Friday, May 24, 2013

ಕಟೀಲಿನಲ್ಲಿ ಯಕ್ಷಗಾನ ಕಲಾವಿದರಿಗೆ ಆರೋಗ್ಯ ಶಿಬಿರ



ಕಟೀಲು : ಇಲ್ಲಿನ ಶ್ರೀ ದುರ್ಗಾಪರಮೇಶ್ವರೀ ದೇಗುಲದ ಸರಸ್ವತೀ ಸದನದಲ್ಲಿ ಕಟೀಲಿನ ಐದೂ ಯಕ್ಷಗಾನ ಮೇಳಗಳ ಕಲಾವಿದರು ಹಾಗೂ ಕಟೀಲು ದೇಗುಲದ ಸಿಬಂದಿಗಳು ಮತ್ತವರ ಕುಟುಂಬಿಕರಿಗೆ ಉಚಿತ ಆರೋಗ್ಯ ಶಿಬಿರವನ್ನು ತಾ.೨೬ರ ಭಾನುವಾರ ಸುರತ್ಕಲ್ ಮುಕ್ಕದ ಶ್ರೀನಿವಾಸ ವೈದ್ಯಕೀಯ ವಿಜ್ಞಾನ ಕಾಲೇಜು ಸಂಶೋಧನೆ ಕೇಂದ್ರದ ವೈದ್ಯರಿಂದ ಆಯೋಜಿಸಲಾಗಿದೆ ಎಂದು ಕಟೀಲು ದೇಗುಲ, ಯಕ್ಷಗಾನ ಮಂಡಳಿ ಹಾಗೂ ಝೇಂಕಾರ ಬಳಗದ ಪ್ರಕಟನೆ ತಿಳಿಸಿದೆ.
ಯಕ್ಷಗಾನ ತಿರುಗಾಟ ಶನಿವಾರ ಕೊನೆಗೊಳ್ಳಲಿದ್ದು, ಮರುದಿನ ಆರೋಗ್ಯ ತಪಾಸಣೆಯನ್ನು ಆಯೋಜಿಸಿರುವುದು ವಿಶೇಷವಾಗಿದೆ. ಉದ್ಘಾಟನೆ ಸಂದರ್ಭ ಕಟೀಲಿನ ಅರ್ಚಕರಾದ ಆಸ್ರಣ್ಣ ಬಂಧುಗಳು, ಶ್ರೀನಿವಾಸ ಸಂಸ್ಥೆಯ ಎಂ.ಆರ್.ವಾಸುದೇವ, ಕಲ್ಲಾಡಿ ದೇವೀಪ್ರಸಾದ ಶೆಟ್ಟಿ ಭಾಗವಹಿಸಲಿದ್ದಾರೆ.

