ಕಟೀಲು : ನಂದಿನೀ ನದೀ ಮಧ್ಯದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ಭಕ್ತ ದಾನಿಗಳಿಂದ ರೂ. ೨೦ಲಕ್ಷ ರೂ. ವೆಚ್ಚದಲ್ಲಿ ನೂತನ ಚಂಡಿಕಾ ಯಾಗಶಾಲೆಯನ್ನು ಸೋಮವಾರ ಉದ್ಘಾಟಿಸಲಾಯಿತು.
ಈವರೆಗೆ ದೇಗುಲದ ಅಂಗಣದಲ್ಲಿ ಚಂಡಿಕಾ ಹಾಗೂ ಇತರ ಸೇವೆಯ ಹೋಮಗಳಾಗುತ್ತಿದ್ದವು. ಇತ್ತೀಚಿನ ವರ್ಷಗಳಲ್ಲಿ ದೇಗುಲಕ್ಕೆ ಬರುವ ಭಕ್ತರ ಸಂಖ್ಯೆ ವಿಪರೀತ ಹೆಚ್ಚುತ್ತಿದ್ದುದರಿಂದ ಭಕ್ತರಿಗೆ ಪ್ರದಕ್ಷಿಣೆ ಬರಲು ಕಷ್ಟವಾಗುತ್ತಿತ್ತು. ಹಾಗಾಗಿ ಕಳೆದ ವರ್ಷ ಅಷ್ಟಮಂಗಳ ಪ್ರಶ್ನೆಯಲ್ಲಿ ವರ್ಷಕ್ಕೆ ಮೂರು ಚಂಡಿಕಾ ಹೋಮ, ಲಲಿತಾ ಪಂಚಮಿ, ದೀಪಾವಳಿ, ರಾಶಿ ಪೂಜೆಯ, ಚೌತಿಯ ಗಣಹೋಮ ಸೇರಿದಂತೆ ದೇವಸ್ಥಾನದ ವತಿಯ ಹೋಮಗಳನ್ನು ಮಾತ್ರ ಅಂಗಣದಲ್ಲಿ ನಡೆಸುವುದು. ಉಳಿದ ಎಲ್ಲ ಹೋಮಗಳನ್ನು ದೇಗುಲದ ವಸಂತ ಮಂಟಪದ ಹಿಂಬದಿಯಲ್ಲಿ ನೂತನ ಯಾಗ ಶಾಲೆ ನಿರ್ಮಿಸಿ ನಡೆಸುವುದೆಂದು ಕಂಡು ಬಂದಿತ್ತು. ಈ ಹಿನ್ನಲೆಯಲ್ಲಿ ಯಾಗ ಶಾಲೆ ನಿರ್ಮಾಣಗೊಂಡಿದ್ದು, ಪಕ್ಕದಲ್ಲೇ ನದಿ ಹರಿಯುವ ನಯನ ಮನೋಹರ ದೃಶ್ಯ ಕಾಣಬಹುದಾಗಿದೆ.
ದಾನಿಗಳಾದ ಪಿಲಾರುಕಾನ ಕರುಣಾಕರ ಶೆಟ್ಟಿ ಮುಂಬೈ, ಎಕ್ಕಾರು ಶ್ರೀಧರ ಪೂಜಾರಿ, ರಘುವೀರ ಶೆಟ್ಟಿ ಮುಂಬೈ, ಮದ್ಯಬೀಡು ಮೋಹನ ಶೆಟ್ಟಿ ಮುಂಬೈ, ದಿನೇಶ್ ಪೂಜಾರಿ ಸುರತ್ಕಲ್, ರಾಧಾ ಅಮೀನ್ ಬಜಪೆ, ಜಯಾನಂದ ರಾವ್ ಬಜಪೆ, ಪದ್ಮನಾಭ ಪಯ್ಯಡೆ ಮುಂತಾದವರು ಯಾಗಶಾಲೆ ನಿರ್ಮಾಣಕ್ಕೆ ಸಹಕರಿಸಿದ್ದಾರೆ.
ದಾನಿ ಪಿಲಾರುಕಾನ ಕರುಣಾಕರ ಶೆಟ್ಟಿ ಕುಟುಂಬದ ಚಂಡಿಕಾಹೋಮದ ಮೂಲಕ ಯಾಗ ಶಾಲೆ ಸೋಮವಾರ ಉದ್ಘಾಟನೆಗೊಂಡಿದ್ದು, ಅರ್ಚಕರಾದ ಆಸ್ರಣ್ಣ ಬಂಧುಗಳಾದ ವಾಸುದೇವ, ಲಕ್ಷ್ಮೀನಾರಾಯಣ, ವೇಂಕಟರಮಣ, ಅನಂತಪದ್ಮನಾಭ, ಕಮಲಾದೇವಿಪ್ರಸಾದ, ಶ್ರೀಹರಿನಾರಾಯಣದಾಸ ಆಸ್ರಣ್ಣ, ಶಿಬರೂರು, ವೇದವ್ಯಾಸ ತಂತ್ರಿ, ರಘುನಂದನ ಭಟ್, ದೇಗುಲದ ಪ್ರಬಂಧಕ ವಿಜಯ ಕುಮಾರ ಶೆಟ್ಟಿ, ಕಳತ್ತೂರು ರಾಘವೇಂದ್ರ ಭಟ್ ಮತ್ತಿತರರಿದ್ದರು.
No comments:
Post a Comment