ ತಿಂಗಳ ಕಾಲ ಒಂದು ಮೆಗಾವ್ಯಾಟ್‌ನಷ್ಟೂ ವಿದ್ಯುತ್ ಉತ್ಪಾದನೆ ಮಾಡಬಹುದು. ಅಣೆಕಟ್ಟಿನ ೩-೪ ಕಿಂಡಿಗಳಲ್ಲಿ ಟರ್ಬನೈರ್‌ನಿಂದ ನೂರು ಕೆವಿಯಷ್ಟು ವಿದ್ಯುತನ್ನು ಆರು ತಿಂಗಳ ಕಾಲ ನಿರಂತರ ಆರಾಮವಾಗಿ ಪಡೆಯಬಹುದು ಎಂದು ಅವರು ಅಭಿಪ್ರಾಯ ಪಡುತ್ತಾರೆ.
ಸದ್ಯಕ್ಕೆ ೨೫ಕೆವಿಯಷ್ಟನ್ನೇ ಉತ್ಪಾದನೆ ಮಾಡುವ ಯಂತ್ರ ಅಳವಡಿಸಿದ್ದು, ಕೇವಲ ರೂ.ಐದಾರು ಲಕ್ಷದಲ್ಲಿ ಇಷ್ಟು ಮೊತ್ತದ ವಿದ್ಯುತ್ ಘಟಕವನ್ನು ಖಾಸಗಿ ಸಂಸ್ಥೆಯೊಂದು ತಯಾರಿಸಿರುವುದು ದೇಶದಲ್ಲೇ ಮೊದಲು ಎಂದು ರತ್ನಾಕರ್ ಹೇಳುತ್ತಾರೆ. ನೂರಾರು ಕಡೆಗಳಲ್ಲಿ ನೀರಿನಿಂದ ವಿದ್ಯುತ್ ತಯಾರಿಸುವ ಘಟಕಗಳಿವೆ. ನಾನೇ ನಕ್ಸಲ್ ಬಾಧಿತ ಪ್ರದೇಶ ಸೇರಿದಂತೆ ರಾಜ್ಯಾದ್ಯಂತ ಮುನ್ನೂರರಷ್ಟು ಘಟಕಗಳನ್ನು ಸ್ಥಾಪಿಸಿದ್ದೇನೆ. ಅವೆಲ್ಲ ಒಂದು ಎರಡು ಮೂರು ನಾಲ್ಕು ಕೆವಿಯಷ್ಟೇ ಇವೆ. ಆದರೆ ೨೫ ಕೆವಿಯಷ್ಟು ದೊಡ್ಡ ಘಟಕ ಖಾಸಗಿಯಾಗಿ ಸ್ಥಾಪಿಸಿದ್ದು ಕಟೀಲಿನಲ್ಲೇ ಮೊದಲು ಎಂದು ಅವರು ಹೇಳಿದ್ದಾರೆ.
ಕಾಶೀ ಹರಿದ್ವಾರದಲ್ಲಿ ಇದೇ ರೀತಿಯ ಘಟಕ ಮಾಡಬೇಕು ಅಂತ ಬೇಡಿಕೆ ಬಂದಿತ್ತಾದರೂ ಸಾಧ್ಯವಾಗಿರಲಿಲ್ಲ ಎಂದು ರತ್ನಾಕರ್ ಹೇಳಿದ್ದಾರೆ. ವರ್ಷಕ್ಕೆ ಹತ್ತು ಲಕ್ಷ ರೂ. ಖರ್ಚು ಮಾಡುವ ಕಟೀಲು ದೇಗುಲಕ್ಕೆ ಈ ಘಟಕಕ್ಕೆ ತೊಡಗಿಸಿದ ಹಣ ಒಂದೇ ವರ್ಷದಲ್ಲಿ ವಾಪಾಸಾದಂತಾಗುತ್ತದೆ. ಇದೇ ತಂತ್ರಜ್ಞಾನಕ್ಕೆ ನೀರು ಮೇಲೆತ್ತುವ ಯಂತ್ರ ಅಳವಡಿಸಿದರೆ ಭಕ್ತರಿಗೆ ಕಾಲು ತೊಳೆಯಲು ನೀರನ್ನು ಯಾವುದೇ ಖರ್ಚಿಲ್ಲದೆ ದಿನವಿಡೀ ನದಿಯಿಂದ ಮೇಲೆತ್ತಬಹುದು. ವಿದ್ಯುತ್ ಉಪಯೋಗವಿಲ್ಲದ ವೇಳೆಯಲ್ಲಿ ಅಕ್ಕಿ ಗೋಧಿ ಇತ್ಯಾದಿ ಹಿಟ್ಟು ಮಾಡುವ ಗಿರಣಿಯನ್ನೂ ಇಲ್ಲೇ ನಡೆಸುವ ಮೂಲಕ ದೇಗುಲಕ್ಕೆ ಇನ್ನಷ್ಟು ಉಪಯೋಗ ಪಡೆಯಬಹುದು. ಆದರೆ ಈ ಘಟಕಕ್ಕೆ ನದಿಯಲ್ಲಿ ಹೋಗುವ ದಿಮ್ಮಿಗಳು ಸಮಸ್ಯೆಯಾಗದಂತೆ ರಕ್ಷಣೆ ಅಗತ್ಯವಿದೆ ಎಂದು ರತ್ನಾಕರ್ ತಿಳಿಸಿದ್ದಾರೆ.
ಆದರೆ ವಿದ್ಯುತ್ ಉತ್ಪಾದನೆಯನ್ನು ನೋಡಲು ಮಳೆ ಬರುವ ಜೂನ್‌ವರೆಗೆ ಕಾಯಬೇಕು.
ಚಿತ್ರ : ಕಟೀಲ್ ಸ್ಟುಡಿಯೋ
Very good project. Wish a very good success for this project
ReplyDeleteGood Initiative by Kateel Temple and good article.
ReplyDeleteThank u for sharing this infornmation.