ತಾ.೨೫ :ಕಟೀಲು ಮೇಳಗಳ ತಿರುಗಾಟ ಮುಕ್ತಾಯ


ತಾ.೨೫ :ಕಟೀಲು ಮೇಳಗಳ ತಿರುಗಾಟ ಮುಕ್ತಾಯ
ರಜಾಕಾಲದಲ್ಲಿ ಹಿಮ್ಮೇಳ ಕಾರ‍್ಯಾಗಾರ, ಕಲಾವಿದರು ಸಿಕ್ಕರೆ ಆರನೇ ಮೇಳ
ಕಟೀಲು : ಇಲ್ಲಿನ ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮೇಳಗಳ ಈ ವರ್ಷದ ತಿರುಗಾಟ ಪತ್ತನಾಜೆಯ ಮರುದಿನ (ತಾ.೨೫) ಮುಗಿಯಲಿದೆ. ಮುಂದಿನ ತಿರುಗಾಟ ದೀಪಾವಳಿಯ ಅನಂತರ ಅಂದರೆ ನವೆಂಬರ್ ೭ರಂದೇ ಆರಂಭವಾಗಲಿದೆ. ಈವರೆಗೆ ದೇಗುಲದಲ್ಲಿ ದೀಪೋತ್ಸವದ ಬಳಿಕ ಮೇಳಗಳ ತಿರುಗಾಟ ಆರಂಭವಾಗುತ್ತಿದ್ದರೆ ಈ ಬಾರಿ ಸುಮಾರು ಇಪ್ಪತ್ತು ದಿನಗಳ ಮುಂಚಿತವಾಗಿಯೇ ತಿರುಗಾಟ ಆರಂಭವಾಗಲಿದ್ದು, ೧೧೦ ಆಟಗಳು ಹೆಚ್ಚುವರಿಯಾಗಿ ಸಿಗಲಿವೆ. ಇದರಿಂದ ಹರಕೆಯಾಟ ಆಡಿಸುವ ಭಕ್ತರಿಗೆ ಪ್ರಯೋಜನವಾಗಲಿದೆ. ಮುಂದಿನ ಇಪ್ಪತ್ತೈದು ವರ್ಷಗಳವರೆಗೆ ಹತ್ತು ಸಾವಿರಕ್ಕಿಂತಲೂ ಹೆಚ್ಚು ಹರಕೆಯಾಟಗಳು ಕಟೀಲು ಮೇಳಗಳಿಗೆ ಬುಕ್ಕಿಂಗ್ ಆಗಿರುವುದು ದಾಖಲೆಯಾಗಿದೆ.
ಯಕ್ಷಗಾನ ಕಲಾವಿದರ ಕೊರತೆ ಇರುವುದರಿಂದ ಮುಂದಿನ ವರುಷಕ್ಕೆ ಆರನೆಯ ಮೇಳ ತಿರುಗಾಟ ಪ್ರಾರಂಭಿಸುವ ಯೋಚನೆಗೆ ಒಂದಿಷ್ಟು ಹಿನ್ನಡೆಯಾಗಿದ್ದರೂ ಹೆಚ್ಚುವರಿ ಕಲಾವಿದರ ಸೇರ್ಪಡೆಯಾದರೆ ಆರನೆಯ ಮೇಳ ಕಟೀಲಿನಿಂದ ಹೊರಡುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.
ಹಿಮ್ಮೇಳ ಕಾರ‍್ಯಾಗಾರ
ಎರಡು ವರುಷಗಳ ಹಿಂದೆ ಶ್ರೀ ದೇವೀ ಮಾಹಾತ್ಮ್ಯ ಕಾರ‍್ಯಾಗಾರ ನಡೆದಿದ್ದು, ಈ ಬಾರಿ ಕಟೀಲಿನಲ್ಲೇ ಜೂನ್ ೯ಮತ್ತು ೧೦ರಂದು ಹಿಮ್ಮೇಳ ಕಾರ‍್ಯಾಗಾರವನ್ನು ಆಯೋಜಿಸಲಾಗಿದೆ. ಈ ಮೂಲಕ ಕಟೀಲು ಮತ್ತು ತೆಂಕುತಿಟ್ಟಿನ ಇತರ ಮೇಳಗಳ ಹಿಮ್ಮೇಳವನ್ನು ಇನ್ನಷ್ಟು ಸುಂದರಗೊಳಿಸುವ ಪ್ರಯತ್ನ ನಡೆಯಲಿದೆ. ಈ ಕಾರ‍್ಯಾಗಾರಕ್ಕೆ ಕಟೀಲು ದೇಗುಲದೊಂದಿಗೆ ಯಕ್ಷಗಾನ ಬಯಲಾಟ ಅಕಾಡಮಿ ಸಹಯೋಗ ನೀಡಲಿದೆ.
ಕಟೀಲು ಮೇಳಗಳ ಕಲಾವಿದರಿಗೆ ಮಳೆಗಾಲದ ರಜಾ ಕಾಲದಲ್ಲೂ ಗೌರವ ಧನವನ್ನು ನೀಡುತ್ತಿರುವುದು ವಿಶೇಷವಾಗಿದೆ. ಯಕ್ಷಗಾನಾಸಕ್ತ ಉದ್ಯಮಿಗಳು ಸೇರಿ ಸಂಘಟಿಸುವ ಯಕ್ಷ ಧರ್ಮ ಬೋಧಿನೀ ಟ್ರಸ್ಟ್ ಐದು ಮೇಳಗಳಿಗೆ ನೀಡಿರುವ ಬಸ್ಸು ಹಾಗೂ ರಂಗಸ್ಥಳಗಳಿಂದ ಸಂಗ್ರಹಿತವಾಗುವ ಬಾಡಿಗೆ ಮೊತ್ತವನ್ನು ರಜಾಕಾಲದ ಗೌರವ ಧನ ನೀಡಲು ಬಳಸಲಾಗುತ್ತಿದ್ದು ಸುಮಾರು ಹದಿನೈದು ಲಕ್ಷ ರೂಪಾಯಿಗಳನ್ನು ಇದಕ್ಕಾಗಿ ವ್ಯಯಿಸಲಾಗುತ್ತದೆ. ಮೇಳಗಳ ಎಲ್ಲ ಕಲಾವಿದರಿಗೂ ಆರೋಗ್ಯ ವಿಮೆಯನ್ನೂ ಮಾಡಲಾಗಿದೆ.


