Saturday, May 10, 2014

ಕಟೀಲಿನಲ್ಲಿ ವಿಪ್ರಸಮಾವೇಶ, ತೌಳವ ನಿತ್ಯಾನುಷ್ಠಾನಂ ಲೋಕಾರ್ಪಣೆ


ಆಧ್ಯಾತ್ಮಿಕ ಶಕ್ತಿಯಿಂದ ಬೌತಿಕ ಶಕ್ತಿ ಹೆಚ್ಚಲಿ-ಪೇಜಾವರ ಶ್ರೀ
ಕಟೀಲು : ಜಪ ಪೂಜೆಗಳ ಅನುಷ್ಟಾನದಿಂದ ಬ್ರಾಹ್ಮಣರು ತಮ್ಮಲ್ಲಿನ ಆಧ್ಯಾತ್ಮಕ ಶಕ್ತಿಯನ್ನು ಹೆಚ್ಚಿಸಬೇಕು. ಆ ಮೂಲಕ ಬೌತಿಕ ಶಕ್ತಿಯನ್ನೂ ಹೆಚ್ಚಿಸಿಕೊಮಡು, ಲೋಕಕ್ಕೆ ಒಳಿತನ್ನು ಬಯಸಬೇಕೆಂದು ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.
ಅವರು ಶನಿವಾರ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪದವೀ ಕಾಲೇಜಿನಲ್ಲಿ ನಂದಿನಿ ಬ್ರಾಹ್ಮಣ ಸಭಾ ಹಾಗೂ ಮುಂಬೈ ಸಂಜೀವನಿ ಟ್ರಸ್ಟ್‌ನ ಸಹಯೋಗದಲ್ಲಿ ನಡೆದ ವಿಪ್ರಸಮಾವೇಶದಲ್ಲಿ ತೌಳವ ನಿತ್ಯಾನುಷ್ಟಾನಂ ದೃಶ್ಯತಟ್ಟೆಯನ್ನು(ಡಿವಿಡಿ) ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಸಿಖ್ಖರು ಶಿರಸ್ತ್ರಾಣ ತೊಟ್ಟಂತೆ, ಮುಸಲ್ಮಾನರು ಟೊಪ್ಪಿಯಿಟ್ಟಂತೆ, ಬ್ರಾಹ್ಮಣರು ಜನಿವಾರ, ಜುಟ್ಟುಗಳ ಬಗ್ಗೆ ನಾಚಿಕೆ ಪಟ್ಟುಕೊಳ್ಳದೆ ಧರಿಸಬೇಕು. ಮಸೀದಿಗಳಲ್ಲಿ ಚರ್ಚುಗಳಲ್ಲಿ ಕಾಲಕಾಲಕ್ಕೆ ಪ್ರಾರ್ಥನೆಗಳಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಬ್ರಾಹ್ಮಣರು ಸಂಧ್ಯಾವಂದನಾದಿಗಳನ್ನು ತಪ್ಪದೇ ಮಾಡಬೇಕು. ವಿದ್ಯುತ್ ಇಲ್ಲದ ಬಲ್ಬ್‌ನಂತೆ, ಹೂರಣವಿಲ್ಲದ ಹೋಳಿಗೆಯಂತೆ ಇರದೆ, ಗಾಯತ್ರೀ ಮಂತ್ರ ಪಠಣ, ಅರ್ಘ್ಯಪ್ರದಾನಾದಿಗಳಿಂದ ಬಲಿಷ್ಟರಾಗಬೇಕೆಂದು ಪೇಜಾವರ ಶ್ರೀ ಹೇಳಿದರು.
ಗಾಯತ್ರೀ ಮಂತ್ರದ ಬಗ್ಗೆ ಪ್ರವಚನ ನೀಡಿದ ಬನ್ನಂಜೆ ಗೋವಿಂದಾಚಾರ್ಯರು ಗಾಯತ್ರೀ ಮಂತ್ರದ ಯತಾರ್ಥ ಚಿಂತನೆ, ಉಚ್ಛಾರಗಳಿಂದ ಆನಂದವನ್ನು ಪಡೆಯಬಹುದು ಎಂದರು.
