Friday, May 16, 2014

ರೈಲ್ವೆ ವಿಭಾಗ, ಕೃಷಿವಲಯ, ಐಟಿ ಪಾರ್ಕ್ ಕನಸು ಕಟೀಲಲ್ಲಿ ನಳಿನ್ ಕುಮಾರ್


ಕಟೀಲು : ಮಂಗಳೂರು ರೈಲ್ವೆ ವಿಭಾಗ ಮಾಡಬೇಕು. ಎಸ್‌ಎಝಡ್ ಅಂದರೆ ವಿಶೇಷ ಕೃಷಿ ವಲಯ ಸ್ಥಾಪಿಸಬೇಕು. ಪರಿಸರ ನಾಶ ಮಾಡುವ ಕೈಗಾರಿಕೆಗಳಿಗೆ ನನ್ನ ವಿರೋಧವಿದೆ. ಆದರೆ ಜಿಲ್ಲೆಯಲ್ಲಿ ಒಂದು ಲಕ್ಷದಷ್ಟು ಮಂದಿಗೆ ಉದ್ಯೋಗಕ್ಕೆ ಅವಕಾಶ ನೀಡಬಹುದಾದ ಐಟಿ ಪಾರ್ಕ್‌ನ ಸ್ಥಾಪನೆಯ ಕನಸಿದೆ ಎಂದು ಮಂಗಳೂರು ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲಿನಲ್ಲಿ ಹೇಳಿದರು.
ಶುಕ್ರವಾರ ಬೆಳಿಗ್ಗೆ ಕಟೀಲು ದೇಗುಲಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಮಂಗಳೂರಿನ ಮತ ಎಣಿಕಾ ಕೇಂದ್ರಕ್ಕೆ ಹೋದ ನಳಿನ್ ಕುಮಾರ್ ಭರ್ಜರಿ ಗೆಲುವಿನ ಬಳಿಕ ಮತ್ತೆ ಕಟೀಲು ದೇಗುಲಕ್ಕೆ ಪತ್ನಿ ಮಕ್ಕಳ ಸಹಿತ ಭೇಟಿ ನೀಡಿ ದುರ್ಗಾಪರಮೇಶ್ವರೀ ದೇವರ ಸನ್ನಿಧಾನದಲ್ಲಿ ಪ್ರಸಾದ ಸ್ವೀಕರಿಸಿದರು. ದೇಗುಲದ ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕರಾದ ಅನಂತ ಆಸ್ರಣ್ಣ, ಲಕ್ಷ್ಮೀನಾರಾಯಣ ಆಸ್ರಣ್ಣ ಮುಂತಾದವರು ಸ್ವಾಗತಿಸಿದರು.