Monday, April 29, 2013

ಸಂಪತ್ತು ಧರ್ಮದ ಮಾರ್ಗದಲ್ಲಿ ಬರಲಿ-ಪ್ರತಾಪಸಿಂಹ ನಾಯಕ್

ಕಟೀಲು : ಆಸೆ ಸಹಜ. ಆಸೆ ಪೂರೈಸಲು ಸಂಪತ್ತು ಬೇಕು. ಆದರೆ ಅದು ಧರ್ಮದ ಮಾರ್ಗದಲ್ಲಿ ಬರಬೇಕು ಎಂದು ಬೆಳ್ತಂಗಡಿಯ ವಕೀಲರಾದ ಪ್ರತಾಪಸಿಂಹ ನಾಯಕ್ ಹೇಳಿದರು.

ಅವರು ಭಾನುವಾರ ಶ್ರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ನಡೆದ ತಿಂಗಳ ಚಿಂತನ ಕಾರ‍್ಯಕ್ರಮದಲ್ಲಿ ಏಕಾತ್ಮ ಮಾನವತಾ ದರ್ಶನ ಕುರಿತು ಮಾತನಾಡಿದರು.
ಪಂಡಿತ್ ದೀನ್ ದಯಾಳ್ ಉಪಾಧ್ಯಾಯರರ ಚಿಂತನೆಗಳ ಬಗ್ಗೆ ಮಾತನಾಡಿದ ಅವರು ನಾನು ಎಂಬ ಭಾವನೆ ಕುಟುಂಬ ಪದ್ಧತಿಯಿಂದಾಗಿ ನಾವು ಎಂದಾಗುತ್ತದೆ. ನಾವು ಪ್ರಕೃತಿಯ ಜೊತೆಗೆ ಬದುಕುತ್ತಿರುವುದು ಗೊತ್ತಿರಬೇಕು. ಮನಸ್ಸು, ದೇಹ, ಬುದ್ಧಿ ಆತ್ಮಗಳು ಒಂದಕ್ಕೊಂದು ಸಂಬಂಧಿಸಿದವು. ವ್ಯಕ್ತಿಗಿರುವಂತೆ ರಾಷ್ಟ್ರಕ್ಕೂ ವ್ಯಕ್ತಿತ್ವ ಇದೆ ಎಂದು ಅವರು ಹೇಳಿದರು. ಝೇಂಕಾರ ಬಳಗದ ಅನಂತಪದ್ಮನಾಭ ಆಸ್ರಣ್ಣ ಸ್ವಾಗತಿಸಿದರು. ಸೋಂದಾ ಭಾಸ್ಕರ ಭಟ್ ಕಾರ‍್ಯಕ್ರಮ ನಿರೂಪಿಸಿದರು. ಪ್ರಸಾದ ಆಸ್ರಣ್ಣ ವಂದಿಸಿದರು.
ಚಿತ್ರ ಈಮೆಲ್

