


ಅಬ್ಬರದ ಮಳೆಯಲ್ಲೇ ವೈಭವದ ಕಟೀಲು ಜಾತ್ರೆ
’ಧೋ’ ಎಂದು ಸುರಿದ ಗಾಳಿ ಮಳೆಯ ಮಧ್ಯೆಯೇ ಶುಕ್ರವಾರ ರಾತ್ರಿ ನೂರಾರು ಮಂದಿ ತೇರನ್ನೆಳೆದು ಕಟೀಲು ಶ್ರೀ ಭ್ರಾಮರಿಯ ರಥೋತ್ಸವದ ಸಂಭ್ರಮದಲ್ಲಿ ಪಾಲ್ಗೊಂಡರು.
ಇದೇ ಸಂದರ್ಭ ದೇಗುಲದ ಆಡಳಿತಾಧಿಕಾರಿ ವೆಂಕಟೇಶ್, ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ಜಿ.ಪಂ.ಸದಸ್ಯ ಈಶ್ವರ್, ಭಾಸ್ಕರಾನಂದ ಕುಮಾರ್, ಮೋನಪ್ಪ ಶೆಟ್ಟಿ ಉಪಸ್ಥಿತಿಯಲ್ಲಿ ಕಟೀಲಿನಲ್ಲಿ ದೇಗುಲದ ವತಿಯಿಂದ ಸುಮಾರು ಹದಿನೈದು ಲಕ್ಷ ರೂ.ವೆಚ್ಚದಲ್ಲಿ ಮಾಡಲಾದ ಇಂಟರ್‌ಲಾಕ್ ಅಳವಡಿಸಿದ ನೂತನ ಬಸ್‌ನಿಲ್ದಾಣದ ಉದ್ಘಾಟನೆ ನಡೆಯಿತು.
ವಿಜಯಾ ಬ್ಯಾಂಕ್ ಪ್ರಾಯೋಜಕತ್ವದ ಲೇಸರ್ ಶೋ, ಸುಮನಸಾ ಕಲಾವಿದರ ಭೀಷ್ಮನ ಕಡೆತ ದಿನಕುಲು ನಾಟಕ, ಹಾಗೂ ಕೊಪ್ಪಳದ ಮಾರಪ್ಪ ದಾಸರಿಂದ ಜನಪದ ಗೀತೆಗಳು ನಡೆಯಿತು.
ಶುಕ್ರವಾರ ಸಂಜೆ ಎಕ್ಕಾರುವರೆಗೆ ವೈಭವದ ಮೆರವಣಿಗೆಯಲ್ಲಿ ಚಿನ್ನದ ಪಾಲ್ಲಕ್ಕಿಯಲ್ಲಿ ಶ್ರೀ ದುರ್ಗಾಪರಮೇಶ್ವರೀ ದೇವರ ಉತ್ಸವ ಮೂರ್ತಿಯನ್ನು ಕೊಂಡೊಯ್ಯಲಾಯಿತು. ದಾರಿಯುದ್ಧಕ್ಕೂ ಭಕ್ತರ ಕಟ್ಟೆಪೂಜೆಗಳನ್ನು ಸ್ವೀಕರಿಸಿ ಕಟೀಲಿಗೆ ವಾಪಾಸಾದ ಶ್ರೀ ದೇವೀ ಮತ್ತು ಶಿಬರೂರು ಕೊಡಮಣಿತ್ತಾಯ ದೈವದ ಭೇಟಿಯ ಬಳಿಕ ರಾತ್ರಿ ಎರಡು ಗಂಟೆಯ ಸುಮಾರಿಗೆ ರಥಬೀದಿಗೆ ಬರುತ್ತಿದ್ದಂತೆ ಭರ್ಜರಿ ಮಳೆಯಾಯಿತು. ಅರ್ಧ ಗಂಟೆಯ ಕಾಲ ಸುರಿದ ಮಳೆಯ ಮಧ್ಯೆಯೇ ದೇವರ ರಥದ ಎದುರಿನ ಬಲಿಯನ್ನು ಕಡಿತಗೊಳಿಸಿ, ನೇರ ರಥಾರೋಹಣಗೈಯಲಾಯಿತು. ಮಳೆ ನಿಂತ ಬಳಿಕ ನೂರಾರು ಮಂದಿ ರಥ ಎಳೆದು ಸಂಭ್ರಮಿಸಿದರು. ಬಳಿಕ ಸಿಡಿಮದ್ದು ಪ್ರದರ್ಶನ ನಡೆಯಿತು. ಶ್ರೀ ದೇವರ ಜಳಕದ ಬಳಿಕ ಬೆಳಿಗ್ಗೆ ಅತ್ತೂರು ಕೊಡೆತ್ತೂರಿನ ಇನ್ನೂರರಷ್ಟು ಹರಕೆಯ ಸೇವಾ ಕರ್ತರು ಅಜಾರು ಮತ್ತು ಕಟೀಲು ರಥಬೀದಿಯಲ್ಲಿ ಸೂಟೆದಾರ ಸೇವೆಯಲ್ಲಿ ಪಾಲ್ಗೊಂಡರು.
No comments:
Post a Comment