ತಾಂತ್ರಿಕ ಹಾಗೂ ಕಾನೂನಿನ ತೊಡಕಿನಿಂದಾಗಿ ಕಟೀಲು ಕ್ಷೇತ್ರ ಅಭಿವೃದ್ದಿಯಲ್ಲಿ ಹಿಂದೆ ಬಿದ್ದಿರುವುದು ಹೌದು. ಹಿಂದಿನ ಆಡಳಿತ ಮಂಡಳಿ ಮತ್ತೆ ಬಂದರೆ ಅಥವಾ ಸರಕಾರ ಪೂರ್ಣಪ್ರಮಾಣದ ಆಡಳಿತಾಧಿಕಾರಿಯನ್ನು ನೇಮಿಸಿದರೆ ಅಭಿವೃದ್ಧಿ ಸುಲಭವಾಗುತ್ತದೆ. ಕ್ಷೇತ್ರದ ಅಭಿವೃದ್ಧಿಯ ನಿಟ್ಟಿನಲ್ಲಿ ಸ್ಥಳೀಯ ಶಾಸಕರೂ, ಸಚಿವರೂ ಆದ ಅಭಯಚಂದ್ರರೊಂದಿಗೆ ಚರ್ಚಿಸಿ, ಇಲಾಖೆಗಳ ಸಮನ್ವಯದೊಂದಿಗೆ ಕೆಲಸ ಮಾಡುವುದಾಗಿ ನಳಿನ್ ಕುಮಾರ್ ತಿಳಿಸಿದರು.
ಪಕ್ಷದ ಕಾರ್ಯಕರ್ತರಿಗೆ ಅಸಮಾಧಾನವಿರುವ ಕುರಿತಾದ ಪ್ರಶ್ನೆಗೆ, ಕಳೆದ ಚುನಾವಣೆಯ ಗೆಲುವಿನ ಅಂತರಕ್ಕೆ ಈ ಬಾರಿ ಮತ್ತೆ ಒಂದು ಲಕ್ಷ ಮತಗಳನ್ನು ಜಿಲ್ಲೆಯ ಜನರು ಹಾಗೂ ಪಕ್ಷದ ಕಾರ್ಯಕರ್ತರು ಸೇರಿಸಿದ್ದಾರೆ. ನನ್ನಲ್ಲಿ ಅಸಮಾಧಾನವಿದ್ದರೆ ಈ ಪರಿಯ ಪ್ರೀತಿ ತೋರಿಸುತ್ತಿರಲಿಲ್ಲ. ಮೋದಿ ನೇತೃತ್ವದ ಭಾಜಪಾ ಸರಕಾರದಿಂದ ಹೆಚ್ಚಿನ ಯೋಜನೆಗಳನ್ನು ತರುವ ಪ್ರಯತ್ನ ಮಾಡುತ್ತೇನೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯ ನಿಟ್ಟಿನಲ್ಲೂ ಶ್ರಮ ವಹಿಸುತ್ತೇನೆ. ಜಿಲ್ಲೆಯಲ್ಲಿ ಉಷ್ಣ ಸ್ಥಾವರದ ಬದಲು  ಜಲ ವಿದ್ಯುತ್, ಗ್ಯಾಸ್ ಬಳಕೆಯಿಂದ ವಿದ್ಯುತ್ ತಯಾರಿಕೆಯ ಯೋಜನೆಗೆ ಮುತುವರ್ಜಿ ವಹಿಸುವುದಾಗಿ ನಳಿನ್ ಹೇಳಿದರು. ಬಿಜೆಪಿ ಜಿಲ್ಲಾಧ್ಯಕ್ಷ ಪ್ರತಾಪ್‌ಸಿಂಹ ನಾಯಕ್, ಈಶ್ವರ ಕಟೀಲ್, ಜಗದೀಶ ಅಧಿಕಾರಿ ಮುಂತಾದವರಿದ್ದರು.
ಕಟೀಲಿನಲ್ಲಿ ಸಾಂಸದ ನಳಿನ್ ಕುಮಾರ್‌ರನ್ನು ಅಭಿಮಾನಿಗಳು ಎತ್ತಿಕೊಂಡು ಮೆರವಣಿಗೆ ಮೂಲಕ ಸ್ವಾಗತಿಸಿದರು.

