Saturday, October 1, 2011
ಕಟೀಲಿನಲ್ಲಿ ಲಲಿತಾ ಪಂಚಮಿ: ೧8ಸಾವಿರ ಮಂದಿಗೆ ಸೀರೆ ವಿತರಣೆ
ಕಟೀಲು ದೇಗುಲದಲ್ಲಿ ನವರಾತ್ರಿಯ ಪ್ರಯುಕ್ತ ವಿಶೇಷ ಚಂಡಿಕಾಹೋಮ ನಡೆಯಿತು.
ಪುರಾಣ ಪ್ರಸಿದ್ಧ ಶ್ರೀ ಭ್ರಾಮರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ನವರಾತ್ರಿಯ ಲಲಿತಾ ಪಂಚಮಿಯ ದಿನವಾದ ಶನಿವಾರ ಸುಮಾರು 18ಸಾವಿರಕ್ಕೂ ಹೆಚ್ಚು ಹುಡುಗಿಯರು, ಮಹಿಳೆಯರಿಗೆ ಶ್ರೀ ದೇವೀಯ ಶೇಷವಸ್ತ್ರಗಳನ್ನು(ಸೀರೆಗಳನ್ನು) ಪ್ರಸಾದ ರೂಪವಾಗಿ ವಿತರಿಸಲಾಯಿತು.
ಕಟೀಲು ದೇಗುಲಕ್ಕೆ ಹರಕೆ ರೂಪದಲ್ಲಿ ವರ್ಷಕ್ಕೆ ಸುಮಾರು ಇಪ್ಪತ್ತು ಸಾವಿರದಷ್ಟು ಸೀರೆಗಳು ಸಮರ್ಪಣೆಯಾಗುತ್ತಿದ್ದು, ಲಲಿತಾ ಪಂಚಮಿಯ ದಿನದಂದು ಅನ್ನಪ್ರಸಾದ ಸ್ವೀಕರಿಸುವ ಸಂದರ್ಭ ಮಹಿಳೆಯರಿಗೆ ಶೇಷವಸ್ತ್ರಗಳನ್ನು ನೀಡಲಾಗುತ್ತದೆ.
ದೇಗುಲಕ್ಕೆ ಅನ್ನಪ್ರಸಾದ ಸೇರಿದಂತೆ ವಿಶೇಷ ಸೇವೆಗಳನ್ನು ನೀಡುವ ಭಕ್ತರಿಗೆ ದೇಗುಲದ ವತಿಯಿಂದ ಶ್ರೀದೇವಿಯ ಶೇಷವಸ್ತ್ರಗಳನ್ನು ನೀಡಲಾಗುತ್ತದೆ. ದೇಗುಲಕ್ಕೆ ಭೇಟಿ ನೀಡುವ ಗಣ್ಯರಿಗೂ ಸೀರೆಯನ್ನು ಪ್ರಸಾದ ರೂಪದಲ್ಲಿ ನೀಡಲಾಗುತ್ತದೆ. ಉಳಿದಂತೆ ಕಟೀಲಿನ ಐದು ಯಕ್ಷಗಾನ ಮೇಳಗಳಿಗೆ ವೇಷಗಳಿಗೆ ಸುಮಾರು ೨ಸಾವಿರದಷ್ಟು ಸೀರೆಗಳನ್ನು ನೀಡಲಾಗುತ್ತದೆ. ಎರಡು ವರ್ಷಗಳ ಹಿಂದೆ ಬಳ್ಳಾರಿಯ ಸಿರಗುಪ್ಪದಲ್ಲಿ ನೆರೆಪೀಡಿತ ಪ್ರದೇಶಗಳಿಗೆ ಕಟೀಲಿನಿಂದ ಹತ್ತು ಸಾವಿರ ಸೀರೆಗಳನ್ನು ನೀಡಲಾಗಿತ್ತು. ಹೀಗೆ ಕಟೀಲಿನಲ್ಲಿ ಭಕ್ತರಿಂದ ನೀಡಲ್ಪಟ್ಟ ಸೀರೆಗಳನ್ನು ಏಲಂ ಮಾಡದೆ ಭಕ್ತರಿಗೇ ನೀಡುವ ಸಂಪ್ರದಾಯ ಬೆಳೆದು ಬಂದಿದೆ. ರವಿಕೆ ಕಣಗಳನ್ನೂ ದೇಗುಲಕ್ಕೆ ಭಕ್ತರು ನೀಡುತ್ತಿದ್ದು ಇವುಗಳನ್ನೂ ಭಕ್ತರಿಗೇ ಪ್ರಸಾದ ರೂಪವಾಗಿ ನೀಡಲಾಗುತ್ತಿದೆ. ಸುಮಾರು ಇನ್ನೂರು ರೂಪಾಯಿಗಳಿಂದ ಹತ್ತು ಸಾವಿರ ರೂ.ಮೌಲ್ಯಗಳವರೆಗೂ ಸೀರೆ ದೇವರಿಗೆ ಸಂದಾಯವಾದದ್ದುಂಟು. ವೈಶಾಖ ಅಂದರೆ ಮೇ ತಿಂಗಳಲ್ಲಿ ಮೂರು ಸಾವಿರದಷ್ಟು ಬಂದದ್ದುಂಟು. ದಿನವೊಂದಕ್ಕೆ ಇನ್ನೂರರಷ್ಟು ಸೀರೆಗಳು ಬಂದದ್ದೂ ಉಂಟು. ತಿಂಗಳಿಗೆ ಒಂದು ಸಾವಿರಕ್ಕಿಂತ ಹೆಚ್ಚು ಸೀರೆಗಳು ಬರುತ್ತಿದ್ದು, ಜುಲೈ ತಿಂಗಳಲ್ಲಿ ಮಾತ್ರ ಕಡಿಮೆ ಸಂಖ್ಯೆಯಲ್ಲಿ ಬರುತ್ತವೆ.
