Monday, November 4, 2013

ಕಡಂದೇಲು ಪುರುಷೋತ್ತಮ ಭಟ್ಟರಿಗಿಂದು ಗೌರವ



ಈಗಿರುವ ಯಕ್ಷಗಾನ ಕಲಾವಿದರಲ್ಲಿ ಅತ್ಯಂತ ಹಿರಿಯರೆನಿಸಿರುವ ದೇವಿ ಪಾತ್ರಧಾರಿ ಎಂದೇ ಪ್ರಸಿದ್ಧರಾದ ನೂರರ ಆಸುಪಾಸಿನಲ್ಲಿರುವ ಕಡಂದೇಲು ಪುರುಸೋತ್ತಮ ಭಟ್ಟರಿಗೆ ಇಂದು(ತಾ.೫) ಕಟೀಲು ಗೋಪಾಲಕೃಷ್ಣ ಸಭಾಭವನದಲ್ಲಿ ನಡೆಯಲಿರುವ ಶಾಂತಿಹೋಮಹವನಾಧಿಗಳ ಜೊತೆಗೆ ಗೌರವ ನಡೆಯಲಿದೆ. ಪೇಜಾವರ ಸ್ವಾಮೀಜಿ, ಸುಬ್ರಹ್ಮಣ್ಯ ಮಠಾಧೀಶರು ಭಾಗವಹಿಸಲಿದ್ದಾರೆ.
ಪುರುಷೋತ್ತಮ ಭಟ್ಟರಿಗೆ ಕರ್ನಾಟಕ ಯಕ್ಷಗಾನ ಅಕಾಡಮಿ ಪ್ರಶಸ್ತಿ, ಆಸ್ರಣ್ಣ ಪ್ರಶಸ್ತಿ, ಬೆಳುವಾಯಿಯ ಶ್ರೀ ಯಕ್ಷ ದೇವ ಪ್ರಶಸ್ತಿ, ಕಟೀಲು ದೇವಸ್ಥಾನ ಸೇರಿದಂತೆ ಹತ್ತಾರು ಸಂಘ ಸಂಸ್ಥೆಗಳಿಂದ ಗೌರವಿಸಲ್ಪಟ್ಟಿದ್ದಾರೆ. ಓಂ ಮಾಯಲೀಲಾ, ಭಾಮಿನೀ ಷಟ್ಪದಿ ಯಲ್ಲಿ ’ಶ್ರೀ ದೇವಿ ಸ್ತುತಿ’ ಕೃತಿ ಪ್ರಕಟಿಸಿದ್ದಾರೆ. ಕಟೀಲು ದುರ್ಗೆಗೆ ಸಂಬಂಧಿಸಿದ ಭಕ್ತಿಗೀತೆ ಗಳ ಸಿಡಿ ಬಿಡುಗಡೆಯಾಗಿದೆ. ಮೂಲ್ಕಿ ಕೊರಕ್ಕೋಡು, ಕೂಡ್ಲು, ಇರಾ ಕುಂಡಾವು ಮೇಳಗಳಲ್ಲಿ ಬಳಿಕ ಕಟೀಲು ಮೇಳದಲ್ಲಿ ತಿರುಗಾಟ ಮಾಡಿದ ಪುರುಷೋತ್ತಮ ಭಟ್ಟರು ಕಿನ್ನಿಗೋಳಿಯಲ್ಲಿ ೧೯೪೩ರಲ್ಲಿ ಐದು ದಿನದ ದೇವಿ ಮಹಾತ್ಮೆ ನಡೆದಾಗ ದೇವೀ ಪಾತ್ರಧಾರಿಯಾಗಿ ಪ್ರಸಿದ್ಧಿಗೆ ಬಂದವರು. ಇವತ್ತಿಗೂ ಮೂರ‍್ನಾಲ್ಕು ಕಿಲೋಮೀಟರ್ ನಡೆದುಕೊಂಡು ಹೋಗಿ ಬರುವ ಭಟ್ಟರು ದೇವಿ, ಕೈಕೆ, ಶಕುಂತಲೆ, ಅಂಬೆ, ಮಂಡೋದರಿ, ಚಂದ್ರಮತಿ, ಸೀತೆ, ದ್ರೌಪದಿ, ಚಿತ್ರಾಂಗದೆ ಮುಂತಾದ ಪಾತ್ರಗಳಲ್ಲಿ ಪ್ರಸಿದ್ಧರಾಗಿದ್ದರು. ೧೯೭೦ ರ ಮೇ ೨೫ ರಂದು ಮೇಳಕ್ಕೆ ವಿದಾಯ ಹೇಳಿದರು. ಪೇಜಾವರ ಮಠದ ಹಿರಿಯ ಸ್ವಾಮೀಜಿ ಒಮ್ಮೆ ಆಟಕ್ಕೆ ಬಂದಿದ್ದರು. ರಾಮ ವನವಾಸಕ್ಕೆ ಹೋಗಬೇಕಾಗಿ ಬರುವ ಸಂದರ್ಭ, ಭಟ್ಟರು ಕೈಕೆಯಾಗಿ ಪಾತ್ರ ನಿರ್ವಹಿಸಿದ್ದರು. ಪ್ರಸಂಗದ ಭಾಗ ಮುಗಿದು ಹೊರಡುವ ವೇಳೆ ಸ್ವಾಮೀಜಿ ಕರೆದು ಹೇಳಿದರು. ’ಕಲ್ಲು ಸಿಗಲಿಲ್ಲ’ ಇಲ್ಲದಿದ್ದರೆ ಹೊಡೆಯುತ್ತಿದ್ದೆ ಎಂದರು. ಬಹುಶಃ ಕೈಕೆ ಪಾತ್ರ ಅಷ್ಟು ಪರಿಣಾಮಕಾರಿಯಾಗಿ ಮೂಡಿ ಬಂದಿರಬೇಕು ಎಂದು ಖಷಿಪಟ್ಟುಕೊಳ್ಳುವ ಪುರುಷೋತ್ತಮ ಭಟ್ಟರು ರಾಮ, ವಲಲ, ಚಂಡಾಮರ್ಕ, ಬ್ರಹ್ಮಕಪಾಲದ ಬ್ರಹ್ಮ, ವಿಶ್ವಾಮಿತ್ರ, ದೂರ್ವಾಸ ಮುಂತಾದ ಪುರುಷ ಪಾತ್ರಗಳನ್ನೂ ನಿರ್ವಹಿಸಿದವರು. ಇಂತಹ ಕಡಂದೇಲು ಪುರುಷೋತ್ತಮ ಭಟ್ಟರಿಗೆ ಮುಕ್ಕಾಲು ಶತಮಾನದ ಹಿಂದಿನ ಯಕ್ಷಗಾನ ಪ್ರಪಂಚದ ಸಾಕ್ಷಿಯಾಗಿ ಇವತ್ತಿಗೂ ಅನೇಕ ಸಂಗತಿಗಳನ್ನು ಹೇಳುವ ಮಾಹಿತಿ ಕಣಜ. ಅವರಿಗಿಂದು ಕಟೀಲಿನಲ್ಲಿ ಶಾಂತಿ ಹೋಮಹವನಗಳ ಜೊತೆಗೆ ಕುಟುಂಬದ, ಅಭಿಮಾನಿಗಳ ಆತ್ಮೀಯ ಗೌರವ ಸಲ್ಲಲಿದೆ.



No comments:

Post a Comment