ಕಟೀಲು : ಪುರಾಣ ಪ್ರಸಿದ್ಧ ಕಟೀಲು ಶ್ರೀ ಭ್ರಾಮರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಐದು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಚಿನ್ನದ ರಥಕ್ಕೆ ಸ್ವರ್ಣಮುಹೂರ್ತವನ್ನು ಸಚಿವ ರಮಾನಾಥ ರೈ ನೆರವೇರಿಸಿದರು.
ರಾಜ್ಯದಲ್ಲೇ ಎತ್ತರವಾದ ಚಿನ್ನದ ರಥಕ್ಕೆ ೧೨ಕೆ.ಜಿ.ಚಿನ್ನ ೨೦೦ಕೆ.ಜಿ.ಬೆಳ್ಳಿ ಬಳಕೆಯಾಗಲಿದ್ದು, ರಥ ನಿರ್ಮಾಣ ಮಾಡಲಿರುವ ಉಡುಪಿಯ ಸ್ವರ್ಣ ಜ್ಯುವೆಲ್ಲರ‍್ಸ್‌ನ ಗುಜ್ಜಾಡಿ ರಾಮದಾಸ ನಾಯಕ್‌ರಿಗೆ ಸಾಂಕೇತಿಕವಾಗಿ ಚಿನ್ನವನ್ನು ಹಸ್ತಾಂತರಿಸಲಾಯಿತು. ಸರಕಾರದ ಹೊಸ ನಿಯಮದಂತೆ ಚಿನ್ನದ ಗುಣಮಟ್ಟವನ್ನು ಎನ್‌ಐಟಿಕೆ ತಜ್ಞರು ಪರೀಕ್ಷಿಸಲಿದ್ದು, ಈ ಪರೀಕ್ಷೆಗೊಳಪಡುವ ಮೊದಲ ಸಂಸ್ಥೆ ಸ್ವರ್ಣ ಜ್ಯುವೆಲ್ಲರ‍್ಸ್ ಆಗಲಿದೆ. ಮುಂದಿನ ಎಪ್ರಿಲ್ ಜಾತ್ರೆಯ ಸಂದರ್ಭ ಚಿನ್ನದ ರಥ ಸಮರ್ಪಣೆ ನಡೆಯುವ ಸಾಧ್ಯತೆಯಿದೆ.
ಕಟೀಲು ಭ್ರಾಮರಿಯ ಮೂಲಸ್ಥಾನ ಕುದ್ರುವಿನಲ್ಲಿ ಅಭಿವೃದ್ಧಿ ಕಾರ‍್ಯಗಳು ಐದು ಕೋಟಿ ರೂ.ನಲ್ಲಿ ನಡೆಯಲಿದ್ದು, ತೀರ್ಥಬಾವಿ, ಕೆರೆ ಮುಂತಾದ ಕಾಮಗಾರಿಗಳನ್ನು ಸಚಿವ ವಿನಯ ಕುಮಾರ ಸೊರಕೆ ಉದ್ಘಾಟಿಸಿದರು.
ದೇಗುಲದ ಕಚೇರಿ ಕಾಗದ ರಹಿತವಾಗಿದ್ದು ನವೀಕೃತ ಕಚೇರಿ ಹಾಗೂ ಕಂಪ್ಯೂಟರ್ ವ್ಯವಸ್ಥೆಯನ್ನು ಸಚಿವ ಯು.ಟಿ.ಖಾದರ್ ಉದ್ಘಾಟಿಸಿದರು. ಡಾ.ಸುರೇಶ್ ರಾವ್ ಕಟೀಲು ದೇವಸ್ಥಾನದಿಂದ ಆಸ್ಪತ್ರೆಯೊಂದನ್ನು ನಿರ್ಮಿಸಲು ಮುಂದಾಗಿದ್ದು, ಅದಕ್ಕೆ ಪೂರಕವಾದ ಸಹಕಾರವನ್ನು ಆರೋಗ್ಯ ಇಲಾಖೆಯಿಂದ ಮಾಡಿಕೊಡುವ ಭರವಸೆಯನ್ನು ಖಾದರ್ ನೀಡಿದರು.
ವಿಧಾನ ಪರಿಷತ್ ವಿಪಕ್ಷ ನಾಯಕ ಡಿ.ವಿ.ಸದಾನಂದ ಗೌಡ, ಸಚಿವ ಅಭಯಚಂದ್ರ, ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕ ವೆಂಕಟರಮಣ ಆಸ್ರಣ್ಣ, ಶಾಸಕ ಮೊಯ್ದಿನ್ ಬಾವಾ, ಮೋನಪ್ಪ ಭಂಡಾರಿ, ಬೆಂಗಳೂರಿನ ದಯಾನಂದ ರೆಡ್ಡಿ, ಉದ್ಯಮಿ ಐಕಳ ಹರೀಶ್ ಶೆಟ್ಟಿ, ಸಂಜೀವನಿ ಟ್ರಸ್ಟ್‌ನ ಸಂಜೀವ ರಾವ್, ದಾನಿ ಸತೀಶ್ ಶೆಟ್ಟಿ, ತಾ.ಪಂ.ಸದಸ್ಯೆ ಬೇಬಿ ಕೋಟ್ಯಾನ್, ಮೆನ್ನಬೆಟ್ಟು ಗ್ರಾ.ಪಂ.ಅಧ್ಯಕ್ಷ ಜನಾರ್ದನ ಕಿಲೆಂಜೂರು, ವಾಸ್ತುತಜ್ಞ ಸುಬ್ರಹ್ಮಣ್ಯ ಭಟ್ ಮುಂತಾದವರಿದ್ದರು. ಆಡಳಿತಾಧಿಕಾರಿ ಅಜಿತ್ ಕುಮಾರ ಹೆಗ್ಡೆ ಸ್ವಾಗತಿಸಿದರು. ಅರ್ಚಕ ಅನಂತಪದ್ಮನಾಭ ಆಸ್ರಣ್ಣ ವಂದಿಸಿದರು. ಪ್ರಾಚಾರ‍್ಯ ಬಾಲಕೃಷ್ಣ ಶೆಟ್ಟಿ ಕಾರ‍್ಯಕ್ರಮ ನಿರೂಪಿಸಿದರು.
* ರಾಜ್ಯದಲ್ಲೇ ಅತಿ ಎತ್ತರದ ಚಿನ್ನದ ರಥ
* ರಾಜ್ಯದ ಮುಜರಾಯಿ ದೇಗುಲಗಳಲ್ಲಿ ಕಾಗದ ರಹಿತ ಕಚೇರಿ ಹೊಂದಿದ ಮೊದಲ ದೇಗುಲ ಕಟೀಲು
* ಕಟೀಲು ದೇಗುಲದಿಂದ ಆಸ್ಪತ್ರೆಯ ಕನಸು
* ಕಟೀಲಿನಲ್ಲಿ ಆಕರ್ಷಣೆಯ ಕೇಂದ್ರವಾಗಲಿರುವ ಕುದ್ರು
No comments:
Post a Comment