Saturday, May 10, 2014

ಕಟೀಲಿನಲ್ಲಿ ವಿಪ್ರಸಮಾವೇಶ, ತೌಳವ ನಿತ್ಯಾನುಷ್ಠಾನಂ ಲೋಕಾರ್ಪಣೆ


ಆಧ್ಯಾತ್ಮಿಕ ಶಕ್ತಿಯಿಂದ ಬೌತಿಕ ಶಕ್ತಿ ಹೆಚ್ಚಲಿ-ಪೇಜಾವರ ಶ್ರೀ
ಕಟೀಲು : ಜಪ ಪೂಜೆಗಳ ಅನುಷ್ಟಾನದಿಂದ ಬ್ರಾಹ್ಮಣರು ತಮ್ಮಲ್ಲಿನ ಆಧ್ಯಾತ್ಮಕ ಶಕ್ತಿಯನ್ನು ಹೆಚ್ಚಿಸಬೇಕು. ಆ ಮೂಲಕ ಬೌತಿಕ ಶಕ್ತಿಯನ್ನೂ ಹೆಚ್ಚಿಸಿಕೊಮಡು, ಲೋಕಕ್ಕೆ ಒಳಿತನ್ನು ಬಯಸಬೇಕೆಂದು ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.
ಅವರು ಶನಿವಾರ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪದವೀ ಕಾಲೇಜಿನಲ್ಲಿ ನಂದಿನಿ ಬ್ರಾಹ್ಮಣ ಸಭಾ ಹಾಗೂ ಮುಂಬೈ ಸಂಜೀವನಿ ಟ್ರಸ್ಟ್‌ನ ಸಹಯೋಗದಲ್ಲಿ ನಡೆದ ವಿಪ್ರಸಮಾವೇಶದಲ್ಲಿ ತೌಳವ ನಿತ್ಯಾನುಷ್ಟಾನಂ ದೃಶ್ಯತಟ್ಟೆಯನ್ನು(ಡಿವಿಡಿ) ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಸಿಖ್ಖರು ಶಿರಸ್ತ್ರಾಣ ತೊಟ್ಟಂತೆ, ಮುಸಲ್ಮಾನರು ಟೊಪ್ಪಿಯಿಟ್ಟಂತೆ, ಬ್ರಾಹ್ಮಣರು ಜನಿವಾರ, ಜುಟ್ಟುಗಳ ಬಗ್ಗೆ ನಾಚಿಕೆ ಪಟ್ಟುಕೊಳ್ಳದೆ ಧರಿಸಬೇಕು. ಮಸೀದಿಗಳಲ್ಲಿ ಚರ್ಚುಗಳಲ್ಲಿ ಕಾಲಕಾಲಕ್ಕೆ ಪ್ರಾರ್ಥನೆಗಳಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಬ್ರಾಹ್ಮಣರು ಸಂಧ್ಯಾವಂದನಾದಿಗಳನ್ನು ತಪ್ಪದೇ ಮಾಡಬೇಕು. ವಿದ್ಯುತ್ ಇಲ್ಲದ ಬಲ್ಬ್‌ನಂತೆ, ಹೂರಣವಿಲ್ಲದ ಹೋಳಿಗೆಯಂತೆ ಇರದೆ, ಗಾಯತ್ರೀ ಮಂತ್ರ ಪಠಣ, ಅರ್ಘ್ಯಪ್ರದಾನಾದಿಗಳಿಂದ ಬಲಿಷ್ಟರಾಗಬೇಕೆಂದು ಪೇಜಾವರ ಶ್ರೀ ಹೇಳಿದರು.
ಗಾಯತ್ರೀ ಮಂತ್ರದ ಬಗ್ಗೆ ಪ್ರವಚನ ನೀಡಿದ ಬನ್ನಂಜೆ ಗೋವಿಂದಾಚಾರ್ಯರು ಗಾಯತ್ರೀ ಮಂತ್ರದ ಯತಾರ್ಥ ಚಿಂತನೆ, ಉಚ್ಛಾರಗಳಿಂದ ಆನಂದವನ್ನು ಪಡೆಯಬಹುದು ಎಂದರು.