ಕಟೀಲು ಸಾಮೂಹಿಕ ವಿವಾಹದಲ್ಲಿ ೨೨ಜೋಡಿ ಗ್ರಹಸ್ಥಾಶ್ರಮಕ್ಕೆ


ಕಟೀಲು : ಶ್ರೀ ಗೋಪಾಲಕೃಷ್ಣ ಆಸ್ರಣ್ಣ ಟ್ರಸ್ಟ್ ಹಾಗೂ ಲಕ್ಷ್ಮೀನಾರಾಯಣ ಆಸ್ರಣ್ಣ ಅಭಿನಂದನಾ ಸಮಿತಿ ಆಶ್ರಯದಲ್ಲಿ ಸೋಮವಾರ ಸಂಜೆ ಕಟೀಲು ಗೋಪಾಲಕೃಷ್ಣ ಸಭಾಂಗಣದಲ್ಲಿ ನಡೆದ ಸಾಮೂಹಿಕ ವಿವಾಹದಲ್ಲಿ ೨೨ಜೋಡಿಗಳು ಗ್ರಹಸ್ಥಾಶ್ರಮಕ್ಕೆ ಕಾಲಿರಿಸಿದವು.
ಲಕ್ಷ್ಮೀನಾರಾಯಣ ಆಸ್ರಣ್ಣ, ಪಿ.ಸತೀಶ್ ರಾವ್, ಜಯಂತಿ ಆಸ್ರಣ್ಣ, ಉದ್ಯಮಿ ಎ.ಜೆ.ಶೆಟ್ಟಿ, ಎ.ಕೃಷ್ಣಮೂರ್ತಿ, ಹರಿಕೃಷ್ಣ ಪುನರೂರು, ಪ್ರದೀಪ ಕಲ್ಕೂರ, ಸತೀಶ್ ಎನ್. ಬಂಗೇರ, ಸುವರ್ಣಬಾಬಾ, ವಾಸುದೇವ ರಾವ್, ಮೋಹನ ಮೆಂಡನ್, ಶ್ರೀಕಾಂತ ಉಡುಪ ಮುಂತಾದವರು ಈ ಸಂದರ್ಭ ಉಪಸ್ಥಿತರಿದ್ದರು. ಸಾಹಿತಿ ಕೆ.ಎಲ್.ಕುಂಡಂತಾಯರನ್ನು ಈ ಸಂದರ್ಭ ಸಂಮಾನಿಸಲಾಯಿತು. ರಮ್ಯಾ ಆಸ್ರಣ್ಣ ಕಾರ‍್ಯಕ್ರಮ ನಿರೂಪಿಸಿದರು.

Saturday, April 27, 2013

Monday, February 18, 2013

ಕಟೀಲಿನಲ್ಲಿ ಜೆಡಿಎಸ್ ಸಭೆ


ಕಟೀಲು : ತಳಮಟ್ಟದಲ್ಲಿ ಪಕ್ಷವನ್ನು ಸಂಘಟಿಸಬೇಕಾಗಿದ್ದು, ಯುವಕರನ್ನು ಸೆಳೆಯಬೇಕಾಗಿದೆ ಎಂದು ಜೆಡಿಎಸ್ ಮುಖಂಡ ಅಮರನಾಥ ಶೆಟ್ಟಿ ಹೇಳಿದರು.
ಅವರು ಕಟೀಲಿನ ಸೌಂದರ್ಯ ಪ್ಯಾಲೇಸಿನಲ್ಲಿ ನಡೆದ ಜೆಡಿಎಸ್ ಕಾರ‍್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಮಾಜಿ ಸಚಿವ ನಾಗರಾಜ ಶೆಟ್ಟಿ, ಸೌಂದರ‍್ಯ ರಮೇಶ್, ಅಶ್ವಿನ್ ಪಿರೇರಾ, ಸಂಜೀವ ಮಡಿವಾಳ, ಅಬ್ದುಲ್ಲಾ ಮತ್ತಿತರರಿದ್ದರು.

