Friday, May 16, 2014

ರೈಲ್ವೆ ವಿಭಾಗ, ಕೃಷಿವಲಯ, ಐಟಿ ಪಾರ್ಕ್ ಕನಸು ಕಟೀಲಲ್ಲಿ ನಳಿನ್ ಕುಮಾರ್


ಕಟೀಲು : ಮಂಗಳೂರು ರೈಲ್ವೆ ವಿಭಾಗ ಮಾಡಬೇಕು. ಎಸ್‌ಎಝಡ್ ಅಂದರೆ ವಿಶೇಷ ಕೃಷಿ ವಲಯ ಸ್ಥಾಪಿಸಬೇಕು. ಪರಿಸರ ನಾಶ ಮಾಡುವ ಕೈಗಾರಿಕೆಗಳಿಗೆ ನನ್ನ ವಿರೋಧವಿದೆ. ಆದರೆ ಜಿಲ್ಲೆಯಲ್ಲಿ ಒಂದು ಲಕ್ಷದಷ್ಟು ಮಂದಿಗೆ ಉದ್ಯೋಗಕ್ಕೆ ಅವಕಾಶ ನೀಡಬಹುದಾದ ಐಟಿ ಪಾರ್ಕ್‌ನ ಸ್ಥಾಪನೆಯ ಕನಸಿದೆ ಎಂದು ಮಂಗಳೂರು ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲಿನಲ್ಲಿ ಹೇಳಿದರು.
ಶುಕ್ರವಾರ ಬೆಳಿಗ್ಗೆ ಕಟೀಲು ದೇಗುಲಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಮಂಗಳೂರಿನ ಮತ ಎಣಿಕಾ ಕೇಂದ್ರಕ್ಕೆ ಹೋದ ನಳಿನ್ ಕುಮಾರ್ ಭರ್ಜರಿ ಗೆಲುವಿನ ಬಳಿಕ ಮತ್ತೆ ಕಟೀಲು ದೇಗುಲಕ್ಕೆ ಪತ್ನಿ ಮಕ್ಕಳ ಸಹಿತ ಭೇಟಿ ನೀಡಿ ದುರ್ಗಾಪರಮೇಶ್ವರೀ ದೇವರ ಸನ್ನಿಧಾನದಲ್ಲಿ ಪ್ರಸಾದ ಸ್ವೀಕರಿಸಿದರು. ದೇಗುಲದ ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕರಾದ ಅನಂತ ಆಸ್ರಣ್ಣ, ಲಕ್ಷ್ಮೀನಾರಾಯಣ ಆಸ್ರಣ್ಣ ಮುಂತಾದವರು ಸ್ವಾಗತಿಸಿದರು.
ತಾಂತ್ರಿಕ ಹಾಗೂ ಕಾನೂನಿನ ತೊಡಕಿನಿಂದಾಗಿ ಕಟೀಲು ಕ್ಷೇತ್ರ ಅಭಿವೃದ್ದಿಯಲ್ಲಿ ಹಿಂದೆ ಬಿದ್ದಿರುವುದು ಹೌದು. ಹಿಂದಿನ ಆಡಳಿತ ಮಂಡಳಿ ಮತ್ತೆ ಬಂದರೆ ಅಥವಾ ಸರಕಾರ ಪೂರ್ಣಪ್ರಮಾಣದ ಆಡಳಿತಾಧಿಕಾರಿಯನ್ನು ನೇಮಿಸಿದರೆ ಅಭಿವೃದ್ಧಿ ಸುಲಭವಾಗುತ್ತದೆ. ಕ್ಷೇತ್ರದ ಅಭಿವೃದ್ಧಿಯ ನಿಟ್ಟಿನಲ್ಲಿ ಸ್ಥಳೀಯ ಶಾಸಕರೂ, ಸಚಿವರೂ ಆದ ಅಭಯಚಂದ್ರರೊಂದಿಗೆ ಚರ್ಚಿಸಿ, ಇಲಾಖೆಗಳ ಸಮನ್ವಯದೊಂದಿಗೆ ಕೆಲಸ ಮಾಡುವುದಾಗಿ ನಳಿನ್ ಕುಮಾರ್ ತಿಳಿಸಿದರು.
ಪಕ್ಷದ ಕಾರ್ಯಕರ್ತರಿಗೆ ಅಸಮಾಧಾನವಿರುವ ಕುರಿತಾದ ಪ್ರಶ್ನೆಗೆ, ಕಳೆದ ಚುನಾವಣೆಯ ಗೆಲುವಿನ ಅಂತರಕ್ಕೆ ಈ ಬಾರಿ ಮತ್ತೆ ಒಂದು ಲಕ್ಷ ಮತಗಳನ್ನು ಜಿಲ್ಲೆಯ ಜನರು ಹಾಗೂ ಪಕ್ಷದ ಕಾರ್ಯಕರ್ತರು ಸೇರಿಸಿದ್ದಾರೆ. ನನ್ನಲ್ಲಿ ಅಸಮಾಧಾನವಿದ್ದರೆ ಈ ಪರಿಯ ಪ್ರೀತಿ ತೋರಿಸುತ್ತಿರಲಿಲ್ಲ. ಮೋದಿ ನೇತೃತ್ವದ ಭಾಜಪಾ ಸರಕಾರದಿಂದ ಹೆಚ್ಚಿನ ಯೋಜನೆಗಳನ್ನು ತರುವ ಪ್ರಯತ್ನ ಮಾಡುತ್ತೇನೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯ ನಿಟ್ಟಿನಲ್ಲೂ ಶ್ರಮ ವಹಿಸುತ್ತೇನೆ. ಜಿಲ್ಲೆಯಲ್ಲಿ ಉಷ್ಣ ಸ್ಥಾವರದ ಬದಲು  ಜಲ ವಿದ್ಯುತ್, ಗ್ಯಾಸ್ ಬಳಕೆಯಿಂದ ವಿದ್ಯುತ್ ತಯಾರಿಕೆಯ ಯೋಜನೆಗೆ ಮುತುವರ್ಜಿ ವಹಿಸುವುದಾಗಿ ನಳಿನ್ ಹೇಳಿದರು. ಬಿಜೆಪಿ ಜಿಲ್ಲಾಧ್ಯಕ್ಷ ಪ್ರತಾಪ್‌ಸಿಂಹ ನಾಯಕ್, ಈಶ್ವರ ಕಟೀಲ್, ಜಗದೀಶ ಅಧಿಕಾರಿ ಮುಂತಾದವರಿದ್ದರು.
ಕಟೀಲಿನಲ್ಲಿ ಸಾಂಸದ ನಳಿನ್ ಕುಮಾರ್‌ರನ್ನು ಅಭಿಮಾನಿಗಳು ಎತ್ತಿಕೊಂಡು ಮೆರವಣಿಗೆ ಮೂಲಕ ಸ್ವಾಗತಿಸಿದರು.

No comments:

Post a Comment