ಅಷ್ಟಾಕ್ಷರೀ ಸಂಧ್ಯಾವಂದನೆ ಕುರಿತು ಮಾತನಾಡಿದ ಅದ್ಯಪಾಡಿ ಹರಿದಾಸ ಭಟ್, ಮಂತ್ರಗಳ ಕ್ಯಾಸೆಟ್ ಹಾಕಿ ಪೂಜೆ ನಡೆಸುವ ದಿನಗಳು ಬಂದಿದ್ದು, ಹಾಗಾಗದೆ ಜಪಾನುಷ್ಟಾನ, ಸಂಧ್ಯಾವಂದನೆಗಳಿಂದ ವಿಮುಖರಾಗದೆ, ಶಾಂತ ಮನಸ್ಸಿಗಾಗಿ ಅವುಗಳನ್ನು ಮಾಡಬೇಕೆಂದರು.
ದೇವಪೂಜಾ ಪರ್ದಧತಿಯ ಬಗ್ಗೆ ಮಾತನಾಡಿದ ಎ.ಸತ್ಯನಾರಾಯಣ ಆಚಾರ್ಯ, ಭಗವಂತನ ಋಣ ತೀರಿಸುವಂತಹದ್ದಲ್ಲ, ದೇವ ಪೂಜೆಯನ್ನು ಏಕ ಮನಸ್ಸಿನಿಂದ ಮೂರು ನಿಮಿಷದಲ್ಲೂ ಮಾಡಬಹುದು. ಮೂರು ಗಂಟೆಯಲ್ಲೂ ಮಾಡಬಹುದು ಎಂದರು.
ಸಾಧಕರಾದ ಡಾ.ಸಿ.ಆರ್.ಬಲ್ಲಾಳ್, ಹರಿಕೃಷ್ಣ ಪುನರೂರು, ಪ್ರದೀಪ ಕಲ್ಕೂರ, ಗಿರಿ ಬಳಗ ಕುಂಜಾರು, ನಾಡೋಜ, ಕೆ.ಪಿ.ರಾವ್, ಚಿತ್ರಾಪುರ ಗೋಪಾಲಕೃಷ್ಣ ಆಚಾರ್ಯ, ಕೋಣಂದೂರು ಗೋಪಾಲಕೃಷ್ಣ ಆಚಾರ್ಯ, ಅಂಗಡಿಮಾರ್ ಕೃಷ್ಣ ಭಟ್, ಕಡಂದಲೆ ಕೃಷ್ಣ ಭಟ್, ಕೆ..ಎಲ್.ಕುಂಡಂತಾಯರನ್ನು ಸಂಮಾನಿಸಲಾಯಿತು. ಶರವು ರಾಘವೇಂದ್ರ ಶಾಸ್ತ್ರಿ, ಡಾ.ನಿ.ಬಿ.ವಿಜಯ ಬಲ್ಲಾಳ್, ಸೂರನಾರಾಯಣ ಉಪಾಧ್ಯಾಯ, ಡಾ.ಭಾಸ್ಕರಾನಂದ ಕುಮಾರ್, ಪಾವಂಜೆ ಕೃಷ್ಣ ಭಟ್, ಕೆ.ಪಿ.ಆಚಾರ್ಯ, ರಾಮದಾಸ ಮಡ್ಮಣ್ಣಾಯ, ವೆಂಕಟರಮಣ ಮುಚ್ಚಿಂತಾಯ, ಪಂಜ ಭಾಸ್ಕರ ಭಟ್, ವಿಜಯರಾಘವ ಪಡ್ವೆಟ್ನಾಯ, ಕಟೀಲು ದೇಗುಲದ ವಾಸುದೇವ ಆಸ್ರಣ್ಣ, ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತ ಆಸ್ರಣ್ಣ, ವೇದವ್ಯಾಸ ತಂತ್ರಿ, ಪೆರ್ಣಂಕಿಲ ಹರಿದಾಸ ಭಟ್ ಮತ್ತಿತರರಿದ್ದರು.
ತೌಳವ ನಿತ್ಯಾನುಷ್ಟಾನಂನ ಪ್ರಾಯೋಜಕರಾದ ಸಂಜೀವನಿ ಟ್ರಸ್ಟ್‌ನ ಡಾ.ಸುರೇಶ್ ರಾವ್ ಪ್ರಸ್ತಾವನೆಗೈದರು. ನಂದಿನಿ ಬ್ರಾಹ್ಮಣ ಸಭಾದ ಡಾ.ಶಶಿಕುಮಾರ್ ಸ್ವಾಗತಿಸಿದರು. ಶ್ರೀಹರಿನಾರಾಯಣದಾಸ ಆಸ್ರಣ್ಣ ಅಭಿನಂದನಾ ಮಾತುಗಳನ್ನಾಡಿದರು. ಅಮೃತೇಶ ಆಚಾರ‍್ಯ, ವಾದಿರಾಜ ಕಲ್ಲೂರಾಯ ಕಾರ್ಯಕ್ರಮ ನಿರೂಪಿಸಿದರು.
ಚಿತ್ರ ಈಮನೆಲ್


