ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಮೂರು ದಿನಗಳ ಕಾಲ ನಡೆದ ಅಷ್ಟಮಂಗಳ ಪ್ರಶ್ನೆ ಮಂಗಳವಾರ ರಾತ್ರಿ ಸಮಾಪನಗೊಂಡಿತು.
ಮೇಲ್ಛಾವಣಿ ಇಲ್ಲದ ಗರ್ಭಗುಡಿ, ತೀರ್ಥಬಾವಿ, ಚಿತ್ರಕೂಟದ ನಾಗನಕಟ್ಟೆ, ಕೆರೆ, ಪಿಲಿಚಾಮುಂಡಿ ದೈವಕ್ಕೆ ಗುಡಿಯನ್ನು ನಿರ್ಮಿಸಿ, ಕುದ್ರುವಿಗೊಂದು ಪರಿಧಿ ಕಟ್ಟಿ ಜೀರ್ಣೋದ್ಧಾರ ಮಾಡುವುದಕ್ಕೆ ದೇವಿಯ ಸಮ್ಮತಿ ಇದೆ ಎಂದು ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡು ಬಂತು. ಆದರೆ ಅಲ್ಲಿ ಯಾವುದೇ ಸೇವಾ ಕಾರ‍್ಯಗಳನ್ನು ಮಾಡುವಂತಿಲ್ಲ. ಪ್ರಾರ್ಥನೆಯಷ್ಟೆ. ಗರ್ಭಗುಡಿಯನ್ನು ಕೆಳಸ್ಥರದಲ್ಲಿ ಲಿಂಗಿರುವಂತೆ ನಿರ್ಮಿಸುವುದು. ಈಗ ಕಾಣಿಸುತ್ತಿರುವ ಲಿಂಗ ಮೂಲ ಉದ್ಭವ ಲಿಂಗವಲ್ಲ. ಅದರ ಅಡಿಭಾಗದಲ್ಲಿ ಮೂಲಲಿಂಗವಿದೆ. ಆದರೆ ಅದನ್ನು ಮುಟ್ಟದೆ ಇದ್ದಂತೆಯೇ ಗರ್ಭಗುಡಿ ನಿರ್ಮಿಸಬೇಕೆಂದು ಪ್ರಶ್ನೆಯಲ್ಲಿ ಸೂಚನೆಯಾಗಿದೆ.
ದೇಗುಲದಿಂದ ಹೊರಡುವ ಯಕ್ಷಗಾನ ಮೇಳಗಳು ಈಗ ಕಾರ್ತಿಕ ಬಹುಳ ಪಂಚಮಿಯ ಅನಂತರ ಹೊರಡುತ್ತಿದ್ದು, ಇನ್ನು ದೀಪಾವಳಿಯ ಬಳಿಕ ಕಾರ್ತಿಕ ಶುದ್ಧ ಪಾಡ್ಯದ ಅನಂತರ ಹೊರಡುವುದಕ್ಕೆ ದೇವರ ಸಮ್ಮತಿ ಪ್ರಶ್ನೆಯಲ್ಲಿ ಸಿಕ್ಕಿದೆ. ಅದರಂತೆ ಮುಂದಿನ ತಿರುಗಾಟ ಸುಮಾರು ಹತ್ತೊಂಭತ್ತು ಅಥವಾ ಇಪ್ಪತ್ತು ದಿನಗಳ ಮುಂಚೆಯೇ ಆರಂಭವಾಗಲಿದೆ. ಅದರಂತೆ ನೂರು ಪ್ರದರ್ಶನಗಳು ಹೆಚ್ಚು ಭಕ್ತರಿಗೆ ಲಭ್ಯವಾಗಲಿವೆ.
ದೇಗುಲದ ಎಡಭಾಗದಲ್ಲಿ ದಿನಂಪ್ರತಿ ಚಂಡಿಕಾಹೋಮ ನಡೆಯುತ್ತಿದ್ದು, ಅದರಿಂದ ಹೊಗೆ, ಭಕ್ತರ ಸಂಖ್ಯೆ ಹೆಚ್ಚಳವಿದ್ದಾಗ ಸಮಸ್ಯೆಯಾಗುತ್ತಿರುವುದರಿಂದ ಚಂಡಿಕಾ ಹೋಮದ ಸ್ಥಳವನ್ನು ದೇಗುಲದ ಹಿಂಬದಿ ಅಂದರೆ ವಸಂತ ಮಂಟಪದ ಹಿಂಬದಿಯಲ್ಲಿರುವ ದೋಣಿಯಾಕಾರದ ಸ್ಥಳದಲ್ಲಿ ಯಜ್ಞಮಂಟಪ ಸ್ಥಾಪಿಸಿ ಅಲ್ಲಿ ಭಕ್ತರ ಸೇವಾ ರೂಪದ ಚಂಡಿಕಾ ಹೋಮವನ್ನು ನಡೆಸುವುದು. ಆದರೆ ರಾಶಿ ಪೂಜೆ, ದೀಪಾವಳಿ, ನವರಾತ್ರಿಯ ದೇಗುಲದ ವತಿಯ ಚಂಡಿಕಾಹೋಮಗಳನ್ನು ಈಗ ನಡೆಯುವ ಸ್ಥಳದಲ್ಲೇ ನಡೆಸುವುದಕ್ಕೂ ದೇವಿಯ ಒಪ್ಪಿಗೆ ಪ್ರಶ್ನೆಯಲ್ಲಿ ಸಿಕ್ಕಿದೆ.