Wednesday, January 30, 2013

ಕಟೀಲು ಅಷ್ಟಮಂಗಲ ಶೀಘ್ರ ಕುದ್ರು ಜೀರ್ಣೋದ್ಧಾರ, ಇಪ್ಪತ್ತು ದಿನ ಮೊದಲೇ ಹೊರಡಲಿರುವ ಕಟೀಲು ಮೇಳ


ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಮೂರು ದಿನಗಳ ಕಾಲ ನಡೆದ ಅಷ್ಟಮಂಗಳ ಪ್ರಶ್ನೆ ಮಂಗಳವಾರ ರಾತ್ರಿ ಸಮಾಪನಗೊಂಡಿತು.
ಮೇಲ್ಛಾವಣಿ ಇಲ್ಲದ ಗರ್ಭಗುಡಿ, ತೀರ್ಥಬಾವಿ, ಚಿತ್ರಕೂಟದ ನಾಗನಕಟ್ಟೆ, ಕೆರೆ, ಪಿಲಿಚಾಮುಂಡಿ ದೈವಕ್ಕೆ ಗುಡಿಯನ್ನು ನಿರ್ಮಿಸಿ, ಕುದ್ರುವಿಗೊಂದು ಪರಿಧಿ ಕಟ್ಟಿ ಜೀರ್ಣೋದ್ಧಾರ ಮಾಡುವುದಕ್ಕೆ ದೇವಿಯ ಸಮ್ಮತಿ ಇದೆ ಎಂದು ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡು ಬಂತು. ಆದರೆ ಅಲ್ಲಿ ಯಾವುದೇ ಸೇವಾ ಕಾರ‍್ಯಗಳನ್ನು ಮಾಡುವಂತಿಲ್ಲ. ಪ್ರಾರ್ಥನೆಯಷ್ಟೆ. ಗರ್ಭಗುಡಿಯನ್ನು ಕೆಳಸ್ಥರದಲ್ಲಿ ಲಿಂಗಿರುವಂತೆ ನಿರ್ಮಿಸುವುದು. ಈಗ ಕಾಣಿಸುತ್ತಿರುವ ಲಿಂಗ ಮೂಲ ಉದ್ಭವ ಲಿಂಗವಲ್ಲ. ಅದರ ಅಡಿಭಾಗದಲ್ಲಿ ಮೂಲಲಿಂಗವಿದೆ. ಆದರೆ ಅದನ್ನು ಮುಟ್ಟದೆ ಇದ್ದಂತೆಯೇ ಗರ್ಭಗುಡಿ ನಿರ್ಮಿಸಬೇಕೆಂದು ಪ್ರಶ್ನೆಯಲ್ಲಿ ಸೂಚನೆಯಾಗಿದೆ.
ದೇಗುಲದಿಂದ ಹೊರಡುವ ಯಕ್ಷಗಾನ ಮೇಳಗಳು ಈಗ ಕಾರ್ತಿಕ ಬಹುಳ ಪಂಚಮಿಯ ಅನಂತರ ಹೊರಡುತ್ತಿದ್ದು, ಇನ್ನು ದೀಪಾವಳಿಯ ಬಳಿಕ ಕಾರ್ತಿಕ ಶುದ್ಧ ಪಾಡ್ಯದ ಅನಂತರ ಹೊರಡುವುದಕ್ಕೆ ದೇವರ ಸಮ್ಮತಿ ಪ್ರಶ್ನೆಯಲ್ಲಿ ಸಿಕ್ಕಿದೆ. ಅದರಂತೆ ಮುಂದಿನ ತಿರುಗಾಟ ಸುಮಾರು ಹತ್ತೊಂಭತ್ತು ಅಥವಾ ಇಪ್ಪತ್ತು ದಿನಗಳ ಮುಂಚೆಯೇ ಆರಂಭವಾಗಲಿದೆ. ಅದರಂತೆ ನೂರು ಪ್ರದರ್ಶನಗಳು ಹೆಚ್ಚು ಭಕ್ತರಿಗೆ ಲಭ್ಯವಾಗಲಿವೆ.