Friday, May 9, 2014

Monday, April 28, 2014

ಕಟೀಲು ವಸಂತ ವೇದ ಶಿಬಿರ

ವೇದ ಪರಮ ಜ್ಞಾನವಾಗಿದೆ. ಸಂಸ್ಕೃತಿ ಸಂಸ್ಕಾರಗಳ ವೇದ ಅಧ್ಯಯನವನ್ನು ವಿದ್ಯಾರ್ಥಿ ಹಂತದಲ್ಲಿಯೇ ಭೋದಿಸಿ ಬದುಕಿನ ಮೌಲ್ಯಭರಿತ ಭವಿಷ್ಯ ರೂಪಿಸಲು ಹಿರಿಯರು ಸಹಕಾರ ನೀಡಬೇಕು ಎಂದು ಹಿರಿಯ ವಿದ್ವಾಂಸ ಕೃಷ್ಣ ಭಟ್ ಅಂಗಡಿಮಾರು ಹೇಳಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ, ಸಂಜೀವಿನಿ ಟ್ರಸ್ಟ್ ಮುಂಬೈ ಹಾಗೂ ಕಟೀಲು ಶ್ರೀ ದುರ್ಗಾ ಸಂಸ್ಕೃತ ಪ್ರತಿಷ್ಠಾನ ಸಂಸ್ಥೆಗಳ ಜಂಟೀ ಆಶ್ರಯದಲ್ಲಿ ಬುಧವಾರ ಕಟೀಲು ಸಂಸ್ಕೃತ ಸ್ನಾತ್ತಕೋತ್ತರ ಅಧ್ಯಯನ ಕೇಂದ್ರದಲ್ಲಿ ನಡೆದ ವಸಂತ ವೇದ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ದ.ಕ ಸಾಹಿತ್ಯಪರಿಷತ್ ಅಧ್ಯಕ್ಷ ಪ್ರದೀಪಕುಮಾರ್ ಕಲ್ಕೂರ, ಕಟೀಲು ದೇವಳ ಪ್ರಧಾನ ಅರ್ಚಕ ವಾಸುದೇವ ಆಸ್ರಣ್ಣ, ಕಟೀಲು ದೇವಳ ಅರ್ಚಕ ಹರಿ ನಾರಾಯಣ ಆಸ್ರಣ್ಣ, ಉಪಸ್ಥಿತರಿದ್ದರು.
ಸಂಜೀವಿನಿ ಟ್ರಸ್ಟ್‌ನ ಡಾ| ಸುರೇಶ್ ರಾವ್, ಉಪನ್ಯಾಸಕ ನಾಗರಾಜ್ ಭಟ್ ವೇದ ಘೋಷದೊಂದಿಗೆ ಪ್ರಾರ್ಥಿಸಿದರು, ಕಟೀಲು ಸಂಸ್ಕೃತ ಸ್ನಾತ್ತಕೋತ್ತರ ಕಾಲೇಜು ಪ್ರಿನ್ಸಿಪಾಲ್ ಡಾ| ಪದ್ಮನಾಭ ಮರಾಠೆ ಸ್ವಾಗತಿಸಿದರು. ವಿಘ್ನೇಶ್ ಕಾರ್ಯಕ್ರಮ ನಿರೂಪಿಸಿದರು.