ಅಷ್ಟಾಕ್ಷರೀ ಸಂಧ್ಯಾವಂದನೆ ಕುರಿತು ಮಾತನಾಡಿದ ಅದ್ಯಪಾಡಿ ಹರಿದಾಸ ಭಟ್, ಮಂತ್ರಗಳ ಕ್ಯಾಸೆಟ್ ಹಾಕಿ ಪೂಜೆ ನಡೆಸುವ ದಿನಗಳು ಬಂದಿದ್ದು, ಹಾಗಾಗದೆ ಜಪಾನುಷ್ಟಾನ, ಸಂಧ್ಯಾವಂದನೆಗಳಿಂದ ವಿಮುಖರಾಗದೆ, ಶಾಂತ ಮನಸ್ಸಿಗಾಗಿ ಅವುಗಳನ್ನು ಮಾಡಬೇಕೆಂದರು.
ದೇವಪೂಜಾ ಪರ್ದಧತಿಯ ಬಗ್ಗೆ ಮಾತನಾಡಿದ ಎ.ಸತ್ಯನಾರಾಯಣ ಆಚಾರ್ಯ, ಭಗವಂತನ ಋಣ ತೀರಿಸುವಂತಹದ್ದಲ್ಲ, ದೇವ ಪೂಜೆಯನ್ನು ಏಕ ಮನಸ್ಸಿನಿಂದ ಮೂರು ನಿಮಿಷದಲ್ಲೂ ಮಾಡಬಹುದು. ಮೂರು ಗಂಟೆಯಲ್ಲೂ ಮಾಡಬಹುದು ಎಂದರು.
ಸಾಧಕರಾದ ಡಾ.ಸಿ.ಆರ್.ಬಲ್ಲಾಳ್, ಹರಿಕೃಷ್ಣ ಪುನರೂರು, ಪ್ರದೀಪ ಕಲ್ಕೂರ, ಗಿರಿ ಬಳಗ ಕುಂಜಾರು, ನಾಡೋಜ, ಕೆ.ಪಿ.ರಾವ್, ಚಿತ್ರಾಪುರ ಗೋಪಾಲಕೃಷ್ಣ ಆಚಾರ್ಯ, ಕೋಣಂದೂರು ಗೋಪಾಲಕೃಷ್ಣ ಆಚಾರ್ಯ, ಅಂಗಡಿಮಾರ್ ಕೃಷ್ಣ ಭಟ್, ಕಡಂದಲೆ ಕೃಷ್ಣ ಭಟ್, ಕೆ..ಎಲ್.ಕುಂಡಂತಾಯರನ್ನು ಸಂಮಾನಿಸಲಾಯಿತು. ಶರವು ರಾಘವೇಂದ್ರ ಶಾಸ್ತ್ರಿ, ಡಾ.ನಿ.ಬಿ.ವಿಜಯ ಬಲ್ಲಾಳ್, ಸೂರನಾರಾಯಣ ಉಪಾಧ್ಯಾಯ, ಡಾ.ಭಾಸ್ಕರಾನಂದ ಕುಮಾರ್, ಪಾವಂಜೆ ಕೃಷ್ಣ ಭಟ್, ಕೆ.ಪಿ.ಆಚಾರ್ಯ, ರಾಮದಾಸ ಮಡ್ಮಣ್ಣಾಯ, ವೆಂಕಟರಮಣ ಮುಚ್ಚಿಂತಾಯ, ಪಂಜ ಭಾಸ್ಕರ ಭಟ್, ವಿಜಯರಾಘವ ಪಡ್ವೆಟ್ನಾಯ, ಕಟೀಲು ದೇಗುಲದ ವಾಸುದೇವ ಆಸ್ರಣ್ಣ, ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತ ಆಸ್ರಣ್ಣ, ವೇದವ್ಯಾಸ ತಂತ್ರಿ, ಪೆರ್ಣಂಕಿಲ ಹರಿದಾಸ ಭಟ್ ಮತ್ತಿತರರಿದ್ದರು.
ತೌಳವ ನಿತ್ಯಾನುಷ್ಟಾನಂನ ಪ್ರಾಯೋಜಕರಾದ ಸಂಜೀವನಿ ಟ್ರಸ್ಟ್‌ನ ಡಾ.ಸುರೇಶ್ ರಾವ್ ಪ್ರಸ್ತಾವನೆಗೈದರು. ನಂದಿನಿ ಬ್ರಾಹ್ಮಣ ಸಭಾದ ಡಾ.ಶಶಿಕುಮಾರ್ ಸ್ವಾಗತಿಸಿದರು. ಶ್ರೀಹರಿನಾರಾಯಣದಾಸ ಆಸ್ರಣ್ಣ ಅಭಿನಂದನಾ ಮಾತುಗಳನ್ನಾಡಿದರು. ಅಮೃತೇಶ ಆಚಾರ‍್ಯ, ವಾದಿರಾಜ ಕಲ್ಲೂರಾಯ ಕಾರ್ಯಕ್ರಮ ನಿರೂಪಿಸಿದರು.
ಚಿತ್ರ ಈಮನೆಲ್


No comments:

Post a Comment