ವಿವಾಹ, ಮಕ್ಕಳ ಬೇಡಿಕೆ, ಗೃಹ ನಿರ್ಮಾಣ ಇತ್ಯಾದಿ ಇಷ್ಟಾರ್ಥ ಸಿದ್ದಿ ಮುಂತಾದ ಕಾರಣಗಳಿಗಾಗಿ ಭಕ್ತರು ದೇವರಿಗೆ ಸೀರೆ ಕಾಣಿಕೆ ಸಲ್ಲಿಸುತ್ತಾರೆ. ಸೀರೆ ಸಮರ್ಪಿಸುವವರಿಗೆ ದೇಗುಲದಲ್ಲೇ ಮಾರಾಟ ಕೌಂಟರ್ ಇದ್ದು, ಬೇರೆ ಕಡೆಗಳಿಂದಲೂ ತರಬಹುದಾಗಿದೆ.
ಶನಿವಾರ ಕಟೀಲಿನಲ್ಲಿ ಸಂಜೆ ಏಳು ಗಂಟೆಯ ಹೊತ್ತಿಗೇನೇ ಅನ್ನಪ್ರಸಾದ ಊಟದ ವ್ಯವಸ್ಥೆ ಆರಂಭವಾಗಿದ್ದು, ಹನ್ನೆರಡು ಗಂಟೆಯವರೆಗೂ ಜನ ಬರುತ್ತಲೇ ಇದ್ದರು. ಭಕ್ತರ ಸಾಲು ಅರ್ಧಕಿಲೋಮೀಟರ್ ದೂರದವರೆಗೂ ಹಬ್ಬಿತ್ತು. ೧೨ಸಾವಿರದಷ್ಟು ಸೀರೆಗಳನ್ನು ೧೫ಸಾವಿರದಷ್ಟು ಮಂದಿಗೆ ವಿತರಿಸಲಾಯಿತು. ರಾಥ್ರಿಯ ಹೊತ್ತು ೨೫ಸಾವಿರಕ್ಕೂ ಹೆಚ್ಚು ಮಂದಿ ಕಟೀಲಿಗೆ ಆಗಮಿಸಿದ್ದರು. ಬಜಪೆ ಪೋಲೀಸರು ಸಂಚಾರ ವ್ಯವಸ್ಥೆಯನ್ನು ನೋಡಿಕೊಂಡಿದ್ದು, ವಿಪರೀತ ವಾಹನಗಳ ಕಾರಣದಿಂದ ಕಟೀಲಿನ ರಸ್ತೆಗಳು ಬ್ಲಾಕ್ ಆಗುವುದು ಮಾಮೂಲಾಗಿತ್ತು.
ಕೊಡೆತ್ತೂರು ಗ್ರಾಮದಿಂದ ನವರಾತ್ರಿಯ ವೈಭವದ ಹುಲಿವೇಷ ಮೆರವಣಿಗೆಯೂ ಶನಿವಾರ ಕಟೀಲು ದೇಗುಲಕ್ಕೆ ಬಂತು. ನೂರಾರು ವೇಷಗಳು, ಸ್ತಬ್ದಚಿತ್ರಗಳು ಮೆರವಣಿಗೆಯ ಆಕರ್ಷಣೆಯನ್ನು ಹೆಚ್ಚಿಸಿದ್ದವು.
ಚಿತ್ರ : ಕಟೀಲ್ ಸ್ಟುಡಿಯೋ
Subscribe to:
Post Comments (Atom)
No comments:
Post a Comment