ಪ್ರತಿದಿನ ಐದು ರಂಗಪೂಜೆಗಳಿದ್ದರೂ ಭಕ್ತರು ತಿಂಗಲುಗಟ್ಟಲೆ ಕಾಯಬೇಕಾದ ಸ್ಥಿತಿ ಇರುವುದರಿಂದ ಶುಕ್ರವಾರದ ಒಂದು ದಿನ ಸಾಮೂಹಿಕವಾಗಿ ೧೮ಸೇರಿನ ಅಕ್ಕಿಯ ನೈವೇದ್ಯವನ್ನೊಳಗೊಂಡ ಗರಿಷ್ಟ ೧೦೧ರಂಗಪೂಜೆಗಳನ್ನು ಮಾಡುವ ಬಗ್ಗೆಯೂ ದೇವಿಯ ಅನುಮತಿ ಪ್ರಶ್ನೆಯಲ್ಲಿ ಲಭಿಸಿದೆ.
ಆರು ವರುಷಗಳ ಹಿಂದೆ ಬ್ರಹ್ಮಕಲಶಕ್ಕೆ ಮುಂಚಿತವಾಗಿ ಇರಿಸಲಾದ ಅಷ್ಟಮಂಗಲ ಪ್ರಶ್ನೆಯಲ್ಲಿ ಸೂಚಿತ ಪರಿಹಾರ ಕಾರ‍್ಯಗಳಲ್ಲಿ ಬಾಕಿಯಿರುವುದನ್ನು ಆಡಳಿತ ವರ್ಗ ಪೂರ್ಣಗೊಳಿಸಬೇಕು. ಅರ್ಚಕರ ಮನೆ, ಮನಸ್ಸುಗಳೂ ಒಂದಾಗಬೇಕು ಎಂಬ ಸೂಚನೆಯೂ ಪ್ರಶ್ನೆಯಲ್ಲಿ ಬಂದಿದೆ. ರಕ್ತೇಶ್ವರೀ ಗುಡಿಯ ಜೀರ್ಣೋದ್ಧಾರ, ಶಾಸ್ತಾರ ಗುಡಿ ಸರಿಪಡಿಸುವಿಕೆ ಇತ್ಯಾದಿ ವಿಚಾರಗಳೂ ಪ್ರಶ್ನೆಯಲ್ಲಿ ಕಂಡಿ ಬಂದಿದೆ.
ಪದ್ಮನಾಭ ಶರ್ಮ, ಹರಿಯೆಟ್ಟಾನ್, ಕೃಷ್ಣ ಪ್ರಸಾದ ರಂಗಭಟ್, ಜಯರಾಮ ಪಣಿಕರ್, ದೇವದಾಸ ಪಣಿಕರ್, ಪಂಜ ಭಾಸ್ಕರ ಭಟ್ ಪ್ರಶ್ನಾಕಾರ‍್ಯದಲ್ಲಿದ್ದರೆ, ಮೊಕ್ತೇಸರ ವಾಸುದೇವ ಆಸ್ರಣ್ಣ, ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತ ಆಸ್ರಣ್ಣ, ಶ್ರೀಹರಿ ಆಸ್ರಣ್ಣ, ಕುಮಾರ ಆಸ್ರಣ್ಣ, ವೇದವ್ಯಾಸ ತಂತ್ರಿ, ಸಾಂಸದ ನಳಿನ್ ಕುಮಾರ್, ಶಾಸಕ ಅಭಯಚಂದ್ರ, ಜಿ.ಪಂ.ಸದಸ್ಯ ಈಶ್ವರ್, ಅಜಾರು ನಾಗರಾಜರಾಯ, ದಾನಿ ಸತೀಶ್ ಶೆಟ್ಟಿ ದೇಗುಲದ ಪ್ರಬಂಧಕ ವಿಶ್ವೇಶ ರಾವ್ ಮುಂತಾದವರು ಮಂಗಳವಾರ ಇದ್ದರು.
No comments:
Post a Comment