ದೇಗುಲದ ಎಡಭಾಗದಲ್ಲಿ ದಿನಂಪ್ರತಿ ಚಂಡಿಕಾಹೋಮ ನಡೆಯುತ್ತಿದ್ದು, ಅದರಿಂದ ಹೊಗೆ, ಭಕ್ತರ ಸಂಖ್ಯೆ ಹೆಚ್ಚಳವಿದ್ದಾಗ ಸಮಸ್ಯೆಯಾಗುತ್ತಿರುವುದರಿಂದ ಚಂಡಿಕಾ ಹೋಮದ ಸ್ಥಳವನ್ನು ದೇಗುಲದ ಹಿಂಬದಿ ಅಂದರೆ ವಸಂತ ಮಂಟಪದ ಹಿಂಬದಿಯಲ್ಲಿರುವ ದೋಣಿಯಾಕಾರದ ಸ್ಥಳದಲ್ಲಿ ಯಜ್ಞಮಂಟಪ ಸ್ಥಾಪಿಸಿ ಅಲ್ಲಿ ಭಕ್ತರ ಸೇವಾ ರೂಪದ ಚಂಡಿಕಾ ಹೋಮವನ್ನು ನಡೆಸುವುದು. ಆದರೆ ರಾಶಿ ಪೂಜೆ, ದೀಪಾವಳಿ, ನವರಾತ್ರಿಯ ದೇಗುಲದ ವತಿಯ ಚಂಡಿಕಾಹೋಮಗಳನ್ನು ಈಗ ನಡೆಯುವ ಸ್ಥಳದಲ್ಲೇ ನಡೆಸುವುದಕ್ಕೂ ದೇವಿಯ ಒಪ್ಪಿಗೆ ಪ್ರಶ್ನೆಯಲ್ಲಿ ಸಿಕ್ಕಿದೆ.
ಪ್ರತಿದಿನ ಐದು ರಂಗಪೂಜೆಗಳಿದ್ದರೂ ಭಕ್ತರು ತಿಂಗಲುಗಟ್ಟಲೆ ಕಾಯಬೇಕಾದ ಸ್ಥಿತಿ ಇರುವುದರಿಂದ ಶುಕ್ರವಾರದ ಒಂದು ದಿನ ಸಾಮೂಹಿಕವಾಗಿ ೧೮ಸೇರಿನ ಅಕ್ಕಿಯ ನೈವೇದ್ಯವನ್ನೊಳಗೊಂಡ ಗರಿಷ್ಟ ೧೦೧ರಂಗಪೂಜೆಗಳನ್ನು ಮಾಡುವ ಬಗ್ಗೆಯೂ ದೇವಿಯ ಅನುಮತಿ ಪ್ರಶ್ನೆಯಲ್ಲಿ ಲಭಿಸಿದೆ.
ಆರು ವರುಷಗಳ ಹಿಂದೆ ಬ್ರಹ್ಮಕಲಶಕ್ಕೆ ಮುಂಚಿತವಾಗಿ ಇರಿಸಲಾದ ಅಷ್ಟಮಂಗಲ ಪ್ರಶ್ನೆಯಲ್ಲಿ ಸೂಚಿತ ಪರಿಹಾರ ಕಾರ‍್ಯಗಳಲ್ಲಿ ಬಾಕಿಯಿರುವುದನ್ನು ಆಡಳಿತ ವರ್ಗ ಪೂರ್ಣಗೊಳಿಸಬೇಕು. ಅರ್ಚಕರ ಮನೆ, ಮನಸ್ಸುಗಳೂ ಒಂದಾಗಬೇಕು ಎಂಬ ಸೂಚನೆಯೂ ಪ್ರಶ್ನೆಯಲ್ಲಿ ಬಂದಿದೆ. ರಕ್ತೇಶ್ವರೀ ಗುಡಿಯ ಜೀರ್ಣೋದ್ಧಾರ, ಶಾಸ್ತಾರ ಗುಡಿ ಸರಿಪಡಿಸುವಿಕೆ ಇತ್ಯಾದಿ ವಿಚಾರಗಳೂ ಪ್ರಶ್ನೆಯಲ್ಲಿ ಕಂಡಿ ಬಂದಿದೆ.
ಪದ್ಮನಾಭ ಶರ್ಮ, ಹರಿಯೆಟ್ಟಾನ್, ಕೃಷ್ಣ ಪ್ರಸಾದ ರಂಗಭಟ್, ಜಯರಾಮ ಪಣಿಕರ್, ದೇವದಾಸ ಪಣಿಕರ್, ಪಂಜ ಭಾಸ್ಕರ ಭಟ್ ಪ್ರಶ್ನಾಕಾರ‍್ಯದಲ್ಲಿದ್ದರೆ, ಮೊಕ್ತೇಸರ ವಾಸುದೇವ ಆಸ್ರಣ್ಣ, ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತ ಆಸ್ರಣ್ಣ, ಶ್ರೀಹರಿ ಆಸ್ರಣ್ಣ, ಕುಮಾರ ಆಸ್ರಣ್ಣ, ವೇದವ್ಯಾಸ ತಂತ್ರಿ, ಸಾಂಸದ ನಳಿನ್ ಕುಮಾರ್, ಶಾಸಕ ಅಭಯಚಂದ್ರ, ಜಿ.ಪಂ.ಸದಸ್ಯ ಈಶ್ವರ್, ಅಜಾರು ನಾಗರಾಜರಾಯ, ದಾನಿ ಸತೀಶ್ ಶೆಟ್ಟಿ ದೇಗುಲದ ಪ್ರಬಂಧಕ ವಿಶ್ವೇಶ ರಾವ್ ಮುಂತಾದವರು ಮಂಗಳವಾರ ಇದ್ದರು.