Friday, April 11, 2014

ಕಟೀಲು ಜಾತ್ರೆ

ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ತಾ.೧೪ರಿದ ೨೧ರವರೆಗೆ ವರ್ಷಾವಧಿ ಉತ್ಸವ ನಡೆಯಲಿದೆ. ತಾ.೧೪ರಂದು ಧ್ವಜಾರೋಹಣ, ತಾ.೧೬ಕ್ಕೆ ಮೂಡು ಸವಾರಿ, ತಾ.೧೮ಕ್ಕೆ ಬೆಳ್ಳಿ ರಥೋತ್ಸವ, ತಾ.೧೯ಕ್ಕೆ ಪಡು ಸವಾರಿ, ತಾ.೨೦ಕ್ಕೆ ಹಗಲು ಬ್ರಹ್ಮರಥೋತ್ಸವ, ತಾ.೨೧ಕ್ಕೆ ಬೆಳಿಗ್ಗೆ ಕವಾಟೋದ್ಘಾಟನೆ, ರಾತ್ರಿ ಆರಟ ನಡೆಯಲಿದೆ ಎಂದು ಮೊಕ್ತೇಸರ ವಾಸುದೇವ ಆಸ್ರಣ್ಣ, ಆಡಳಿತಾಧಿಕಾರಿ ನಿಂಗಯ್ಯ ತಿಳಿಸಿದ್ದಾರೆ. ದಿನಂಪ್ರತಿ ಸಾಂಸ್ಕೃತಿಕ ಕಾರ್ಯಕ್ರಮಗಳಿವೆ. ತಾ. ೧೪ಕ್ಕೆ ಸಂಜೆ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಗೊಂಬೆಯಾಟ ತಂಡದಿಂದ ಗೊಂಬೆಯಾಟ - ’ನರಕಾಸುರ ಮೋಕ್ಷ’ ತಾ. ೧೫ಕ್ಕೆ ಡಮರು ನೃತ್ಯ ಕಲಾಕೇಂದ್ರ ಕಿನ್ನಿಗೋಳಿ ಇವರಿಂದ ನೃತ್ಯ ವೈವಿಧ್ಯ, ತಾ. ೧೬ಕ್ಕೆ ಯಕ್ಷಗಾನ ತಾಳಮದ್ದಲೆ - ’ಸತ್ವ ಪರೀಕ್ಷೆ’ ನಡೆಯಲಿದ್ದು, ಪದ್ಯಾಣ ಗಣಪತಿ ಭಟ್, ಪದ್ಮನಾಭ ಉಪಾಧ್ಯಾಯ, ಯೋಗೀಶ ಆಚಾರ್ಯ, ಸುಣ್ಣಂಬಳ ವಿಶ್ವೇಶ್ವರ ಭಟ್, ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿ, ಸರ್ಪಂಗಳ ಈಶ್ವರ ಭಟ್, ವಾಸುದೇವ ರಂಗಾ ಭಟ್ಟ, ರಾಮ ಜೋಯಿಸ, ವಾದಿರಾಜ ಕಲ್ಲೂರಾಯ ಭಾಗವಹಿಸಲಿದ್ದಾರೆ. ತಾ. ೧೭ಕ್ಕೆ ಕಲಾತರಂಗಿಣಿ ಸ್ಕೂಲ್ ಆಫ್ ಮ್ಯೂಸಿಕ್ ಹೊಸಬೆಟ್ಟು ಇದರ ಬಾಗ್ಲೋಡಿ ರಾಜೇಶ್ ರಾವ್ ಮತ್ತು ಶಿಷ್ಯರಿಂದ ವೇಣುವಾದನವಿದೆ.
ತಾ. ೧೮ಕ್ಕೆ ವಿದುಷಿ ಡಾ.ಶೋಭಾ ಶಶಿಕುಮಾರ್ ಬೆಂಗಳೂರು ಇವರಿಂದ ಭರತನಾಟ್ಯ, ತಾ.೧೯ಕ್ಕೆ ವಿದ್ವಾನ್ ತ್ರಿಚಿ ಕೆ.ಆರ್.ಕುಮಾರ್ ಮತ್ತು ಬಳಗದಿಂದ ತಾಳಲಯ ವೈವಿಧ್ಯ
ತಾ. ೨೦ಕ್ಕೆ ಶ್ರೀ ದುರ್ಗಾ ಮಕ್ಕಳ ಮೇಳದವರಿಂದ ಯಕ್ಷಗಾನ ’ಯಾದವ ವಿನೋದ’ ತಾ. ೨೧ರಂದು ಯಕ್ಷಗಾನ - ಗಾನಾರ್ಪಣಂ ಜರಗಲಿದೆ. ಇದರಲ್ಲಿ ಬಲಿಪ ನಾರಾಯಣ ಭಾಗವತ, ಪುತ್ತಿಗೆ ರಘುರಾಮ ಹೊಳ್ಳ, ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ, ಕುಬಣೂರು ಶ್ರೀಧರ ರಾವ್, ಲೀಲಾವತಿ ಬೈಪಾಡಿತ್ತಾಯ, ಪಟ್ಲ ಸತೀಶ ಶೆಟ್ಟಿ, ಹೆರೆಂಜಾಲು ಗೋಪಾಲ ಗಾಣಿಗ, ದಾಂಟಲಿಕೆ ಅನಂತ ಹೆಗಡೆ
ಹರಿನಾರಾಯಣ ಬೈಪಾಡಿತ್ತಾಯ, ಮಣಿಮುಂಡ ಸುಬ್ರಹ್ಮಣ್ಯ ಶಾಸ್ತ್ರಿ, ಪದ್ಮನಾಭ ಉಪಾಧ್ಯಾಯ ಮುರಾರಿ ಕಡಂಬಳಿತ್ತಾಯ, ಕೃಷ್ಣಪ್ರಕಾಶ ಉಳಿತ್ತಾಯ, ಎನ್.ಜಿ.ಹೆಗಡೆ ಭಾಗವಹಿಸಲಿದ್ದಾರೆ ಎಂದು ದೇವಳದ ಪ್ರಕಟನೆ ತಿಳಿಸಿದೆ.

