Monday, June 24, 2013

......ಕೇರೆ ಹಾವಿನ ಬಾಲವನ್ನು ಜಡೆಗೆ ತಾಗಿಸಿದರೆ ಉದ್ಧವಾಗುತ್ತಾ?!


 
 
ಕಟೀಲು : ಹಾವಿಗೆ ಕಿವಿ ಕೇಳಿಸುತ್ತಾ?, ಹಾವು ದ್ವೇಷ ಸಾಧಿಸುತ್ತಾ?, ವಿಸಿಲ್ ಊದಿದರೆ ಹಾವು ಬರುತ್ತದಾ! ಕೇರೆ ಹಾವಿನ ಬಾಲವನ್ನು ಹುಡುಗಿಯರು ತಮ್ಮ ಜಡೆಗೆ ತಾಗಿಸಿದರೆ ಕೂದಲು ಉದ್ಧವಾಗುತ್ತಂತೆ ಹೌದಾ? ಕೇರೆ ಹಾವು ಬಾಲದಲ್ಲಿ ಬಡಿಯುತ್ತದೆಯಂತೆ ನಿಜವಾ? ಹಸಿರು ಹಾವು ತಲೆಗೆ ಕುಟುಕಿದರೆ ಸಾಯುತ್ತೇವಾ? ಹೆಬ್ಬಾವು ಮಕ್ಕಳನ್ನು ನುಂಗುತ್ತಾ...ಹೀಗೆ ಹಾವುಗಳ ಕುರಿತಾದ ಹತ್ತಾರು ಪ್ರಶ್ನೆಗಳನ್ನೆದುರಿಸಿದವರು ಖ್ಯಾತ ಹಾವು ರಕ್ಷಕ ಉಡುಪಿಯ ಗುರುರಾಜ ಸನಿಲ್.
ಸಂದರ್ಭ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರೌಢಶಾಲೆಯಲ್ಲಿ ಸುವರ್ಣ ಮಹೋತ್ಸವದ ವರ್ಷಾಚರಣೆ ಸಲುವಾಗಿ ಆಯೋಜಿಸಲಾದ ಹಾವು-ನಾವು ಪರಿಸರ ಜಾಗೃತಿ, ಪ್ರಾತ್ಯಕ್ಷಿಕೆ ಕಾರ‍್ಯಕ್ರಮ.
ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ವೀಡಿಯೋ ಮೂಲಕ ಐವತ್ತಕ್ಕೂ ಹೆಚ್ಚು ಹಾವುಗಳ ಬಗ್ಗೆ ಮಾಹಿತಿ ನೀಡಿದ ಗುರುರಾಜ ಸನಿಲ್ ಹಾವಿಗೆ ಕಿವಿಯಿಲ್ಲ, ಭಾರತದಲ್ಲಿ ಹೆಬ್ಬಾವು ಮಕ್ಕಳನ್ನು ತಿಂದಿರುವುದಕ್ಕೆ ದಾಖಲೆಯಿಲ್ಲ. ಕೇರೆ ಹಾವು ಹೊಡೆದದ್ದನ್ನು ನೋಡಿದವರಿಲ್ಲ ಹೀಗೆ ಮಕ್ಕಳ ಕುತೂಹಲದ ಪ್ರಶ್ನೆಗಳಿಗೆ ಉತ್ತರಿಸುತ್ತ, ಕೇರೆ, ಹೆಬ್ಬಾವು, ಇರ್ತಲೆ ಹಾವುಗಳನ್ನು ಮಕ್ಕಳ ಕೈಗೇ ಕೊಟ್ಟು ಅವುಗಳಿಗೆ ಉಪಟಳ ಮಾಡದಿದ್ರೆ ಅವೇನೂ ಮಾಡುವುದಿಲ್ಲ. ನಾಯಿ, ಬೆಕ್ಕುಗಳನ್ನು ಪ್ರೀತಿಸಿದಂತೆ ಹಾವುಗಳನ್ನೂ ನಾವು ಪ್ರೀತಿಸಬಹುದು. ವಿಷಪೂರಿತ ಹಾವುಗಳೆಂದು ತಪ್ಪು ನಂಬಿಕೆಯಿಂದ ವಿಷ ರಹಿತ ಹಾವುಗಳನ್ನೂ ಕೊಲ್ಲುತ್ತಿದ್ದೇವೆ. ಅವುಗಳ ಬಗ್ಗೆ ಅರಿವು ಅಗತ್ಯ ಎಂದು ಹೇಳಿದ ಸನಿಲ್ ಹಾವು ಕಡಿತವಾದರೆ ಮಾಡಬೇಕಾದ ಪ್ರಥಮ ಚಿಕಿತ್ಸೆ ಬಗ್ಗೆ ಮಾಹಿತಿ ನೀಡಿದರು.
ಕಟೀಲಿನ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಉದ್ಘಾಟಿಸಿರು. ಮೆನ್ನಬೆಟ್ಟು ಗ್ರಾ.ಪಂ.ಅಧ್ಯಕ್ಷ ಜನಾರ್ದನ ಕಿಲೆಂಜೂರು, ಹಳೆ ವಿದ್ಯಾರ್ಥಿ ಸಂಘದ ಹರಿನಾರಾಯಣದಾಸ ಆಸ್ರಣ್ಣ, ಉಪಪ್ರಾಚಾರ‍್ಯ ಸುರೇಶ್ ಭಟ್ ಮತ್ತಿತರರಿದ್ದರು.
ಚಿತ್ರ : ಕಟೀಲ್ ಸ್ಟುಡಿಯೋ

No comments:

Post a Comment