Tuesday, September 11, 2012

ಕಟೀಲು ಕಾಲೇಜು :ಮುಜರಾಯಿಗೆ ಬೇಡ, ಶಿಕ್ಷಣಕ್ಕೆ ತನ್ನಿ


ಕಟೀಲು : ಇಲ್ಲಿನ ಶ್ರೀ ದುರ್ಗಾಪರಮೇಶ್ವರೀ ದೇವಳದಿಂದ ನಡೆಸುವ ಪ್ರಥಮ ದರ್ಜೆ ಕಾಲೇಜು ಮತ್ತು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಿಂದ ನಡೆಸುವ ಕಾಲೇಜುಗಳೆರಡು ಮಾತ್ರ ಮುಜರಾಯಿ ಇಲಾಖೆಯ ಅಡಿಯಲ್ಲಿ ಬರುತ್ತಿದ್ದು, ಕಾಲೇಜಿನ ಅಭಿವೃದ್ದಿಗೆ ತೊಡಕಾಗಿದೆ. ಹಾಗಾಗಿ ಕಟೀಲು ಕಾಲೇಜನ್ನು ಉನ್ನತ ಶಿಕ್ಷಣ ಇಲಾಖೆಯಡಿ ತಂದು ಉಪನ್ಯಾಸಕರಿಗೆ ಯುಜಿಸಿ ಸೇರಿದಂತೆ ಕಾಲೇಜಿಗೆ ಎಲ್ಲ ಸವಲತ್ತು ಪಡೆಯುವ ಅವಕಾಶ ಕಲ್ಪಿಸಿ ಎಂದು ಉನ್ನತ ಶಿಕ್ಷಣ ಸಚಿವ ಸಿ.ಟಿ.ರವಿಗೆ ಮಂಗಳವಾರ ಕಟೀಲು ಪದವಿ ಕಾಲೇಜಿನಲ್ಲಿ ಉಪನ್ಯಾಸಕರು ಮನವಿ ಸಲ್ಲಿಸಿದರು.
ಶಿಕ್ಷಣಕ್ಕೆ ಸಂಬಂಧಿಸಿ ಧಾರ್ಮಿಕದತ್ತಿ ಇಲಾಖೆಯಲ್ಲಿ ಸರಿಯಾದ ನೀತಿ ನಿಯಮಗಳಿಲ್ಲದಿರುವುದರಿಂದ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೆ ತೊಡಕಾಗಿದೆ. ಶಿಕ್ಷಣ ಸಂಸ್ಥೆಗಳನ್ನು ಸಮರ್ಪಕವಾಗಿ ನಡೆಸುವುದು ದೇಗುಲಕ್ಕೂ ಕಷ್ಟವಾಗುತ್ತಿದೆ. ಹಾಗಾಗಿ ಎಲ್ಲ ಶಿಕ್ಷಣ ಸಂಸ್ಥೆಗಳನ್ನೂ ಶಿಕ್ಷಣ ಇಲಾಖೆಯಡಿ ತರಬೇಕು. ಈ ನಿಟ್ಟಿನಲ್ಲಿ ಮುಜರಾಯಿ ಸಚಿವರೂ ಕೂಡ ಕಾರ‍್ಯಪ್ರವೃತ್ತರಾಗಿದ್ದಾರೆ. ಶಿಕ್ಷಣ ಇಲಾಖೆ ಒಪ್ಪುವುದಷ್ಟೇ ಬಾಕಿಯಿದೆ ಎಂದು ಪ್ರಾಚಾರ‍್ಯ ಎಂ.ಬಾಲಕೃಷ್ಣ ಶೆಟ್ಟಿ ಸಚಿವರನ್ನು ವಿನಂತಿಸಿದರು.
ಈ ಬಗ್ಗೆ ಗಮನ ಹರಿಸುವುದಾಗಿ ತಿಳಿಸಿದ ಸಚಿವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಶಿಕ್ಷಣ ಅಂದರೆ ಕೇವಲ ಸರ್ಟಿಫಿಕೇಟ್‌ಗಾಗಿ, ಪದವಿಗಾಗಿ, ಉದ್ಯೋಗಕ್ಕಾಗಿ ಇರುವುದಲ್ಲ. ಅರಿವಿಗಾಗಿ, ಜ್ಞಾನಕ್ಕಾಗಿ ಇರುವುದು. ಶಿಕ್ಷಣದಿಂದಷ್ಟೇ ಸಾಮಾಜಿಕ ಬದಲಾವಣೆ, ಆರ್ಥಿಕ ಸದೃಢತೆ ಸಾಧ್ಯ. ನಮ್ಮ ದೇಶದ ಮೇಲೆ ದಾಳಿ ಮಾಡಿದ ಅಲೆಕ್ಸಾಂಡರ್ ದಿ ಗ್ರೇಟ್ ಎಂದು ನಮ್ಮ ಮೇಲೆ ದಂಡೆತ್ತಿ ಬಂದವರನ್ನು ಹೊಗಳುವ ಪಾಠವನ್ನು ನಮಗೆ ಕಲಿಸಿಕೊಡಲಾಗುತ್ತಿದೆ. ಅರಣ್ಯ ಇಲಾಖೆ ಕಾಡಿನ ರಕ್ಷಣೆಯ ಕಾನೂನು ಮಾಡುವ ಮೊದಲೇ ದೇವರ ಕಾಡು ನಾಗಬನ ಅಂತ ಮರಗಳನ್ನು ರಕ್ಷಿಸುವ ಮೌಲ್ಯಯುತ ಪಾಠವನ್ನು ಕಲಿಸಿದ ನಾಡು ನಮ್ಮದು. ವಿಜ್ಞಾನ, ಶಿಲ್ಪ ಹೀಗೆ ಯಾವುದೇ ಕ್ಷೇತ್ರದಲ್ಲೂ ನಮ್ಮ ನಾಡಿನ ಸಾಧನೆ ಎಲ್ಲರಿಗಿಂತಲೂ ದೊಡ್ಡದು. ನಮ್ಮ ಇತಿಹಾಸದ ಪಾಠಗಳಲ್ಲಿ ರಾಷ್ಟ್ರಪ್ರೇಮವನ್ನು ಉತ್ತೇಜಿಸುವ ಘಟನೆಗಳನ್ನು ಕಲಿಸಬೇಕಾದ ಅಗತ್ಯವಿದೆ ಎಂದು ರವಿ ಹೇಳಿದರು.
ಸಾಂಸದ ನಳಿನ್ ಕುಮಾರ್, ಶಾಸಕ ಅಭಯಚಂದ್ರ, ಮೋನಪ್ಪ ಭಂಡಾರಿ, ಜಿ.ಪಂ.ಸಿಇಒ ಡಾ.ವಿಜಯಪ್ರಕಾಶ್, ಜಿ.ಪಂ.ಸದಸ್ಯ ಈಶ್ವರ್ ಮತ್ತಿತರರಿದ್ದರು. ಉಪನ್ಯಾಸಕ ಸುರೇಶ್ ಕಾರ‍್ಯಕ್ರಮ ನಿರೂಪಿಸಿದರು. ಸೋಂದಾ ಭಾಸ್ಕರ ಭಟ್ ವಂದಿಸಿದರು.

No comments:

Post a Comment