Wednesday, April 9, 2014

katil utsava ಕಟೀಲು ಜಾತ್ರೆ





ಉತ್ಸವ ಮೂರ್ತಿಯ ಪೀಠ, ಪ್ರಭಾವಳಿ, ಅಟ್ಟೆ ಕನ್ನಡಿಗಳಿಗೆ ಚಿನ್ನದ ಲ್ಯಾಮಿನೇಷನ್

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದ ಶ್ರೀ ದೇವರ ಉತ್ಸವ ಮೂರ್ತಿಯ ಪೀಠ, ಪ್ರಭಾವಳಿ, ಅಟ್ಟೆ ಕನ್ನಡಿಗಳಿಗೆ ಬಜಪೆ ಪಾಪ್ಯಲರ್ ಜಗದೀಶ ಶೆಟ್ಟರು ೨೬೦ಗ್ರಾಂ ಚಿನ್ನದಿಂದ ಲ್ಯಾಮಿನೇಷನ್ ಮಾಡಿಸಿ ಕಾಣಿಕೆಯಾಗಿ ಶ್ರೀ ದೇವರಿಗೆ ಅರ್ಪಿಸಿದರು. ಈ ಸಂದರ್ಭ ಅರ್ಚಕರಾದ ಅನಂತ ಆಸ್ರಣ್ಣ, ಪ್ರಸಾದ ಆಸ್ರಣ್ಣ, ಶ್ರೀಹರಿ ಆಸ್ರಣ್ಣ, ಉಮೇಶ ರಾಔ ಎಕ್ಕಾರು, ಡಾ.ಗೋಪಿನಾಥ ಭಟ್ ಮತ್ತಿತರರಿದ್ದರು.
ಚಿತ್ರ : ಕಟೀಲ್ ಸ್ಟುಡಿಯೋ

Monday, March 31, 2014

ಸುರೇಶ್ ಭಟ್ ಬೀಳ್ಕೊಡುಗೆ

ಕಟೀಲು ಪ್ರೌಢಶಾಲೆಯಲ್ಲಿ ಉಪಪ್ರಾಚಾರ್ಯರಾಗಿದ್ದ ಸುರೇಶ್ ಭಟ್ ನಿವೃತ್ತರಾದ ಹಿನ್ನಲೆಯಲ್ಲಿ ಬೀಳ್ಕೊಡುಗೆ ಸಮಾರಂಭ ನಡೆಯಿತು. ಸುರೇಶ ಭಟ್ ಮತ್ತು ಪತ್ನಿ ಶಿಕ್ಷಕಿ ಮಂಗಳಾ ಎಸ್ ಭಟ್‌ರನ್ನು ಸಂಮಾನಿಸಲಾಯಿತು. ಕಟೀಲು ದೇಗುಲದ ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕರಾದ ಅನಂತಪದ್ಮನಾಭ ಆಸ್ರಣ್ಣ, ಶ್ರೀಹರಿನಾರಾಯಣದಾಸ ಆಸ್ರಣ್ಣ, ಕಟೀಲು ಪದವಿ ಕಾಲೇಜು ಪ್ರಾಚಾರ್ಯ ಬಾಲಕೃಷ್ಣ ಶೆಟ್ಟಿ, ಪ್ರಾಥಮಿಕ ಶಾಲೆಯ ಮಾಲತಿ ವೈ, ಕೆ.ವಿಶೆಟ್ಟಿ, ಸಾಯಿನಾಥ ಶೆಟ್ಟಿ ಮತ್ತಿತರರಿದ್ದರು.

Sunday, March 9, 2014

ಕೊಡೆತ್ತೂರು ಅರಸುಕುಂಜರಾಯ ದೈವಸ್ಥಾನದಲ್ಲಿ ನೇಮ

ಕಿನ್ನಿಗೋಳಿ ಕೊಡೆತ್ತೂರು ಅರಸುಕುಂಜರಾಯ ದೈವಸ್ಥಾನದಲ್ಲಿ ಒಲಿಮದೆಯಿಂದ ಹೊರಬರುವ ಕುಂಜರಾಯ ಉಳ್ಳಾಯ ದೈವದ ನೇಮ ಜಾರಂದಾಯ, ಕಾಂತೇರಿಜುಮಾದಿ, ಸರಳ ಧೂಮಾವತಿ, ಕೊಡಮಣಿತ್ತಾಯ ದೈವಗಳ ಸಹಿತ ನಡೆಯಿತು.
ಚಿತ್ರ : ಅರುಣ್ ಉಲ್ಲಂಜೆ