Sunday, January 27, 2013

ಕಟೀಲು ಮೂಲಕುದ್ರು ಅಭಿವೃದ್ಧಿ : ಅಷ್ಟಮಂಗಲ ಪ್ರಶ್ನೆ ಆರಂಭ


ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇಗುಲದ ಉದ್ಭವ ಲಿಂಗವಿರುವ ಮೂಲ ಕುದ್ರುವಿನ ಅಭಿವೃದ್ಧಿ ಕಾರ‍್ಯಗಳ ಹಿನ್ನಲೆಯಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಅಷ್ಟಮಂಗಳ ಪ್ರಶ್ನೆ ಭಾನುವಾರ (j.27)ಆರಂಭಗೊಂಡಿತು. ಪದ್ಮನಾಭ ಶರ್ಮ, ಹರಿಯೆಟ್ಟಾನ್, ಕೃಷ್ಣ ಪ್ರಸಾದ ರಂಗಭಟ್, ಜಯರಾಮ ಪಣಿಕರ್, ದೇವದಾಸ ಪಣಿಕರ್, ಪಂಜ ಭಾಸ್ಕರ ಭಟ್ ಪ್ರಶ್ನಾಕಾರ‍್ಯದಲ್ಲಿದ್ದರೆ, ಮೊಕ್ತೇಸರ ವಾಸುದೇವ ಆಸ್ರಣ್ಣ, ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತ ಆಸ್ರಣ್ಣ, ಶ್ರೀಹರಿ ಆಸ್ರಣ್ಣ, ಕುಮಾರ ಆಸ್ರಣ್ಣ, ಸಾಂಸದ ನಳಿನ್ ಕುಮಾರ್, ಜಿ.ಪಂ.ಸದಸ್ಯ ಈಶ್ವರ್, ತಾ.ಪಂ.ಸದಸ್ಯೆ ಭೇಬಿ ಕೋಟ್ಯಾನ್, ಜಯರಾಮ ಉಡುಪ, ವಾಸುದೇವ ಶಿಬರಾಯ, ಕೆರಮ ಸದಾನಂದ ಶೆಟ್ಟಿ, ಕುದ್ರುವಿನ ದಾನ ಸತೀಶ್ ಶೇಟ್ಟಿ ಮತ್ತಿತರರಿದ್ದರು.

Sunday, December 30, 2012

ಕಟೀಲು ಪ್ರೌಢಶಾಲೆ ವಾರ್ಷಿಕೋತ್ಸವ


ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರೌಢಶಾಲೆ ಹಾಗೂ ಹಳೆ ವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವ ಶನಿವಾರ ನಡೆಯಿತು. ಕಟೀಲು ದೇಗುಲದ ಮೊಕ್ತೇಸರ ವಾಸುದೇವ ಆಸ್ರಣ್ಣ, ಜಿ.ಪಂ.ಸದಸ್ಯ ಈಶ್ವರ್, ಹಳೆ ವಿದ್ಯಾರ್ಥಿ ಸಂಘದ ಹರಿನಾರಾಯಣ ಆಸ್ರಣ್ಣ, ಸೌಂದರ್ಯ ರಮೇಶ್, ಮರವೂರು ಜಗದೀಶ ಶೆಟ್ಟಿ, ವಿದ್ಯಾರ್ಥಿ ನಾಯಕ ಶ್ರೀನಿಧಿ ಆಸ್ರಣ್ಣ, ಶಿಕ್ಷಕ ರಕ್ಷಕ ಸಂಘದ ಬಾಬು ಶೆಟ್ಟಿ, ಉಪಪ್ರಾಚಾರ‍್ಯ ಸುರೇಶ್ ಭಟ್ ಮತ್ತಿತರರಿದ್ದರು. ಸಾಧಕ ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.

Sunday, December 9, 2012